ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ಹೊಸ ರಾಜ್ಯ ರಚನೆಗೆ ಆಗ್ರಹ

Last Updated 4 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹೊಸ ರಾಜ್ಯಗಳ ರಚನೆಗೆ ಇರುವ ಎಲ್ಲ ಬೇಡಿಕೆಗಳನ್ನು ಒಪ್ಪಿಕೊಂಡಲ್ಲಿ ಭಾರತ ಭವಿಷ್ಯತ್ತಿನಲ್ಲಿ ಕನಿಷ್ಠ 50 ರಾಜ್ಯಗಳನ್ನಾದರೂ ಹೊಂದಲಿದೆ. ಇನ್ನೂ 20 ಹೊಸ ರಾಜ್ಯಗಳನ್ನು ರಚಿಸುವಂತೆ ಕೋರಿ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿಗಳು ಸಲ್ಲಿಕೆಯಾಗಿವೆ.

ಮಣಿಪುರದ ಕುಕಿಲ್ಯಾಂಡ್, ಉತ್ತರ ಬಂಗಾಳದ ಕಮತ್‌ಪುರ, ದಕ್ಷಿಣದ ತಮಿಳುನಾಡಿನ ಕೊಂಗು ನಾಡು, ಕರ್ನಾಟಕದ ತುಳುನಾಡು ಸೇರಿದಂತೆ ದೇಶದ ಎಲ್ಲ ಕಡೆಗಳಿಂದಲೂ ಪ್ರತ್ಯೇಕ ರಾಜ್ಯಗಳನ್ನು ರಚಿಸುವಂತೆ ಬೇಡಿಕೆಗಳು ಬಂದಿವೆ.

ಅತಿಹೆಚ್ಚು ಜನಸಂಖ್ಯೆ ಹೊಂದಿದ್ದ ಉತ್ತರ ಪ್ರದೇಶವನ್ನು ವಿಭಜಿಸಿ ನಾಲ್ಕು ಹೊಸ ರಾಜ್ಯಗಳ ರಚನೆಗೆ ಹಿಂದಿನ ಮಾಯಾವತಿ ನೇತೃತ್ವದ ಬಿಎಸ್‌ಪಿ ಸರ್ಕಾರ ಕ್ರಮ ಕೈಗೊಂಡ ಸಮಯದಲ್ಲಿ ಬೇರಾವುದೇ ರಾಜ್ಯಗಳಲ್ಲಿ ಇಂತಹ ಬೇಡಿಕೆಯನ್ನು ಬಲವಾಗಿ ಮಂಡಿಸಿರಲಿಲ್ಲವಾದರೂ ಬೇಡಿಕೆಗಳು ಮಾತ್ರ ಮುಂದುವರಿದಿದ್ದವು.

`ಪ್ರತ್ಯೇಕ ರಾಜ್ಯಗಳನ್ನು ರಚಿಸುವಂತೆ ಕೋರಿ ಕಳೆದ ಕೆಲವು ವರ್ಷಗಳಿಂದ ವಿವಿಧ ಸಂಘ ಸಂಸ್ಥೆ ಹಾಗೂ ವ್ಯಕ್ತಿಗಳಿಂದ ಗೃಹ ಸಚಿವಾಲಯಕ್ಕೆ ಮನವಿಪತ್ರಗಳು ಬಂದಿವೆ' ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ಅವಧ್ ಪ್ರದೇಶ, ಪೂರ್ವಾಂಚಲ, ಬುಂದೇಲ್‌ಖಂಡ ಹಾಗೂ ಪಶ್ಚಿಮಾಂಚಲ ಅಥವಾ ಹರಿತ್ ಪ್ರದೇಶ ರಾಜ್ಯಗಳನ್ನು ಪ್ರತ್ಯೇಕವಾಗಿ ರಚಿಸಲು ಬೇಡಿಕೆ ಮುಂದಿಡಲಾಗಿದೆ. ಉತ್ತರ ಪ್ರದೇಶದ ಆಗ್ರಾ ವಿಭಾಗ ಹಾಗೂ ಅಲಿಗಢ ವಿಭಾಗ, ರಾಜಸ್ತಾನ ರಾಜ್ಯದ ಭರತ್‌ಪುರ, ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆ ಒಳಗೊಂಡ ಪ್ರದೇಶವನ್ನು ಪ್ರತ್ಯೇಕಿಸಿ ಬ್ರಜ್ ಪ್ರದೇಶ ಎಂದು ನಾಮಕರಣ ಮಾಡುವಂತೆಯೂ ಮನವಿ ಸಲ್ಲಿಸಲಾಗಿದೆ. ಉತ್ತರ ಪ್ರದೇಶದ ಪೂರ್ವ ಭಾಗ, ಬಿಹಾರ ಹಾಗೂ ಛತ್ತೀಸಗಢ ಒಳಗೊಂಡ ಪ್ರದೇಶ ಸೇರಿಸಿ ಭೋಜಪುರ ಎಂಬ ಪ್ರತ್ಯೇಕ ರಾಜ್ಯ ರಚಿಸಿ ಎನ್ನುವ ಪ್ರಸ್ತಾಪವನ್ನೂ ಮಾಡಲಾಗಿದೆ.

ಮಹಾರಾಷ್ಟ್ರದ ವಿದರ್ಭ ಪ್ರದೇಶ ಒಳಗೊಂಡ ಪ್ರದೇಶವನ್ನು ಹೊಸ ರಾಜ್ಯ ಮಾಡಿ ಎನ್ನುವ ಬೇಡಿಕೆಯಂತೂ ಹಳೆಯದು. ಡಾರ್ಜಿಲಿಂಗ್ ಹಾಗೂ ಪಶ್ಚಿಮ ಬಂಗಾಳದ ಕೆಲವು ಭಾಗ ಒಡೆದು ಗೋರ್ಖಾಲ್ಯಾಂಡ್, ಬೋಡೊ ಸಮುದಾಯದವರು ಹೆಚ್ಚಾಗಿರುವ ಪಶ್ಚಿಮ ಅಸ್ಸಾಂ ವಿಭಜಿಸಿ ಬೋಡೊಲ್ಯಾಂಡ್ ರಚಿಸುವ ಬೇಡಿಕೆಯೂ ಚಾಲ್ತಿಯಲ್ಲಿದೆ.

ತಮಿಳುನಾಡಿನ ನೈರುತ್ಯ ಭಾಗ, ಕರ್ನಾಟಕದ ಆಗ್ನೇಯ ಹಾಗೂ ಕೇರಳದ ಪೂರ್ವ ಭಾಗವನ್ನು ಸೇರಿಸಿ ಕೊಂಗು ನಾಡು ರಚಿಸಲು ಆ ಭಾಗದಿಂದ ಬೇಡಿಕೆ ಇಡಲಾಗಿದೆ. ಕೊಡವರು ಹೆಚ್ಚಾಗಿರುವ ಕರ್ನಾಟಕದ ಭಾಗದಲ್ಲಿ ಕೊಡವ ರಾಜ್ಯ ರಚಿಸಿ ಎನ್ನುವ ಕೂಗಂತೂ ಹಳೆಯದು.

ತುಳು ಭಾಷಿಕರು ಅಧಿಕ ಸಂಖ್ಯೆಯಲ್ಲಿ ವಾಸವಾಗಿರುವ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ. ಕೇರಳದ ಗಡಿ ಭಾಗ ಸೇರಿಸಿ ತುಳುನಾಡು ಎಂದು ನಾಮಕರಣ ಮಾಡುವ ಬೇಡಿಕೆಯೂ ಹಳೆಯ ಬೇಡಿಕೆಗಳಲ್ಲಿ ಸೇರಿದೆ. ಅರಬ್ಬಿ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಪಶ್ಚಿಮ ಭಾಗದಲ್ಲಿಯ ಕರಾವಳಿ ಭಾಗದಲ್ಲಿ ಕೊಂಕಣಿ ಭಾಷಿಕರಿಗೆ ಕೊಂಕಣ ರಾಜ್ಯ ರಚಿಸಲೂ ಬೇಡಿಕೆ ಇಡಲಾಗಿದೆ.

ಮೈಥಿಲಿ ಭಾಷೆ ಮಾತನಾಡುವ ಬಿಹಾರ ಹಾಗೂ ಜಾರ್ಖಂಡ್ ಭಾಗವನ್ನು ವಿಭಜಿಸಿ ಮಿಥಿಲಾಂಚಲ ರಾಜ್ಯವನ್ನಾಗಿ ಮಾಡಿ ಎನ್ನುವ ಪ್ರಸ್ತಾಪವನ್ನೂ ಕೇಂದ್ರ ಸರ್ಕಾರದ ಗೃಹ ಸಚಿವಾಲಯದ ಮುಂದಿಡಲಾಗಿದೆ.

ಗುಜರಾತ್‌ನ ಒಂದು ಭಾಗವನ್ನು ವಿಭಜಿಸಿ ಸೌರಾಷ್ಟ್ರ ರಾಜ್ಯವನ್ನಾಗಿ ಮಾಡಿ ಎನ್ನುವ ಕೂಗೂ ಕೇಳಿಬಂದಿದೆ. ಲಡಾಕ್ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ಬಗ್ಗೆಯೂ ಗೃಹ ಸಚಿವಾಲಯದಲ್ಲಿ ಮನವಿ ಸಲ್ಲಿಸಲಾಗಿದೆ. ದೇಶದಲ್ಲಿ 28 ರಾಜ್ಯಗಳಿದ್ದು ತೆಲಂಗಾಣ ದೇಶದ 29ನೇ ರಾಜ್ಯ ಎನಿಸಿಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT