ಸೋಮವಾರ, ಏಪ್ರಿಲ್ 19, 2021
31 °C

2031 ಮಾಸ್ಟರ್ ಪ್ಲಾನ್ಗೆ ಹಸಿರು ನಿಶಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಸೆಟಲೈಟ್ ಸಿಟಿ ಹಣೆಪಟ್ಟಿಯ ನಗರ ತುಮಕೂರು ಕೊನೆಗೂ ಯೋಜಿತ ನಗರವಾಗಿ  ರೂಪುಗೊಳ್ಳುವ ಕಾಲ ಸನ್ನಿತವಾಗಿದೆ. ನಗರಾಭಿವೃದ್ಧಿ   ಪ್ರಾಧಿಕಾರ ರೂಪಿಸಿರುವ ‘2031 ಮಾಸ್ಟರ್ ಪ್ಲಾನ್’     ಪ್ರಸ್ತಾವನೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.ಮಾಸ್ಟರ್ ಪ್ಲಾನ್ ನಕ್ಷೆಗೆ ರಾಜ್ಯ ಸರ್ಕಾರದ ಅಧೀನ  ಕಾರ್ಯದರ್ಶಿಯವರ ಸಹಿ ಮತ್ತು ಸೀಲು ಬೀಳುವುದು ಬಾಕಿ ಉಳಿದಿದೆ. ಅಧೀನ ಕಾರ್ಯದರ್ಶಿ ನೇತ್ರ ಶಸ್ತ್ರ ಚಿಕಿತ್ಸೆಗೆ       ಒಳಗಾಗಿರುವುದರಿಂದ ಕಡತಕ್ಕೆ ಸಹಿ ಬೀಳುವುದು   ತಡವಾಗಿದೆ. ಆದರೆ, ಸೋಮವಾರದ ನಂತರ ಯಾವುದೇ ಕ್ಷಣ ಅಧೀನಕಾರ್ಯದರ್ಶಿ ಅಥವಾ ಪ್ರಭಾರ            ಕಾರ್ಯದರ್ಶಿಯಿಂದ ಸಹಿ ಬೀಳುವ ಸಾಧ್ಯತೆ ಇದೆ. ಏಪ್ರಿಲ್ 26ರಂದು ನಡೆಯಲಿರುವ ನಗರಾಭಿವೃದ್ಧಿ ಪ್ರಾಧಿಕಾರದ    ಸಭೆಯಲ್ಲಿ ‘2031 ಮಾಸ್ಟರ್ ಪ್ಲಾನ್’ ಪ್ರಸ್ತಾವನೆಗೆ ಅನುಮೋದನೆ ಪಡೆದು, ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು’ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಗಳು ಶನಿವಾರ ‘ಪ್ರಜಾವಾಣಿ’ಗೆ ತಿಳಿಸಿವೆ.ರಾಜ್ಯ ಸರ್ಕಾರದ ಅಧೀನಕಾರ್ಯದರ್ಶಿ ಅನಾರೋಗ್ಯದ ಕಾರಣಕ್ಕೆ ‘2031 ಮಾಸ್ಟರ್ ಪ್ಲಾನ್’ಗೆ ಅಂತಿಮ ಮುದ್ರೆ ಒತ್ತುವ ಪ್ರಕ್ರಿಯೆ ವಿಳಂಬವಾಗುವುದು ಬೇಡ. ಅತ್ಯಂತ       ಶರವೇಗದಲ್ಲಿ ಬೆಳೆಯುತ್ತಿರುವ ತುಮಕೂರು  ಮಹಾನಗರವನ್ನು ಯೋಜಿತವಾಗಿ ರೂಪಿಸಲು ಮತ್ತು     ನಾಗರಿಕರಿಗೆ ಉನ್ನತಮಟ್ಟದ ಮೂಲಸೌಕರ್ಯ ಒದಗಿಸಲು ಅನುವಾಗುವಂತೆ ತಕ್ಷಣವೇ ನಗರಾಭಿವೃದ್ಧಿ ಸಚಿವ ಸುರೇಶ್‌ಕುಮಾರ್ ಗಮನ ಹರಿಸಬೇಕು. ಶೀಘ್ರ ಮಾಸ್ಟರ್ ಪ್ಲಾನ್ ಪ್ರಸ್ತಾವನೆಗೆ ಸಹಿ ಹಾಕಿಸಬೇಕು ಎಂದು ಶಾಸಕ ಸೊಗಡು ಶಿವಣ್ಣ ಒತ್ತಾಯಿಸಿದ್ದಾರೆ.ಏನಿದು ‘2031 ಮಾಸ್ಟರ್ ಪ್ಲಾನ್’


ಮುಂದಿನ ಎರಡು ದಶಕಗಳ ಅವಧಿಗೆ ನಗರ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ‘2031 ಮಾಸ್ಟರ್ ಪ್ಲಾನ್’      ರೂಪಿಸಲಾಗಿದೆ. ಈ ಮಾಸ್ಟರ್ ಪ್ಲಾನ್‌ನಲ್ಲಿ ನಗರದ 310 ಚದರ ಕಿ.ಮೀ. ಪ್ರದೇಶ ಸ್ಥಳೀಯ ಯೋಜನಾ ವ್ಯಾಪ್ತಿಗೆ ಒಳಪಡಲಿದೆ.‘ಮಾಸ್ಟರ್ ಪ್ಲಾನ್’ ಅನುಷ್ಠಾನಕ್ಕೆ ಬಂದರೆ ಇನ್ನು ನಗರದಲ್ಲಿ ಬಹುಮಹಡಿ ಕಟ್ಟಡಗಳು ತಲೆ ಎತ್ತಲು ಯಾವುದೇ ಅಡ್ಡಿಯಿಲ್ಲ. ನೆಲ ಮಹಡಿ ಜತೆಗೆ ನಾಲ್ಕು ಮಹಡಿಗಳವರೆಗೆ ಕಟ್ಟಡ ನಿರ್ಮಿಸಬಹುದು. ಜತೆಗೆ ಭೂ    ಬಳಕೆಯ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೆ ಬರಲಿವೆ. ಭೂ ಬಳಕೆ ನಿಯಮದಡಿ ವಸತಿ ಪ್ರದೇಶ, ವಾಣಿಜ್ಯ ಸಂಕೀರ್ಣ, ಉದ್ಯಾನ ಇತ್ಯಾದಿ ಇಂತಿಂಥ ಪ್ರದೇಶದಲ್ಲಿ ಇರಬೇಕೆಂದು ಒಮ್ಮೆ ನಿರ್ಧರಿಸಿ ಜಾಗ ಮೀಸಲಿಟ್ಟರೆ ಅದು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ.ಈಗಿನ ರಿಂಗ್‌ರಸ್ತೆಯ ಆಚೆಗೆ ನಗರ ಸುತ್ತುವರಿದಂತೆ ಸುಮಾರು 50ರಿಂದ 60 ಕಿ.ಮೀ. ಉದ್ದ ಹೊರ ವರ್ತುಲ ರಸ್ತೆ ನಿರ್ಮಿಸುವ ಪ್ರಸ್ತಾಪವೂ ಮಾಸ್ಟರ್‌ಪ್ಲಾನ್‌ನಲ್ಲಿದೆ. ಅಲ್ಲದೆ ಗುಬ್ಬಿ ರಸ್ತೆ ಬಳಿ ಸುಮಾರು 100 ಎಕರೆ ವಿಸ್ತಾರದಲ್ಲಿ ಆಟೊಮೊಬೈಲ್ ಪಾರ್ಕ್ ಸ್ಥಾಪನೆಯೂ ಸೇರಿದ್ದು, ಇದರಲ್ಲಿ ಸುಸಜ್ಜಿತ ಕ್ರೀಡಾ ಸಮುಚ್ಚಯ ನಿರ್ಮಾಣ ಮಾಡುವ      ಉದ್ದೇಶವಿದೆ ಎಂದು ಟುಡಾ ಮೂಲಗಳು ತಿಳಿಸಿವೆ.ಕನಸಿನ ನಗರ ನಿರ್ಮಾಣದ ಉದ್ದೇಶ ಮತ್ತು ಯೋಜನೆ ಒಳಗೊಂಡಿರುವ ‘2031 ಮಾಸ್ಟರ್ ಪ್ಲಾನ್’ ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬದ್ಧತೆ ಮತ್ತು ಇಚ್ಛಾಶಕ್ತಿ ತೋರಬೇಕು.ನಗರದ ಮೇಲೆ ವಿಶೇಷ ಒಲವು ಹೊಂದಿರುವ ಮತ್ತು ಅನೇಕ ಬಾರಿ ಬೆಂಗಳೂರಿಗೆ ಸರಿಸಮಾನವಾದ ಉನ್ನತ ಮೂಲಸೌಕರ್ಯಗಳನ್ನು ಇಲ್ಲಿಯ ಜನತೆಗೂ ಒದಗಿಸುವುದಾಗಿ ಭರವಸೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ‘2031 ಮಾಸ್ಟರ್ ಪ್ಲಾನ್’ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಅನುದಾನ ಒದಗಿಸಬೇಕು ಎನ್ನುವುದು ನಗರದ ವಿವಿಧ ಅಭಿವೃದ್ಧಿಪರ ಸಂಘಟನೆಗಳ ಮತ್ತು ಅಭಿವೃದ್ಧಿಪರ ಚಿಂತಕರ ಒತ್ತಾಸೆಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.