ಬುಧವಾರ, ಮಾರ್ಚ್ 3, 2021
22 °C

500 ಎಕರೆ ಸರ್ಕಾರಿ ಜಮೀನು ಒತ್ತುವರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

500 ಎಕರೆ ಸರ್ಕಾರಿ ಜಮೀನು ಒತ್ತುವರಿ

ಕಲಬುರ್ಗಿ: ‘ನಗರದಲ್ಲಿ ಏಳು ಕೆರೆಗಳು ಸೇರಿದಂತೆ 500 ಎಕರೆ ಸರ್ಕಾರಿ ಜಮೀನು ಒತ್ತುವರಿಯಾಗಿದೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು’ ಎಂದು ನಗರದ ನಿವಾಸಿಗಳಾದ ಸುಭಾಸಚಂದ್ರ ಬೆನಕನಹಳ್ಳಿ ಹಾಗೂ ಪ್ರಕಾಶ ಬೆನಕನಹಳ್ಳಿ ಇಲ್ಲಿ ಒತ್ತಾಯಿಸಿದರು.ನಗರದ ಡಾ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಅಧ್ಯಕ್ಷತೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಜನಸ್ಪಂದನ’ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದರು.‘ಏಳು ಕೆರೆಗಳ ಒತ್ತುವರಿಯಿಂದ 146 ಎಕರೆ 17 ಗುಂಟೆ ಜಮೀನು ಭೂಗಳ್ಳರ ಪಾಲಾಗಿದೆ. ಪ್ರಭಾವಿಗಳೇ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು ಸೇರಿದಂತೆ ಮುಖ್ಯಮಂತ್ರಿವರೆಗೆ ಎಲ್ಲ ರಿಗೂ ದೂರು ನೀಡಲಾಗಿದೆ. ಆದಾಗ್ಯೂ, ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ನೇರವಾಗಿ ಆರೋಪಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್, ‘ಕೆರೆ ಮತ್ತು ರಾಜ ಕಾಲುವೆಗಳನ್ನು ಒತ್ತುವರಿ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನದ ನೀಡಿದೆ. ಈ ಬಗ್ಗೆ ನನಗೊಂದು ದೂರು ಕೊಡಿ, ನಾನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ಆದರೆ ಸಚಿವರು ಮಾತ್ರ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಬಿದ್ದಾಪುರ ಕಾಲೊನಿ ನಾಗರಿಕರು ಮಾತನಾಡಿ, ‘ರೈಲ್ವೆ ಮೇಲ್ಸೇತುವೆ ಕಾಮ ಗಾರಿ ಅವೈಜ್ಞಾನಿಕವಾಗಿದ್ದು, ಅದನ್ನು ಸರಿಪಡಿಸಬೇಕು. ಒಳಚರಂಡಿ, ತೆರೆದ ಚರಂಡಿ ನಿರ್ಮಿಸಬೇಕು’ ಎಂದು ಆಗ್ರಹಿ ಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಕೂಡಲೇ ಕ್ರಮಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಭೀಮನಗರದ ಯಶವಂತ ಗೋಳಾ ಎಂಬುವರು ಮಾತನಾಡಿ, ‘ಪಾಲಿಕೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿ ಸಿದ್ದೆ. ಆದರೆ, ಆರು ತಿಂಗಳ ವೇತನ ಪಾವತಿಸಿಲ್ಲ. ಇದರಿಂದ ಪೌರಕಾರ್ಮಿ ಕರು ಬದುಕು ಬೀದಿಗೆ ಬಂದಿದೆ. ಪಾಲಿಕೆಯ ಕೆಲವು ನೌಕರರು ಆಯುಕ್ತರ ದಾರಿ ತಪ್ಪಿಸುತ್ತಿದ್ದಾರೆ’ ಎದರು.ಇದರಿಂದ ಸಿಟ್ಟಿಗೆದ್ದ ಪಾಲಿಕೆ ಆಯುಕ್ತ ಸುನಿಲ್‌ಕುಮಾರ್ ಪಿ., ‘ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಬೇಕಿತ್ತು. ಆದರೆ, ಮಾನವೀಯತೆ ಆಧಾರದ ಮೇಲೆ ವೇತನ ಪಾವತಿಸುವ ಬಗ್ಗೆ ಚಿಂತನೆ ಮಾಡುತ್ತಿದ್ದೇನೆ. ಹಿಂದಿನ ಆಯುಕ್ತರು ಟೆಂಡರ್ ಇಲ್ಲದೆ ಬೇಕಾಬಿಟ್ಟಿ ಯಾಗಿ ಕೆಲಸ ಕೊಟ್ಟು, ಸಂಬಳ ಪಾವತಿಸಿ ದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ವಿಚಾರಣೆಯ ಹಂತದಲ್ಲಿದೆ’ ಎಂದು ಸ್ಪಷ್ಟಪಡಿಸಿದರು.ಜಿಲ್ಲಾಧಿಕಾರಿ ಉಜ್ವಲ್‌ಕುಮಾರ್ ಘೋಷ್ ಪ್ರತಿಕ್ರಿಯಿಸಿ, ‘ಯಾರು ಎಷ್ಟೇ ದಾರಿ ತಪ್ಪಿಸಿದರೂ ನಮಗೆ ತಲೆ ಇದೆ. ನಾವು ಯೋಚನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಹಾಗೆಲ್ಲ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಬಾ ರದು’ ಎಂದು ಎಚ್ಚರಿಕೆ ನೀಡಿದರು.ರಸ್ತೆಯೇ ಇಲ್ಲ: ಶಿವಶೆಟ್ಟಿ ಪಾಟೀಲ ಎಂಬುವರು ಮಾತನಾಡಿ, ‘ತಾಲ್ಲೂಕಿನ ರಾಜನಾಳ ಸಮೀಪದ ಹೀರೂನಾಯಕ ತಾಂಡಾಕ್ಕೆ ರಸ್ತೆಯೇ ಇಲ್ಲ. ಈಚೆಗಷ್ಟೇ ಬೈಕ್ ಸವಾರನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಆದ್ದರಿಂದ, ಹೈದರಾ ಬಾದ್  ಎಚ್‌ಕೆಆರ್‌ಡಿಬಿಯಿಂದ ರಸ್ತೆ ನಿರ್ಮಿಸಲು’ ಮನವಿ ಮಾಡಿದರು.ಇದಕ್ಕೆ ಸ್ಪಂದಿಸಿದ ಸಚಿವರು, ‘ನೀವೊಂದು ಅರ್ಜಿ ಕೊಡಿ. ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳುತ್ತೇನೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ’ ಎಂದು ಭರವಸೆ ನೀಡಿದರು.

ಎಂಜಿನಿಯರಿಂಗ್ ಕಾಲೇಜು ಆರಂಭಿಸಿ: ‘ಜೇವರ್ಗಿಯಲ್ಲಿ ಸರ್ಕಾರಿ ಎಂಜಿನಿಯ ರಿಂಗ್ ಕಾಲೇಜು ಆರಂಭಿಸಬೇಕು’ ಎಂದು ಸಮಾಜ ಸೇವಕ ನಾಗಣ್ಣ ಚೆನ್ನೂರ ಮನವಿ ಮಾಡಿದರು.ಸಚಿವ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಈಗಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲೇ ಸೀಟುಗಳು ಉಳಿಯುತ್ತಿವೆ. ಹೀಗಾಗಿ ಎಂಜಿನಿಯರಿಂಗ್ ಕಾಲೇಜು ಆರಂಭಿಸು ವುದು ಕಷ್ಟಸಾಧ್ಯ. ಆದಾಗ್ಯೂ, ಸಂಬಂಧಿ ಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸುತ್ತೇನೆ’ ಎಂದರು.ಜಂಟಿ ನಿರ್ದೇಶಕರ ಕಚೇರಿ ಆರಂಭಿ ಸುವುದು, ಕೆಲವು ಗ್ರಾಮಗಳಲ್ಲಿ ರಸ್ತೆ ನಿರ್ಮಿಸುವುದು, ವಿವಿಧ ಬಡಾವಣೆಗಳಲ್ಲಿ ಉದ್ಯಾನ ನಿರ್ಮಿಸು ವುದು, ಒತ್ತುವರಿ ತೆರವುಗೊಳಿಸು ವುದು, ಸಂಜೀವ ನಗರದ ನಿವಾಸಿಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.

ಜಿ.ಪಂ ಸಿಇಒ ಅನಿರುದ್ಧ ಶ್ರವಣ ಪಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.