ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಜಿ ಹಗರಣದಲ್ಲಿ ಚಿದಂಬರಂ ಪಾತ್ರ ಇಂದು ತೀರ್ಪು

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2 ಜಿ ತರಂಗಾಂತರಗಳ ನೀತಿಬಾಹಿರ ಪರವಾನಗಿ ನೀಡಿಕೆಯಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರ ಕೈವಾಡ ಇದೆಯೋ, ಇಲ್ಲವೋ ಎಂಬ ಅನುಮಾನಕ್ಕೆ ನ್ಯಾಯಾಲಯ  ಶನಿವಾರ ಪ್ರಕಟಿಸಲಿರುವ ತೀರ್ಪಿನಿಂದ ತೆರೆ ಬೀಳುವ ನಿರೀಕ್ಷೆ ಇದೆ.

ಈ ಸಂಬಂಧ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜ.21ರಂದು ಪೂರೈಸಿರುವ ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ.ಸೈನಿ ತೀರ್ಪನ್ನು ಶನಿವಾರಕ್ಕೆ ಕಾಯ್ದಿರಿಸಿದ್ದಾರೆ.

ಎ.ರಾಜಾ ಸಚಿವರಾಗಿದ್ದಾಗ 2008ರ ಜನವರಿಯಲ್ಲಿ ನೀಡಿದ್ದ ಎಲ್ಲಾ 122 ಲೈಸೆನ್ಸ್‌ಗಳನ್ನು ಗುರುವಾರ ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಚಿದಂಬರಂ ವಿಚಾರಣೆ ಅಗತ್ಯವೋ, ಇಲ್ಲವೋ ಎಂಬುದು ವಿಚಾರಣಾ ನ್ಯಾಯಾಲಯದ ವಿವೇಚನೆಗೇ ಬಿಟ್ಟ ನಿರ್ಧಾರ ಎಂದು ಹೇಳಿತ್ತು.

ಚಿದಂಬರಂ ವಿಚಾರಣೆ ಕುರಿತು ನಿರ್ಧರಿಸುವ ವೇಳೆ ಸುಪ್ರೀಂಕೋರ್ಟ್ ತೀರ್ಪಿನಿಂದ ಪ್ರಭಾವಿತವಾಗದಂತೆಯೂ ನ್ಯಾಯಮೂರ್ತಿಗಳಾದ ಜಿ.ಎಸ್. ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಸಲಹೆ ನೀಡಿದ್ದರು.

ಅಷ್ಟೇ ಅಲ್ಲದೆ, ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಸಂಬಂಧಿಸಿದಂತೆ ಸಿಬಿಐಗೆ ಯಾವುದೇ ನಿರ್ದೇಶನ ನೀಡಲು ಕೂಡ ಅವರು ನಿರಾಕರಿಸಿದ್ದರು.

ತೀರ್ಪು ನೀಡುವಾಗ ನ್ಯಾಯಪೀಠವು ರಾಜಾ ಅವರ ಕಾರ್ಯವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಆದರೆ ಪ್ರಧಾನಿ ಹಾಗೂ ಆಗ ಹಣಕಾಸು ಸಚಿವರಾಗಿದ್ದ ಚಿದಂಬರಂ ಅವರ ಬಗ್ಗೆ ಏನನ್ನೂ ಪ್ರಸ್ತಾಪಿಸಿರಲಿಲ್ಲ.

ಅರ್ಜಿದಾರ ಸುಬ್ರಮಣಿಯನ್ ಸ್ವಾಮಿ ಪ್ರಕಾರ, ಈ ಹಗರಣದಲ್ಲಿ ಚಿದಂಬರಂ ಕೂಡ ಎ.ರಾಜಾ ಅವರಷ್ಟೇ ತಪ್ಪಿತಸ್ಥರು. ತರಂಗಾಂತರ ಶುಲ್ಕ ನಿಗದಿ ಹಾಗೂ ಪರವಾನಗಿ ಪಡೆದ ಟೆಲಿಕಾಂ ಕಂಪೆನಿಗಳು ನಂತರ ಷೇರುಗಳನ್ನು ವಿದೇಶಿ ಕಂಪೆನಿಗಳಿಗೆ ಮಾರಾಟ ಮಾಡಿದ್ದರಲ್ಲಿ ಮಾಜಿ ಹಣಕಾಸು ಸಚಿವರ ಪಾತ್ರ ಇದೆ ಎಂಬುದು ಅವರ ವಾದ.

ಮಹಾಲೇಖಪಾಲರ (ಸಿಎಜಿ) ವರದಿಯ ಆಯ್ದ ಪ್ರತಿಗಳು ಹಾಗೂ ಷೇರು ಮಾರಾಟ ಕುರಿತು ತನಿಖೆ ನಡೆಸಿದ ಕೇಂದ್ರೀಯ ತನಿಖಾ ಸಂಸ್ಥೆಯು ಸಂಯುಕ್ತ ಸೇವಾ ಅನುಮತಿ ಪರವಾನಗಿ (ಯುಎಎಸ್‌ಎಲ್) ಬಗ್ಗೆ ಹೊಂದಿದ್ದ ಕಡತವನ್ನು ಸ್ವಾಮಿ ತಮ್ಮ ವಾದಕ್ಕೆ ಪೂರಕವಾಗಿ ಕೋರ್ಟ್‌ಗೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT