ಬುಧವಾರ, ಏಪ್ರಿಲ್ 14, 2021
23 °C

371ನೇ ವಿಧಿಗೆ ತಿದ್ದುಪಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಸಂವಿಧಾನದ 371ನೇ ವಿಧಿಗೆ ಸೂಕ್ತ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವ ಸಲುವಾಗಿ ಏ. 30ರಂದು ಗುಲ್ಬರ್ಗದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹೈದರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.ಏಪ್ರಿಲ್ ಮೂರನೇ ವಾರದಿಂದ ಈ ಸಂಬಂಧ ಕೊಪ್ಪಳದಿಂದ ಬೃಹತ್ ಜಾಥಾ ಆರಂಭಿಸಲಾಗುವುದು. ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಪ್ರಮುಖ ಪಟ್ಟಣ- ಗ್ರಾಮಗಳ ಮೂಲಕ ಹಾಯ್ದು ಹೋಗುವ ಈ ಜಾಥಾ ಏ. 30ರ ಹೊತ್ತಿಗೆ ಗುಲ್ಬರ್ಗ ತಲುಪಲಿದೆ ಎಂದು ಅವರು ಭಾನುವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇದೇ ಮಾದರಿಯಲ್ಲಿ ಮತ್ತೊಂದು ಜಾಥಾ ಬೀದರ್‌ನಿಂದ ಹೊರಡಲಿದ್ದು, ಅದು ಸಹ ಏ. 30ರ ಹೊತ್ತಿಗೆ ಗುಲ್ಬರ್ಗ ತಲುಪಲಿದೆ. ಜಾಥಾ ಸಂಚರಿಸುವ ಮಾರ್ಗದಲ್ಲಿ ಬರುವ ಪಟ್ಟಣ- ಗ್ರಾಮಗಳಲ್ಲಿ ಬಹಿರಂಗ ಸಭೆ ನಡೆಸಲಾಗುವುದು. ಈ ತಿದ್ದುಪಡಿಯಿಂದ ಹೈ.ಕ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ಶೈಕ್ಷಣಿಕ ಮತ್ತು ಔದ್ಯೋಗಿಕವಾಗಿ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಡಲಾಗುವುದು ಎಂದು ಅವರು ಹೇಳಿದರು.ತಿದ್ದುಪಡಿಯಿಂದ ಆಗುವ ಲಾಭದ ಜೊತೆಗೆ, ಈ ವರೆಗೆ ವಿವಿಧ ಕ್ಷೇತ್ರಗಳಲ್ಲಿ ಈ ಭಾಗಕ್ಕೆ ಆಗಿರುವ ಅನ್ಯಾಯವನ್ನು ಅಂಕಿ-ಅಂಶ ಸಮೇತ ಜನರ ಮುಂದಿಡಲಾಗುವುದು. ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತರುವುದು ನಮ್ಮ ಹಕ್ಕು ಹೊರತಾಗಿ ಕೇಂದ್ರವು ನೀಡುವ ಭಿಕ್ಷೆಯಲ್ಲ ಎಂಬುದನ್ನು ಮನದಟ್ಟು ಮಾಡುವ ಈ ಸಮಾವೇಶದಲ್ಲಿ 10 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.ಇದೇ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಳೆದ ದಶಕಗಳಲ್ಲಿ ಹೋರಾಟ ಆರಂಭಿಸಲಾಯಿತು. ಆಗ ನಮ್ಮ ಹೋರಾಟವನ್ನು ಉಪೇಕ್ಷೆ ಮಾಡಿದ ಹಲವು ನಾಯಕರು ವಿರೋಧವನ್ನು ಸಹ ವ್ಯಕ್ತಪಡಿಸಿದ್ದರು. ಆದರೆ, ಈ ಅದೇ ನಾಯಕರು ನಮ್ಮ ಬೇಡಿಕೆ ನ್ಯಾಯಯುತವಾಗಿದೆ ಎಂಬುದಾಗಿ ಹೇಳುತ್ತಿದ್ದಾರಲ್ಲದೇ, ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸುವ ಭರವಸೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಅದರಲ್ಲೂ, ಈ ಭಾಗದ ಪ್ರಮುಖ ನಾಯಕರಾದ ಮಾಜಿ ಮುಖ್ಯಮಂತ್ರಿ ಎನ್.ಧರ್ಮಸಿಂಗ್, ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ ಸಹ ಈ ಬಾರಿ ಆಸಕ್ತಿ ತೋರುತ್ತಿದ್ದಾರೆ ಎಂದು ಅವರು ಹೇಳಿದರು.ಈ ತಿದ್ದುಪಡಿಗೆ ಆಗ್ರಹಿಸಿ ಶೀಘ್ರವೇ ಸರ್ವಪಕ್ಷಗಳ ನಿಯೋಗವೊಂದನ್ನು ನವದೆಹಲಿಗೆ ಒಯ್ಯುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಈ ನಿಯೋಗಕ್ಕೆ ಕೇಂದ್ರವು ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಪರಾಮರ್ಶಿಸಿ, ಹೋರಾಟದ ಮುಂದಿನ ರೂಪುರೇಷೆ ನಿರ್ಧರಿಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದರು.ಮತ್ತೊಂದು ಸುತ್ತಿನ ಸಭೆ: ಕೊಪ್ಪಳದಿಂದ ಮುಂದಿನ ತಿಂಗಳು ಹೊರಡಲಿರುವ ಜಾಥಾ ಕುರಿತಂತೆ ಚರ್ಚಿಸಲು ಶೀಘ್ರವೇ ಇಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು. ಈ ಸಭೆಯಲ್ಲಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ ಹಾಗೂ ಇತರ ಪ್ರಮುಖರು ಸಹ ಪಾಲ್ಗೊಳ್ಳುವರು ಎಂದು ಅವರು ಹೇಳಿದರು.

ಕೇಂದ್ರದ ಕಾರ್ಯಕರ್ತ ಐ.ಜಿ.ಪುಲಿ ಸಹ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.