ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ಮೂರು ದಿನ ರಿಗೇಲ್-2011

Last Updated 21 ಫೆಬ್ರುವರಿ 2011, 8:15 IST
ಅಕ್ಷರ ಗಾತ್ರ

ರಾಯಚೂರು:  ಇಲ್ಲಿನ ನವೋದಯ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷದಂತೆ ಈ ವರ್ಷವೂ ಇದೇ 23ರಿಂದ 26ರವರೆಗೆ ‘ರಿಗೇಲ್-2011’ ಕಾರ್ಯಕ್ರಮ ಹಮ್ಮಿಕೊಂಡಿದೆ. ಪದವಿ ಪ್ರದಾನ, ಸಾಂಸ್ಕೃತಿ ಚಟುವಟಿಕೆಯ ಕೇಂದ್ರ ಬಿಂದುವಾಗಿ ಸಂಸ್ಥೆಯು ರಿಗೇಲ್ ಆಯೋಜಿಸುತ್ತ ಬಂದಿದೆ.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್ ರೆಡ್ಡಿ ಅವರು, 23ರಂದು ಸಂಜೆ 5.30ಕ್ಕೆ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್ ರಮಾನಂದಶೆಟ್ಟಿ ಅವರು ರಿಗೇಲ್ ಉದ್ಘಾಟಿಸುವರು. ರಾಜ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ.ಎ.ಆರ್ ಅರುಣಾ ಅವರು ಸಂಸ್ಥೆಯ ನರ್ಸಿಂಗ್ ವಿದ್ಯಾರ್ಥಿಗಳ ದೀಪದಾನ ಸಮಾರಂಭ ಉದ್ಘಾಟಿಸುವರು. ರಿಗೇಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು ವಿವರಿಸಿದರು.

24ರಂದು ಮಧ್ಯಾಹ್ನ 2.30ಕ್ಕೆ ನವೋದಯ ಶಿಕ್ಷಣ ಸಮೂಹ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭ ನಡೆಯಲಿದ್ದು, ನವದೆಹಲಿಯ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಡಾ.ಅನಿಲ್ ಕೊಹ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು. 25ರಂದು ಸಂಜೆ 5.30ಕ್ಕೆ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪ್ರತಿಭೆ ಮೆರೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಬಹುಮಾನ ವಿತರಣೆ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ವಿ ಪಾಟೀಲ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠ ಟಿ.ಆರ್ ಸುರೇಶ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಹೇಳಿದರು.

ರಿಗೇಲ್ ಕೊನೆಯ ದಿನವಾದ 26ರಂದು ಸಂಜೆ 6.30ಕ್ಕೆ ನವೋದಯ ಬಯಲು ರಂಗಮಂದಿರದಲ್ಲಿ ‘ಸಂಗಮ’ ಸಾಂಸ್ಕೃತಿ ಕಾಯಕ್ರಮ ನಡೆಯಲಿದ್ದು, ಜಿಲ್ಲಾಧಿಕಾರಿ ವಿ ಅನ್ಬುಕುಮಾರ ಮುಖ್ಯ ಅತಿಥಿಯಾಗಿ ಆಗಮಿಸುವರು. ಬೆಂಗಳೂರಿನ ಅಭಿನವ ನೃತ್ಯ ತಂಡದ ನಿರುಪಮಾ ರಾಜೇಂದ್ರ ಅವರು ‘ಸಂಭ್ರಮ’ ವಿಶಿಷ್ಟ ನೃತ್ಯ ಪ್ರದರ್ಶನ ನೀಡುವರು. ಖ್ಯಾತ ಕೊಳಲು ವಾದಕ ಪ್ರವೀಣ ಗೋಡಖಿಂಡಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.

ಸಂಸ್ಥೆ ಅಭಿವೃದ್ಧಿ ಚಟುವಟಿಕೆ: ಈಗಾಗಲೇ ತನ್ನದೇ ಆದ ವಿಶಿಷ್ಟತೆಯ ಮೂಲಕ ನವೋದಯ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದೆ. ಹಲವಾರು ಯೋಜನೆಗಳನ್ನು ರೂಪಿಸಿ ಹೆಜ್ಜೆ ಇಡಲಾಗಿದೆ. 65 ಕೋಟಿ ವೆಚ್ಚದಲ್ಲಿ ನವೋದಯ ತಾಂತ್ರಿಕ ಕಾಲೇಜು ನಿರ್ಮಾಣಗೊಳ್ಳುತ್ತಿದೆ. 28 ಎಕರೆಯಲ್ಲಿ ಈ ಕಾಲೇಜು ನಿರ್ಮಾಣಗೊಳ್ಳುತ್ತಿದ್ದು, ಇದಕ್ಕೆ ಎಸ್‌ಬಿಐ 45 ಕೋಟಿ ಸಾಲ ದೊರಕಿಸಿದೆ. 12 ಕೋಟಿ ರೂ ಮೊತ್ತದಲ್ಲಿ ಅತ್ಯಾಧುನಿಕ ಗ್ರಂಥಾಲಯ ನಿರ್ಮಿಸಲಾಗುತ್ತಿದೆ. ಹವಾನಿಯಂತ್ರಿತ, ಉಪಗ್ರಹ ಸಂಪರ್ಕ ಸಾಧನೆ, ಮಲ್ಟಿಮಿಡೀಯಾ, ಜಗತ್ತಿನ ಹಲವಾರು ರೀತಿಯ ಪ್ರಕಟಣೆಗಳನ್ನು ಈ ಗ್ರಂಥಾಲಯ ಹೊಂದಿರುತ್ತದೆ. 24 ಗಂಟೆಯೂ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮುಕ್ತವಿರುತ್ತದೆ. ಉತ್ತರ ಕರ್ನಾಟಕದಲ್ಲಿಯೇ ಅತ್ಯಾಧುನಿಕ ಸೌಲಭ್ಯ ಹೊಂದಿದ ವಿದ್ಯಾರ್ಥಿ ಗ್ರಂಥಾಲಯ ಇದಾಗಲಿದೆ ಎಂದರು.

ಅದೇ ರೀತಿ 2 ಕೋಟಿ ವೆಚ್ಚದಲ್ಲಿ ‘ಸ್ಕಿಲ್ ಲ್ಯಾಬ್’ ನಿರ್ಮಾಣ ಕೈಗೊಳ್ಳಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳು ಪಠ್ಯ ಅಧ್ಯಯನ ಜೊತೆಗೆ ಶಸ್ತ್ರ ಚಿಕಿತ್ಸೆ ಸೇರಿದಂತೆ ಪ್ರಾಯೋಗಿಕ ಅಧ್ಯಯನಕ್ಕೆ ಸಹಕಾರಿಯಾಗಿದೆ. ಈ ಲ್ಯಾಬ್‌ನಲ್ಲಿ ಜೀವ ಇಲ್ಲ ಎನ್ನುವುದನ್ನು ಬಿಟ್ಟರೆ ಸಂಪೂರ್ಣ ಮನುಷ್ಯರೇ ಎನ್ನುವಂಥ ಗೊಂಬೆಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ವಿವರಿಸಿದರು.

ಎಂಬಿಬಿಎಸ್ ವ್ಯಾಸಂಗಕ್ಕೆ ಈವರೆಗೆ 100 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶವಿತ್ತು. ಈಗ 200 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರಕಿದೆ. ಸದ್ಯ 752 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿದ್ದು, ಇನ್ನೂ 300 ಹಾಸಿಗೆ ಆಸ್ಪತ್ರೆ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ರಾಜೀವ ಗಾಂಧಿ ವಿವಿಗೆ ಈ ವರ್ಷ ಪ್ರಥಮ ಚಿನ್ನದ ಪದಕವನ್ನು ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯಾದ ಮೂಲತಃ ಬೆಳಗಾವಿಯ ಶೀತಲ್ ಅವರು ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆ ಹೆಚ್ಚಿಸಿದೆ. ದಂತ ವೈದ್ಯಕೀಯ ಕಾಲೇಜಿನ ಪ್ರಥಮ ಬ್ಯಾಚ್ ಹೊರ ಬಂದಿದ್ದು ಶೇ 100ರಷ್ಟು ಫಲಿತಾಂಶ ಗಳಿಸಿದ್ದಾರೆ. ವಿವಿಧ ರಾಷ್ಟ್ರಗಳ ಸುಮಾರು 100 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆಯ ದಂತ ವೈದ್ಯಕೀಯ ಕಾಲೇಜಿಗೆ ಈಚೆಗೆ ಭೇಟಿ ನೀಡಿದ್ದ ಯುಕೆ ರಾಷ್ಟ್ರದ ಇಬ್ಬರು ತಜ್ಞ ವೈದ್ಯರು ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಉತ್ಸುಕತೆ ತೋರಿದ್ದಾರೆ ಎಂದು ಹೇಳಿದರು.

ಸಂಸ್ಥೆಯ ವೈದ್ಯಕೀಯ ಅಸ್ಪತ್ರೆಯು ಈ ವರ್ಷ 29 ಗ್ರಾಮೀಣ ವೈದ್ಯಕೀಯ ಚಿಕಿತ್ಸಾ ಶಿಬಿರ ನಡೆಸಿದೆ. 9,200 ರೋಗಿಗಳನ್ನು ತಪಾಸಣೆ ಮಾಡಿ 1,130 ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಆಸ್ಪತ್ರೆಯಲ್ಲಿ ಮೂರುವರೆ ಲಕ್ಷ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ 34 ಸಾವಿರ ರೋಗಿಗಳು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 4,279 ಜನರು ಶಸ್ತ್ರ ಚಿಕಿತ್ಸೆಗೊಳಗಾಗಿದ್ದಾರೆ. ಎಂಆರ್‌ಐ ಸ್ಕ್ಯಾನ್ ಸೌಲಭ್ಯ, ಎನ್‌ಐಸಿಯು ಸೌಲಭ್ಯವನ್ನೂ ಆಸ್ಪತ್ರೆಯು ಹೊಂದಿದೆ ಎಂದು ವಿವರಿಸಿದರು.ಸಂಸ್ಥೆಯ ರಜಿಸ್ಟ್ರಾರ್ ಡಾ.ಟಿ ಶ್ರೀನಿವಾಸ, ನವೋದಯ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಖಾಜಾ ನಸಿರುದ್ದೀನ್, ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಎಸ್.ಆರ್ ಹೆಗಡೆ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT