ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೂ ಸಿಕ್ತು ಗುಲಾಬಿಗೊಂದು ಮಾರ್ಕೆಟ್...

Last Updated 12 ಆಗಸ್ಟ್ 2012, 5:20 IST
ಅಕ್ಷರ ಗಾತ್ರ

ಭದ್ರಾವತಿ: `ಬೆಳಗಿನ ಮೈ ಮುದುಡಿಸುವ ಚಳಿ... ಜಿಟಿ, ಜಿಟಿ ಮಳೆ... ಆಶ್ರಯಕ್ಕೆ ಕೊಡೆ, ಮತ್ತೊಂದು ಕೈಯಲ್ಲಿ ನೀಲಿ, ಕಪ್ಪು, ಬಿಳಿ ಪ್ಲಾಸ್ಟಿಕ್ ಚೀಲ ಹಿಡಿದ ಮಂದಿ ಸೀದಾ ಅಡಿಕೆ ಮರದಿಂದ ನಿರ್ಮಿಸಿದ ತಗಡಿನ ಶೆಡ್ ಒಳಗೆ ಹೋಗಿ, ಅಲ್ಲಿದ್ದ ಹಾಸುಗಲ್ಲಿನ ಮೇಲೆ ನಳ, ನಳಿಸುವ ಗುಲಾಬಿಯನ್ನು ಸುರಿಯುತ್ತಿದ್ದರು~.

-ಇದು ತಾಲ್ಲೂಕಿನ ಅರಸನಘಟ್ಟ ಗ್ರಾಮದ ಬಸ್‌ನಿಲ್ದಾಣ ಪಕ್ಕದ ಶೆಡ್‌ನಲ್ಲಿ ಪ್ರತಿದಿನ ಬೆಳಿಗ್ಗೆ 6ರಿಂದ 8.30ರ ವರೆಗೆ ನಡೆಯುವ ಗುಲಾಬಿ ಮಾರ್ಕೆಟ್ ಚಟುವಟಿಕೆ. ಹೌದು! ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಲಾಭ ಪಡೆದ ಸ್ವಸಹಾಯ ಗುಂಪಿನ ತಂಡ ಇಲ್ಲಿ `ಪ್ರಗತಿ ಬಂಧು ರೈತ ಪುಷ್ಪ ಸಂಗ್ರಹಣಾ ಕೇಂದ್ರ~ ನಡೆಸಿದೆ.

ಇಲ್ಲಿನ ಕೆಲಮಂದಿ ಬೆಳೆದ ಗುಲಾಬಿಗೆ ಸೂಕ್ತ ಬೆಲೆ ಸಿಗದೆ, ಸಿಕ್ಕ ಬೆಲೆಗೆ ಕೆಂಗುಲಾಬಿ ಮಾರುತ್ತಾ, ಈ ಕೃಷಿಯಿಂದ ದೂರ ಸರಿಯುವ ನಿರ್ಧಾರ ಮಾಡಿದ್ದರು. ಆದರೆ, ಇದಕ್ಕೆ ಅವಕಾಶ ಕೊಡದ ರೀತಿಯಲ್ಲಿ ದಾವಣಗೆರೆ, ಚಿತ್ರದುರ್ಗದ ಮಾರ್ಕೆಟ್‌ಗೆ ನೇರವಾಗಿ ಗುಲಾಬಿ ಮಾರಾಟ ಮಾಡುವ ವ್ಯವಸ್ಥೆ ಆರಂಭವಾದ ನಂತರ ಇದರತ್ತ ಆಸಕ್ತಿ ಬೆಳೆಸಿಕೊಳ್ಳುವ ಮನಸ್ಸು ಗ್ರಾಮದಲ್ಲಿ ಸಾಕಷ್ಟು ಹೆಚ್ಚಿದೆ.

10ರಿಂದ ಸಾವಿರದ ತನಕ ಗುಲಾಬಿ, ಡಚ್ ತಳಿ ಹೂಗಳನ್ನು ಈ ಮಾರುಕಟ್ಟೆಗೆ ತರುವ 45ರಿಂದ 48ಜನರು ಪ್ರತಿದಿನ ತಮ್ಮ ತೋಟದಲ್ಲಿ ಬೆಳೆದ ಹೂಗಳನ್ನು ಇಲ್ಲಿಗೆ ನೀಡುವ ಜತೆಗೆ, ಅದನ್ನು ಏಣಿಕೆ ಮಾಡಿ, ತಮ್ಮ ಪಾಸ್ ಪುಸ್ತಕದಲ್ಲಿ ನಮೂದು ಮಾಡಿಸಿಕೊಂಡು ಹೋಗುತ್ತಾರೆ.

ಪ್ರತಿಯೊಬ್ಬರ ಹೂವಿನ ಸಂಖ್ಯೆ ನಮೂದು ಮಾಡಿ, ಅದನ್ನು ಬಸ್ ಮೂಲಕ ರವಾನಿಸುವ ಕೆಲಸ ಮಾಡುವ ಒಬ್ಬ ಯುವಕನಿಗೆ ಸಂಬಳವನ್ನು ಸಹ ಈ ಕೇಂದ್ರ ನೀಡುತ್ತದೆ.

ನೇರ ಮಾರುಕಟ್ಟೆ: ಈ ವ್ಯವಸ್ಥೆ ಬರುವ ಮುನ್ನ ಗುಲಾಬಿ ಬೆಳೆದ ಮಂದಿ ಅದನ್ನು ಕವರ್‌ನಲ್ಲಿ ತುಂಬಿ ಎಂಟು ಕಿ.ಮೀ. ತೆರಳಿ, ಬಸ್‌ಗೆ ಕೊಡಬೇಕಿತ್ತು. ಆಗ ದಾವಣಗೆರೆ, ಚಿತ್ರದುರ್ಗ ಮಾರ್ಕೆಟ್‌ನಲ್ಲಿ ನಡೆಯುತ್ತಿದ್ದ ಹೂವಿನ ಬೆಲೆ ಇವರಿಗೆ ತಿಳಿಯದೆ, ಅವರು ಕೊಟ್ಟ ಹಣ ಪಡೆಯಬೇಕಿತ್ತು.

`ಇದಕ್ಕೆ ಕಡಿವಾಣ ಹಾಕಿ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಿ, ದೈನಂದಿನ ಮಾರುಕಟ್ಟೆ ಸ್ಥಿತಿಗತಿ ರೈತರಿಗೆ ತಿಳಿಯಬೇಕು ಎಂಬ ಕಾರಣಕ್ಕೆ ಸ್ವಸಹಾಯ ಗುಂಪಿನ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾದೆವು~ ಎನ್ನುತ್ತಾರೆ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ವಿನಯ್‌ಕುಮಾರ್.

`ದಾವಣಗೆರೆ, ಚಿತ್ರದುರ್ಗ ಮಾರುಕಟ್ಟೆ ಸರ್ವೇ ಮಾಡಿ, ಅಲ್ಲಿನ ವ್ಯಾಪಾರಿಗಳ ಜತೆ ಮಾತುಕತೆ ನಡೆಸಿ ನೇರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಯಿತು. ಇದಕ್ಕೆ ರಚಿತವಾದ ಸಮಿತಿ ಮೂಲಕ ವ್ಯವಹಾರ ನಡೆದಿದೆ. ಪ್ರತಿದಿನದ ಬೆಲೆ ನಮ್ಮ ಯೋಜನಾ ಕಚೇರಿಗೆ ಬರುತ್ತದೆ. ಹೀಗಾಗಿ, ವ್ಯಾಪಾರದಲ್ಲಿ ಪಾರದರ್ಶಕತೆ, ರೈತರಿಗೆ ಒಳ್ಳೆ ಬೆಲೆ ಸಿಗುವ ನಮ್ಮ ಕನಸು ಸಾಕಾರಗೊಂಡಿದೆ~ ಎನ್ನುತ್ತಾರೆ ಯೋಜನಾಧಿಕಾರಿ.

`ಸಾಕಷ್ಟು ವಿರೋಧ ವ್ಯಕ್ತವಾದರೂ ಹಿಡಿದ ಕೆಲಸ ಸಾಧಿಸುವ ಭಾಗವಾಗಿ ಇದನ್ನು ಮಾಡಿದ್ದೇವೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ಸುತ್ತಲಿನ ಸುಮಾರು 30ರಿಂದ 35ಎಕರೆ ಪ್ರದೇಶದಲ್ಲಿ ನಮ್ಮ ಯೋಜನೆಯ ಸಹಕಾರದ ಮೂಲಕ ಗುಲಾಬಿ ಬೆಳೆಸುವ ಕೆಲಸ ನಡೆದಿದೆ~ ಎನ್ನುತ್ತಾರೆ ಯೋಜನೆ ಕೃಷಿ ಅಧಿಕಾರಿ ಗಣಪತಿಭಟ್.
`ಪ್ರತಿವಾರ ನಮ್ಮ ಸಂಘದ ಖಾತೆಗೆ ಹಣ ಬರುತ್ತದೆ. ಅದನ್ನು ನೇರವಾಗಿ ಹೂ ಸರಬರಾಜು ಮಾಡಿದ ರೈತರಿಗೆ ಹಂಚಿಕೆ ಮಾಡುತ್ತೇವೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ~ ಎಂದು ಹೇಳುವ ಸಂಘದ ಅಧ್ಯಕ್ಷ ಟಿ.ಆರ್. ಮಲ್ಲೇಶಪ್ಪ ಯಶಸ್ಸಿನ ಗುಟ್ಟನ್ನು ತೆರೆದಿಡುತ್ತಾರೆ.

ಕಾರ್ಯದರ್ಶಿ ಎಚ್.ಎಲ್. ಲೋಕೇಶಪ್ಪ, `ನಮ್ಮ ಪ್ರಯತ್ನ ಕಂಡ ಸುತ್ತಲಿನ ಜನರು ಇದರತ್ತ ಆಕರ್ಷಿತರಾಗಿದ್ದಾರೆ. ವರ್ಷಪೂರ್ತಿ ದುಡಿಮೆ ನೀಡುವ ಈ ಕೃಷಿಯಿಂದ ಯಾವುದೇ ಮೋಸವಿಲ್ಲ, ದರದಲ್ಲಿ ವ್ಯತ್ಯಾಸವಾದರೂ ಸುಧಾರಣೆ ಕಾಣಬಹುದು. ಹಾಗಾಗಿ, ಇದರ ವಿಸ್ತರಣೆ ಕಡೆ ಗಮನಹರಿಸಿದ್ದೇವೆ~ ಎಂದರು.

ವರ್ಷಪೂರ್ತಿ ಹಣ ನೀಡುವ ಗುಲಾಬಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ಮೂಲಕ, ಈ ಬೆಳೆಯಿಂದ ದೂರ ಸರಿಯಲು ಸಿದ್ಧವಾದ ಮನಸ್ಸುಗಳಿಗೆ ಪ್ರೇರಣೆ ನೀಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ, ಸ್ವಸಹಾಯ ಗುಂಪಿನ ಸಾಧನೆ ನಿಜಕ್ಕೂ ಶ್ಲಾಘನೀಯ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT