ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27ಕ್ಕೆ ಚಿತ್ರಾವತಿ ಬ್ರಹ್ಮರಥೋತ್ಸವ

Last Updated 24 ಜನವರಿ 2012, 7:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಗರದ ಹೊರವಲಯದಲ್ಲಿರುವ ಚಿತ್ರಾವತಿಯ ಕುಮಾರಸ್ವಾಮಿ ಸುಬ್ರಹ್ಮಣೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ  ಜನವರಿ 27ರಿಂದ ಫೆಬ್ರುವರಿ 3ರವರೆಗೆ ಜಾತ್ರೆ ನಡೆಯಲಿದ್ದು, ರಾಸುಗಳ ಜಾತ್ರೆ ಆರಂಭಗೊಂಡಿದೆ.

ಜಾತ್ರೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ತಿಂಡಿ-ತಿನಿಸು ಮಾರಾಟಗಾರರು ಇತರರು ಭಾರಿ ಸಂಖ್ಯೆಯಲ್ಲಿ ಮಳಿಗೆ ತೆರೆದಿದ್ದಾರೆ. ದೇವಾಲಯದ ಸುತ್ತಮುತ್ತ ಜಾತ್ರೆಯ ವಾತಾವರಣ ಮೂಡಿದ್ದು, ಬ್ರಹ್ಮರಥೋತ್ಸವಕ್ಕೆ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ.

ದೇವಾಲಯ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ರಾಸುಗಳ ಜಾತ್ರೆ ನಡೆದಿದ್ದು, ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ವ್ಯಾಪಾರಸ್ಥರು ರಾಸುಗಳನ್ನು ತಂದಿದ್ದಾರೆ.

ಆದರೆ ಗತಿಸಿ ಹೋದ ವರ್ಷಗಳನ್ನು ನೆನಪಿಸುವ ಎತ್ತುಗಳ ವ್ಯಾಪಾರಸ್ಥರು, `ಹಳೆಯ ದಿನಗಳೇ ತುಂಬ ಚೆನ್ನಾಗಿದ್ದವು. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ದೂರದವರೆಗೆ ಎತ್ತುಗಳ ಜಾತ್ರೆ ನಡೆಯುತಿತ್ತು.

ಎತ್ತುಗಳ ಖರೀದಿಗೆ ಆಂಧ್ರಪ್ರದೇಶ, ಬಳ್ಳಾರಿ, ರಾಯಚೂರಿನಿಂದ ರೈತರು ಬರುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಸುವರ್ಣ ದಿನಗಳು ಕಣ್ಮರೆಯಾಗಿವೆ~ ಎನ್ನುತ್ತಾರೆ.

`ಕೃಷಿ ಚಟುವಟಿಕೆಗೆ ಟ್ರ್ಯಾಕ್ಟರ್ ಮತ್ತು ಇತರ ಯಂತ್ರಗಳು ಬಂದ ನಂತರ ಎತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ. ಜೋಡಿ ಎತ್ತುಗಳಿಂದ ಇಡೀ ದಿನ ಅರ್ಧ ಅಥವಾ ಮುಕ್ಕಾಲು ಎಕರೆಯಷ್ಟು ಜಮೀನು ಉಳುಮೆ ಮಾಡಬಹುದು.

ಆದರೆ ಒಂದು ಟ್ರ್ಯಾಕ್ಟರ್‌ನಿಂದ ದಿನಕ್ಕೆ 5 ರಿಂದ 6 ಎಕರೆಯಷ್ಟು ಜಮೀನು ಉಳುಮೆ ಮಾಡಬಹುದು. ಹೀಗಾಗಿ ರೈತರು ಎತ್ತುಗಳನ್ನು ಖರೀದಿಸುವ ಬದಲು ಟ್ರ್ಯಾಕ್ಟರ್‌ಗಳ ಖರೀದಿಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ~ ಎಂದು ತಾಲ್ಲೂಕಿನ ದಿನ್ನೆಗೇರಹಳ್ಳಿಯ ನಿವಾಸಿ ಭಾಸ್ಕರ್‌ಬಾಬು `ಪ್ರಜಾವಾಣಿ~ಗೆ ತಿಳಿಸಿದರು.

`ಒಂದು ಗ್ರಾಮದಲ್ಲಿ 10 ರಿಂದ 20 ಜೋಡಿ ಎತ್ತುಗಳು ಇರುತ್ತಿದ್ದವು. ಆದರೆ ಗ್ರಾಮದಲ್ಲೆಗ ಎರಡು ಅಥವಾ ಮೂರು ಜೋಡಿ ಎತ್ತುಗಳಿವೆ. ಇನ್ನೂ ಕೆಲ ವರ್ಷಗಳ ಕಳೆದರೆ, ಅವು ಕೂಡ ಕಾಣಸಿಗೋದಿಲ್ಲ. ಚಕ್ಕಡಿಗಾಡಿಗಳು ಸಹ ಕಡಿಮೆಯಾಗಿವೆ. ಎತ್ತುಗಳನ್ನು ಸಾಕುವುದು ಇತ್ತೀಚಿನ ದಿನಗಳಲ್ಲಿ ದುಬಾರಿಯಾಗಿ ಪರಿಣಮಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರು ಎತ್ತುಗಳನ್ನು ಸಾಕುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಜಾತ್ರೆಗೆ ಬರುವ ಎತ್ತುಗಳ ಸಂಖ್ಯೆಯೂ ಕಡಿಮೆಯಾಗಿದೆ~ ಎಂದರು.

`ಜಾತ್ರೆ ಸಮಿತಿಯವರು ನಮ್ಮಿಂದ ಸುಂಕವನ್ನು ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ನಮಗೆ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಅನುಕೂಲವಾಗುತ್ತದೆ. ಜಾತ್ರೆ ನಡೆಯುವ ಸ್ಥಳದಲ್ಲಿ ನೀರು ಮತ್ತು ದೀಪದ ಸೌಕರ್ಯ ಕಲ್ಪಿಸಲಾಗಿಲ್ಲ. ನಾವು ಬಾಟ್ಲಿಗಳಲ್ಲಿ ನೀರು ಕುಡಿಯುತ್ತೇವೆ. ಆದರೆ ಈ ಎತ್ತುಗಳಿಗೆ ನೀರು ಎಲ್ಲಿಂದ ತರೋದು~ ಎಂದು ಹೊನ್ನೇನಹಳ್ಳಿ ರಮೇಶ್ ಪ್ರಶ್ನಿಸಿದರು.

`ಜಾತ್ರೆ ಸಂಸ್ಕೃತಿ ಕಡಿಮೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ ಜಾತ್ರೆಯನ್ನು ಪ್ರೋತ್ಸಾಹಿಸುವಂತಹ ಚಟುವಟಿಕೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿದಿಂದ ಆಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾತ್ರೆಗೆ ಬರುವಂತಾಗಬೇಕು ಎಂದು ಗ್ರಾಮಸ್ಥರಾದ ಎಚ್. ಎಸ್. ರಾಜಶೇಖರ್, ಮುರಳೀಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT