ಶುಕ್ರವಾರ, ಜನವರಿ 17, 2020
24 °C

3 ದಿನ ಸಮುದ್ರ ತಳದಲ್ಲಿದ್ದು ಬದುಕುಳಿದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಾಗೋಸ್‌ (ಎಪಿ): ದೋಣಿ ದುರಂತದಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬ ಮೂರು ದಿನಗಳ ಕಾಲ ಅಟ್ಲಾಂಟಿಕ್‌ ಸಾಗರದ ತಳದಲ್ಲಿ ಬದುಕಿದ್ದು, ನಂತರ ಪರಿಹಾರ ಕಾರ್ಯಾಚರಣೆ­ಯಿಂದ ಪಾರಾದ ಅಚ್ಚರಿಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇದು ನಡೆದದ್ದು ಸುಮಾರು ಆರು ತಿಂಗಳ ಹಿಂದೆ. ಆ ದುರ್ದಿನ 12 ಜನರಿದ್ದ ದೋಣಿ ‘ಜಾಸ್ಕನ್‌’ ದುರಂತ­ದಿಂದಾಗಿ ಅಟ್ಲಾಂಟಿಕ್‌ ತಳ ಸೇರಿತ್ತು. ಸುದ್ದಿ ತಿಳಿಯುತ್ತಿದ್ದಂತೆಯೇ ಪರಿಹಾರ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು.ಅದಾಗಲೇ ನಾಲ್ಕು ಶವಗಳನ್ನು ಹೊರತೆಗೆಯ­ಲಾಗಿತ್ತು. ಕಾರ್ಯಾಚರಣೆಯ ಮೇಲ್ವಿಚಾರಣೆಗೆ ಬಳಸಲಾಗುತ್ತಿದ್ದ ಟಿ.ವಿ. ಪರದೆಯ ಮೇಲೆ ಕೈ ಒಂದು ಕಾಣಿಸಿತು. ತಕ್ಷಣವೇ  ಕಾರ್ಯಕರ್ತರು ಅತ್ತ ಹೋಗುತ್ತಿದ್ದಂತೆ ಆ ಕೈಯಿಯೇ ಸಮೀಪದ ಕಾರ್ಯಕರ್ತ­ನನ್ನು ಬಿಗಿಯಾಗಿ ಅಪ್ಪಿಕೊಂಡು­ಬಿಟ್ಟಿತು!ದೋಣಿಯ ಬಾಣಸಿಗ ನೈಜೀರಿಯಾದ ಹ್ಯಾರಿಸನ್‌ ಒಡ್‌ಜೆಗ್‌ಬಾ ಒಕೀನ್‌ ಎಂಬಾತನೇ ಹೀಗೆ ಬದುಕಿದ ಪುಣ್ಯಶಾಲಿ !

ಈತ ತನ್ನ ಬಳಿ ಇದ್ದ, ಆಗಲೋ ಈಗಲೋ ಮುಗಿಯುವುದರಲ್ಲಿದ್ದ ಗಾಳಿಯ ಚೀಲದ ನೆರವಿನಿಂದ ಸಮುದ್ರ ತಳದ ಕಗ್ಗತ್ತಲಲ್ಲೂ ಉಸಿರಾಡುತ್ತಾ ಮೂರು ದಿನ ಜೀವ ಹಿಡಿದುಕೊಂಡು ಬದುಕಿದ್ದ.ಅವಘಡ ಸಂಭವಿಸಿದಾಗ ಬಾಕ್ಸರ್‌ಗಳು ಬಳಸುವ ಒಳಉಡುಪು ಮಾತ್ರ ಧರಿಸಿದ್ದ ಒಕೀನ್‌, ಸಾಗರದಾಳದ ಚಳಿಯಿಂದ ಮೈ ಮರಗಟ್ಟಲು ಆರಂಭವಾಗುತ್ತಿದ್ದಂತೆಯೇ ಹೆಂಡತಿ ಹೇಳಿಕೊಟ್ಟಿದ್ದ ಬೈಬಲ್‌ನ ಸ್ತುತಿ ಚರಣವೊಂದನ್ನು ಪಠಿಸಲು ಮೊದಲಾದನಂತೆ.ಇವತ್ತಿಗೂ ಒಕೀನ್‌, 72 ಗಂಟೆಗಳ ಜೀವನ್ಮರಣ ಹೋರಾಟದ ಬಳಿಕ ತಾನು ಬದುಕಿರುವುದಕ್ಕೆ ದಿವ್ಯಶಕ್ತಿಯೇ ಕಾರಣ ಎಂದು ನಂಬಿದ್ದಾನೆ. ಈ ದುರಂತದಲ್ಲಿ 11 ನಾವಿಕರು ಸಾವಿಗೀಡಾಗಿದ್ದರು.ಡಿಸಿಎನ್‌ ಡೈವಿಂಗ್‌ ಎಂಬ ಡಚ್‌  ಕಂಪೆನಿ ಈ ಕಾರ್ಯಾಚರಣೆ ನಡೆಸಿತ್ತು. ಇದೀಗ ಆರು ತಿಂಗಳ ನಂತರ ಈ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿಯನ್ನು ಕಂಪೆನಿ ಅಂತರ್ಜಾಲ ದಲ್ಲಿ ಹರಿಬಿಟ್ಟ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಪ್ರತಿಕ್ರಿಯಿಸಿ (+)