ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ನೌಕರರಿಗೆ ಪಿಂಚಣಿ

Last Updated 22 ಫೆಬ್ರುವರಿ 2011, 19:40 IST
ಅಕ್ಷರ ಗಾತ್ರ


ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಮೊದಲ ಬಾರಿಗೆ 60 ವರ್ಷಕ್ಕೆ ನಿವೃತ್ತಿ ವಯಸ್ಸನ್ನು ನಿಗದಿಪಡಿಸಿದ್ದು, ಅವರಿಗೆ ‘ವಿಶ್ರಾಂತ ಗೌರವ ಧನ ಯೋಜನೆ’ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಮಂಗಳವಾರ ಇಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಬರುವ ಮಾರ್ಚ್ 31ಕ್ಕೆ 60 ವರ್ಷ ಪೂರ್ಣಗೊಳ್ಳುವ ಸುಮಾರು ಮೂರು ಸಾವಿರ ಮಂದಿ ಒಟ್ಟಿಗೆ ನಿವೃತ್ತಿಯಾಗುತ್ತಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್.ಆಚಾರ್ಯ ಅವರು ಸುದ್ದಿಗಾರರಿಗೆ ತಿಳಿಸಿದರು.

ನಿವೃತ್ತಿ ಸಂದರ್ಭದಲ್ಲಿ ಕಾರ್ಯಕರ್ತೆಯರಿಗೆ ರೂ 50 ಸಾವಿರ ಮತ್ತು ಸಹಾಯಕಿಯರಿಗೆ 30 ಸಾವಿರ ರೂಪಾಯಿ ನಿವೃತ್ತಿ ಗೌರವ ಸಂಭಾವನೆ ನೀಡಲಾಗುತ್ತದೆ. ಇದಲ್ಲದೆ ಕಾರ್ಯಕರ್ತೆಯರಿಗೆ ಮಾಸಿಕ ರೂ 500 ಮತ್ತು ಸಹಾಯಕಿಯರಿಗೆ ರೂ 350 ನಿವೃತ್ತಿ ಗೌರವ ಧನ ನೀಡಲಾಗುತ್ತದೆ. ಸುಮಾರು 1.20 ಲಕ್ಷ ಕಾರ್ಯಕರ್ತೆಯರು/ ಸಹಾಯಕಿಯರಿಗೆ ಇದರ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಅಂಗನವಾಡಿ ನೌಕರರ ತೀವ್ರ ವಿರೋಧದ ನಡುವೆಯೂ ಸರ್ಕಾರ ‘ಎನ್‌ಪಿಎಸ್ (ಹೊಸ ಪಿಂಚಣಿ ಯೋಜನೆ) ಲೈಟ್’ ಅಡಿಯಲ್ಲಿಯೇ ಪಿಂಚಣಿ ಯೋಜನೆಯನ್ನು ರೂಪಿಸಿದ್ದು, ವಿಶ್ರಾಂತ ಗೌರವ ಧನ ಯೋಜನೆಗೆ ನೌಕರರು ಮತ್ತು ಸರ್ಕಾರ ಭರಿಸುವ ಸಮಪಾಲಿನ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹಾಕಲಾಗುತ್ತದೆ. ಈ ಹಣವನ್ನು ಷೇರು ಮಾರುಕಟ್ಟೆ ಬದಲು ಜೀವವಿಮಾ ನಿಗಮದಲ್ಲಿ ಇಡಬೇಕು ಎಂಬುದು ನೌಕರರ ಬೇಡಿಕೆಯಾಗಿದೆ.

ವಿಶ್ರಾಂತ ಗೌರವ ಧನ ಯೋಜನೆಗೆ ಕಾರ್ಯಕರ್ತೆಯರು ಮಾಸಿಕ ರೂ 150 ಮತ್ತು ಸಹಾಯಕಿಯರು ರೂ 75 ಭರಿಸಬೇಕು. ಇಷ್ಟೇ ಪ್ರಮಾಣದ ಹಣವನ್ನು ಸರ್ಕಾರ ಭರಿಸಲಿದೆ. ಈ ತಿಂಗಳಿಂದಲೇ ಜಾರಿಗೆ ಬರುವಂತೆ ನೌಕರರ ಗೌರವ ಧನದಲ್ಲಿ ಅವರ ಪಾಲಿನ ಹಣವನ್ನು ಕಡಿತ ಮಾಡಲಾಗುತ್ತದೆ. ಈ ಯೋಜನೆಗೆ ವಾರ್ಷಿಕ 9 ಕೋಟಿ ರೂಪಾಯಿ ಬೇಕಾಗುತ್ತದೆ ಎಂದು ಆಚಾರ್ಯ ಹೇಳಿದರು.

ಕೆರೆಗೆ ನೀರು: ಹೋದಿರಾಯನಹಳ್ಳ ಪಥ ಪರಿವರ್ತನೆ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಜಂಬದಹಳ್ಳ ಕೆರೆ ತುಂಬಿಸುವ 25.37 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕರ್ನಾಟಕ ನೀರಾವರಿ ನಿಗಮದ ಮೂಲಕ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತದೆ.

ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪಾರಂಪರಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ರೂಪಿಸಿರುವ 9 ಕೋಟಿ ರೂಪಾಯಿ ವೆಚ್ಚದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಕರಡು ನೀತಿಗೆ ಒಪ್ಪಿಗೆ: ಡಬ್ಬಿಂಗ್ ಚಿತ್ರಗಳಿಗೆ ಸಬ್ಸಿಡಿ ಕಡಿತ ಮಾಡುವುದು, ಪ್ರಶಸ್ತಿ ಮತ್ತು ಬಹುಮಾನಗಳ ವಿತರಣೆಗೆ ಏಕಗವಾಕ್ಷಿ ಯೋಜನೆ ರೂಪಿಸುವುದು ಸೇರಿದಂತೆ ಹಲವು ಬದಲಾವಣೆಗಳನ್ನು ಒಳಗೊಂಡ ಕನ್ನಡ ಚಲನಚಿತ್ರ ಕರಡು ನೀತಿಗೆ ಸಂಪುಟವು ಒಪ್ಪಿಗೆ ನೀಡಿದೆ.ರಾಜ್ಯದಲ್ಲಿನ ಜಲ್ಲಿ ಕ್ರಷರ್‌ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಸಂಬಂಧ ಸರ್ಕಾರದ ನಿಲುವನ್ನು ಎರಡು ತಿಂಗಳಲ್ಲಿ ತಿಳಿಸಲಾಗುತ್ತದೆ. ಈ ಸಂಬಂಧ ಹೈಕೋರ್ಟ್ 8 ಅಂಶಗಳ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದು, ಆ ಪ್ರಕಾರ ನಡೆದುಕೊಳ್ಳಲು ಸಾಧ್ಯವೇ ಎಂಬ ಬಗ್ಗೆ ಚರ್ಚೆ ನಡೆದಿದೆ.ಎಂದರು.

ಸಮಗ್ರ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನೀತಿ- 2011 ಜಾರಿ ಸಂಬಂಧ ಕಂದಾಯ, ಸಹಕಾರ, ಹಣಕಾಸು ಮತ್ತು ವಾಣಿಜ್ಯ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಯ ಸಲಹೆ ಕೇಳಲಾಗಿತ್ತು. ಸಹಕಾರ ಇಲಾಖೆ ಹೊರತುಪಡಿಸಿ ಉಳಿದ ಇಲಾಖೆಗಳ ವರದಿ ಬಂದಿದೆ. ಎಲ್ಲ ಇಲಾಖೆಗಳ ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಕೃಷಿಕರಿಗೆ ವರ್ಷ ಇಡೀ ಉದ್ಯೋಗ ಸಿಗಬೇಕು ಎಂಬುದು ಸರ್ಕಾರದ ಆಶಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT