ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ: ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ ಎ.ಆರ್.ದೇವ್

Last Updated 18 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ತರಂಗಾಂತರ ಹಂಚಿಕೆ ಹಗರಣ ಕುರಿತಂತೆ ದಾಖಲಾಗಿರುವ ಅರ್ಜಿಯೊಂದರ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ನ್ಯಾಯಪೀಠದ ನ್ಯಾಯಮೂರ್ತಿ ಎ.ಆರ್. ದೇವ್ ಅವರು ಯಾವುದೇ ಕಾರಣ ನೀಡದೆ ವಿಚಾರಣೆಯಿಂದ ಹಿಂದೆ ಸರಿದಿರುವ ಕುತೂಹಲಕರ ಬೆಳವಣಿಗೆ ಗುರುವಾರ ನಡೆದಿದೆ.

ಇದೇ ನ್ಯಾಯಪೀಠದ ಸದಸ್ಯರಾಗಿದ್ದ ಇನ್ನೊಬ್ಬ ನ್ಯಾಯಮೂರ್ತಿ ವಿಕ್ರಂಜಿತ್ ಸೇನ್ ಅವರು ನಾಲ್ಕು ದಿನಗಳ ಹಿಂದೆಯಷ್ಟೆ ವಿಚಾರಣೆಯಿಂದ ಹಿಂದೆ ಸರಿದಿದ್ದರು. ಅವರು ಸಹ ಕಾರಣ ನೀಡಿರಲಿಲ್ಲ.

2002ರಲ್ಲಿ (ಎನ್‌ಡಿಎ ಸರ್ಕಾರ) ಹೆಚ್ಚುವರಿ ತರಂಗಾಂತರ ಹಂಚಿಕೆಯಲ್ಲಿನ ಅವ್ಯವಹಾರ ಸಂಬಂಧ ಭಾರ್ತಿ ಸೆಲ್ಯುಲರ್ ಕಂಪೆನಿ (ಏರ್‌ಟೆಲ್) ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಭಾರ್ತಿ ಮಿತ್ತಲ್ ಮತ್ತು ಎಸ್ಸಾರ್ ಸಮೂಹದ ಪ್ರವರ್ತಕ ರವಿ ರುಯಾ ಅವರಿಗೆ 2ಜಿ ತರಂಗಾಂತರ ಹಂಚಿಕೆ ಹಗರಣದ ವಿಚಾರಣೆ ನಡೆಸುತ್ತಿರುವ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಇದನ್ನು ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. 

ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅಲ್ತಮಸ್ ಕಬೀರ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ವಿಚಾರಣೆ ನಡೆಸುತ್ತಿದೆ. ಇದರಲ್ಲಿ ನ್ಯಾಯಮೂರ್ತಿಗಳಾದ ದೇವ್ ಮತ್ತು ಸೇನ್ ಅವರು ಸದಸ್ಯರಾಗಿದ್ದರು.

ಈಗ ಇವರಿಬ್ಬರು ವಿಚಾರಣೆಯಿಂದ ಸ್ವಯಂ ಹಿಂದೆ ಸರಿದಿರುವುದರಿಂದ ಅರ್ಜಿ ವಿಚಾರಣೆಗೆ ಹೊಸ ಪೀಠ ರಚಿಸಲಾಗುವುದು ಎಂದು ಸಿಜೆಐ ಕಬೀರ್ ಹೇಳಿದ್ದಾರೆ. ಜೊತೆಗೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆಯು ಇನ್ನೂ ಒಂದು ವಾರಗಳ ಮುಂದೂಡಲಾಗುವುದು ಎಂದಿದ್ದಾರೆ. ಈ ಮೊದಲು ಪ್ರಕರಣದ ವಿಚಾರಣೆಯನ್ನು ಏ 22ರವರೆಗೆ ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT