ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371ನೇ ಕಲಂ: ಉರಿ ಒಳಗಿನ ಕೆಂಡ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

>ಗುಲ್ಬರ್ಗ:  ಬಿಸಿಲು ಧಗಧಗನೆ ಉರಿಯುತ್ತಿದೆ. ಬೆಂಕಿಯಂತಹ ಗಾಳಿ ರಪ್ಪನೆ ಮುಖಕ್ಕೆ ರಾಚುತ್ತದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜನರು ಓಡಾಡುತ್ತಾರೆ. ರಸ್ತೆಗಳು ಹೊಂಡಕೊಂಡಗಳಾಗಿ ಬಿದ್ದುಕೊಂಡಿವೆ. ನೀರಿನ ಪಸೆಗಾಗಿ ಜನರ ನಾಲಿಗೆಗಳು ಕಾಯುತ್ತಿವೆ. ಗೋಗಿ ಬಳಿ ಯುರೇನಿಯಂ ವಿಕಿರಣಗಳು ದಾಳಿ ಮಾಡುತ್ತಿವೆ. ಚಿಂಚೋಳಿಯಲ್ಲಿ ಮಕ್ಕಳ ಮಾರಾಟ ನಡೆಯುತ್ತಿದೆ. ತೊಗರಿ ಬೆಳೆಗಾರರಿಗೆ ಈ ಬಾರಿ ಬೆಲೆ ಸಿಕ್ಕಿದ್ದರೂ ಪೂರ್ಣ ತೃಪ್ತಿ ಕಾಣುತ್ತಿಲ್ಲ. 

ಹೈದರಾಬಾದ್ ಪ್ರದೇಶ ಅಭಿವೃದ್ಧಿ ಮಂಡಳಿ, ನಂಜುಂಡಪ್ಪ ವರದಿ ಹಾಗೂ 371ನೇ ಕಲಂ ಜಾರಿ ವಿಚಾರಗಳು ಗಾಳಿಯಲ್ಲಿ ಹರಿದಾಡುತ್ತಿವೆ. ವಿಧಾನಸಭೆ ಚುನಾವಣೆಯ ಬಾಗಿಲಿನಲ್ಲಿ ನಿಂತು ಗುಲ್ಬರ್ಗ ಜಿಲ್ಲೆಯನ್ನು ಅವಲೋಕಿಸಿದರೆ 371ನೇ ಕಲಂ ಜಾರಿ ವಿಚಾರ ಉರಿಯೊಳಗಣ ಬೆಂಕಿಯಂತೆ ಕಾಣುತ್ತದೆ.

`ಅದೇನೋ ಕಾನೂನು ಬಂದದಂತಲ್ಲ. ಎಲ್ಲರಿಗೂ ಸರ್ಕಾರಿ ನೌಕರಿ ಕೊಡ್ತಾರಂತಲ್ಲ' ಎನ್ನುತ್ತಾನೆ ಆಟೊ  ಚಾಲಕ ಅಮರೇಶ ನೀರಗುಡಿ. ಅವನ ಮಾತಿನಲ್ಲಿ ಎಂತಹ ವಿಶ್ವಾಸ ಇತ್ತು ಎಂದರೆ ತಾನು ಇನ್ನು ಮುಂದೆ ಆಟೊ  ಓಡಿಸಬೇಕಿಲ್ಲ. ಸರ್ಕಾರಿ ನೌಕರಿ ತನಗೆ ಸಿಕ್ಕೇ ಬಿಡುತ್ತದೆ ಎಂಬ ಕನಸು ಹರಿದಾಡುತ್ತಿತ್ತು.

371ನೇ ಕಲಂ ಜಾರಿ ವಿಷಯದಲ್ಲಿ ಜನರಿಗೆ ಸಾಕಷ್ಟು ಗೊಂದಲಗಳಿವೆ.  40 ವರ್ಷಗಳಿಂದ ಇದಕ್ಕಾಗಿ ಹೋರಾಟ ನಡೆದರೂ ಜನರಿಗೆ ಇನ್ನೂ 371 ಕಲಂಯಿಂದ ಆಗಬಹುದಾದ ಲಾಭಗಳ ಬಗ್ಗೆ ಗೊತ್ತಿಲ್ಲ. ಇದಕ್ಕಾಗಿ ಹೋರಾಟ ನಡೆಸಿದ ವೈಜನಾಥ ಪಾಟೀಲ ಅವರು ಈ ಬಾರಿ ಕೆಜೆಪಿಯಿಂದ ಸೇಡಂ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಈ ವಿಧಿಯ ಜಾರಿಯ ನೇತೃತ್ವ ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆ ಅವರೂ ಇದರ ಲಾಭವನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಆದರೆ ಈ ಬಗ್ಗೆ ಜನರಿಗೆ ಇನ್ನೂ ಸ್ಪಷ್ಟ ಕಲ್ಪನೆಗಳಿಲ್ಲ.

ಈ ಕಲಂ ಜಾರಿಗೆ ಬಂದರೆ ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತದೆ. ಶಿಕ್ಷಣದಲ್ಲಿಯೂ ಮೀಸಲಾತಿ ದೊರೆಯುತ್ತದೆ. ಈ ಬಾರಿಯೇ ಇದು ಅನುಷ್ಠಾನಕ್ಕೆ ಬಂದಿದ್ದರೆ ಹೈದರಾಬಾದ್ ಕರ್ನಾಟಕದ ನೂರಾರು ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ಮೀಸಲಾತಿ ಸಿಗುತ್ತಿತ್ತು. ಹಲವಾರು ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟ್ ಪಡೆದುಕೊಳ್ಳುತ್ತಿದ್ದರು. ಆದರೆ ಬಿಜೆಪಿ ಸರ್ಕಾರ ಈ ಅವಕಾಶ ಕಸಿದುಕೊಂಡಿದೆ ಎಂದು ವೈಜನಾಥ ಪಾಟೀಲ ಆರೋಪಿಸುತ್ತಾರೆ.

ಮೊದಲಿನಿಂದಲೂ ಬಿಜೆಪಿ 371ನೇ ಕಲಂ ಜಾರಿಗೊಳಿಸುವುದಕ್ಕೆ ವಿರೋಧವನ್ನೇ ಮಾಡಿಕೊಂಡು ಬಂದಿದೆ. ವೆಂಕಯ್ಯ ನಾಯ್ಡು, ಜಗದೀಶ ಶೆಟ್ಟರ್ ಅವರೂ ಇದನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈ ಹಿಂದೆ ಉಪ ಪ್ರಧಾನಿಯಾಗಿದ್ದ ಎಲ್.ಕೆ.ಅಡ್ವಾಣಿ ಅವರೂ ವಿರೋಧ ಮಾಡಿದ್ದರು. ಕೆ.ಬಿ.ಶಾಣಪ್ಪ ಅವರು ರಾಜ್ಯಸಭೆಯಲ್ಲಿ ಈ ಬಗ್ಗೆ ಖಾಸಗಿ ಮಸೂದೆ ಮಂಡಿಸಿದಾಗ ಅವರಿಂದ ಬಲವಂತವಾಗಿ ಮಸೂದೆ ವಾಪಸು ಪಡೆಯುವಂತೆ ಬಿಜೆಪಿ ಮಾಡಿತ್ತು ಎನ್ನುವುದು ಅವರ ದೂರು.

ಇದು ಈ ಬಾರಿಯೇ ಜಾರಿಯಾಗಿದ್ದರೆ ಒಳಿತಿತ್ತು ಎನ್ನುವುದು ವಿದ್ಯಾರ್ಥಿ ನಾಯಕರಾದ ಕೈಲಾಶ ಪಾಟೀಲ್, ಮಹೇಶ್, ಎಸ್.ಎಂ.ಶರ್ಮಾ ಅವರ ಅಭಿಪ್ರಾಯ. ಆದರೆ, ಈ ಬಗ್ಗೆ ವಿದ್ಯಾರ್ಥಿಗಳಿಗೆ ಇನ್ನೂ ಅರಿವೇ ಇಲ್ಲ. ತಾವು ಅರಿವು ಮೂಡಿಸುತ್ತೇವೆ. ಹೋರಾಟವನ್ನೂ ನಡೆಸುತ್ತೇವೆ ಎಂದು ಅವರು ಹೇಳುತ್ತಾರೆ. ಗುಲ್ಬರ್ಗ ನಗರದ ಗಲೀಜುಗಳ ಮಧ್ಯದಲ್ಲಿಯೇ ಇರುವ ಕಾಲೇಜಿನ ವಿದ್ಯಾರ್ಥಿಗಳನ್ನು ಈ ಬಗ್ಗೆ ಮಾತನಾಡಿಸಿದಾಗ `ನಮಗೇನೂ ಗೊತ್ತಿಲ್ರಿ' ಎಂಬ ಉತ್ತರ ಬಂತು. ಈ ಬಾರಿ ವೋಟ್ ಮಾಡ್ತೀರಾ ಎಂದು ಕೇಳಿದ್ದಕ್ಕೂ `ನಮಗೇನ್ ಗೊತ್ತಿಲ್ರಿ' ಎಂದೇ ಉತ್ತರಿಸಿದರು ಅವರು.

ಸುರಪುರ ತಾಲ್ಲೂಕಿನ ಗೋಗಿ ಬಳಿಯ ಕರದಳ್ಳಿ ಗ್ರಾಮದಲ್ಲಿ ಈಗಾಗಲೇ ಅನಾರೋಗ್ಯದ ಸಮಸ್ಯೆಯ ಸುಳಿಗೆ ಸಿಲುಕಿರುವ ಅಂಬಲಗಿ ಶರಣಪ್ಪ, `ನಮಗೆ 371 ಬ್ಯಾಡ, ಹೈದರಾಬಾದ್ ಕರ್ನಾಟಕದ ಅಭಿವೃದ್ಧಿನೂ ಬ್ಯಾಡ, ಹ್ಯಂಗಾರ ಮಾಡಿ ನಮ್ಮ ಆರೋಗ್ಯ ಪಾಡ ಮಾಡ್ರಿ. ಒಳ್ಳೆ ಗಾಳಿ ಸಿಗೋಹಂಗ ಮಾಡ್ರಿ' ಎಂದು ಕೈಮುಗಿದರು. 

`371ನೇ ವಿಧಿ ಜಾರಿಗೆ ಬಂದರೆ ಶಿಕ್ಷಣದಲ್ಲಿ ಮೀಸಲಾತಿ ಸಿಗುತ್ತದೆ ಅಂತಾರ‌್ರಿ. ಈಗಲಾ ಎಂಜಿನಿಯರ್ ಸೀಟುಗಳು ಖಾಲಿ ಉಳೀತಾವ್ರಿ. ಅಲ್ಲಿಗೆ ಹೋಗೋರ್ ಇಲ್ಲಾ, ವೈದ್ಯಕೀಯ ಸೀಟ್ ಸಿಕ್ಕರೆ ಫೀಸ್ ಕೊಡೋರು ಯಾರ‌್ರಿ. ಸರ್ಕಾರ ನೇಮಕಾತಿ ಮಾಡೋದನ್ನೇ ನಿಲ್ಲಿಸಿಬಿಟ್ಟದೆ. ಇನ್ನು ಉದ್ಯೋಗದಾಗ ಮೀಸಲಾತಿ ಕೊಡೋ ಮಾತೇನ್. ಈಗ ನಡೀತಿರೋ ಉದ್ಯೋಗ ಭರ್ತಿ ಅಂದರ ಪೊಲೀಸ್ ಪೇದೆಗಳು, ಶಾಲಾ ಶಿಕ್ಷಕರು. ಪೇದೆಗಳಿಗೆ ಪ್ರದೇಶವಾರು ಮೀಸಲಾತಿ ಈಗಾಗಲೇ ಇದೆ. ಶಾಲೆಗಳನ್ನು ಮುಚ್ಚಿದ ನಂತರ ಶಿಕ್ಷಕರ ನೇಮಕಾತಿ ಯಾಕೆ ಮಾಡ್ತಾರ‌್ರಿ' ಎಂದು ಗುಂಡು ಹೊಡೆದಂತೆ ಪ್ರಶ್ನೆ ಮಾಡುತ್ತಾನೆ ಮಹಾಂತೇಶ ಚಿಮಕೊಡೆ.

`ಯಾರಿಗೂ ಜನರ ಬದುಕು ಗೊತ್ತೇ ಇಲ್ಲ. ಎಲ್ಲ 224 ಶಾಸಕರನ್ನೂ ನನ್ನ ಬಳಿಗೆ ಕಳುಹಿಸಿ. 15 ದಿನ ಇದ್ದರೆ ಸಾಕು. ಶೇ 10ರಷ್ಟು ಶಾಸಕರಿಗಾದರೂ ನಾನು ಜನರ ಬದುಕು ಹೇಗಿದೆ. ನೀವು ಏನು ಮಾಡಬೇಕು ಎನ್ನೋದನ್ನು ತಿಳಿಸುತ್ತೇನೆ' ಎಂದು ಡಾ.ಸ್ವಾಮಿರಾವ್ ಕುಲಕರ್ಣಿ ಸವಾಲು ಹಾಕುತ್ತಾರೆ.
ಅಫಜಲಪೂರ, ಜೇವರ್ಗಿ, ಚಿತ್ತಾಪೂರ, ಸೇಡಂ, ಚಿಂಚೋಳಿ, ಗುಲ್ಬರ್ಗ ಗ್ರಾಮೀಣ, ಆಳಂದ, ಗುಲ್ಬರ್ಗ ದಕ್ಷಿಣ, ಗುಲಬರ್ಗ ಉತ್ತರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ.

ನಂಜುಂಡಪ್ಪ ವರದಿ ಅನುಷ್ಠಾನ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕಾರ್ಯಕ್ರಮಗಳು ಕಣ್ಣಿಗೆ ಕಾಣುವಂತೆ ಇಲ್ಲ. ಈಗ 371ನೇ ಕಲಂ ಎಂಬ ಜೇನುತುಪ್ಪವನ್ನು ಸವರುವ ಕೆಲಸವೂ ನಡೆಯುತ್ತಿದೆ. ಸದ್ಯಕ್ಕೆ ಜನರು ಬಾಯಿ ಮುಚ್ಚಿಕೊಂಡು ಇರುವಂತೆ ಕಂಡರೂ ಅವರ ಕೈಯಲ್ಲಿ ಬಡಿಗೆ ಇದೆ. ಮತದಾನದ ವೇಳೆ ಅದನ್ನು ಎತ್ತುವ ಸಾಧ್ಯತೆಯೂ ಇದೆ.

>ಯಾತ್ರೆಯಲ್ಲಿ ಸಿಕ್ಕ ಕತೆ!
>ರೈತರ ಸಮಸ್ಯೆ ವಿರುದ್ಧ ಒಮ್ಮೆ ಲೆನಿನ್ ಹೋರಾಟ ನಡೆಸಿದರು. ರಷ್ಯಾ ಅಧ್ಯಕ್ಷರ ವಿರುದ್ಧ ನೂರಾರು ರೈತರನ್ನು ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು. ಅಧ್ಯಕ್ಷರು ಕಾರಿನಿಂದ ಇಳಿದ ತಕ್ಷಣವೇ ರೈತರೆಲ್ಲಾ ಅವರ ಕಾಲಿಗೆ ಬಿದ್ದರು. ಇದನ್ನು ನೋಡಿದ ಜನರು, `ನೀವು ಯಾರ ಪರವಾಗಿ ಹೋರಾಟ ನಡೆಸಿದ್ದೀರೋ ಅವರೆಲ್ಲಾ ಅಧ್ಯಕ್ಷರ ಕಾಲಿಗೆ ಬೀಳುತ್ತಿದ್ದಾರಲ್ಲಾ?' ಎಂದು ಲೆನಿನ್ ಅವರನ್ನು ಪ್ರಶ್ನೆ ಮಾಡಿದರು. ಅದಕ್ಕೆ ಲೆನಿನ್ `ನಮ್ಮ ಹೋರಾಟ ಯಾತಕ್ಕಾಗಿ ಮತ್ತು ಯಾರ ಪರವಾಗಿ ಎಂದು ಅವರಿಗೆ ಅರ್ಥವಾಗದಿದ್ದರೆ ಬೂಟು ಕಾಲಿನಲ್ಲಿ ಒದ್ದು ತಿಳಿ ಹೇಳಬೇಕು' ಎಂದು ಉತ್ತರಿಸಿದರಂತೆ.

ವೈಜನಾಥ ಪಾಟೀಲರಿಗೆ 371ನೇ ಕಲಂ  ಹೋರಾಟದ ಸಂದರ್ಭದಲ್ಲಿಯೂ ಇಂತಹ ಪರಿಸ್ಥಿತಿ ಉಂಟಾಗಿತ್ತಂತೆ. ಅದಕ್ಕೇ ಅವರು ಈ ಬಗ್ಗೆ ಜನರಿಗೆ ಇನ್ನೂ ತಿಳಿವಳಿಕೆ ಹೇಳಬೇಕಾಗಿದೆ ಎನ್ನುತ್ತಾರೆ.

ಭಾರಿ  ಸದ್ದು ಮಾಡುತ್ತಿರುವ ಕೆಜೆಪಿ
>ಗುಲ್ಬರ್ಗ ಜಿಲ್ಲೆಯಲ್ಲಿ ಕೆಜೆಪಿ ಭಾರಿ ಸದ್ದು ಮಾಡುತ್ತಿದೆ. ಈಗಾಗಲೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸಾಕಷ್ಟು ಸ್ಥಾನಗಳನ್ನೂ ಗಳಿಸಿಕೊಂಡಿದೆ. ಅಫಜಲಪೂರದಲ್ಲಿ ತನ್ನ ಅಧಿಪತ್ಯ  ಸ್ಥಾಪಿಸಿದೆ. ಹಿರಿಯ ರಾಜಕಾರಣಿಗಳಾದ ವೈಜನಾಥ ಪಾಟೀಲ (ಸೇಡಂ), ಬಿ.ಆರ್.ಪಾಟೀಲ (ಆಳಂದ), ಎಸ್.ಕೆ.ಕಾಂತ (ಗುಲ್ಬರ್ಗ ದಕ್ಷಿಣ) ಕ್ಷೇತ್ರದಲ್ಲಿ ಕೆಜೆಪಿ ಪರವಾಗಿ ಕಣಕ್ಕೆ ಇಳಿದಿದ್ದಾರೆ. ಚಿಂಚೋಳಿ, ಚಿತ್ತಾಪುರ, ಜೇವರ್ಗಿಯಲ್ಲಿಯೂ ಅಬ್ಬರ ಕಾಣಿಸುತ್ತಿದೆ.

ಈ ನಡುವೆ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಆಯಾರಾಂ ಗಯಾರಾಂ ಮುಂದುವರಿದಿದೆ. ನಂಜುಂಡಪ್ಪ ವರದಿ ಅನುಷ್ಠಾನ ಮಂಡಳಿ ಅಧ್ಯಕ್ಷರಾಗಿದ್ದ ಶಶಿಲ್ ನಮೋಶಿ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದಾರೆ. ಕಳೆದ ಬಾರಿ ಗುಲ್ಬರ್ಗ ದಕ್ಷಿಣದಿಂದ ಜೆಡಿಎಸ್ ಶಾಸಕರಾಗಿದ್ದ ಅರುಣಾ ಚಂದ್ರಶೇಖರ ಪಾಟೀಲ ರೆವೂರ ಈಗ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್‌ನಲ್ಲೂ  ಗೊಂದಲ ಪೂರ್ಣ ನಿವಾರಣೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT