ಮಂಗಳವಾರ, ಆಗಸ್ಟ್ 3, 2021
24 °C

`3 ಸೌತೆಕಾಯಿಯಲ್ಲೇ 5 ದಿನ ಕಳೆದೆವು'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`3 ಸೌತೆಕಾಯಿಯಲ್ಲೇ 5 ದಿನ ಕಳೆದೆವು'

ಡೆಹ್ರಾಡೂನ್: ಪಂಜಾಬ್‌ನ ಲೂಧಿಯಾನ ಮೂಲದ ಆಗರ್ಭ ಶ್ರೀಮಂತ ಕುಟುಂಬವೊಂದರ ನಾಲ್ವರು ಸದಸ್ಯರು ಬಹಳ ಅಚ್ಚರಿ ರೀತಿ ಸಾವಿನಿಂದ ಪಾರಾಗಿ ಮಂಗಳವಾರ ಬೆಳಿಗ್ಗೆ ಇಲ್ಲಿಗೆ ತಲುಪಿದರು.ಧಾರಾಕಾರ ಮಳೆಯಲ್ಲೇ ಹರಿದ ಬಟ್ಟೆ ಧರಿಸಿ 20 ಕಿ.ಮೀ. ನಡೆಯುತ್ತಾ, ದಟ್ಟ ಅರಣ್ಯದಲ್ಲಿ ಕಗ್ಗತ್ತಲ ರಾತ್ರಿಗಳನ್ನು ಕಳೆದು, ಅಜ್ಞಾತ ಪ್ರದೇಶದಲ್ಲೇ ಮೂರು ಸೌತೆಕಾಯಿಗಳನ್ನು ತಿನ್ನುತ್ತಾ ಐದು ದಿನಗಳನ್ನು ಕಳೆದ ಕುಟುಂಬ ಕೊನೆಗೂ ಸಾವನ್ನು ಜಯಿಸಿತು.ಯಾವುದೇ ಕ್ಷಣದಲ್ಲಾದರೂ ಪರ್ವತ ಪ್ರದೇಶದಿಂದ ಭೂಕುಸಿತ ಉಂಟಾಗಬಹುದು ಅಥವಾ ನದಿಯ ಪ್ರವಾಹ ಎದುರಾಗಬಹುದು ಎಂಬ ಭಯದಲ್ಲಿ ನಡುಗುತ್ತಾ ನಡೆದು ಸುರಕ್ಷಿತವಾಗಿ ಬಂದ ಆ ಭೀಕರ ಕ್ಷಣಗಳನ್ನು ಕುಟುಂಬ `ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡಿತು.ಆದರೆ ಕುಟುಂಬಕ್ಕೆ ಆಘಾತವೊಂದು ಉಂಟಾಗಿದೆ. ಸಂದೀಪ್ ಸಲ್ವಾನ್ ಅವರ 12 ವರ್ಷದ ಪುತ್ರ ಸರ್ವೇಶ್ ಕಣ್ಮರೆಯಾಗಿದ್ದಾನೆ. ಆತ ಎಲ್ಲಿದ್ದಾನೆ ಎಂಬ ಸುಳಿವು ಸಹ ಇವರಿಗಿಲ್ಲ. ಬದುಕಿದ್ದಾನೋ ಅಥವಾ ಸ್ವರ್ಗ ಸೇರಿದ್ದಾನೋ ಎಂಬ ಆತಂಕ ಈಗ ಕುಟುಂಬದಲ್ಲಿದೆ. ಇದೇ ಮೊದಲ ಬಾರಿಗೆ ಉತ್ತರಾಖಂಡದ ತೀರ್ಥ ಸ್ಥಳಗಳಿಗೆ ಕುಟುಂಬ ಯಾತ್ರೆ ಕೈಗೊಂಡಿತ್ತು. ಆದರೆ ಕೇದಾರನಾಥ ಪಟ್ಟಣದಲ್ಲಿ ಅವರಿಗೆ ಜಲಪ್ರಳಯ, ಭೂಕುಸಿತದ ಅನುಭವವಾಯಿತು.ಕುಟುಂಬದ ಮೀನಾಕ್ಷಿ ಹೇಳುವಂತೆ, ಕಳೆದ ಐದು ದಿನಗಳಲ್ಲಿ ಅವರು ಸಾವಿರ ಬಾರಿ ಸತ್ತಂತಾಗಿದ್ದಾರೆ. ಒಂದು ರಾತ್ರಿ ಕುಟುಂಬದೊಂದಿಗೆ ನಿದ್ರಿಸಿದ ಕೆಲವರು ಮಾರನೆಯ ದಿನ ಬೆಳಿಗ್ಗೆ ಮೃತಪಟ್ಟಿದ್ದರು.ಕೆಲವರು ಹವಾಮಾನ ವೈಪರೀತ್ಯದಿಂದ ಸತ್ತರೆ, ಇನ್ನು ಕೆಲವರು ಔಷಧ ಅಥವಾ ಚಿಕಿತ್ಸೆ ದೊರೆಯದೆ ಅಸುನೀಗಿದರು. ಈ ದೇವಾಲಯ ಪಟ್ಟಣಕ್ಕೆ ಪ್ರವಾಹ ಅಪ್ಪಳಿಸಿದ ದಿನ ಅಲ್ಲಿ ಸುಮಾರು 10 ಸಾವಿರ ಜನರಿದ್ದರು. ಕಣ್ಣ ಮುಂದೆಯೇ ಎಲ್ಲ ಕಟ್ಟಡಗಳು ಕುಸಿದವು, ಇಲ್ಲವೇ ನೀರಿನಲ್ಲಿ ಮುಳುಗಿದವು. ಹಲವರು ನೀರು ಪಾಲಾದರೆ, ಇನ್ನು ಕೆಲವರು ಜೀವ ಉಳಿಸಿಕೊಳ್ಳಲು ಯತ್ನಿಸಿದರು ಎನ್ನುತ್ತಾರೆ ಅವರು.ಸಂದೀಪ್ ಪುತ್ರಿ ಮಾನ್ವಿ ಹೇಳುವ ಪ್ರಕಾರ, ವ್ಯಾಪಾರಸ್ಥರು ತಮ್ಮ ಜೀವ ಉಳಿಸಿಕೊಳ್ಳಲು ಅಂಗಡಿಗಳನ್ನು ಬಿಟ್ಟು ಓಡಿದರು. ಕ್ಷಣಮಾತ್ರದಲ್ಲಿ ಝಗಮಗಿಸುತ್ತಿದ್ದ ಸುಂದರ ದೇಗುಲ ಪಟ್ಟಣ ನಾಮಾವಶೇಷವಾಯಿತು. ಒಂದೆಡೆ ನದಿಯ ನೀರು ಮೇಲೇರುತ್ತಿದ್ದರೆ, ಇನ್ನೊಂದೆಡೆ ಭೂಕುಸಿತ ಉಂಟಾಗುತ್ತಿದ್ದುದರಿಂದ ಜನರು ದಿಕ್ಕಾಪಾಲಾಗಿ ಓಡತೊಡಗಿದರು ಎಂದು ಅವರು ಹೇಳುತ್ತಾರೆ.ಸಂದೀಪ್ ತಮ್ಮ ಬಳಿಯಿದ್ದ ಚೀಲಗಳನ್ನು ಎಸೆದು, ಬರಿಗೈಯಲ್ಲಿ ಓಡಿದರು. ಅವರು ಧರಿಸಿದ್ದ ಬಟ್ಟೆ ಸಂಪೂರ್ಣ ಹರಿದು ಹೋದ್ದರಿಂದ ಮೈ ಮುಚ್ಚಿಕೊಳ್ಳಲು ಬಟ್ಟೆಗಾಗಿ ಬೇಡುವ ಸ್ಥಿತಿ ಎದುರಾಯಿತು. ಕೊನೆಗೂ ಸೇನಾ ತಂಡದವರು ತಮ್ಮನ್ನು ರಕ್ಷಿಸಿದರು ಎಂದು ಅವರು ಕಹಿ ಘಟನೆಗಳನ್ನು ಸ್ಮರಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.