ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಚೆ ನೌಕರರ ಮುಷ್ಕರ: ಸೇವೆಯಲ್ಲಿ ವ್ಯತ್ಯಯ

Last Updated 13 ಡಿಸೆಂಬರ್ 2012, 9:55 IST
ಅಕ್ಷರ ಗಾತ್ರ

ಕಾರವಾರ: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಅಂಚೆ ನೌಕರರು ಬುಧವಾರ ಕರ್ತವ್ಯಕ್ಕೆ ಗೈರಾಗಿದ್ದರಿಂದ ಜಿಲ್ಲೆಯಾದ್ಯಂತ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.

ನೌಕರರ ಪ್ರತಿಭಟನೆಯ ಕುರಿತು ಮಾಹಿತಿ ಇಲ್ಲದಿದ್ದರಿಂದ ಅಂಚೆ ಕಚೇರಿಗೆ ಬಂದ ಗ್ರಾಹಕರು ಸೇವೆಗಳನ್ನು ಪಡೆಯಲು ಪರದಾಡಿದರು. ಕಚೇರಿಗಳಲ್ಲಿ ಪ್ರೊಬೆಷನರಿ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂತು.

ಇಲ್ಲಿಯ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅಖಿಲ ಭಾರತ ಅಂಚೆ ನೌಕರರ ಸಂಘದ ಕಾರವಾರ ಉಪವಿಭಾಗ ಘಟಕದ ನೌಕರರು, ಏಳನೇ ವೇತನ ಆಯೋಗವನ್ನು ತಕ್ಷಣವೇ ರಚನೆ ಮಾಡಬೇಕು, ಶೇ 50ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.

ಅನುಕಂಪ ಆಧಾರಿತ ನೇಮಕಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಹೊಸ ಪಿಂಚಣಿ ನೀತಿಯನ್ನು ರದ್ದುಗೊಳಿಸಬೇಕು, ಹುದ್ದೆಗಳ ಭರ್ತಿ ಹಾಗೂ ಹೊಸ ಹುದ್ದೆಗಳ ಸೃಷ್ಟಿಯ ಮೇಲಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ನೌಕರರು ಒತ್ತಾಯಿಸಿದರು.

ದಿನಗೂಲಿ ನೌಕರರು ಹಾಗೂ ಗ್ರಾಮೀಣ ಅಂಚೆ ಸೇವಕರನ್ನು ಖಾಯಂಗೊಳಿಸಬೇಕು, ಬೋನಸ್ ಮಿತಿಯನ್ನು ತೆಗೆದು ಹಾಕಬೇಕು. ರಾತ್ರಿ ಪಾಳಿ ಭತ್ಯೆಯನ್ನು ರೈಲ್ವೆ ಇಲಾಖೆಯೊಂದಿಗೆ ಸಮನ್ವಯಗೊಳಿಸಬೇಕು, ಮುಷ್ಕರವನ್ನು ಮೂಲಭೂತ ಹಕ್ಕಾಗಿ ಮಾರ್ಪಡಿಸಬೇಕು, ನೌಕರರ ಸಂಖ್ಯೆ ಕಡಿತಗೊಳಿಸುವುದನ್ನು ನಿಲ್ಲಿಸಬೇಕು ಹಾಗೂ ಹೊರಗುತ್ತಿಗೆ ನೀಡಬಾರದು ಎಂದು ನೌಕರರು ಆಗ್ರಹಿಸಿದರು.

ನೌಕರರ ಸಂಘದ ಅಧ್ಯಕ್ಷ ಎಮ್.ಎಲ್.ನಾಯ್ಕ, ಉಪಾಧ್ಯಕ್ಷ ನಿರಂಜನ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಶಿರಸಿ ವರದಿ
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕೇಂದ್ರ ಸರ್ಕಾರಿ ನೌಕರರ ಸಂಘಗಳು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಶಿರಸಿ ಪ್ರಧಾನ ಅಂಚೆ ಕಚೇರಿಯಲ್ಲಿ 21 ಮಂದಿ ಸಿ ದರ್ಜೆ ನೌಕರರು ಹಾಗೂ ಒಂಬತ್ತು ಮಂದಿ ಪೋಸ್ಟ್‌ಮನ್ ಭಾಗವಹಿಸಿದ್ದರು.

ಮುಷ್ಕರದಲ್ಲಿ ಸಂಘದ ಮುಖಂಡರಾದ ಜಿ.ಎಸ್.ಕುಲಕರ್ಣಿ, ಆರ್.ಜಿ. ಕಲಭಾಗ, ಎಸ್.ಎಂ.ಗೌಡ, ರಾಮು ಇ ಹಾಗೂ ಪದಾಧಿಕಾರಿ ಗಳು ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT