ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಬಂತು ಸರ್ಕಾರಿ ಸೈಕಲ್!

Last Updated 18 ಜೂನ್ 2011, 8:35 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗೆ ಅಂತೂ ಸರ್ಕಾರಿ ಸೈಕಲ್‌ಗಳ ಮೇಲೆ ಸವಾರಿ ಮಾಡುವ ಭಾಗ್ಯ ಬಂದಿದೆ. ಸರ್ಕಾರ ಈ ವರ್ಷ ಸೈಕಲ್ ವಿತರಣೆಗೆ ಮುಂದಾಗಿದ್ದು. ಜಿಲ್ಲೆಗೆ ಅಗತ್ಯವಾದ ಸೈಕಲ್‌ಗಳನ್ನು ನೀಡಿದೆ. ಸದ್ಯ ಅದರ ಬಿಡಿ ಭಾಗಗಳನ್ನು ಒಟ್ಟುಗೂಡಿಸುವ ಕಾರ್ಯ ನಡೆದಿದೆ. ಇನ್ನು ಕೆಲವು ದಿನಗಳಲ್ಲಿ ಫಲಾನುಭವಿಗಳಿಗೆ ವಿತರಣೆ ಕಾರ್ಯ ಆರಂಭಗೊಳ್ಳಲಿದೆ.

ಆದರೆ ಈಗ ಬಂದಿರುವುದು ಈ ವರ್ಷದ ಸೈಕಲ್‌ಗಳಲ್ಲ. 2010-11ನೇ ಸಾಲಿನಲ್ಲಿ ವಿತರಿಸಬೇಕಿದ್ದ ಸೈಕಲ್‌ಗಳು ಎನ್ನುವುದು ಗಮನಾರ್ಹ ಅಂಶ. ಕಳೆದ ವರ್ಷ ಟೆಂಡರ್ ಪ್ರಕ್ರಿಯೆಯಲ್ಲಿನ ಸಮಸ್ಯೆ ಹಾಗೂ ಇನ್ನಿತರ ಕಾರಣ ಗಳಿಂದಾಗಿ ಸರ್ಕಾರ ಪ್ರೌಢಶಾಲೆ ಮಕ್ಕಳಿಗೆ ಸೈಕಲ್ ವಿತರಣೆಗೆ ಮುಂದಾಗಿರಲಿಲ್ಲ. ನಂತರ ಬೈಸಿಕಲ್ ಬದಲಿಗೆ ನಗದು ವಿತರಿಸಲು ಮನಸ್ಸು ಮಾಡಿದ್ದ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಈ ಬಾರಿ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದಂತೆ ಬೈಸಿಕಲ್‌ಗಳು ಸರ್ಕಾರಿ ಶಾಲೆಗಳಿಗೆ ಬಂದು ಸೇರಿವೆ.

ಜಿಲ್ಲೆಯಲ್ಲಿ 2010-11ನೇ ಸಾಲಿನಲ್ಲಿ ಒಟ್ಟು 13,720 ಸೈಕಲ್‌ಗಳಿಗೆ ಬೇಡಿಕೆ ಇಡಲಾಗಿತ್ತು. ಈಗ ಸರ್ಕಾರ ಈ ಸೈಕಲ್‌ಗಳನ್ನು ಮಾತ್ರವೇ ನೀಡಿದೆ. ಪ್ರಸ್ತುತ 9ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳು ಈ ಸೈಕಲ್‌ಗಳ ಪ್ರಯೋಜನ ಪಡೆಯಲಿದ್ದಾರೆ.

ಗದಗ ಶಹರ ಶೈಕ್ಷಣಿಕ ವಿಭಾಗದಲ್ಲಿ 2010-11ನೇ ಸಾಲಿನಲ್ಲಿ ಒಟ್ಟು 2370 ಸೈಕಲ್‌ಗಳಿಗೆ ಬೇಡಿಕೆ ಇತ್ತು. ಈ ಪೈಕಿ  ಪ್ರಸ್ತುತ 2043 ಸೈಕಲ್‌ಗಳನ್ನು ನೀಡಲಾಗುತ್ತಿದೆ. ಉಳಿದ ಸೈಕಲ್‌ಗಳನ್ನು ಇನ್ನಿತರ ವಿಭಾಗಗಳಿಂದ ಹೊಂದಿಸಲು ಚಿಂತಿಸಲಾಗಿದೆ. ಗದಗ ಗ್ರಾಮೀಣ ವಿಭಾಗದಲ್ಲಿ 2302 ಸೈಕಲ್‌ಗಳಿಗೆ ಬೇಡಿಕೆ ಇತ್ತು. ಈ ಪ್ರಮಾಣದ ಸೈಕಲ್‌ಗಳು ವಿಭಾಗಕ್ಕೆ ಸದ್ಯ ಲಭ್ಯವಾಗಲಿವೆ.

ಕೆಲವು ದಿನಗಳಲ್ಲಿ ವಿತರಣೆ

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿಗದಿತ ಪ್ರಮಾಣದ ಸೈಕಲ್‌ಗಳು ಬಂದು ಸೇರಿವೆ. ವಿಭಾಗವಾರು ಹಂಚಿಕೆ ಕಾರ್ಯ ಇನ್ನೂ ನಡೆದಿದೆ. ಸದ್ಯ ನಗರ ವಿಭಾಗಕ್ಕೆ ಸೈಕಲ್‌ಗಳನ್ನು ಪೂರೈಕೆ ಮಾಡಲಾಗಿದೆ. ಇನ್ನು ವಾರದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ಒದಗಿಸಲಾಗುವುದು ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಬಿ. ಬೆನಕೊಪ್ಪ ತಿಳಿಸಿದರು. ಇನ್ನೂ ಗ್ರಾಮೀಣ, ಹಾಗೂ ತಾಲ್ಲೂಕುಗಳ ಶಾಲೆಗಳಿಗೆ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
 ವಿತರಣೆ ಸದ್ಯಕ್ಕಿಲ್ಲ

ಕಳೆದ ವರ್ಷ ಬರಬೇಕಿದ್ದ ಸೈಕಲ್‌ಗಳು ಈಗಷ್ಟೇ ಕೈ ಸೇರಿರುವುದರಿಂದ 2011-12ನೇ ಸಾಲಿನ ವಿತರಣೆ ಕಾರ್ಯ ವಿಳಂಬವಾಗುವ ಸಾಧ್ಯತೆಗಳಿವೆ. ಈ ವರ್ಷ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ವರ್ಷಕ್ಕಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ವಿತರಣೆಗೆಂದು ಒಟ್ಟು 14,031 ಸೈಕಲ್‌ಗಳಿಗೆ ಬೇಡಿಕೆ ಇಟ್ಟಿದೆ. ಇದಲ್ಲದೆ ಅನುದಾನಿತ ಶಾಲೆಗಳಿಗೆ ಬೇರೆ ಪ್ರಸ್ತಾವನೆ ಸಲ್ಲಿಸಲಾಗಿದೆ.

`ಪ್ರಸಕ್ತ ವರ್ಷ ಶೈಕ್ಷಣಿಕ ವರ್ಷಕ್ಕೆ ಸೈಕಲ್ ಪೂರೈಕೆ ಸಂಬಂಧ ಸರ್ಕಾರದಿಂದ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ. ಸದ್ಯ 2010-11ನೇ ಸಾಲಿನ ಸೈಕಲ್ ವಿತರಣೆ ಕಾರ್ಯ ನಡೆಯುತ್ತಿದೆ~ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಸುನಂದಾ ಮೂಗನೂರ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT