ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ವಿಚಾರಣೆ: ಇಬ್ಬರು ಆರೋಪಿಗಳ ಮನವಿ ತಿರಸ್ಕೃತ

Last Updated 14 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಕೊಠಡಿಯಲ್ಲಿ ಸಿಬಿಐ ತನಿಖಾ ಅಧಿಕಾರಿಗಳ ಉಪಸ್ಥಿತಿಯನ್ನು ಪ್ರಶ್ನಿಸಿ ಆರೋಪಿಗಳಿಬ್ಬರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.

ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಸಿಬಿಐ ಅಧಿಕಾರಿಗಳು ಇರುವುದರಿಂದ ಆರೋಪಿಗಳಿಗೆ ಅಥವಾ ವಿಚಾರಣೆಗೆ ಧಕ್ಕೆಯಾಗುತ್ತದೆ ಎನ್ನುವ ಭಾವನೆ ಸರಿಯಲ್ಲ ಎಂದು ಆರೋಪಿಗಳಾದ ಆಸಿಫ್ ಬಲ್ವಾ ಹಾಗೂ ರಾಜೀವ್ ಅಗರ್‌ವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ.ಎಲ್.ಮೆಹ್ತಾ ಹೇಳಿದರು.

ಬೇರೆ ಸಾಕ್ಷಿಗಳಿಂದ ಹೇಳಿಕೆ ದಾಖಲಿಸಿಕೊಳ್ಳುವಾಗ ಕೋರ್ಟ್ ಕೊಠಡಿಯಲ್ಲಿ ಸಿಬಿಐ ಅಧಿಕಾರಿಗಳಾದ ವಿವೇಕ್ ಪ್ರಿಯದರ್ಶಿ ಹಾಗೂ ರಾಜೇಶ್ ಚಾಹಲ್ ಅವರ ಉಪಸ್ಥಿತಿಯನ್ನು ನಿರ್ಬಂಧಿಸುವಂತೆ ಕೋರಿ ಆರೋಪಿಗಳು ಈ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅದಕ್ಕೆ ಮಾನ್ಯತೆ ಸಿಗದಿದ್ದಾಗ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು.

ಅಡ್ಡಾದಿಡ್ಡಿ ಕೆಲಸ: ವಿವಾದಾತ್ಮಕ 2ಜಿ ಟಿಪ್ಪಣಿಯನ್ನು `ಅಸಮಂಜಸ ದಾಖಲೆ, ಅಂತರ್ ಸಚಿವಾಲಯದ ಅಡ್ಡಾದಿಡ್ಡಿ ಕೆಲಸ~ ಎಂದು ದೂಷಿಸಿರುವ ಜಂಟಿ ಸಂಸದೀಯ ಸಮಿತಿಯ ಕಾಂಗ್ರೆಸ್ ಸದಸ್ಯರು, ಇದರಿಂದ ಆದ ನಷ್ಟವನ್ನು ಭರ್ತಿ ಮಾಡುವಂತೆ ಆಗ್ರಹಿಸಿದ್ದಾರೆ.

ಆರ್ಥಿಕ ವ್ಯವಹಾರ ವಿಭಾಗದ ಕಾರ್ಯದರ್ಶಿ ಆರ್.ಗೋಪಾಲನ್, ಸಮಿತಿಯ ಮುಂದೆ ಮೂರು ತಿಂಗಳ ಅವಧಿಯಲ್ಲಿ ನಾಲ್ಕನೆಯ ಬಾರಿ ಮಂಗಳವಾರ ಹಾಜರಾದರು. ಈ ಸಭೆಯಲ್ಲಿ ವಿರೋಧ ಪಕ್ಷದ ಬಹುತೇಕ ಸದಸ್ಯರು ಹಾಜರಿರಲಿಲ್ಲ.

2ಜಿ ಹಗರಣದಲ್ಲಿ ಪಿ.ಚಿದಂಬರಂ ಅವರ ಪಾತ್ರವನ್ನು ಉಲ್ಲೇಖಿಸಿದ್ದ ಕಳೆದ ಮಾರ್ಚ್ 25ರ 2ಜಿ ಟಿಪ್ಪಣಿಯು ಲೋಪದೋಷಗಳಿಂದ ಕೂಡಿದೆ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರು. ಏಕೀಕೃತ ಸೇವಾ ಪರವಾನಗಿ (ಯುಎಎಸ್‌ಎಲ್‌ಎಸ್) ಅನುಮೋದನೆ ನೀಡಲು 2003ರ ನವೆಂಬರ್‌ನಲ್ಲಿ ಆಗಿನ ದೂರಸಂಪರ್ಕ ಸಚಿವ ಅರುಣ್ ಶೌರಿ ಅವರು ತೆಗೆದುಕೊಂಡ ನಿರ್ಧಾರದ ಪ್ರಸ್ತಾಪವೇ ಟಿಪ್ಪಣಿಯಲ್ಲಿ ಇಲ್ಲ ಎಂದು ಕಾಂಗ್ರೆಸ್‌ನ ಮನಿಷ್ ತಿವಾರಿ ಹೇಳಿದ್ದಾರೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT