ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತೆ, ಕಂತೆಗಳ ಮಧ್ಯೆ ಟಿಕೆಟ್ ಯಾರಿಗಂತೆ?

ಸರ್ವಪಕ್ಷಗಳಲ್ಲೂ ಭಿನ್ನಮತ, ಬಂಡಾಯದ ಆತಂಕ
Last Updated 2 ಏಪ್ರಿಲ್ 2013, 4:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಒಂದೆರಡು ಪಕ್ಷಗಳನ್ನು ಹೊರತುಪಡಿಸಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ. ಪಟ್ಟಿ ಸಿದ್ಧವಾಗಿದ್ದರೂ ಮುಂದಿನ ದಿನಗಳಲ್ಲಿ ಆಗಬಹುದಾದ ಪರಿಣಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಿ ಬಿಡುಗಡೆ ಮಾಡಲು ಪಕ್ಷದ ನಾಯಕರು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

ಒಬ್ಬರಿಗೆ ಟಿಕೆಟ್ ನೀಡಿದರೆ, ಮತ್ತೊಬ್ಬರಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇರುವುದರಿಂದ ಎಲ್ಲ ಆಕಾಂಕ್ಷಿಗಳನ್ನು ತಾತ್ಕಾಲಿಕವಾಗಿ ಸಮಾಧಾನಪಡಿಸುತ್ತ ಕಾಲ ದೂಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿ ಪಕ್ಷದ ನಾಯಕರು ಆಕಾಂಕ್ಷಿಗಳಲ್ಲಿ ಆಶಾಭಾವ ತುಂಬಿದರೂ ಪಟ್ಟಿ ಬಿಡುಗಡೆ ಇನ್ನೂ ವಿಳಂಬವಾಗುವ ಸಾಧ್ಯತೆಯಿದೆ.

ಆಕಾಂಕ್ಷಿಗಳಲ್ಲಿ ಬಂಡಾಯ, ಅಸಮಾಧಾನ ಸೇರಿದಂತೆ ಇತರ ಸಮಸ್ಯೆಗಳು ತಲೆದೋರದೆ ಇರಲಿಯೆಂದೇ ನಾಮಪತ್ರ ಸಲ್ಲಿಕೆಯಾಗುವ ಒಂದೆರಡು ದಿನ ಮುಂಚಿತವಾಗಿ ಪಟ್ಟಿ ಬಿಡುಗಡೆಗೆ ಪಕ್ಷದ ನಾಯಕರು ತೀರ್ಮಾನಿಸಿದ್ದಾರೆ. ಆದರೆ ಪಟ್ಟಿ ಕೂಡಲೇ ಬಿಡುಗಡೆ ಮಾಡುವಂತೆ ಆಕಾಂಕ್ಷಿಗಳು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಒಂದೊಂದು ಕ್ಷೇತ್ರದಿಂದ 5 ರಿಂದ 6 ಮಂದಿ ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿಗಳನ್ನು ಸಲ್ಲಿಸಿದ್ದು, ಅವರಲ್ಲಿ ಯಾರನ್ನು ಆಯ್ಕೆ ಮಾಡುವುದು ಎಂಬುದು ಪಕ್ಷದ ಮುಖಂಡರಿಗೆ ತಲೆಬಿಸಿಯಾಗಿದೆ. ಅರ್ಜಿಗಳೊಂದಿಗೆ ತಮ್ಮ ಸಾಧನೆಗಳ ಪಟ್ಟಿಗಳನ್ನು ಸಹ ನೀಡಿರುವ ಆಕಾಂಕ್ಷಿಗಳು, `ನನಗಿಂತ ಉತ್ತಮ ಅಭ್ಯರ್ಥಿ ಮತ್ತೊಬ್ಬರಿಲ್ಲ' ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ.

`ಕಳಂಕರಹಿತ ಮತ್ತು ಜನಪರ ಕಾಳಜಿಯುಳ್ಳ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಮುಖಂಡರು ನಿರ್ಧರಿಸಿದ್ದಾರೆ. ಆದರೆ ಅಂತಹ ಅಭ್ಯರ್ಥಿಗಳನ್ನು ಪತ್ತೆ ಮಾಡುವುದು ಮತ್ತು ಆಯ್ಕೆ ಮಾಡುವುದು ಕಷ್ಟ. ಆರ್ಥಿಕವಾಗಿ ಪ್ರಬಲವಾಗಿ ಮತ್ತು ಭಾರಿ ಪ್ರಭಾವ ಹೊಂದಿರುವ ಅಭ್ಯರ್ಥಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡದೆ ಬೇರೆ ವಿಧಿಯಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಲೆಂದೇ ಕೆಲ ಆಕಾಂಕ್ಷಿಗಳು ವರ್ಷಗಳಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದ್ದರೆ, ಇನ್ನೂ ಕೆಲವರು ದಿಢೀರ್ ಆಕಾಂಕ್ಷಿಗಳಾಗಿ ಉದ್ಭವಿಸಿದ್ದಾರೆ. ಅಂತಹವರಲ್ಲಿ ಅಭ್ಯರ್ಥಿ ಆಯ್ಕೆ ಜಟಿಲವಾದದ್ದು' ಎಂದು ಪಕ್ಷದ ನಾಯಕರೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

`ಆಕಾಂಕ್ಷಿಗಳಲ್ಲಿ ಒಬ್ಬರನ್ನು ಕಡೆಗಣಿಸಿ, ಮತ್ತೊಬ್ಬರಿಗೆ ಟಿಕೆಟ್ ನೀಡಿದರೆ ಬಂಡಾಯವೇಳಬಹುದು. ಪಕ್ಷವನ್ನು ತ್ಯಜಿಸಿ ಪಕ್ಷೇತರರಾಗಿ ಸ್ಪರ್ಧಿಸಬಹುದು, ಇಲ್ಲವೇ ಕಣದಲ್ಲಿರುವ ತಮ್ಮ ಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ತಂತ್ರ ರೂಪಿಸಬಹುದು. ಇದೇ ಕಾರಣಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಹೆಜ್ಜೆ ಇಡಬೇಕಾದಂತಹ ಪರಿಸ್ಥಿತಿಯಿದೆ. ಒಂದು ರೀತಿಯಲ್ಲಿ ಬಿಸಿತುಪ್ಪ ಬಾಯಿಯಲ್ಲಿ ಇಟ್ಟುಕೊಂಡಂತೆ. ಅತ್ತ ಉಗುಳುವಂತೆಯೂ ಇಲ್ಲ, ಇತ್ತ ನುಂಗುವಂತೆಯೂ ಇಲ್ಲ' ಎಂದು ಅವರು ತಿಳಿಸಿದರು.

`ಆಕಾಂಕ್ಷಿಗಳಲ್ಲಿ ಬಹುತೇಕ ಮಂದಿ ತಮ್ಮ ಚುನಾವಣೆ ಪ್ರಚಾರದ ಖರ್ಚು- ವೆಚ್ಚವನ್ನು ನಿಭಾಯಿಸಲು ಸಿದ್ಧರಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಶುಲ್ಕ ಪಾವತಿಸುವುದಾಗಿಯೂ ಹೇಳುತ್ತಿದ್ದಾರೆ. ಆದರೆ ಅವರಲ್ಲಿ ಯಾರು ಹೆಚ್ಚು ಮತ್ತು ಯಾರು ಕಡಿಮೆ ಎಂದು ವಿಂಗಡಿಸುವುದು ಕಷ್ಟವಾಗುತ್ತದೆ. ಒಟ್ಟಿನಲ್ಲಿ ಎಲ್ಲರನ್ನೂ ಸಮಾಧಾನಪಡಿಸಿ ಟಿಕೆಟ್ ವಿತರಣೆಯಾದರೆ ಅಷ್ಟೇ ಸಾಕು' ಎಂದು ಅವರು ಹೇಳಿದರು.

`ಕೆಲ ಆಕಾಂಕ್ಷಿಗಳು ರಾಜ್ಯಮಟ್ಟದ ನಾಯಕರ ಮೂಲಕ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರಮಟ್ಟದ ನಾಯಕರಲ್ಲೂ ತೀವ್ರ ಲಾಬಿ ನಡೆಸಿದ್ದಾರೆ. ತಮ್ಮ ಕ್ಷೇತ್ರಗಳಲ್ಲಿ ಪ್ರಭಾವ ಉಳಿಸಿಕೊಳ್ಳಲು ಮತ್ತು ಸ್ಥಳೀಯ ಕಾರ್ಯಕರ್ತರಲ್ಲಿ ತಮ್ಮ ವರ್ಚಸ್ಸು ತೋರಿಸಲು ರಾಷ್ಟ್ರಮಟ್ಟದ ನಾಯಕರ ಮಟ್ಟದಲ್ಲಿ ತಮಗೆ ಸಂಪರ್ಕವಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಅಂತಿಮವಾಗಿ ಎಲ್ಲ  ಅಡತಡೆಗಳನ್ನು ಮೀರಿ ಬಯಸಿದ ಕ್ಷೇತ್ರದಲ್ಲಿ ಟಿಕೆಟ್ ಗಳಿಸಿದಾಗಲೇ ಆಕಾಂಕ್ಷಿಯ ನಿಜವಾದ ಬಣ್ಣ ಬಯಲಾಗುತ್ತದೆ. ಅಲ್ಲಿಯವರೆಗೆ ಎಲ್ಲವೂ ಊಹಾಪೋಹಗಳದ್ದೇ ಸವಾರಿ ನಡೆಯುತ್ತದೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT