ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಪ್ರತ್ಯೇಕ ನಿಗಮ ಮರೀಚಿಕೆ?

ಮೂವರು ಮುಖ್ಯಮಂತ್ರಿಗಳಾದರೂ ಈಡೇರದ ಬೇಡಿಕೆ
Last Updated 12 ಡಿಸೆಂಬರ್ 2012, 10:26 IST
ಅಕ್ಷರ ಗಾತ್ರ

ಯಾದಗಿರಿ: ಅಂಗವಿಕಲರ ನೆನಪು ಮತ್ತೆ ಮರುಕಳಿಸಿದೆ. ಡಿ.3 ವಿಶ್ವ ಅಂಗವಿಕಲರ ದಿನಾಚರಣೆ. ಅಂಗವಿಕಲರ ದಿನವನ್ನು ಆಚರಿಸುವ ಸಿದ್ಧತೆಗಳು ನಡೆಯುತ್ತಿವೆ. ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್‌ರ ನಿಧನದಿಂದಾಗಿ ಡಿ.3 ರಂದು ನಡೆಯಬೇಕಿದ್ದ ಅಂಗವಿಕಲರ ದಿನಾಚರಣೆ  2-3 ದಿನಗಳನ್ನು ಆಯೋಜಿಸುವ ಸಾಧ್ಯತೆ ಇದೆ.

ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ನಡೆಯುವುದು ಕೇವಲ ಎರಡು ಗಂಟೆ. ಭಾಷಣದುದ್ದಕ್ಕೂ ಅಂಗವಿಕಲರಿಗೆ ಇರುವ ಸೌಲಭ್ಯಗಳು, ಸರ್ಕಾರ ನೀಡಿರುವ ಸವಲತ್ತುಗಳ ಬಗ್ಗೆ ವಿವರಣೆ ಕೇಳಿ ಬರುತ್ತದೆ. ಕಾರ್ಯಕ್ರಮ ಮುಗಿದ ನಂತರ ಅಂಗವಿಕಲರ ಬಗೆಗಿನ ಕಾಳಜಿಯೂ ಮರೆಯಾಗುತ್ತದೆ. ನವೆಂಬರ್ ತಿಂಗಳಿನ ಕನ್ನಡ ಪ್ರೇಮದಂತೆ, ಡಿಸೆಂಬರ್ ತಿಂಗಳಲ್ಲಿ ಮಾತ್ರ ಅಂಗವಿಕಲರ ಬಗ್ಗೆ ಚರ್ಚೆಗಳು ಆರಂಭವಾಗುತ್ತವೆ.

ರಾಜಕೀಯ ಬದಲಾವಣೆ, ಹಲವಾರು ವಿವಾದಗಳ ನೆರಳಲ್ಲಿ ಅಂಗವಿಕಲರ ಬೇಡಿಕೆಗಳು ಪಕ್ಕಕ್ಕೆ ಸರಿಯುತ್ತಿವೆ. ಅಂಗವಿಕಲರ ದಿನಕ್ಕೆ ಸೀಮಿತವಾಗುವ ಭರವಸೆಗಳು ಈಗಲೂ ಗಗನ ಕುಸುಮವಾಗಿವೆ ಎಂದು ಅಂಗವಿಕಲರು ಅಳಲು ತೋಡಿಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ 2009 ರ ಡಿ. 3 ರಂದು ಬೆಂಗಳೂರಿನಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ನಡೆಯಿತು. ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಅಂಗವಿಕಲರಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸುವುದಾಗಿ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದರು. ಆದರೆ 3 ವರ್ಷ ಕಳೆದರೂ, ನಿಗಮ ಸ್ಥಾಪಿಸುವ ನಿಟ್ಟಿನಲ್ಲಿ ಯಾವುದೇ ಬೆಳವಣೆಗೆಗಳು ಕಂಡು ಬಂದಿಲ್ಲ ಎಂದು ಹೇಳುತ್ತಾರೆ ಅಂಗವಿಕಲರ ಹೋರಾಟ ಸಮಿತಿ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಸಂಗನಗೌಡ ಧನರೆಡ್ಡಿ.

ಸದ್ಯಕ್ಕೆ ಅಂಗವಿಕಲರ ಇಲಾಖೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಆಧೀನಕ್ಕೆ ಒಳಪಡಿಸಲಾಗಿದೆ. ಈ ಇಲಾಖೆಯಲ್ಲಿಯೇ ಹಲವಾರು ಸಮಸ್ಯೆಗಳಿದ್ದು, ಅಂಗವಿಕಲರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸಮಯವೇ ಇಲ್ಲದಾಗಿದೆ. ಇದರಿಂದಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸುವಂತೆ ಮಾಡುತ್ತಿರುವ ಮನವಿಗಳು ವ್ಯರ್ಥವಾಗುತ್ತಿವೆ ಎಂದು ದೂರುತ್ತಾರೆ.

ಜಿಲ್ಲೆಯಲ್ಲಿ 22 ಸಾವಿರ ಅಂಗವಿಕಲರು
2001 ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 9,40,643 ಅಂಗವಿಕಲರಿದ್ದು, 2011 ರ ಜನಗಣತಿಯ ಪ್ರಕಾರ ಸಂಖ್ಯೆ 18 ರಿಂದ 20 ಲಕ್ಷಕ್ಕೆ ಏರಿಕೆಯಾಗಿದೆ. ಸರ್ಕಾರ 2007 ರಲ್ಲಿ ಕೈಗೊಂಡ ಅಂಗವಿಕಲರ ಅಂದಾಜು ಗಣತಿಯಲ್ಲಿ ಒಟ್ಟು ಜನಸಂಖ್ಯೆಯ ಶೇ.5 ರಿಂದ 6 ರಷ್ಟು ಅಂಗವಿಕಲರಿದ್ದಾರೆ ಎಂದಿದೆ. 2001 ರಲ್ಲಿ ರಾಜ್ಯದ ಜನಸಂಖ್ಯೆ 5.27 ಕೋಟಿ ಇದ್ದು, ಇದರಲ್ಲಿ ಶೇ. 5 ರಷ್ಟು ಎಂದರೆ ಅಂಗವಿಕಲರ ಸಂಖ್ಯೆ 30 ಲಕ್ಷದಷ್ಟಾಗುತ್ತದೆ ಎಂದು ಸಂಗನಗೌಡ ಹೇಳುತ್ತಾರೆ.

ಯಾದಗಿರಿ ಜಿಲ್ಲೆಯಲ್ಲಿ ಸುಮಾರು 22 ಸಾವಿರಕ್ಕಿಂತಲೂ ಅಧಿಕ ವಿವಿಧ ಬಗೆಯ ಅಂಗವಿಕಲರಿದ್ದು, ಇಲ್ಲಿ ಸರಿಯಾದ ಸೌಲಭ್ಯಗಳು ಸಿಕ್ಕಿಲ್ಲ. ಇದರ ಜೊತೆಗೆ ಜಿಲ್ಲೆಯಾಗಿ 3 ವರ್ಷ ಕಳೆಯುತ್ತ ಬಂದರೂ ಅಂಗವಿಕಲರ ಕಲ್ಯಾಣ ಅಧಿಕಾರಿಯ ಹುದ್ದೆಗೆ ಕಾಯಂ ಅಧಿಕಾರಿಯ ನೇಮಕ ಕೂಡ ಆಗಿಲ್ಲ. ಪ್ರತಿ ಸ್ಥಳೀಯ ಸಂಸ್ಥೆ, ಪಂಚಾಯತಿಯ ಅನುದಾನದಲ್ಲಿ ಶೇ. 3 ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಡಬೇಕು ಎಂಬ ನಿಯಮ ಕಟ್ಟು ನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯದ ಅಂಗವಿಕಲರ ಆಯುಕ್ತ ರಾಜಣ್ಣ ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಪಂಚಾಯಿತಿಯಲ್ಲಿ ಅನುದಾನ ನೀಡಿಲ್ಲ. ವಸತಿ ಯೋಜನೆಯಡಿ ಖೊಟ್ಟಿ ದಾಖಲಾತಿ ಸೃಷ್ಟಿಸಿ ಸುಮಾರು ವರ್ಷಗಳಿಂದ ಅಂಗವಿಲಕರ ಮನೆಗಳು ಬೇರೆಯವರ ಪಾಲಾಗುತ್ತಿದ್ದು, ಇಲ್ಲಿಯ ಜನಪ್ರತಿನಿಧಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ದೂರುತ್ತಾರೆ.

1995 ರಿಂದ ಖಾಲಿ ಇರುವ 20 ಸಾವಿರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ಪ್ರತಿ ವರ್ಷ ಅಂಗವಿಕಲರ ಸಾಧನ, ಸಲಕರಣೆಗಳಿಗಾಗಿ ರೂ.500 ಕೋಟಿ ಮೀಸಲಿಡಬೇಕು. ಹೈದರಾಬಾದ್ ಕರ್ನಾಟಕ ಭಾಗದ ಅಂಗವಿಕಲರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಈ ಎಲ್ಲ ಬೇಡಿಕೆಗಳ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸುತ್ತಾರೆ.

ಅಂಗವಿಕಲರ ಪುನರ್ವವಸತಿ ಕಲ್ಪಿಸುವುದಕ್ಕಾಗಿ ಪ್ರತಿಯೊಂದು ಜಿಲ್ಲೆಯಲ್ಲಿ ಡಿಡಿಆರ್‌ಸಿ ಯೋಜನೆ ಇಲ್ಲಿಯವರೆಗೆ ಯಾದಗಿರಿ ಜಿಲ್ಲೆಯಲ್ಲಿ ಜಾರಿಯಾಗಿಲ್ಲ. ಇದಕ್ಕೆ ಸಂಬಂಧಪಟ್ಟ ಇಲಾಖೆಯವರ ಬೇಜಬ್ದಾರಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಯೋಜನೆ ಜಿಲ್ಲೆಯಲ್ಲಿ ಜಾರಿಗೆ ಬಂದಲ್ಲಿ ಅಂಗವಿಕಲರ ಕೃತಕ ಅಂಗಾಂಗ ಜೋಡಣೆ, ತ್ರಿಚಕ್ರ ವಾಹನ, ಉರುಗೋಲು, ಕ್ಯಾಲಿಪರ್ಸ್‌ಗಳನ್ನು ಒದಗಿಸಿ ಕೊಡಲು ಅನುಕೂಲವಾಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಸರ್ಕಾರವೂ ಇಲ್ಲಿ ಕಾಯಂ ಅಧಿಕಾರಿಯನ್ನು ನೇಮಕ ಮಾಡಬೇಕು. ಜಿಲ್ಲೆಯ ಅಂಗವಿಕಲರ ಬವಣೆಗಳನ್ನು ನಿವಾರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT