ಗುರುವಾರ , ಏಪ್ರಿಲ್ 22, 2021
31 °C

7 ಸರ್ಕಾರಿ ವೈದ್ಯ ಕಾಲೇಜ್ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಬರುವ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿ ಹೊಸದಾಗಿ ಏಳು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಬುಧವಾರ ಇಲ್ಲಿ ತಿಳಿಸಿದರು.ಚಾಮರಾಜನಗರ, ತುಮಕೂರು, ಹಾವೇರಿ, ಚಿತ್ರದುರ್ಗ, ಕೊಪ್ಪಳ, ಗದಗ ಮತ್ತು ಮಡಿಕೇರಿಯಲ್ಲಿ 2013-14ನೇ ಸಾಲಿನಿಂದ ಹೊಸ ಕಾಲೇಜುಗಳು ಆರಂಭವಾಗಲಿವೆ. ಭಾರತೀಯ ವೈದ್ಯಕೀಯ ಮಂಡಳಿಯ (ಎಂಸಿಐ) ತಂಡವು ಜನವರಿಯಲ್ಲಿ ಉದ್ದೇಶಿತ ಹೊಸ ಕಾಲೇಜುಗಳ ಸ್ಥಳ ಪರಿಶೀಲನೆ ನಡೆಸಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ಪ್ರತಿಯೊಂದು ಹೊಸ ಕಾಲೇಜಿಗೆ ಐದು ವರ್ಷಗಳ ಅವಧಿಗೆ 200 ಕೋಟಿ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಇದರಲ್ಲಿ ಶೇ 75ರಷ್ಟನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಉಳಿದ ಶೇ 25ರಷ್ಟನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ಕಾಲೇಜಿಗೆ ಈಗಾಗಲೇ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.ಹೊಸ ಕಾಲೇಜುಗಳಲ್ಲಿ ತಲಾ 100 ಸೀಟುಗಳ ಪ್ರಕಾರ ಒಟ್ಟು 700 ಸೀಟುಗಳು ಲಭ್ಯವಾಗಲಿವೆ. ಹಾಲಿ ಇರುವ ಹತ್ತು ವೈದ್ಯಕೀಯ ಕಾಲೇಜುಗಳಲ್ಲಿನ 1,250 ಸೀಟುಗಳ ಸಂಖ್ಯೆಯನ್ನು 1,900ಕ್ಕೆ ಹೆಚ್ಚಿಸುವಂತೆ ಎಂಸಿಐಗೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಕ್ಕೆ ಒಪ್ಪಿಗೆ ದೊರೆತರೆ ಸರ್ಕಾರಿ ಸೀಟುಗಳ ಸಂಖ್ಯೆ 2,600ಕ್ಕೆ ಏರಲಿದೆ ಎಂದು ಅವರು ಹೇಳಿದರು.ಕ್ಯಾನ್ಸರ್ ಘಟಕ: ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕಿದ್ವಾಯಿ ಆಸ್ಪತ್ರೆ ಮೇಲೆ ಹೆಚ್ಚಿನ ಒತ್ತಡವಿದೆ. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಒಂಬತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕಗಳನ್ನು ತೆರೆಯಲಾಗುವುದು ಎಂದರು.12ನೇ ಪಂಚವಾರ್ಷಿಕ ಯೋಜನೆಯಡಿ ಕೇಂದ್ರ ಸರ್ಕಾರ ಪ್ರತಿಯೊಂದು ಕ್ಯಾನ್ಸರ್ ಘಟಕಕ್ಕೆ ತಲಾ 50 ಕೋಟಿ ರೂಪಾಯಿ ನೆರವು ನೀಡಲಿದೆ. ಉಳಿದ ಹತ್ತು ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, ಸದ್ಯದಲ್ಲೇ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.ಮೇಲ್ದರ್ಜೆಗೆ: ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿನ ಹಾಸಿಗೆಗಳ ಸಂಖ್ಯೆಯನ್ನು 300ರಿಂದ 750ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ಹೆಚ್ಚುವರಿ ಕಟ್ಟಡಗಳ ನಿರ್ಮಾಣಕ್ಕೆ ಸಿದ್ಧಪಡಿಸಿರುವ 87.70 ಕೋಟಿ ರೂಪಾಯಿ ವೆಚ್ಚದ ಅಂದಾಜು ಪಟ್ಟಿಗೆ ಷರತ್ತಿನ ಮೇಲೆ ಸರ್ಕಾರ ಅನುಮೋದನೆ ನೀಡಿದೆ ಎಂದರು.

 

ಈ ವರ್ಷ ಮೊದಲ ಹಂತದ ಕಾಮಗಾರಿಯನ್ನು ಮಾತ್ರ ಕೈಗೆತ್ತಿಕೊಂಡು 20 ಕೋಟಿ ರೂಪಾಯಿ ವೆಚ್ಚ ಮಾಡಬೇಕು. ಮುಂದಿನ ಆರ್ಥಿಕ ವರ್ಷದಲ್ಲಿ ಹಣಕಾಸು ಇಲಾಖೆಯ ಅನುಮೋದನೆಯೊಂದಿಗೆ ಎರಡನೇ ಹಂತದ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಅವರು ವಹೇಳಿದರು.ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ


ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸರ್ಕಾರದ ವತಿಯಿಂದಲೇ ಡಿಸೆಂಬರ್ ಒಂದರಿಂದ ಪುನರಾರಂಭಿಸಲಾಗುವುದು ಎಂದು ಸಚಿವ ರಾಮದಾಸ್ ತಿಳಿಸಿದರು.ಅಪೋಲೊ ಆಸ್ಪತ್ರೆಗಳ ಸಮೂಹಕ್ಕೆ ನೀಡಿದ್ದ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸರ್ಕಾರವೇ ಆಸ್ಪತ್ರೆಯನ್ನು ನಿರ್ವಹಿಸಲಿದೆ. ಈಗಾಗಲೇ ಐದು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಆಸ್ಪತ್ರೆ ನಿರ್ವಹಣೆಗೆ ಅಗತ್ಯವಿರುವ 648 ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡಲಾಗಿದೆ ಎಂದು ಅವರು ಹೇಳಿದರು.ಗ್ರಾಮೀಣ ಸೇವೆ

ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರಮಟ್ಟದಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 21 ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದೇ 21ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ. ತೀರ್ಪು ಆಧರಿಸಿ ಮುಂದಿನ ಹೆಜ್ಜೆ ಇಡಲಾಗುವುದು.ಎನ್‌ಇಇಟಿ ಪರೀಕ್ಷೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ. ಎಂಬಿಬಿಎಸ್ ಕೋರ್ಸ್ ಪ್ರವೇಶಕ್ಕೆ ಎನ್‌ಇಇಟಿ ನಡೆಸಲು ತೊಂದರೆ ಇಲ್ಲ. ಎನ್‌ಇಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಡಿಸೆಂಬರ್‌ನಿಂದ ಚಂದನ ವಾಹಿನಿ ಮೂಲಕ ತರಬೇತಿ ನೀಡಲಾಗುವುದು.ಆಯಾ ರಾಜ್ಯಗಳಲ್ಲೇ ಗ್ರಾಮೀಣ ಸೇವೆ

ಎಂಬಿಬಿಎಸ್ ಪೂರ್ಣಗೊಳಿಸಿದ ನಂತರ ಒಂದು ವರ್ಷದ ಗ್ರಾಮೀಣ ಸೇವೆಯನ್ನು ಕಡ್ಡಾಯಗೊಳಿಸಲಾಗಿದೆ. ಅಖಿಲ ಭಾರತ ಕೋಟಾದಡಿ ಪದವಿ ಪಡೆದವರು ಮತ್ತು ಕರ್ನಾಟಕದಲ್ಲಿ ಪದವಿ ಪಡೆದ ಹೊರ ರಾಜ್ಯದವರು, ಸ್ವಂತ ರಾಜ್ಯದಲ್ಲೇ ಒಂದು ವರ್ಷದ ಗ್ರಾಮೀಣ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದೆ.ಗ್ರಾಮೀಣ ಸೇವೆ ಕಡ್ಡಾಯಗೊಳಿಸಿರುವ ಮಸೂದೆಯನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ರವಾನಿಸಿದ್ದರು. ಕೇಂದ್ರ ಸರ್ಕಾರವೂ ಆ ಮಸೂದೆಯನ್ನು ಒಪ್ಪಿದೆ. ರಾಷ್ಟ್ರಪತಿಗಳ ಅನುಮೋದನೆ ದೊರಕಿಸಿಕೊಡುವುದಾಗಿ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಗುಲಾಂ ನಬಿ ಆಜಾದ್ ಭರವಸೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.