ಶನಿವಾರ, ಜೂನ್ 19, 2021
26 °C

3 ಲಕ್ಷ ಕಸದ ಬುಟ್ಟಿ ವಿತರಣೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರಪಾಲಿಕೆಯು ನರ್ಮ್‌ ಯೋಜನೆಯಡಿ ನಗರದ ಎಲ್ಲ ಮನೆಗಳಿಗೂ ಕಸದ ಬುಟ್ಟಿಗಳನ್ನು ನೀಡುವ ಕಾರ್ಯಕ್ರಮಕ್ಕೆ ಜ್ಯೋತಿನಗರದ ಪೌರಕಾರ್ಮಿಕರ ಕಾಲೊನಿಯಲ್ಲಿ ಶಾಸಕ ತನ್ವೀರ್ ಸೇಟ್‌ ಭಾನುವಾರ ಚಾಲನೆ ನೀಡಿದರು.62ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಜ್ಯೋತಿನಗರದ ಪೌರ ಕಾರ್ಮಿಕರ ಕಾಲೊನಿಯಲ್ಲಿ ಬೆಳಿಗ್ಗೆ ಆಯೋಜಿಸಿದ್ದ ಸಮಾರಂಭದಲ್ಲಿ ಸಾಂಕೇತಿಕವಾಗಿ ಕೆಲ ಮನೆಗಳಿಗೆ ಕಸದ ಬುಟ್ಟಿಗಳನ್ನು ವಿತರಿಸಿದ ಶಾಸಕ ತನ್ವೀರ್ ಸೇಟ್‌ ಬಳಿಕ ಮಾತನಾಡಿ, ‘ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ನಗರಗಳಲ್ಲಿ ಮೈಸೂರು ನಾಲ್ಕನೇ ಸ್ಥಾನ ಪಡೆದಿದೆ. ದೇಶದಲ್ಲೇ ಎರಡನೇ ಸ್ವಚ್ಛನಗರ ಎಂಬ ಖ್ಯಾತಿ ಪಡೆದಿರುವ ಮೈಸೂರು ನಗರವನ್ನು ಮೊದಲನೇ ಸ್ವಚ್ಛ ನಗರವನ್ನಾಗಿ ಪರಿವರ್ತಿಸಬೇಕಾಗಿದೆ’ ಎಂದು ಕರೆ ನೀಡಿದರು.‘ಇದಕ್ಕಾಗಿ ಮನೆಯಲ್ಲಿಯೇ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವುದಕ್ಕೆ ನರ್ಮ್‌ ಯೋಜನೆಯಲ್ಲಿ ಎಲ್ಲ ಮನೆಗಳಿಗೆ 2 ಕಸದ ಬುಟ್ಟಿಗಳನ್ನು ನೀಡಲಾಗುತ್ತಿದೆ. 2008-–09ನೇ ಸಾಲಿನಲ್ಲಿ ಮೈಸೂರು ನಗರದ ವಿವಿಧೆಡೆ ಸುಮಾರು 3 ಸಾವಿರ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ಸ್ಥಳಗಳಲ್ಲಿ ಹಾಕಲಾಗಿತ್ತು. ಆದರೆ, ಕೆಲವರು ಪ್ಲಾಸ್ಟಿಕ್ ಕಸದ ಬುಟ್ಟಿಗೆ ಬೆಂಕಿ ಇಡುವ ಮೂಲಕ ಆ ಪ್ಲಾಸ್ಟಿಕ್ ಡಬ್ಬಗಳನ್ನು ಸುಟ್ಟು ಹಾಕಿದ್ದರು. ಇಂತಹ ಕೆಲಸ ಮಾಡುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತದೆ’ ಎಂದು ತಿಳಿಸಿದರು.‘ನಗರದಲ್ಲಿ ಕುಡಿಯುವ ನೀರು, ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿಗಾಗಿ ಒಬ್ಬರೇ ಎಂಜಿನಿಯರ್‌ಗೆ ಜವಾಬ್ದಾರಿ ನೀಡಬೇಕು. ಇದರಿಂದ ಪರಸ್ಪರ ಸಮನ್ವಯತೆಯಿಂದ ಉತ್ತಮ ಕೆಲಸ ನಿರ್ವಹಿಸಬಹುದು. ಕೇಂದ್ರ ಸರ್ಕಾರ ಎರಡನೇ ಹಂತದ ನರ್ಮ್‌ ಯೋಜನೆಯಲ್ಲಿ ಕುಡಿಯುವ ನೀರಿಗೆ ರೂ 226 ಕೋಟಿ, ಒಳಚರಂಡಿಗೆ ರೂ 418 ಕೋಟಿ ನೀಡಿದೆ. ಆದರೆ, ಒಂದೆಡೆ ರಸ್ತೆ ಅಭಿವೃದ್ಧಿ ಮಾಡಿದರೆ ಮತ್ತೊಂದೆಡೆ ಒಳಚರಂಡಿ ಹಾಗೂ ಕುಡಿಯುವ ನೀರು ಸಂಪರ್ಕಕ್ಕಾಗಿ ರಸ್ತೆಗಳನ್ನು ಅಗೆಯಲಾಗುತ್ತಿದೆ. ಇದರಿಂದ ರಸ್ತೆಗಳು ಹಾಳಾಗುತ್ತಿದ್ದು ದುರಸ್ತಿ ಮಾಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ತಲೆದೋರಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಾಜಿ ಮೇಯರ್ ಎಚ್.ಎನ್.  ಶ್ರೀಕಂಠಯ್ಯ ಮಾತನಾಡಿ, ‘ಮನೆಗಳಲ್ಲಿ ಸಂಗ್ರಹವಾಗುವ ಕಸಗಳನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದಾಗಿದೆ. ಕೊಳೆಯುವ ಕಸ, ಕೊಳೆಯದ ಕಸ, ಘನ ತ್ಯಾಜ್ಯ ಹಾಗೂ ಮೆಟಾಲಿಕ್ ಕಸಗಳಾಗಿ ವಿಂಗಡಿಸಬಹುದು. ಕೊಳೆಯುವ ಕಸವನ್ನು ಗೊಬ್ಬರ ತಯಾರಿಕೆಗೂ, ಕೊಳೆಯದ ಕಸ ಹಾಗೂ ಸಾಲಿಡ್ ವೇಸ್ಟ್ ಅನ್ನು ಗುಂಡಿಗಳನ್ನು ಮುಚ್ಚಲು ಹಾಗೂ ಮೆಟಾಲಿಕ್ ಕಸಗಳನ್ನು ಮರುಬಳಕೆ ಮಾಡುವುದಕ್ಕೆ ಬಳಸಲಾಗುತ್ತಿದೆ’ ಎಂದು ವಿವರಿಸಿದರು.ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಪ್ರಸಾದ್ ಮಾತನಾಡಿ, ಮುಂದಿನ ದಿನದಲ್ಲಿ ವಾರಕ್ಕೊಮ್ಮೆ ಪ್ಲಾಸ್ಟಿಕ್ ಕವರ್ ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸುವುದಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಸುಲಭವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ವಿಂಗಡಣೆ ಮಾಡಬಹುದಾಗಿದೆ’ ಎಂದು ಹೇಳಿದರು.ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಮಾತನಾಡಿ, ‘ನಗರದ 1.5 ಲಕ್ಷ ಮನೆಗಳಿಗೆ ರೂ 2.95 ಕೋಟಿ  ವೆಚ್ಚದಲ್ಲಿ ಕಸದ ಬುಟ್ಟಿಗಳನ್ನು ವಿತರಿಸಲಾಗುತ್ತದೆ. 1.50 ಲಕ್ಷ ಕೆಂಪು ಬಣ್ಣದ ಹಾಗೂ 1.50 ಲಕ್ಷ ಹಸಿರು ಬಣ್ಣದ ಕಸದ ಬುಟ್ಟಿಗಳನ್ನು ಎಲ್ಲ ಮನೆಗಳಿಗೆ ನೀಡಲಾಗುತ್ತಿದೆ. 10 ಲೀಟರ್ ಸಾಮರ್ಥ್ಯದ ಕಸದ ಬುಟ್ಟಿಗಳಲ್ಲಿ ಪ್ರತಿ ದಿನ ಕಸ ಸಂಗ್ರಹಿಸಿ ಪಾಲಿಕೆಯ ಸಿಬ್ಬಂದಿ ಬಂದಾಗ ನೀಡಬೇಕು.ಕಸವನ್ನು ಎಲ್ಲೆಂದರಲ್ಲಿ ಹಾಕುವವರಿಗೆ  ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ಪಾಲಿಕೆ ಸದಸ್ಯ ಸಂದೇಶ್ ಸ್ವಾಮಿ, ಉಪ ಮೇಯರ್ ವಿ. ಶೈಲೇಂದ್ರ, ಸದಸ್ಯರಾದ ಶಿವಕುಮಾರ್, ಗಿರೀಶ್ ಪ್ರಸಾದ್, ಸ್ವಾಮಿ, ಶೌಕತ್ ಪಾಷಾ, ಹಸೀನಾ ತಾಜ್, ಸಮೀನಾ ತಾಜ್, ಅನಸೂಯಾ, ಫೈರೋಜ್‌ ಖಾನ್, ಸ್ನೇಕ್ ಶ್ಯಾಮ್, ಬಿ.ವಿ. ಮಂಜುನಾಥ್, ಪರಿಸರ ಎಂಜಿನಿಯರುಗಳಾದ ಗಿರಿಜಾ, ಮಮತಾ, ತೇಜಸ್ವಿನಿ, ಮೈತ್ರಾ, ವಿಜಯಾ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.