ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28ರಿಂದ ತಾಲ್ಲೂಕು ಸಾಹಿತ್ಯ ಸಮ್ಮೇಳನ

Last Updated 21 ಜನವರಿ 2011, 7:30 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಎರಡನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ. 28 ಹಾಗೂ 29ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ರಾಜೇಂದ್ರ ಬುರಡಿಕಟ್ಟಿ ಹೇಳಿದರು.

ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕಿಮ್ಮನೆ ರತ್ನಾಕರ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮ್ಮೇಳನವನ್ನು ಬಹಳ ವೈಷಿಷ್ಟ್ಯ ಪೂರ್ಣವಾಗಿ ನಡೆಸಲು ಉದ್ದೇಶಿಸಲಾಗಿದೆ. ಜನರ ಬದುಕು-ಭಾವನೆಗಳಿಗೆ ಒತ್ತುಕೊಟ್ಟು ರೂಪಿಸಿರುವ ಈ ಸಮ್ಮೇಳನ ಎರಡು ದಿನಗಳ ಕಾಲ ನಡೆಯಲಿದ್ದು, ವಿವಿಧ ಗೋಷ್ಠಿಗಳಲ್ಲಿ ನಾಡಿನ ಹೆಸರಾಂತ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ತಾಲ್ಲೂಕಿನ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್, ತೀರ್ಥಹಳ್ಳಿ ತಾಲ್ಲೂಕಿನ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘ-ಸಂಸ್ಥೆಯ ಮುಖ್ಯಸ್ಥರು, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಗಣ್ಯವ್ಯಕ್ತಿಗಳು ಮತ್ತು ಸಾರ್ವಜನಿಕರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.

ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಮ್ಮೇಳನದ ಅಧ್ಯಕ್ಷರನ್ನಾಗಿ ಹಿರಿಯ ಸಾಹಿತಿ ಹಾಗೂ ಚಿಂತಕ ಡಾ.ಜೆ.ಕೆ. ರಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ವಿಶ್ವಮಾನವ ವೇದಿಕೆ ಹಾಗೂ ಕಡಿದಾಳ್ ಮಂಜಪ್ಪ ವೇದಿಕೆಯಲ್ಲಿ ವಿವಿಧ ಸಾಹಿತ್ಯ ಗೋಷ್ಠಿಗಳು ನಡೆಯಲಿವೆ ಎಂದು ಅವರು ತಿಳಿಸಿದರು.

ಸಮ್ಮೆಳನವನ್ನು ಜ್ಞಾನಪೀಠ ಪುರಸ್ಕೃತ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಉದ್ಘಾಟಿಸುವರು. ನಂತರ, ‘ಚಳವಳಿಗಳು: ಸ್ಥಿತಿ ಮತ್ತು ಗತಿ’ ಕುರಿತ ಗೋಷ್ಠಿಯಲ್ಲಿ ಪಿಯುಸಿಎಲ್ ಅಧ್ಯಕ್ಷ ಟಿ.ಆರ್. ಕೃಷ್ಣಪ್ಪ ಆಶಯ ನುಡಿಗಳನ್ನಾಡುವರು. ಅಧ್ಯಕ್ಷತೆಯನ್ನು ರೈತ ಹೋರಾಟಗಾರ ಕಡಿದಾಳ್ ಶಾಮಣ್ಣ ವಹಿಸುವರು. ರೈತ ಚಳವಳಿ ಕುರಿತು ನೆಂಪೆ ದೇವರಾಜ್, ಸಮಾಜವಾದಿ ಚಳವಳಿ ಬಗ್ಗೆ ಲೇಖಕಡಿ.ಎಸ್. ನಾಗಭೂಷಣ ಹಾಗೂ ಸ್ವಾತಂತ್ರ್ಯ ಚಳವಳಿ ಮತ್ತು ಕನ್ನಡ ಸಾಹಿತ್ಯ ಕುರಿತು ಸಾಗರದ ಶಂಕರಶಾಸ್ತ್ರಿ ಮಾತನಾಡುವರು.

‘ಸಮೂಹ ಮಾಧ್ಯಮ ಮತ್ತು ಸಾಮಾಜಿಕ ಹೊಣೆಗಾರಿಕೆ’ ಕುರಿತು ಪತ್ರಕರ್ತ ಕಬಸೆ ಅಶೋಕಮೂರ್ತಿ ಮಾತನಾಡುವರು. ಎ.ಎಸ್. ಗಣಪತಿ ಅಧ್ಯಕ್ಷತೆ ವಹಿಸುವರು. ‘ಮುದ್ರಣ ಮಾಧ್ಯಮ’ ಕುರಿತು ‘ಪ್ರಜಾವಾಣಿ’ ಪತ್ರಿಕೆಯ ಸುದ್ದಿ ಸಂಪಾದಕ ಇ.ವಿ. ಸತ್ಯನಾರಾಯಣ, ‘ಶ್ರವಣ ಮಾಧ್ಯಮ’ದ ಬಗ್ಗೆ ಆಕಾಶವಾಣಿ ಭದ್ರಾವತಿ ಕೇಂದ್ರದ ಎಂ.ಎಸ್. ನಾಗೇಂದ್ರ, ದೃಶ್ಯ ಮಾಧ್ಯಮದ ಬಗ್ಗೆ ಅಂತರಂಗ ಸಾಪ್ತಾಹಿಕದ ಸಂಪಾದಕ ಟಿ.ಕೆ. ರಮೇಶ್‌ಶೆಟ್ಟಿ ಮಾತನಾಡುವರು ಎಂದು ಅವರು ತಿಳಿಸಿದರು.

ಸಮ್ಮೇಳನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ವಿಚಾರಗೋಷ್ಠಿ, ಸಮ್ಮೇಳನಾಧ್ಯಕ್ಷರ ವ್ಯಕ್ತಿತ್ವ ಮತ್ತು ಸಾಹಿತ್ಯ, ಮಲೆನಾಡಿನ ಕೃಷಿ ಮತ್ತು ಸಮಾಧಾನ, ಕವಿಗೋಷ್ಠಿ, ನಮ್ಮ ಹಿರಿಯರ ಸಾಹಿತ್ಯ: ಪ್ರಭಾವ ಮತ್ತು ಪ್ರೇರಣೆ, ಡಾ.ಯು.ಆರ್. ಅನಂತಮೂರ್ತಿ ಅವರೊಂದಿಗೆ ಅನಂತ ಸಂವಾದ, ಸಮಕಾಲೀನ ಸವಾಲುಗಳು, ಕಾಲೇಜು ವಿದ್ಯಾರ್ಥಿಗಳ ಚಿಂತನಾಗೋಷ್ಠಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಹೇಳಿದರು.

ಸಮ್ಮೇಳನದಲ್ಲಿ ಕರ್ನಾಟಕ ಜಾನಪದ ವಿವಿ ವಿಶೇಷಾಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ, ರುಕ್ಮಿಣಿ ಮತ್ತು ನಾಗಡಿಕೆರೆ ಕಿಟ್ಟಪ್ಪಗೌಡ, ಬಿಳುಮನೆ ರಾಮದಾಸ್, ಕೋಣಂದುರು ಲಿಂಗಪ್ಪ, ಎಚ್. ನಾಗರಾಜ್ ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ಸಾಹಿತಿ ಶ್ರೆಕಂಠ ಕೂಡಿಗೆ ಸಮಾರೋಪ ಭಾಷಣ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪ್ರಚಾರ ಸಮಿತಿ ಟಿ.ಕೆ. ರಮೇಶ್‌ಶೆಟ್ಟಿ, ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ ಶೆಟ್ಟಿ, ಕಸಾಪ ಕಾರ್ಯದರ್ಶಿ ಆಡಿನಸರ ಸತೀಶ್‌ಕುಮಾರ್, ಸದಸ್ಯ ಕೌಲಾನಿ ಧರ್ಮಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT