ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`371(ಜೆ) ಜಾರಿಗಾಗಿ ಕಾಂಗ್ರೆಸ್ ಬೆಂಬಲಿಸಿ'

Last Updated 8 ಜನವರಿ 2013, 6:34 IST
ಅಕ್ಷರ ಗಾತ್ರ

ಬೀದರ್: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ತಿದ್ದುಪಡಿ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಭಾಗದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ನಗರದ ಗಣೇಶ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೇಂದ್ರದ ಯುಪಿಎ ಸರ್ಕಾರ 371(ಜೆ) ತಿದ್ದುಪಡಿ ಮಾಡಿ ಈ ಭಾಗಕ್ಕೆ ವಿಶೇಷ ಕೊಡುಗೆ ನೀಡಿದ್ದು, ಈಗಿನ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸುವ ಬಗೆಗೇ ಅನುಮಾನಗಳಿವೆ. ಹೀಗಾಗಿ ಕಾಯ್ದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರುವ ಸಾಧ್ಯತೆ ಕಡಿಮೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸಬೇಕು ಎಂದು ಸಲಹೆ ಮಾಡಿದರು.

371(ಜೆ) ಕಲಂ ತಿದ್ದುಪಡಿಗಾಗಿ ತಾವು ಸೋನಿಯಾ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕೇಂದ್ರ ಸಚಿವರ ಮನವೊಲಿಸಿದ್ದನ್ನು ಬಿಡಿಸಿಟ್ಟರು. ಕೇಂದ್ರ ಸರ್ಕಾರ ಈ ಕಾಯ್ದೆಯಲ್ಲಿ ಉತ್ತಮ ಅಂಶಗಳನ್ನು ಸೇರಿಸಿದೆ. ಆದರೆ, ರಾಜ್ಯ ಸರ್ಕಾರ ವಿನಾಕಾರಣ ಆಕ್ಷೇಪ ಎತ್ತಿ ಅಡ್ಡಗಾಲು ಹಾಕಿತ್ತು. ಬಳಿಕ ತಪ್ಪಿನ ಅರಿವಾಗಿ ಯಥಾ ಸ್ಥಿತಿಯಲ್ಲಿ ಜಾರಿಗೊಳಿಸಲು ಕೋರಿತ್ತು ಎಂದು ಹೇಳಿದರು.

ಸಂಸದ ಎನ್. ಧರ್ಮಸಿಂಗ್ ಮಾತನಾಡಿ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಂವಿಧಾನದ 371(ಜೆ) ಕಲಂ ತಿದ್ದುಪಡಿ ಮೂಲಕ ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸಿದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ನಾಂದಿ ಹಾಡಿದಂತಾಗಿದೆ. ಬಹುದಿನಗಳ ಕನಸು ನನಸಾಗಿದೆ. ಶೀಘ್ರವೇ ಕಾಯಿದೆ ಜಾರಿಯಾಗಲಿ ಎಂದು ಆಶಿಸಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಈ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಂಸದರಾದ ಇಕ್ಬಾಲ್ ಅಹಮ್ಮದ್ ಸರಡಗಿ, ನರಸಿಂಗರಾವ್ ಸೂರ್ಯವಂಶಿ, ಶಾಸಕರಾದ ರಹೀಮ್‌ಖಾನ್, ರಾಜಶೇಖರ್ ಪಾಟೀಲ್, ವಿಧಾನ  ಪರಿಷತ್ ಮಾಜಿ ಸದಸ್ಯರಾದ ಕಾಜಿ ಅರ್ಷದ್ ಅಲಿ, ರತ್ನಾ ಕುಶನೂರು, ಕೆ. ಪುಂಡಲಿಕರಾವ್, ಮಾರುತಿರಾವ್ ಡಿ.                                ಮಾಲೆ,  ಎ.ಐ.ಸಿ.ಸಿ. ಸದಸ್ಯೆ  ಗುರುಮ್ಮ ಸಿದ್ಧಾರೆಡ್ಡಿ, ಕಾಂಗ್ರೆಸ್ ಮಹಿಳಾ    ಘಟಕದ ಜಿಲ್ಲಾ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ, ಡಾ. ಅಜಯ್  ಸಿಂಗ್, ಪ್ರಮುಖರಾದ ಬಿ. ನಾರಾಯಣರಾವ್, ಅಮೃತರಾವ್ ಚಿಮಕೋಡೆ, ಬಕ್ಕಪ್ಪ   ಕೋಟೆ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT