ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

246 ಕೋಟಿ ವಸೂಲಿ ಮಾಡಲು ವಿಫಲ!

Last Updated 7 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿಯ ವಿಶೇಷ ಲೆಕ್ಕ ಪರಿಶೋಧನಾ ಘಟಕವು ನಡೆಸಿದ ಲೆಕ್ಕ ಪರಿಶೋಧನೆ ಸಮರ್ಪಕವಾಗಿಲ್ಲ ಹಾಗೂ 246 ಕೋಟಿ ರೂಪಾಯಿ ಆಕ್ಷೇಪಣಾ ಮೊತ್ತವನ್ನು ವಸೂಲಿ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುವ ಮೂಲಕ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡವು.

ಮೇಯರ್ ಪಿ. ಶಾರದಮ್ಮ ಅಧ್ಯಕ್ಷತೆಯಲ್ಲಿ ಪಾಲಿಕೆಯಲ್ಲಿ ಬುಧವಾರ ನಡೆದ ವಿಷಯ ಸಂಬಂಧಿ ಸಭೆಯಲ್ಲಿ ವಿಶೇಷ ಲೆಕ್ಕಪರಿಶೋಧನಾ ಘಟಕವು 1964-65ನೇ ಸಾಲಿನಿಂದ 2006-07ನೇ ಹಣಕಾಸು ವರ್ಷದವರೆಗಿನ ಅವಧಿಯ ಲೆಕ್ಕ ಪರಿಶೋಧನಾ ವರದಿ ಪ್ರಸ್ತಾವವನ್ನು ಮಂಡಿಸಿ ಮುಂದೂಡಲಾಯಿತು.

ಆದರೆ ಇದಕ್ಕೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, `1964ರಿಂದ 2006ರವರೆಗಿನ ಅವಧಿಯ ಲೆಕ್ಕ ಪರಿಶೋಧನಾ ಕಾರ್ಯವನ್ನು ವಿಶೇಷ ಲೆಕ್ಕ ಪರಿಶೋಧನಾ ಘಟಕ ಪೂರ್ಣಗೊಳಿಸಿದೆ. ಅದರಂತೆ ಆಕ್ಷೇಪಣಾ ಮೊತ್ತ ಸುಮಾರು 1,406 ಕೋಟಿ ರೂಪಾಯಿ ಮೀರಿದೆ. ಅಲ್ಲದೇ ತಪ್ಪಿತಸ್ತರಿಂದ 252 ಕೋಟಿ ರೂಪಾಯಿ ವಸೂಲಿ ಮಾಡಬೇಕಿದೆ~ ಎಂದರು.

`ಆದರೆ ಈವರೆಗೆ ವಸೂಲಿ ಮಾಡಿರುವುದು ಕೇವಲ 5.91 ಕೋಟಿ ರೂಪಾಯಿ ಮಾತ್ರ. ಅಂದರೆ ಶೇ 2ರಷ್ಟು ಪ್ರಗತಿಯನ್ನಷ್ಟೇ ಸಾಧಿಸಲಾಗಿದೆ. ಅಲ್ಲದೇ ಬಹಳಷ್ಟು ಮಂದಿ ಸೇವೆಯಿಂದ ನಿವೃತ್ತರಾಗಿರುತ್ತಾರೆ. ಎಲ್ಲ ವಲಯಗಳ ಜಂಟಿ ನಿರ್ದೇಶಕರೇ ಇದಕ್ಕೆ ಹೊಣೆ.

ಅಲ್ಲದೇ ವಿಶೇಷ ಘಟಕಕ್ಕೆ ನಿವೃತ್ತ ಹಣಕಾಸು ನಿಯಂತ್ರಕರನ್ನು ನೇಮಿಸಲಾಗಿದೆ. ಇದರಿಂದ  ವರದಿ ನ್ಯಾಯಯುತವಾಗಿಲ್ಲ ಎಂಬ ಅನುಮಾನ ಮೂಡಲಾರಂಭಿಸಿದೆ. ಹಾಗಾಗಿ ಈ ವರದಿಯನ್ನು ಇನ್ನೊಮ್ಮೆ ಪರಿಶೀಲನೆ ನಡೆಸಿ ಸಲ್ಲಿಸಬೇಕು~ ಎಂದು ಆಗ್ರಹಿಸಿದರು.

ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಎಂ.ಉದಯಶಂಕರ್, `ವಿಶೇಷ ಘಟಕಕ್ಕೆ ಕರ್ತವ್ಯನಿರತ ಹಣಕಾಸು ನಿಯಂತ್ರಕರನ್ನೇ ನೇಮಕ ಮಾಡಬೇಕು. ಆಗಮಾತ್ರ ಆ ವರದಿಗೆ ವಿಶ್ವಾಸಾರ್ಹತೆ ಬರುತ್ತದೆ~ ಎಂದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಆಯುಕ್ತ ಸಿದ್ದಯ್ಯ, `1964ರಿಂದ 2006ರವರೆಗೆ ಲೆಕ್ಕ ಪರಿಶೋಧನೆ ನಡೆಯದಿರುವುದು ದುರದೃಷ್ಟಕರ. ಆದರೆ ಇಷ್ಟು ದೀರ್ಘಾವಧಿಯ ಹಣಕಾಸು ವ್ಯವಹಾರದ ಬಗ್ಗೆ ವಿಶೇಷ ಲೆಕ್ಕಪರಿಶೋಧನಾ ಘಟಕವು ಪರಿಶೀಲನೆ ನಡೆಸಿ ವರದಿ ನೀಡಿದೆ. ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಮುಂದಿನ ಸಭೆಯಲ್ಲಿ ನೀಡಲಾಗುವುದು~ ಎಂದು ಹೇಳಿದರು.

ಉತ್ತಮ ಸಲಹೆ: `ವಿಶೇಷ ಘಟಕಕ್ಕೆ ನಿವೃತ್ತ ಲೆಕ್ಕ ಪರಿಶೋಧಕರ ಬದಲಿಗೆ ಕರ್ತವ್ಯನಿರತ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂಬುದು ಉತ್ತಮ ಸಲಹೆ. ಇದನ್ನು ಪಾಲಿಸಲಾಗುವುದು. ಆದರೆ ತೀರಾ ಅಗತ್ಯಬಿದ್ದರೆ ಪ್ರಾಮಾಣಿಕ ನಿವೃತ್ತ ಅಧಿಕಾರಿಗಳ ಸೇವೆ ಬಳಸಿಕೊಳ್ಳಲಾಗುವುದು~ ಎಂದರು.

`ವರದಿ ಆಧಾರದ ಮೇಲೆ 252 ಕೋಟಿ ರೂಪಾಯಿ ವಸೂಲಾತಿ ಮಾಡಬೇಕಿದ್ದು, ಈವರೆಗೆ 5.91 ಕೋಟಿ ರೂಪಾಯಿ ವಸೂಲಿ ಮಾಡಲಾಗಿದೆ. ಉಳಿದ ಹಣ ವಸೂಲು ಮಾಡಲು ಕ್ರಮ ಕೈಗೊಳ್ಳಲಾಗುವುದು~ ಎಂದು ತಿಳಿಸಿದರು.

ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, `ನೋಡಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಲೆಕ್ಕ ಪರಿಶೋಧನಾ ಕಾರ್ಯ ಸಮರ್ಪಕವಾಗಿ ನಡೆದಿಲ್ಲ. ಹಾಗಾಗಿ ಪೂರ್ವ, ಆಂತರಿಕ ಲೆಕ್ಕ ಪರಿಶೋಧನೆ ನಡೆಸಬೇಕಾದ ಅಗತ್ಯವಿದೆ. 1964ರಿಂದ 1995ರವರೆಗಿನ ಅವಧಿಯ ಹಣಕಾಸು ವ್ಯವಹಾರದ ದಾಖಲೆಗಳೇ ಇಲ್ಲ. ಹಾಗಾಗಿ ಲಭ್ಯವಿರುವ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ~ ಎಂದರು.

ಹದಗೆಟ್ಟ ರಸ್ತೆಗಳ ದುರಸ್ತಿ ಮಾಸಾಂತ್ಯಕ್ಕೆ

ನಗರದಲ್ಲಿ ರಸ್ತೆಗಳು ಹದಗೆಟ್ಟಿರುವ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಾಸಾಂತ್ಯದ ವೇಳೆಗೆ ರಸ್ತೆಗಳನ್ನು ದುರಸ್ತಿಪಡಿಸುವುದಾಗಿ ಬಿಬಿಎಂಪಿ ಆಯುಕ್ತರು ಭರವಸೆ ನೀಡಿದರು.
ಪಾಲಿಕೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, `ನಗರದ ಬಹುಪಾಲು ರಸ್ತೆಗಳು ಹಾಳಾಗಿದ್ದು, ಜನತೆ ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು~ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಸಿದ್ದಯ್ಯ, `ನಗರದಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ರಸ್ತೆಗಳು ಗುಂಡಿಬಿದ್ದಿವೆ. ಸುಮಾರು 7,000 ಗುಂಡಿಗಳು ನಿರ್ಮಾಣವಾಗಿವೆ ಎಂಬ ಅಂದಾಜು ಇದೆ. ದುರಸ್ತಿ ಕಾರ್ಯಕ್ಕೆ ಈಗಾಗಲೇ 2 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದ್ದು, ಮಾಸಾಂತ್ಯದ ವೇಳೆಗೆ ಎಲ್ಲ ಗುಂಡಿಗಳನ್ನು ಮುಚ್ಚಲು ಪ್ರಯತ್ನಿಸಲಾಗುವುದು~ ಎಂದರು.

ಸಾಲ ತೀರಿಸಲು ಸಾಲ: ಬಿಬಿಎಂಪಿ ಈಗಾಗಲೇ ವಿವಿಧ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲವನ್ನು ತೀರಿಸಲು ಹೊಸ ಸಾಲ ಮಾಡಲು ಮುಂದಾಗಿರುವ ಕ್ರಮದ ಬಗ್ಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು.

ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, `ಈಗಾಗಲೇ ಮಾಡಿರುವ ಸಾಲ ತೀರಿಸಲು ಹುಡ್ಕೊ ಸಂಸ್ಥೆಯಿಂದ 266.12 ಕೋಟಿ ರೂಪಾಯಿ ಸಾಲ ಪಡೆಯಲು ಮುಂದಾಗಿರುವುದು ಸರಿಯಲ್ಲ. ಅಲ್ಲದೇ ಸಾಲ ಮೊತ್ತದ ಶೇ 125ರಷ್ಟು ಮೌಲ್ಯದ ಪಾಲಿಕೆ ಭೂಮಿ/ ಕಟ್ಟಡವನ್ನು ಅಡವಿಡಬೇಕು ಎಂಬ ನಿಯಮವಿದೆ. ಈ ರೀತಿ ಪಾಲಿಕೆ ಆಸ್ತಿ ಅಡವಿಟ್ಟು ಸಾಲ ಪಡೆಯುವ ಪ್ರಮೇಯವೇನು~ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, `ನಾವು ಯಾರ ಬಳಿಯೂ ಭಿಕ್ಷೆ ಬೇಡುವ ಅಗತ್ಯವಿಲ್ಲ. ಸಾಲ ಏಕೆ ಮಾಡಬೇಕು. ಸರ್ಕಾರ ಕೊಡಬೇಕಾದ 1,300 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದರೆ ಸಾಲ ತೀರಿಸಬಹುದಾಗಿದೆ~ ಎಂದರು.

ಮಠಗಳ ಬದಲಿಗೆ ಪಾಲಿಕೆಗೆ ಹಣ ನೀಡಿ: `ಮಠಗಳಿಗೆ ಕೋಟ್ಯಂತರ ರೂಪಾಯಿ ಹಣ ನೀಡುವ ಬಿಜೆಪಿ ಸರ್ಕಾರ ಬೆಂಗಳೂರಿನ ಜನತೆಗೆ ಸೌಲಭ್ಯ ಕಲ್ಪಿಸಲು ಅನುದಾನ ನೀಡಲಿ. ಅದನ್ನು ಬಿಟ್ಟು ಸಾಲ ಪಡೆಯುವುದು ಸೂಕ್ತವಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, `ಕೆನರಾ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳು ಕ್ರಮವಾಗಿ ಶೇ 12.75, ಶೇ 13.25ರಷ್ಟು ಬಡ್ಡಿ ವಿಧಿಸುತ್ತವೆ. ಆದರೆ ಹುಡ್ಕೊ ಸಂಸ್ಥೆಯು ಶೇ 11ರ ಬಡ್ಡಿ ದರದಲ್ಲಿ ಸಾಲ ನೀಡುತ್ತದೆ. ಇದರಿಂದ ಪಾಲಿಕೆಗೆ 8 ಕೋಟಿ ರೂಪಾಯಿ ಉಳಿತಾಯವಾಗಲಿದೆ.

ಅಲ್ಲದೇ ಸಾಲವನ್ನು 15 ವರ್ಷದೊಳಗೆ ಮರುಪಾವತಿ ಮಾಡಬಹುದಾಗಿದೆ. ಹಾಗೆಂದು ಪಾಲಿಕೆಯ ಯಾವುದೇ ಆಸ್ತಿಯನ್ನು ಅಡವಿಡುವುದಿಲ್ಲ. ಬದಲಿಗೆ ಪಾಲಿಕೆ ಆಸ್ತಿಗಳ ಮೌಲ್ಯದ ಆಧಾರದ ಮೇಲೆ ಹುಡ್ಕೊ ಸಂಸ್ಥೆ ಸಾಲ ನೀಡುತ್ತದೆ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT