ಭಾನುವಾರ, ಮಾರ್ಚ್ 7, 2021
20 °C
ಗ್ರಾಮೀಣ ಜನರ ಫ್ಲೋರೈಡ್‌ ಮುಕ್ತ ಬದುಕಿಗೆ ಹೊಸ ನಾಂದಿ

89 ನೀರು ಶುದ್ಧೀಕರಣ ಘಟಕ

ಪ್ರಜಾವಾಣಿ ವಾರ್ತೆ/ಎಲ್‌. ಮಂಜುನಾಥ Updated:

ಅಕ್ಷರ ಗಾತ್ರ : | |

89 ನೀರು ಶುದ್ಧೀಕರಣ ಘಟಕ

ದಾವಣಗೆರೆ: `ದಿನಾ ಉಪ್ಪಿನ ಅಂಶ ಇರುವ ನೀರು ಕುಡಿದು ಸಾಕಾಗಿತ್ತು. ಈಗ ನಮಗೆ ₨ 1ಕ್ಕೆ 10 ಲೀಟರ್ ಒಳ್ಳೇ ನೀರು ಸಿಗುತೈತಿ. ಮೊದಲು ನಾವು 1ಕಿಮೀ ದೂರ ಹೋಗಿ ಕುಡಿಯೋಕೆ ನೀರು ತರುತಿದ್ವಿ. ಈಗ ನಮ್ಮ ಮನೆಹತ್ರನೇ ಚಲೊ ನೀರು ಸಿಗುತೈತಿ. ಇದರಿಂದ ನಮಗೆ ತುಂಬಾನೇ ಅನುಕೂಲ ಆಗೈತಿ'.`ಮೊದಲು ಇಲ್ಲಿನ ಬೋರ್‌ವೆಲ್‌ ನೀರು ಕುಡಿಯೋಕೆ ಬೇಸರವಾಗುತ್ತಿತ್ತು. ಆದರೆ, ಸರ್ಕಾರದ ಯೋಜನೆಯಿಂದ ನಮಗೆ ಕುಡಿಯೋಕೆ ಚೆನ್ನಾಗಿರುವ ನೀರು ಸಿಗುತೈತಿ. ಇದರಿಂದ ಮಕ್ಕಳಿಗೆ, ವಯಸ್ಸಾದವರಿಗೆ ತುಂಬಾ ಉಪಯೋಗವಾಗೈತಿ'.–ಇದು ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಸಿಂಗ್ರಿಹಳ್ಳಿ ಗ್ರಾಮದಲ್ಲಿ ಸ್ಥಾಪನೆಯಾಗಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ₨ 1ಕ್ಕೆ 10 ಲೀಟರ್ ನೀರು ಪಡೆದ ಮಹಿಳೆಯರ ಮಾತು!ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ ಅಡಿಯಲ್ಲಿ ಅತಿಹೆಚ್ಚು ಫ್ಲೋರೈಡ್ ಹಾಗೂ ರಾಸಾಯನಿಕ ಅಂಶ ಇರುವ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಪ್ರಸ್ತುತ ಆಯಾ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರಿನ ವರದಾನವಾಗಿ ಪರಿಣಮಿಸಿದೆ.ಜಿಲ್ಲೆಯಲ್ಲಿ ಈಗಾಗಲೇ ಹೆಚ್ಚು ಫ್ಲೋರೈಡ್ ಹಾಗೂ ರಾಸಾಯನಿಕ ಅಂಶ ಇರುವ ಸುಮಾರು 89 ಗ್ರಾಮೀಣ ಪ್ರದೇಶಗಳನ್ನು ಪ್ರಸಕ್ತ ಸಾಲಿನಲ್ಲಿ ಗುರುತಿಸಲಾಗಿದ್ದು, ಇದೀಗ ಆ ಪ್ರದೇಶಗಳಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಯಮಿತ ಅಡಿಯಲ್ಲಿ ನೀರು ಶುದ್ಧೀಕರಣ ಘಟಕಗಳ ನಿರ್ಮಾಣದ ಸಿವಿಲ್ ಕಾಮಗಾರಿ ಭರದಿಂದ ಸಾಗಿದೆ.ದಾವಣಗೆರೆ ತಾಲ್ಲೂಕು ಸೇರಿದಂತೆ ಚನ್ನಗಿರಿ, ಹೊನ್ನಾಳಿ, ಹರಿಹರ, ಹರಪನಹಳ್ಳಿ ಮತ್ತು ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾಗೂ ಸುತ್ತಮುತ್ತಲಿನ ಹತ್ತಿರದ ಹಲವು ಗ್ರಾಮಗಳ ಜನವಸತಿ ಪ್ರದೇಶಗಳಿಗೆ ಒಂದರಂತೆ ನೀರಿನ ಶುದ್ಧೀಕರಣ ಘಟಕದ ಶೆಡ್‌ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ.ಹರಪನಹಳ್ಳಿ ತಾಲ್ಲೂಕು ಜಿಲ್ಲೆಯಲ್ಲಿಯೇ ಹೆಚ್ಚು ಫ್ಲೋರೈಡ್ ಹಾಗೂ ರಾಸಾಯನಿಕ ಅಂಶ ಹೊಂದಿರುವ ಗ್ರಾಮಗಳನ್ನು ಹೊಂದಿದ್ದು, ಈ ತಾಲ್ಲೂಕಿನ 32 ಗ್ರಾಮಗಳು ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಆಯ್ಕೆಯಾಗಿವೆ. ನಂತರದಲ್ಲಿ ಜಗಳೂರು ತಾಲ್ಲೂಕು (22 ಘಟಕಗಳು) 2ನೇ ಸ್ಥಾನದಲ್ಲಿದೆ.ಈ ಎರಡೂ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ 1.6ಮಿಲಿ ಗ್ರಾಂ ಪ್ರಮಾಣದಲ್ಲಿ ಅಧಿಕ ಫ್ಲೋರೈಡ್ ಮತ್ತು ನೈಟ್ರೆಟ್ ಅಂಶ ಕಂಡು ಬಂದಿದೆ ಎಂದು ದಾಖಲೆಗಳು ಸ್ಪಷ್ಟಪಡಿಸಿವೆ.‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 89 ಕುಡಿಯುವ ನೀರಿನ ಶುದ್ಧೀಕರಣ ಘಟಕಗಳು ಮಂಜೂರಾಗಿದ್ದು, ಅವುಗಳಿಗೆ ಸಂಬಂಧಿಸಿದ ಶೆಡ್‌ಗಳ ನಿರ್ಮಾಣ ಕಾಮಾಗಾರಿ ನಡೆಯುತ್ತಿದೆ. ಈಗಾಗಲೇ ದಾವಣಗೆರೆ ತಾಲ್ಲೂಕಿನ ಆವರಗೊಳ್ಳ, ಕುಕ್ಕುವಾಡ, ವಡ್ಡಿನಹಳ್ಳಿ ಮತ್ತು ಕುರ್ಕಿ ಸೇರಿದಂತೆ ಜಿಲ್ಲೆಯ ಇತರೆ ತಾಲ್ಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ 27  ಶೆಡ್‌ಗಳ ಕಾಮಗಾರಿ ಪೂರ್ಣವಾಗಿದ್ದು,

ನೀರಿನ ಶುದ್ಧೀಕರಣ ಯಂತ್ರ ಅಳವಡಿಕೆಯ (ಆರ್‌ಒ) ಹಂತದಲ್ಲಿವೆ. ಒಂದು ಶೆಡ್ ನಿರ್ಮಾಣ ಮಾಡಲು ಸುಮಾರು ₨ 5ಲಕ್ಷ ವೆಚ್ಚವಾಗುತ್ತದೆ. ಕೆಲವೆಡೆ ಜನವಸತಿ ಪ್ರದೇಶಗಳಲ್ಲಿ ಘಟಕ ನಿರ್ಮಿಸಲು ಜಾಗ ಸಕಾಲಕ್ಕೆ ದೊರೆಯುತ್ತಿಲ್ಲ. ದೊರೆತರೂ ಅದು ಭೂವ್ಯಾಜ್ಯ ತಕಾರಾರುಗಳಿಂದ ಕೂಡಿರುತ್ತದೆ. ಇನ್ನು ಕೆಲ ಗ್ರಾಮಗಳಲ್ಲಿ ಜನವಸತಿ ಪ್ರದೇಶದಿಂದ ದೂರ ಜಾಗ ಕೊಟ್ಟಿರುತ್ತಾರೆ. ಅಲ್ಲಿ ಘಟಕ ನಿರ್ಮಿಸಲು ಸ್ಥಳೀಯರು ಒಪ್ಪುವುದಿಲ್ಲ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಘಟಕ ನಿರ್ಮಾಣ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಉದ್ದೇಶಿತ ಯೋಜನೆಯ ಕಾಮಗಾರಿಯನ್ನು ಜ.14ರೊಳಗೆ ಮುಗಿಸುವಂತೆ ಸೂಚಿಸಲಾಗಿತ್ತು. ಜಾಗದ ಸಮಸ್ಯೆಯಿಂದಾಗಿ ಸ್ವಲ್ಪ ತಡವಾಗಿದೆ. ಆದರೂ ಶೀಘ್ರವಾಗಿ ಮುಗಿಸಿಕೊಡುತ್ತೇವೆ' ಎಂದು ಮಾಹಿತಿ ನೀಡಿದರು.ಕರ್ನಾಟಕ ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ನಿಯಮಿತದ ಉಪ ನಿರ್ದೇಶಕ ಎಸ್.ಎಂ.ರುದ್ರಪ್ಪ. ಒಟ್ಟಿನಲ್ಲಿ ಆದಷ್ಟು ಬೇಗ ಆರ್‌ಒ ಘಟಕಗಳನ್ನು ಆರಂಭಿಸಿ, ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎನ್ನುವುದು ಜಿಲ್ಲೆಯಲ್ಲಿ ಆರ್‌ಒ ಪ್ಲಾಂಟ್‌ ಸ್ಥಾಪನೆಗೆ ಆಯ್ಕೆಯಾಗಿರುವ ಗ್ರಾಮೀಣ ಪ್ರದೇಶಗಳ ಜನರ ಒತ್ತಾಯವಾಗಿದೆ.

ಶೀಘ್ರದಲ್ಲಿಯೇ ಜನಬಳಕೆಗೆ...

ಜಿಲ್ಲೆಯಲ್ಲಿ ಬಹುಗ್ರಾಮ ಯೋಜನೆ ಅಡಿ ಆರ್‌ಒ ಘಟಕಗಳ ಸ್ಥಾಪನೆ ಕಾಮಗಾರಿ ಭರದಿಂದ ನಡೆಯುತ್ತಿದೆ. ನಿಗದಿತ ಅವಧಿಯಲ್ಲಿಯೇ ಮುಗಿಸಿ, ಜನಬಳಕೆಗೆ ದೊರೆಯುವಂತೆ ಮಾಡ ಲಾಗುವುದು.

–ಎ.ಬಿ.ಹೇಮಚಂದ್ರ, ಸಿಇಒ,

ನಿತ್ಯ 2 ಸಾವಿರ ಲೀಟರ್ ನೀರು ಖರ್ಚು

ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಪಿಡಿಒ ಅವರ ಇಚ್ಛಾಸಕ್ತಿಯಿಂದಾಗಿ ಇಲ್ಲಿನ ಆರ್‌ಒ ಘಟಕವನ್ನು ಪಂಚಾಯ್ತಿಯ ವಿವಿಧ ಯೋಜನೆಯ ಅನುದಾನದ ಅಡಿಯಲ್ಲಿ ನಿರ್ಮಿಸಲಾಗಿದೆ. ಇದು ಸಿಂಗ್ರಿಹಳ್ಳಿ, ಸಿಂಗ್ರಿಹಳ್ಳಿಯ ದೊಡ್ಡ ತಾಂಡಾ, ಸಣ್ಣ ತಾಂಡಾ, ಉದಯಪುರ ತಾಂಡಾ, ಹಳ್ಳಿಕೆರೆ ಮತ್ತು ಹೊನ್ನೆನಹಳ್ಳಿಯ ಗ್ರಾಮಸ್ಥರಿಗೆ ತುಂಬಾ ಅನುಕೂಲವಾಗಿದೆ. ಇಲ್ಲಿ ನಿತ್ಯ ಸುಮಾರು 2ಸಾವಿರಕ್ಕೂ ಅಧಿಕ ಲೀಟರ್ ನೀರು ಖರ್ಚಾಗುತ್ತದೆ.

– ದುರುಗಪ್ಪ, ಭರತ್ ನಿರ್ಮಾಣ ಸ್ವಯಂ ಸೇವಾ ತಂಡದ ಸದಸ್ಯ, ಸಿಂಗ್ರಿಹಳ್ಳಿ.

ಮಂಜೂರಾಗಿರುವ ಘಟಕ

* ದಾವಣಗೆರೆ          10

* ಚನ್ನಗಿರಿ -           07

* ಹರಪನಹಳ್ಳಿ  -     32

* ಹರಿಹರ  -          09

* ಹೊನ್ನಾಳಿ           09

* ಜಗಳೂರು  -       22

  ಒಟ್ಟು                 89

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.