ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ: ಪಾಟೀಲ

Last Updated 2 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆಯಾ ವಲಯಕ್ಕೆ ಅನುಗುಣವಾಗಿ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಬೇರೆ ಬೇರೆ ಪೌಷ್ಟಿಕ ಆಹಾರ ನೀಡುವ ಕಾರ್ಯಕ್ರಮಕ್ಕೆ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ.ಪಾಟೀಲ ತಿಳಿಸಿದರು.

ತಾತ್ಕಾಲಿಕ ವೇಳಾಪಟ್ಟಿ ಪ್ರಕಾರ ಇದೇ 6ರಂದು ಮೈಸೂರಿನಲ್ಲಿ ಇದಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. ಆ ಜಿಲ್ಲೆಯ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರೊಂದಿಗೆ ಚರ್ಚಿಸಿ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮೊದಲ ಹಂತದಲ್ಲಿ 45 ತಾಲ್ಲೂಕುಗಳಲ್ಲಿ ಇದು ಜಾರಿಗೊಳ್ಳಲಿದೆ. ಪ್ರತಿ ಮಗುವಿಗೆ ನೀಡುವ ಆಹಾರಕ್ಕೆ ರೂ 4.50 ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಅಲ್ಲದೆ ಇದಕ್ಕಾಗಿ ನೀಡುವ ಸಹಾಯಧನವನ್ನು ಪ್ರತಿ ಮಗುವಿಗೆ ಮೂರು ರೂಪಾಯಿ ಜಾಸ್ತಿ ಮಾಡುಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

`ರವೆ ಉಂಡೆ, ರಾಗಿ, ಅಕ್ಕಿ ಪಾಯಸ, ಅವಲಕ್ಕಿ ಮಿಶ್ರಣ, ಪುಳಿಯೋಗರೆ, ಚಿತ್ರಾನ್ನ, ಅನ್ನ ಸಂಬಾರು ಇತ್ಯಾದಿಗಳನ್ನು ಮಕ್ಕಳಿಗೆ ನೀಡಲಾಗುವುದು. ಇದರ ಜೊತೆಗೆ ಚಪಾತಿ, ರಾಗಿಮುದ್ದೆಯನ್ನು ಗರ್ಭಿಣಿ, ಬಾಣಂತಿಯರಿಗೆ ನೀಡುತ್ತೇವೆ~ ಎಂದು ತಿಳಿಸಿದರು.

ಮಕ್ಕಳಲ್ಲಿ ಪೌಷ್ಟಿಕಾಂಶವನ್ನು ಹೆಚ್ಚಿಸುವ ದೃಷ್ಟಿಯಿಂದ ತುಮಕೂರು ಜಿಲ್ಲೆಯ ಹತ್ತು ಅಂಗನವಾಡಿ ಕೇಂದ್ರಗಳಲ್ಲಿ `ಸ್ಪಿರುಲಿನ~ ಮಾತ್ರೆಯನ್ನು ಉಚಿತವಾಗಿ ಎರಡು ತಿಂಗಳ ಕಾಲ ನೀಡಲಾಗುತ್ತದೆ. ಇದರ ಫಲಿತಾಂಶವನ್ನು ಆಧರಿಸಿ ಬೇರೆ ಕಡೆಗೂ ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.

2009-10ನೇ ಸಾಲಿನವರೆಗಿನ ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಬಾಂಡ್ ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT