ಸೋಮವಾರ, ಜನವರಿ 27, 2020
22 °C

80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ.ನಾ.ಡಿಸೋಜ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜನವರಿಯಲ್ಲಿ ಕೊಡಗಿನಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕಥೆ, ಕಾದಂಬರಿಕಾರ ಡಾ.ನಾ.ಡಿಸೋಜ ಅವರು ಮಂಗಳವಾರ ಆಯ್ಕೆಯಾಗಿದ್ದಾರೆ.

80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷತೆಯಲ್ಲಿ  ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಿಸೋಜ ಅವರ ಹೆಸರನ್ನು ಅಂತಿಮಗೊಳಿಸಲಾಯಿತು.

ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.ನಾ.ಡಿಸೋಜ ಪರಿಚಯ: ಕನ್ನಡದ ಪ್ರಸಿದ್ಧ ಮತ್ತು ಜನಪ್ರಿಯ ಸಾಹಿತಿಯಾದ ಡಿಸೋಜ ಅವರ ಸಹಜ ಸೃಜನಶೀಲತೆಯಿಂದ ಇದುವರೆಗೂ 37 ಕಾದಂಬರಿ, ನಾಲ್ಕು ನಾಟಕ, 37 ಮಕ್ಕಳ ಕೃತಿ ಹಾಗೂ ನೂರಾರು ಸಣ್ಣ ಕಥೆಗಳು, ಲೇಖನಗಳು, ವ್ಯಕ್ತಿ ಪರಿಚಯ, ಅಂಕಣ ಬರಹಗಳು ಸೃಷ್ಟಿಯಾಗಿವೆ. ಇದಕ್ಕಾಗಿ ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಬಂದಿವೆ.`ಕಾಡಿನ ಬೆಂಕಿ~, `ದ್ವೀಪ~ ಕೃತಿಗಳು ಸಿನಿಮಾ ಆಗಿ `ರಜತ ಕಮಲ~, `ಸ್ವರ್ಣ ಕಮಲ~ ಪ್ರಶಸ್ತಿಗಳಿಗೆ ಭಾಜನವಾಗಿವೆ.

ಮುಳುಗಡೆ ಬದುಕು, ಮಲೆನಾಡ ಹಾಡು-ಹಸೆ, ಹೋರಾಟ, ಬುಡಕಟ್ಟು ಜನಾಂಗದ ವಿಲಕ್ಷಣ-ವಿಶೇಷಗಳು `ನಾಡಿ~ ಬರಹದ ಪ್ರಧಾನ ನೆಲೆಗಳು.

ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ನಾ.ಡಿಸೋಜ ಇದುವರೆಗೂ 15 ಕಿರುಕಾದಂಬರಿ, 10 ನಾಟಕಗಳು, ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ `ಬೆಳಕಿನೊಡನೆ ಬಂತು ನೆನಪು~ ಮಕ್ಕಳ ಕಿರುಕಾದಂಬರಿಗೆ 1988ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇನ್ನೊಂದು ಕಿರುಕಾದಂಬರಿ `ಬೆಟ್ಟದ ಪುರದ ದಿಟ್ಟ ಮಕ್ಕಳು~ ಮಕ್ಕಳ ಸಿನಿಮಾ ಆಗಿದೆ.

 ಅವರ `ಮುಳುಗಡೆಯ ಊರಿಗೆ ಬಂದವರು~ ಎಂಬ ಮಕ್ಕಳ ಕಿರುಕಾದಂಬರಿ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ `ಬಾಲ ಸಾಹಿತ್ಯ ಪುರಸ್ಕಾರ~ಕ್ಕೆ ಪಾತ್ರವಾಗಿದೆ.

ನಾ.ಡಿಸೋಜ ಅವರು ಸಾಹಿತ್ಯ ರಚನೆ ಜತೆ ಹೋರಾಟಗಾರರಾಗಿಯೂ ಹೆಸರಾಗಿದ್ದಾರೆ. ಸಮಾಜದ ಪ್ರಸ್ತುತ ಬಿಕ್ಕಟ್ಟುಗಳಿಗೆ ಬರವಣಿಗೆ ಜತೆ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ. ನಾಡಿನ ಹಿತಕ್ಕೆ, ಆಶಯಗಳಿಗೆ ಧಕ್ಕೆ ಬಂದಾಗೆಲ್ಲ ನಾ.ಡಿಸೋಜರು `ಅಭಿವೃದ್ಧಿ~ಯ ಹರಿಕಾರರಿಗೆ ಮಾತಿನ ಪೆಟ್ಟು ನೀಡುತ್ತಾ ಬಂದಿದ್ದಾರೆ.

ಹಮ್ಮು-ಬಿಮ್ಮುಗಳಿಲ್ಲದ ಸಾದಾಸೀದಾ ಲೇಖಕ. ಮೃದು ಹೃದಯದ ಬಂಡಾಯಗಾರ. ಆದರೆ, ಖಚಿತ ನಿಲುವಿನ, ಕಠಿಣ ಬದ್ಧತೆಯ ಸಾಹಿತಿ. 

ಪ್ರತಿಕ್ರಿಯಿಸಿ (+)