ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2,804 ಎಕರೆ ಭೂಗಳ್ಳರ ಪಾಲು

Last Updated 11 ಜನವರಿ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: ಭೂಗಳ್ಳರು ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು ಐದು ಸಾವಿರ ಕೋಟಿ ರೂಪಾಯಿ ಮೌಲ್ಯದ 2,804 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿರುವ ಅಂಶ ಕಂದಾಯ ಇಲಾಖೆ ಕೈಗೊಂಡಿರುವ ಆಂತರಿಕ ತನಿಖೆಯಿಂದ ಪತ್ತೆಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆಗಳ ಸೃಷ್ಟಿ ಮೂಲಕ ಒತ್ತುವರಿ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಸರ್ಕಾರದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ನೇತೃತ್ವದ ಸರ್ಕಾರಿ ಭೂಮಿ ಸಂರಕ್ಷಣಾ ಕಾರ್ಯಪಡೆ ವ್ಯಕ್ತಪಡಿಸಿದ್ದ ಅನುಮಾನದ ಆಧಾರದ ಮೇಲೆ ಕಂದಾಯ ಇಲಾಖೆ ತನಿಖೆ ಕೈಗೊಂಡಿತ್ತು.

ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಐದು ಕಂದಾಯ ತಾಲ್ಲೂಕುಗಳಲ್ಲಿ ಭೂ ಮಂಜೂರಾತಿ ಕಡತಗಳನ್ನು ತಿರುಚಿದ ಒಟ್ಟು 428 ಪ್ರಕರಣಗಳನ್ನು ಇಲಾಖೆ ಪತ್ತೆ ಮಾಡಿದೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿದ್ದ ಹಲವಾರು ಭೂ ಮಂಜೂರಾತಿ ಕಡತಗಳಿಗೆ ರಾಜ್ಯ ಭೂ ಮಂಜೂರಾತಿ ನಿಯಮಗಳ ಅನ್ವಯ ಕೆಲವು ಅಗತ್ಯ ದಾಖಲೆಗಳು ಇಲ್ಲದಿರುವುದನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಇಲಾಖೆ ಗಮನಿಸಿತ್ತು.

ಒಟ್ಟು 9,900 ಎಕರೆ ಭೂಮಿಯ 1,167 ದಾಖಲೆಗಳ ಅಸಲಿತನದ ಕುರಿತು ಬೆಂಗಳೂರು ನಗರ ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಗಳ ಕಚೇರಿ ಕಳೆದ ಸೆಪ್ಟೆಂಬರ್‌ನಲ್ಲಿ ಅನುಮಾನ ವ್ಯಕ್ತಪಡಿಸಿತ್ತು. ಈ ದಾಖಲೆಗಳನ್ನು ಪರಿಶೀಲಿಸಲು 60 ತಂಡಗಳನ್ನು ರಚಿಸಲಾಯಿತು. ಈ ತಂಡಗಳು ನೀಡಿದ ಮಾಹಿತಿಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಪರಿಶೀಲಿಸಿದಾಗ, 428 ದಾಖಲೆಗಳು ತಿರುಚಲ್ಪಟ್ಟಿವೆ ಎಂಬ ಅಂಶ ಬಯಲಾಯಿತು.

ತಾನು ಕಂಡುಕೊಂಡಿರುವ ಅಂಶಗಳ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವರದಿ ನೀಡಿರುವ ಸಮಿತಿ, 2,804 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಶಿಫಾರಸು ಮಾಡಿದೆ.

ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದ ವ್ಯಕ್ತಿಗಳ ವಿರುದ್ಧ ಆಯಾ ಕಂದಾಯ ತಾಲ್ಲೂಕುಗಳ ತಹಶೀಲ್ದಾರರು ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಈ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಬೆಂಗಳೂರು ಉತ್ತರ ಹೆಚ್ಚುವರಿ ತಾಲ್ಲೂಕಿನಲ್ಲಿ ಅತಿಹೆಚ್ಚು ಪ್ರಮಾಣದ ಭೂಕಬಳಿಕೆ ನಡೆದಿರುವುದು ಬಯಲಾಗಿದೆ. ಇಲ್ಲಿನ 41 ಹಳ್ಳಿಗಳಲ್ಲಿ ಒಟ್ಟು 609 ಮಂದಿ 1,204 ಎಕರೆ ಸರ್ಕಾರಿ ಭೂಮಿಯನ್ನು ಕಬಳಿಸಿದ್ದಾರೆ. ಕೆ.ಆರ್. ಪುರ, ವರ್ತೂರು, ಬಿದರಹಳ್ಳಿಯಂತಹ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಿರುವ ಬೆಂಗಳೂರು ಪಶ್ಚಿಮ ತಾಲ್ಲೂಕಿನಲ್ಲಿ ನಕಲಿ ದಾಖಲೆಗಳ ಮೂಲಕ ಒಟ್ಟು 840 ಎಕರೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಲಾಗಿದೆ ಎಂದು ಸಮಿತಿ ಪತ್ತೆ ಮಾಡಿದೆ.

ಇಷ್ಟೇ ಅಲ್ಲ!: ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಭೂಮಿ 2,804 ಎಕರೆ ಮಾತ್ರವಲ್ಲ. ಭೂ ಮಂಜೂರಾತಿ ಕಡತಗಳನ್ನು ಇನ್ನೊಮ್ಮೆ ಸೂಕ್ಷ್ಮವಾಗಿ ಪರಿಶೀಲನೆಗೆ ಒಳಪಡಿಸಿದರೆ ಇನ್ನಷ್ಟು ಅಕ್ರಮಗಳು ಬಯಲಿಗೆ ಬರಬಹುದು ಎಂದು ಇಲಾಖೆಯ ಮೂಲಗಳು ಅಭಿಪ್ರಾಯ ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT