ಶನಿವಾರ, ಜನವರಿ 28, 2023
19 °C

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಪ್ರಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಪ್ರಚಾರ

ಬೆಂಗಳೂರು: ಫೆಬ್ರುವರಿ 4ರಿಂದ ನಗರದಲ್ಲಿ ಆರಂಭವಾಗಲಿರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಟೊರಿಕ್ಷಾಗಳ ಮೂಲಕ ಅದ್ದೂರಿ ಪ್ರಚಾರ ನೀಡಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಿ, ಈ ಮೂಲಕ ನುಡಿ ಹಬ್ಬದ ಕಂಪನ್ನು ನಗರದೆಲ್ಲೆಡೆ ಪಸರಿಸಲು ತಯಾರಿ ನಡೆದಿದೆ. ಇದೇ ವೇಳೆ ಪರಿಷತ್ತಿನ ತೀರ್ಮಾನವನ್ನು ವಿವಿಧ ಆಟೊ ಚಾಲಕರ ಸಂಘಟನೆಗಳು ಸ್ವಾಗತಿಸಿವೆ.ಶ್ರೀಸಾಮಾನ್ಯರ ಸಾರಿಗೆ ಸಾಧನವಾದ ಆಟೊಗಳ ಮೂಲಕ ಪ್ರಚಾರ ಮಾಡಿದರೆ ಅನೇಕ ಜನರನ್ನು ತಲುಪಿದಂತಾಗುತ್ತದೆ ಎಂಬುದು ಪರಿಷತ್ತಿನ ನಿಲುವಾಗಿದೆ. ‘ಆಟೊಗಳು ಕನ್ನಡ ಬಾವುಟ ಹಾರಿಸಿದರೆ ನವೆಂಬರ್ ರಾಜ್ಯೋತ್ಸವ ಮರುಕಳಿಸಿದಂತಹ ವಾತಾವರಣ ನಿರ್ಮಾಣವಾಗುತ್ತದೆ. ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ ಎಂಬುದನ್ನು ಸಾರಲು ಇದೊಂದು ಉತ್ತಮ ಪ್ರಚಾರ ಮಾಧ್ಯಮವಾಗಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಡಾ. ನಲ್ಲೂರು ಪ್ರಸಾದ್ ತಿಳಿಸಿದ್ದಾರೆ.ಇತ್ತೀಚೆಗೆ ನಡೆದ ಸಮ್ಮೇಳನ ಸ್ವಾಗತ ಸಮಿತಿ ಸಭೆಯಲ್ಲಿ ಆಟೊ ಮೂಲಕ ಪ್ರಚಾರ ಕೈಗೊಳ್ಳಲು ನಿರ್ಧರಿಸಲಾಗಿದ್ದು ಫೆಬ್ರುವರಿ 1ರಂದು ಪ್ರಮುಖ ಆಟೊ ಚಾಲಕರ ಸಂಘಟನೆಗಳ ಸಭೆ ಕರೆಯಲಾಗಿದೆ. ಅದೇ ದಿನ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಗೃಹ ಸಚಿವ ಆರ್. ಅಶೋಕ ಅವರು ಸಾಹಿತ್ಯ ಸಮ್ಮೇಳನ ಆವರಣದಲ್ಲಿ ನೂರು ಆಟೊಗಳಿಗೆ ಸಾಂಕೇತಿಕವಾಗಿ ಕನ್ನಡ ಬಾವುಟ ಹಾಗೂ ಪ್ರಚಾರ ಸಾಮಗ್ರಿಗಳನ್ನು ವಿತರಣೆ ಮಾಡಲಿದ್ದಾರೆ.‘ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಆಟೊಗಳನ್ನು ಬಳಸಿಕೊಳ್ಳುವುದರಿಂದ ಸಮ್ಮೇಳನಕ್ಕೆ ವ್ಯಾಪಕ ಪ್ರಚಾರ ಕೊಡಬಹುದಾಗಿದೆ’ ಎಂದು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ.ಕೆ.ರಾಮೇಗೌಡ ಮನವಿ ಮಾಡಿದ್ದಾರೆ. ಇದೇ ವೇಳೆ ಏಳು ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಆಟೊ ಚಾಲಕರ ಸಂಘಟನೆಗಳು ಪರಿಷತ್ತಿನ ತೀರ್ಮಾನವನ್ನು ಸ್ವಾಗತಿಸಿವೆ.ಆದರ್ಶ ಆಟೊ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ ‘ಸಾಹಿತಿಗಳಿಗೆ ಹಾಗೂ ಪುಸ್ತಕಾಭಿಮಾನಿಗಳಿಗೆ ಆಟೊ ಚಾಲಕರು ಗೌರವ ಅರ್ಪಿಸುವ ವಿಶಿಷ್ಟ ಅವಕಾಶವನ್ನು ಪರಿಷತ್ತು ಒದಗಿಸಿದೆ. ಸಂಘಟನೆಯ ವ್ಯಾಪ್ತಿಯ ಎಲ್ಲಾ ಚಾಲಕರನ್ನು ಕರೆದು ಈ ಕುರಿತು ಚರ್ಚಿಸಲಾಗುವುದು’ ಎಂದು ತಿಳಿಸಿದರು.ಬೆಂಗಳೂರು ನಗರ ಆಟೊ ಚಾಲಕರ ಘಟಕದ ಅಧ್ಯಕ್ಷ ಕುಮಾರ್ ಮಾತನಾಡಿ ‘ನಲವತ್ತು ವರ್ಷಗಳ ಬಳಿಕ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಗರದ ಜನತೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ. ಕನ್ನಡಾಭಿಮಾನಿ ಆಟೊ ಚಾಲಕರು ಆದ್ಯ ಕರ್ತವ್ಯ ಎಂದು ತಿಳಿದು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.