ಗುರುವಾರ , ಮೇ 6, 2021
23 °C

249 ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಒಟ್ಟಾರೆ 363 ಅಂಗನವಾಡಿ ಕೇಂದ್ರಗಳಿದ್ದು, ಬಹುತೇಕ ಕೇಂದ್ರಗಳು ಮೂಲ ಸೌಕರ್ಯ ಕೊರತೆ ಎದುರಿಸುತ್ತಿವೆ. ತಾಲ್ಲೂಕಿನಲ್ಲಿರುವ ಸುಮಾರು 249 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. 114 ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿವೆ.ಸ್ವಂತ ಕಟ್ಟಡಗಳು ಹೊಂದಿಲ್ಲದ ಅಂಗನವಾಡಿ ಕೇಂದ್ರಗಳು ಪಂಚಾಯಿತಿ ಕಟ್ಟಡಗಳು ಅಲ್ಲದೇ ಬೇರೆ ಬೇರೆ ಕಡೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಂಚಾಯಿತಿ ಕಟ್ಟಡದಲ್ಲಿ-13, ಸಮುದಾಯ ಭವನದಲ್ಲಿ-10, ಮಹಿಳಾ ಮಂಡಳಿಯಲ್ಲಿ-1, ಭಜನಾ ಮಂದಿರ-24, ದೇವಸ್ಥಾನಗಳಲ್ಲಿ-42, ಸರ್ಕಾರಿ ಶಾಲೆ ಕಟ್ಟಡಗಳಲ್ಲಿ-49, ತಾತ್ಕಾಲಿಕ ಕಟ್ಟಡಗಳಲ್ಲಿ-42, ಬಾಡಿಗೆ ಕಟ್ಟಡಗಳಲ್ಲಿ-67 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.114 ಕೇಂದ್ರಗಳಲ್ಲಿ ಅಡುಗೆ ಕೋಣೆ, 42 ಕೇಂದ್ರಗಳಲ್ಲಿ ಶೌಚಾಲಯ ಮತ್ತು 27 ಕೇಂದ್ರಗಳಲ್ಲಿ ನೀರಿನ ಸೌಕರ್ಯವಿದೆ. ಆದರೆ, ಅಚ್ಚರಿಯ ಸಂಗತಿಯೆಂದರೆ, ಯಾವದೇ ಕೇಂದ್ರಕ್ಕೂ ವಿದ್ಯುತ್ ಪೂರೈಕೆಯ ವ್ಯವಸ್ಥೆಯಿಲ್ಲ.  ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕೊರತೆಯು ಅಷ್ಟೇ ಪ್ರಮಾಣದಲ್ಲಿದೆ.  ಒಟ್ಟು 34 ಅಂಗನವಾಡಿ ಕಾರ್ಯಕರ್ತೆಯರ ಮತ್ತು 82 ಅಂಗನವಾಡಿ ಸಹಯಾಕಿಯರ ಹುದ್ದೆಗಳು ಖಾಲಿ ಉಳಿದಿವೆ.`ಗರ್ಭಿಣಿಯರಿಗೆ ಮಾತ್ರವಲ್ಲದೇ ಆರು ವರ್ಷದ ಒಳಗಿನ ಮಕ್ಕಳಿಗೆ ಪೂರ್ವ ಶಾಲಾ ಶಿಕ್ಷಣ ನೀಡುವುದು ಅಂಗನವಾಡಿ ಕೇಂದ್ರಗಳ ಉದ್ದೇಶ. ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತೇವೆ. ಅವರ ಮನೆಗಳಿಗೂ ಪೌಷ್ಟಿಕ ಆಹಾರ ಪೂರೈಸುತ್ತೇವೆ~ ಎಂದು ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಿಳಿಸಿದರು.`ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಕ್ಕಳ ಶಿಕ್ಷಣಕ್ಕೆ ಕೋಟ್ಯಾಂತರ ಹಣ ವ್ಯಯ ಮಾಡುತ್ತಿವೆ. ಅಂಗನವಾಡಿ ಕೇಂದ್ರಗಳಿಗೆ ಹೆಚ್ಚಿನ ಸೌಕರ್ಯ ಒದಗಿಸುವ ಭರವಸೆ ನೀಡಲಾಗುತ್ತದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ನಗರಪ್ರದೇಶಗಳಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಹೊರತು ಗ್ರಾಮೀಣ ಪ್ರದೇಶದ ಕೇಂದ್ರಗಳ ಸ್ಥಿತಿಗತಿ ಪರಿಶೀಲಿಸಲಾಗುವುದಿಲ್ಲ. ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿನ ಮಕ್ಕಳು ಪೌಷ್ಠಿಕ ಆಹಾರ, ಶಿಕ್ಷಣ ಮತ್ತು ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ~ ಎಂದು ಸಿಐಟಿಯು ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಕೆ.ರತ್ನಮ್ಮ `ಪ್ರಜಾವಾಣಿ~ಗೆ ತಿಳಿಸಿದರು.`ಅಂಗನವಾಡಿ ಕೇಂದ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಮಾತ್ರವಲ್ಲದೇ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ. ಹಲವು ಮನವಿಗಳನ್ನು ಸಲ್ಲಿಸಲಾಗಿದೆ. ಹೀಗಿದ್ದರೂ ಅಂಗನವಾಡಿ ಕೇಂದ್ರಗಳ ಪರಿಸ್ಥಿತಿ ಸುಧಾರಿಸಿಲ್ಲ.ಸಮಸ್ಯೆಗಳು ನಿವಾರಣೆಯಾಗದೇ ಹೀಗೆ ಮುಂದುವರೆದಲ್ಲಿ, ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು~ ಎಂದು ಅವರು ತಿಳಿಸಿದರು.

-ಪಿ.ಎಸ್.ರಾಜೇಶ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.