ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ಯೋಗಿಯ ನೋಡಲ್ಲಿ...

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮಂಗಳೂರು ಸನಿಹದ ನೇತ್ರಾವತಿ ನದಿ ದಂಡೆಯ ಚಿಕ್ಕ ಹಳ್ಳಿ `ಹರೇಕಳ~. ಬಹುತೇಕರ ವೃತ್ತಿ ಬೀಡಿ ತಯಾರಿ. ಪುಡಿಗಾಸು ಆದಾಯ. ಹೊಟ್ಟೆಗೆ ತಂಪುಬಟ್ಟೆಯ ದಿನಗಳೇ ಅಧಿಕ. ಅಕ್ಷರವೆಂಬುದು ಬದುಕಿನಿಂದ ಬಹುದೂರ. ಉಳ್ಳವರಿಗೆ ಎರಡು ಮೂರು ಕಿಲೋಮೀಟರ್ ದೂರದ ಶಾಲೆ. ಹೊರ ಪ್ರಪಂಚ ಕತ್ತಲು. ದಶಕದ ಹಿಂದಿನ ಚಿತ್ರಣವಿದು.

ಈಗ `ಹರೇಕಳ~ದಲ್ಲಿ ನಿರಕ್ಷರಿಗಳು ಕಡಿಮೆ. ಅಲ್ಲಿ ಆಧುನಿಕತೆಯ ಮಿರುಗು ಇದೆ. ಶ್ರೀಮಂತರು ಹೆಚ್ಚಿರದಿದ್ದರೂ ಶ್ರೀಮಂತ ವಾಹನಗಳು ಬರುತ್ತಿವೆ. ಮಂತ್ರಿ ಮಹೋದಯರು ಕಾಲಿಟ್ಟಿದ್ದಾರೆ. ಕನ್ನಾಡು ಮಾತ್ರವಲ್ಲ, ಹೊರ ರಾಜ್ಯದ ಮಾಧ್ಯಮಗಳಲ್ಲಿ ಹರೇಕಳ ದಾಖಲಾಗುತ್ತಿದೆ.
 

ಶಾಲೆ ರೂಪಿಸಿದ ಹಣ್ಣಿನ ವ್ಯಾಪಾರಿ ಹಾಜಬ್ಬ  


ಈ ಬದಲಾವಣೆಗೇನು ಕಾರಣ? ಗಣಿ ಧೂಳು ರಾಚಿಲ್ಲ. ಕೋಟಿಗಟ್ಟಲೆ ಹರಿವು ಬಂದಿಲ್ಲ. ಸದಾ ಹೊಗೆಯುಗುಳುವ ಫ್ಯಾಕ್ಟರಿಗಳು ಇಲ್ಲವೇ ಇಲ್ಲ. ಹಾಗಾದರೆ ಏನು? ಹಾಜಬ್ಬ ಎಂಬ ಸಾದಾ ಬಡ ಮನುಷ್ಯ ಹರೇಕಳಕ್ಕೆ ಮರುಹುಟ್ಟು ನೀಡಿದ್ದಾರೆ ಎಂದರೆ ನಂಬುವಿರಾ? `ತನ್ನೂರಲ್ಲಿ ನಿರಕ್ಷಿಗಳಿರಬಾರದು~ ಎಂಬ ಸಂಕಲ್ಪದಿಂದ ಶುರುವಾದ ಹಾಜಬ್ಬರ ಶಾಲೆಯಲ್ಲೆಗ ಮುನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು. ಹದಿಮೂರು ಅಧ್ಯಾಪಕ ವರ್ಗ.

 

ಅಕ್ಷರ ಕಾಯಕ
ಹರೇಕಳದ ಹಾಜಬ್ಬರ ವೃತ್ತಿ ಹಣ್ಣು ಮಾರಾಟ. ರಖಂ ವ್ಯಾಪಾರಿಗಳಿಂದ ಹಣ್ಣು ಖರೀದಿಸಿ, ಬುಟ್ಟಿಯಲ್ಲಿಟ್ಟು ಮಂಗಳೂರಿನ ಹಂಪನಕಟ್ಟೆ ಪರಿಸರದಲ್ಲಿ ವ್ಯಾಪಾರ. ಸಂಜೆಯಾಗುವಾಗ 75-100 ರೂಪಾಯಿ ಕಿಸೆ ಸೇರಿದರೆ ಅಂದಿನ ಸಂಪಾದನೆ. ಮನೆಮಂದಿನ ಬೀಡಿ ಗಳಿಕೆಯೊಂದಿಗೆ ಕುಟುಂಬ ನಿರ್ವಹಣೆ.

ಒಮ್ಮೆ ವಿದೇಶಿ ವ್ಯಕ್ತಿಯೊಬ್ಬ ಹಣ್ಣು ಖರೀದಿಸುವಾಗ ಇಂಗ್ಲೀಷಲ್ಲಿ ಮಾತನಾಡಿದ. ಹಾಜಬ್ಬರು ನಿರುತ್ತರಿ. ಹೇಗೋ ನಿಭಾಯಿಸಿದರು. ಅಕ್ಷರ ಕಲಿಯದೆ ಭಾಷೆ ಬಾರದು. ಭಾಷೆ ಬಾರದೆ ಬದುಕು ಸಾಗದು. ಇದಕ್ಕೇನು ಪರಿಹಾರ? `ತನ್ನೂರಿನ ಮಂದಿ ಅನಕ್ಷರಸ್ಥರು. ನನ್ನ ಸ್ಥಿತಿ ಇವರಿಗೆ ಬಾರದಿರಲಿ~ ಎನ್ನುತ್ತಾ ಶಾಲೆಯೊಂದರ ಕನಸು ಕಟ್ಟಿದರು. ಅದು ಸಸಿಯಾಯಿತು, ಹೆಮ್ಮರವಾಗಿ ಫಲ ಬಿಟ್ಟಿತು.

ಊರಿನ ಪ್ರತಿಷ್ಠಿತರಲ್ಲಿ, ಸಹವ್ಯಾಪಾರಿಗಳಲ್ಲಿ, ಗೆಳೆಯರಲ್ಲಿ ಹಾಜಬ್ಬ ತಮ್ಮ ಕನಸು ಹಂಚಿಕೊಂಡರು. ಎಲ್ಲರೂ ನಕ್ಕರು, ಗೇಲಿ ಮಾಡಿದರು. ದಿನದ ಅರ್ಧ ಹೊತ್ತು ಹಣ್ಣು ಮಾರಾಟ, ಉಳಿದರ್ಧ ಹೊತ್ತು ಅವರಿವರಿಂದ ಮಾಹಿತಿ ಸಂಗ್ರಹಿಸಿ, ಅವಶ್ಯಕತೆಗಳ ಅರ್ಜಿಯೊಂದಿಗೆ ಸರ್ಕಾರಿ ಇಲಾಖೆಗಳ ಮೆಟ್ಟಿಲೇರಿದರು. ನಿತ್ಯ ಅಲೆದಾಟ. ಅಧಿಕಾರಿಗಳಿಂದ ನಿಂದನೆ, ಅವಮಾನ. ಅರ್ಜಿ ಸ್ವೀಕೃತಿ ಬಿಡಿ, ಕಚೇರಿಯೊಳಗೆ ಪ್ರವೇಶಿಸಲೂ ಬಿಡದ ಸರ್ಕಾರೀತನ.

1999ನೇ ಇಸವಿ. ಇಲಾಖಾ ಕಚೇರಿಗಳಿಗೆ ಭೇಟಿ ನೀಡಿ ಹಾಜಬ್ಬರ ಹಲವು ಚಪ್ಪಲಿಗಳು ಸವೆದ್ದ್ದಿದವು. ಶಾಲೆ ಕಟ್ಟುವ ಆಸೆ ಮಾತ್ರ ಕಮರಲಿಲ್ಲ. ಆಗ ಯು.ಟಿ.ಫರೀದರು ಉಳ್ಳಾಲ ಕ್ಷೇತ್ರದ ಶಾಸಕರಾಗಿದ್ದರು. ಹಾಜಬ್ಬರು ಶಾಸಕರ ಮನೆಯ ಕದ ತಟ್ಟಿದರು. ಊರಿನ ಅಝ್ೀ ಮಲಾರ್ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಚುನಾಯಿತರಾದರು.

ಇವರಿಬ್ಬರನ್ನು ಬೆಂಬಿಡದ ಹಾಜಬ್ಬರ ಅಕ್ಷರ ಪ್ರೇಮಕ್ಕೆ ಪ್ರತಿಯಾಗಿ ಹರೇಕಳದ `ನ್ಯೂಪಡ್ಪು~ಗೆ (ಹಾಜಬ್ಬರು ವಾಸಿಸುವ ಪ್ರದೇಶ) ಸರ್ಕಾರಿ ಶಾಲೆ ಮಂಜೂರಾಯಿತು.
ಸ್ವಂತ ಕಟ್ಟಡವಿಲ್ಲ. ಸಹಾಯಕ್ಕೆ ಬರುವ ಮನಸ್ಸುಗಳಿಲ್ಲ. ಒಂಟಿ ನಡೆ. ಒಂಟಿ ನಿರ್ಧಾರ.

ಸ್ಥಳೀಯ ತ್ತಾಹಾ ಜುಮಾ ಮಸೀದಿಯ ಮದ್ರಸದ ಮುಖ್ಯಸ್ಥ ಖಾಲಿದ್‌ರಲ್ಲಿ ಸಮಾಲೋಚನೆ. ತರಗತಿ ನಡೆಸಲು ಒಪ್ಪಿಗೆ. ಮಕ್ಕಳ ದಾಖಲಾತಿಗಾಗಿ ಮನೆಮನೆ ಭೇಟಿ. ಶಿಕ್ಷಣದ, ಅಕ್ಷರದ ಮಹತ್ವದ ಸಾರಿಕೆ. ಇಪ್ಪತ್ತೆಂಟು ಮಕ್ಕಳ ದಾಖಲಾತಿ. ಪ್ರಭಾರ ಉಪಾಧ್ಯಾಯಿನಿ ಒಬ್ಬರನ್ನು ಸರ್ಕಾರ ನೇಮಿಸಿತು. ಶುಭ ಮುಹೂರ್ತದಂದು ಒಂದನೇ ತರಗತಿ ಆರಂಭದೊಂದಿಗೆ ಹಾಜಬ್ಬರು ಕಟ್ಟಿದ `ಅಕ್ಷರಸೌಧ~ದ ಅನಾವರಣ. 

ನನ್ನೂರು, ನನ್ನ ಶಾಲೆ
ಎರಡನೇ ವರುಷ ಮತ್ತೆ ಹದಿನೇಳು ಮಂದಿ ವಿದ್ಯಾರ್ಥಿಗಳ ಪ್ರವೇಶ. `ನನ್ನೂರು, ನನ್ನ ಶಾಲೆ~ ಎಂಬ ಖುಷಿಯಲ್ಲಿದ್ದ ಹಾಜಬ್ಬರಿಗೆ ಎರಡನೇ ವರುಷದಿಂದ ಸವಾಲು. ಮದ್ರಸದಲ್ಲಿ ಹೆಚ್ಚು ಕಾಲ ತರಗತಿ ಮಾಡುವಂತಿಲ್ಲ. ಬೇರೆ ಪ್ರತ್ಯೇಕ ವ್ಯವಸ್ಥೆಯಿಲ್ಲ. ಚಾಕ್‌ಪೀಸ್ ತರಲೂ ದುಡ್ಡಿಗೆ ತತ್ವಾರ. ಡೊನೇಶನ್ ಕೇಳಿಲ್ಲ. ಹೊಸ ಜಾಗವೋ, ಕಟ್ಟಡವೋ ಆಗಲೇಬೇಕಾಗಿತ್ತು.

ಸನಿಹದ ಏರಿಳಿತವಾಗಿದ್ದ ನಲವತ್ತು ಸೆಂಟ್ಸ್ (ಅತಿಕ್ರಮಿತ) ಜಾಗಕ್ಕೆ ಸರಿಯಾದ ದಾಖಲೆ ಪತ್ರಗಳನ್ನು ಮಾಡಿಸಿಕೊಂಡರು. ಐವತ್ತೈದು ಸಾವಿರ ರೂಪಾಯಿಗೆ ಖರೀದಿ. ತನ್ನಲ್ಲಿದ್ದ ಹಣವನ್ನು ಮನೆಮಂದಿಗೆ ಅರಿಯದಂತೆ ಮುಂಗಡ ನೀಡಿದರು. ಉಳಿದ ಮೊತ್ತವನ್ನು ಶೀಘ್ರ ಪಾವತಿಸುವಂತೆ ಒಡಂಬಡಿಕೆ. ದಿನ ಸರಿದಂತೆ ಹಾಜಬ್ಬರ ರಕ್ತದೊತ್ತಡ ಏರುತ್ತಿತ್ತು. ಹಣ್ಣು ಮಾರಿದ ಮೊತ್ತ ಬದುಕಿಗೆ ಸರಿಸಮ. ಕರುಣೆ ತೋರಿ ಅವರಿವರು ನೀಡಿದ ಹತ್ತೋ, ಐವತ್ತೋ ರೂಪಾಯಿಗಳು ಶಾಲಾ ನಿರ್ವಹಣೆಗೆ ವೆಚ್ಚ. ದೊಡ್ಡ ಮೊತ್ತವನ್ನು ತಾನೊಬ್ಬನೇ ಹೊಂದಿಸುವುದು ಕಷ್ಟ. ಮರುಪಾವತಿಯ ದಿವಸ ಹತ್ತಿರವಾಗುತ್ತಿದ್ದಂತೆ `ಮಾತಿನಂತೆ ನಡೆಯಲಾಗಲಿಲ್ಲವಲ್ಲ~ ಎನ್ನುತ್ತಾ ತಲೆಮರೆಸಿಕೊಂಡು ಓಡಾಡಿಕೊಂಡಿದ್ದರು! 

ಹಾಜಬ್ಬರ ಅಕ್ಷರ ಪ್ರೀತಿಯನ್ನು ಕಂಡು ಶಾಫಿ ಶಮ್ನೋಡ್ ಅವರು ಐದು ಸಾವಿರ ರೂಪಾಯಿಯ ಪ್ರಥಮ ದೇಣಿಗೆ ನೀಡಿದರು. ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದೆ ಹಾಜಬ್ಬರು ಹಾಜರಾಗಿ ತನ್ನ ಶಿಕ್ಷಣ ಕತೆಯನ್ನು ನಿವೇದಿಸಿಕೊಂಡಾಗ ಅವರು ದಂಗು.  `ನಿನಗಾಗಿ ಅಲ್ಲವಲ್ಲಾ~ ಎಂದು ಒಂದಷ್ಟು ಮೊತ್ತವನ್ನು ಆರಂಭಿಕವಾಗಿ ಕೊಟ್ಟರು. ಬಳಿಕ ದಾನಿಗಳು ಹತ್ತಿರವಾಗತೊಡಗಿದರು. ಹನಿಗೂಡಿ ಹಳ್ಳವಾಯಿತು. ಸಾಲ ತೀರಿಸಿಯಾಗಿತ್ತು. ಏರುತಗ್ಗಿನ ಪ್ರದೇಶವನ್ನು ಜೆಸಿಬಿ ಮೂಲಕ ಸಮತಟ್ಟುಗೊಳಿಸಿದ್ದೂ ದಾನಿಗಳೇ.

`ಸರ್ವ ಶಿಕ್ಷಾ ಅಭಿಯಾನ~ ಯೋಜನೆಯಲ್ಲಿ ಹಣ ಮಂಜೂರು. ಕಟ್ಟಡ ನಿರ್ಮಾಣ. 2001ರಲ್ಲಿ ಮದ್ರಸದಲ್ಲಿದ್ದ ತರಗತಿ ಹೊಸ ಕಟ್ಟಡಕ್ಕೆ ಬಂತು. ಅಧ್ಯಾಪಕರಿಗೆ ಕುರ್ಚಿ-ಮೇಜುಗಳನ್ನು ಹೊಂದಿಸಿದ್ದೂ ಆಯಿತು. ಚಾಪೆ ಹಾಸಿ ಮಕ್ಕಳನ್ನು ಕೂಡ್ರಿಸಿ ಪಾಠಕ್ಕೆ ವ್ಯವಸ್ಥೆ ಮಾಡಿದರು.

2003-04ರಲ್ಲಿ ಹೊಸ ಕಟ್ಟಡದಲ್ಲಿ ಮೂರನೇ ತರಗತಿ ಆರಂಭ. ಮಕ್ಕಳ ಸಂಖ್ಯೆ ಎಪ್ಪತ್ತು. ಅಧ್ಯಾಪಕರು ಇಬ್ಬರು. ಇನ್ನೋರ್ವರ ಜವಾಬ್ದಾರಿಯನ್ನು ತಾನೇ ಹೊತ್ತರು. ಇದೇ ಸಂದರ್ಭದಲ್ಲಿ `ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ~, `ಉಳ್ಳಾಲ ದರ್ಗಾ ಸಮಿತಿ~ ಹಾಗೂ ಹಲವು ದಾನಿಗಳು ಹಾಜಬ್ಬರಿಗೆ ಹೆಗಲೆಣೆಯಾಗಿ ನಿಂತರು. ಧರ್ಮಸ್ಥಳದ ಹೆಗ್ಗಡೆಯವರು ಮೂರು ವರುಷಕ್ಕೆ ಇಬ್ಬರು ಅಧ್ಯಾಪಕರ ಮತ್ತು ಜಮೀರ್ ಅಹಮದ್ ಅವರು ಒಬ್ಬ ಅಧ್ಯಾಪಕರ ಪ್ರಾಯೋಜನೆ ಮಾಡಿದರು.

ನೆರವಿಗೆ ಬಂದ ಮಾಧ್ಯಮ ಬೆಳಕು
ಹಾಜಬ್ಬರ ಶಿಕ್ಷಣ ಕೆಲಸಕ್ಕೆ ಮಾಧ್ಯಮಗಳ ಮೂಲಕ ಪ್ರಚಾರ ದೊರೆತಾಗ ಹುಡುಕಿ ಬರುವ ದಾನಿಗಳು ಹೆಚ್ಚಾದರು. ಅಪಹಾಸ್ಯ, ಅವಮಾನ ಮಾಡಿದ್ದವರಿಂದ `ನಮಸ್ಕಾರ~ ಪ್ರಾಪ್ತಿ.
ದಾನಿಗಳ ಮುಂದೆ ನಿಲ್ಲಲು ಶುದ್ಧಹಸ್ತರಾದ ಹಾಜಬ್ಬರಿಗೆ ನಾಚಿಕೆಯಿಲ್ಲ. `ನನಗಲ್ಲ, ಸಮಾಜಕ್ಕೆ~ ಎಂಬ ನಿಲುವಿನಿಂದಾಗಿ ದಾನಿಗಳ ಸಂಖ್ಯೆ ಹೆಚ್ಚಿತು. ಶೌಚಾಲಯ, ಪಾಕಶಾಲೆ, ರಂಗಮಂದಿರ, ವಿಜ್ಞಾನ ಉಪಕರಣ... ಲಭ್ಯತೆಯನ್ನು ವಿವರಿಸುವಾಗ ಒಂದೊಂದು ಪರಿಕರಗಳ ಹಿಂದೆ ಒಬ್ಬೊಬ್ಬ ದಾನಿಯ ಹೆಸರು! ದಾನ ಕೊಟ್ಟ ವ್ಯಕ್ತಿ, ಸಂಸ್ಥೆಯ ಹೆಸರನ್ನು ಅಳಿಸಲಾಗದಂತೆ ಅಲ್ಲಲ್ಲಿ ಬರೆದು ಹಾಕಿದ್ದಾರೆ.

`ಸಿಎನ್‌ಎನ್-ಐಬಿಎನ್~ ಮತ್ತು ರಿಲೆಯನ್ಸ್ ಗ್ರೂಪ್ 2008ರಲ್ಲಿ `ದಿ ರಿಯಲ್ ಹೀರೋಸ್~ ಎಂಬ ಪ್ರಶಸ್ತಿಯನ್ನು ಐದು ಲಕ್ಷ ರೂಪಾಯಿಯೊಂದಿಗೆ ನೀಡಿತು. ಪ್ರಶಸ್ತಿಯ ಚಿಕ್ಕಾಸನ್ನೂ ಹಾಜಬ್ಬ ಸ್ವಂತಕ್ಕಾಗಿ ಬಳಸಲಿಲ್ಲ. ಶಾಲಾ ಸನಿಹದ ಐವತ್ತೆರಡು ಸೆಂಟ್ಸ್ ಜಾಗ ಶಾಲಾ ಮೈದಾನಕ್ಕಾಗಿ ವ್ಯಯಿಸಿದರು. ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿಯವರು ನಾಲ್ಕು ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಕೊಡಿಸಿದರು. ತನ್ನ ಮನೆಯ ಸೋರುತ್ತಿರುವ ಸೂರನ್ನೂ ಲಕ್ಷಿಸದೆ, ಬಡತನವನ್ನು ಗಣನೆಗೆ ತಾರದೆ, ತನಗಾಗಿ ಬಂದ ಲಕ್ಷಗಳನ್ನು ಅಲಕ್ಷ್ಯ ಮಾಡಿ ಅವೆಲ್ಲವನ್ನೂ ತನ್ನ ಕನಸಿನ ಶಾಲೆಗೆ ಧಾರೆಯೆರೆದ ಹಾಜಬ್ಬ ಅಸಾಮಾನ್ಯರಂತೆ ಕಾಣುವುದಿಲ್ಲವೆ?

ಇದ್ದ ಕಟ್ಟಡದಲ್ಲಿ ಹತ್ತೂ ತರಗತಿಯನ್ನು ಪೂರೈಸಲು ಅಸಾಧ್ಯ. ಮೈದಾನಕ್ಕಾಗಿ ಖರೀದಿಸಿದ ಜಾಗದಲ್ಲಿ ಹೈಸ್ಕೂಲ್ ಕಟ್ಟಡ ಮೇಲೇಳುತ್ತಿದೆ.  ಹತ್ತರ ಕಲಿಕೆಯ ನಂತರ ಹಲವು ವಿದ್ಯಾರ್ಥಿಗಳು ಟಿ.ಸಿ. ಪಡೆದುಕೊಂಡು ಹೋದರು. ಇಲ್ಲಿ ಪಿ.ಯು.ಸಿ. ಕಲಿಕೆ ಇದ್ದಿದ್ದರೆ ಊರಲ್ಲೇ ಕಲಿಯುತ್ತಿದ್ದರು ಎನ್ನುವಾಗ ಖೇದ. ಜತೆಗೆ `ಪಿಯು ಕಾಲೇಜಿ~ನ ಕನಸಿನ ಎಳೆಯ ಸೆಳೆಮಿಂಚು. ಮಕ್ಕಳಿಗೆ ಆಟದ ಮೈದಾನ, ಪದವಿ ಪೂರ್ವ ಕಾಲೇಜು ಮತ್ತು ಕಟ್ಟಡ ಕೆಲಸಗಳಿಗೆ ಏನಿಲ್ಲವೆಂದರೂ 75 ಲಕ್ಷರೂಪಾಯಿ ಬೇಕು. `ಕಷ್ಟವಾಗಲಾರದು, ದಾನಿಗಳಿದ್ದಾರೆ~ ಎನ್ನುತ್ತಾರೆ ಹಾಜಬ್ಬ.

ಅಕ್ಷರದಿಂದ ಅಭಿವೃದ್ಧಿ
ಮನೆಯಲ್ಲಿ ಬಡತನ. ಮಗ ಪೈಂಟರ್. ಹೆಂಡತಿ ಮೈಮೂನಾ ಮತ್ತು ಇಬ್ಬರು ಮಕ್ಕಳ ಹೊಣೆಯನ್ನು ಹಣ್ಣಿನ ಬುಟ್ಟಿ ಭರಿಸಬೇಕು. ಚಹಕ್ಕೋ, ಊಟಕ್ಕೋ ಆತ್ಮೀಯವಾಗಿ ಹೋಟೇಲಿಗೆ ಕರೆದರೆ, ಅಷ್ಟೇ ಸಾತ್ವಿಕವಾಗಿ ತಿರಸ್ಕರಿಸುವ ಅಪರೂಪದ ಗುಣ. `ಇಂದಾಯಿತು, ನಾಳೆಗೆ~- ಅವರ ಮರುಪ್ರಶ್ನೆ.

ಹಾಜಬ್ಬರಿಗೆ ಇತ್ತ ಶಾಲೆಯನ್ನು ಕಟ್ಟುವ ಧಾವಂತ, ಓಡಾಟ. ಅತ್ತ ಮನೆಯಲ್ಲಿ ಮಡದಿಯ ಅನಾರೋಗ್ಯ. ತಾಯಿಯ ಆಸರೆಗೆ ನಿಂತ ಮೊದಲ ಮಗಳ ಶಾಲಾ ಕಲಿಕೆ ಅರ್ಧದಲ್ಲೇ ನಿಂತಿದೆ. ಎರಡನೇ ಮಗಳಿಗೆ ಕೂಡಾ ಅನಾರೋಗ್ಯ. ಭವಿಷ್ಯದ ಹಲವು ಆಸೆಗಳನ್ನು ಹೊತ್ತ ಎರಡೂ ಮನಸ್ಸುಗಳು ನಾಲ್ಕು ಗೋಡೆಗಳ ಒಳಗೆ ಬಂಧಿ. ಈಗ ಚೇತರಿಸಿಕೊಂಡಿದ್ದಾರೆ, ಬಿಡಿ. ಆದರೆ, ಊರಿನ ಅಕ್ಷರ ಅಭಿವೃದ್ಧಿಯ ಹಿಂದೆ ತನ್ನ ಸಂಸಾರದ ಕಷ್ಟ-ತ್ಯಾಗವನ್ನು ಕಾಣುವ ಮನಸ್ಸುಗಳು ವಿರಳ. ಅದು ಹಾಜಬ್ಬರಿಗೆ ಬೇಕಾಗಿಯೂ ಇರಲಿಲ್ಲ.

ಹಾಜಬ್ಬ ದಾನಿಗಳಿಂದ ನಗದು ಸ್ವೀಕರಿಸುವುದಿಲ್ಲ. ಚೆಕ್, ಡಿ.ಡಿ ಮೂಲಕ ಮಾತ್ರ ದೇಣಿಗೆ ಪಡೆಯುತ್ತಾರೆ. ಅದನ್ನು ಜೆರಾಕ್ಸ್ ಮಾಡಿ ಇಟ್ಟುಕೊಳ್ಳುತ್ತಾರೆ. ದಾನ ನೀಡಿದವರಿಗೊಂದು ಕೃತಜ್ಞತಾ ಪತ್ರ. ವಾರ್ಷಿಕೋತ್ಸವದ ಕರೆಯೋಲೆ. ಕಿಸೆಯಲ್ಲಿರುವ ವಿಸಿಟಿಂಗ್ ಕಾರ್ಡ್‌ಗಳ ಭಾರವು ಹಾಜಬ್ಬರ ಕಾಯಕಕ್ಕೆ ಕನ್ನಡಿ. ಅವುಗಳನ್ನು ಓದಲು ಬಾರದು. ಆದರೆ ಕಿಸೆಯಿಂದ ತೆಗೆದು ಅದರ ಬಣ್ಣ, ಅಕ್ಷರ ವಿನ್ಯಾಸದ ಆಧಾರದಲ್ಲಿ ಗುರುತು ಹಿಡಿಯುತ್ತಾರೆ.

ನಿತ್ಯ ಮುಂಜಾವಿಗೆ ಎದ್ದು ಮನೆಕೆಲಸಗಳನ್ನು ಪೂರೈಸಿ ಶಾಲೆಗೆ ಭೇಟಿ. ಬೀಗ ತೆಗೆದು, ಅಂಗಳದ ಕಸವನ್ನು ಹೆಕ್ಕಿ, ಟ್ಯಾಂಕಿಗೆ ನೀರು ತುಂಬಿಸಿ, ಅಧ್ಯಾಪಕರು ಬಂದ ಬಳಿಕವೇ ಇಪ್ಪತ್ತನಾಲ್ಕು  ಕಿಲೋಮೀಟರ್ ದೂರದ ಮಂಗಳೂರಿಗೆ ಹಣ್ಣು ವ್ಯಾಪಾರಕ್ಕೆ ತೆರಳುತ್ತಾರೆ.
`ಶಾಲೆ ಆರಂಭವಾದ ಬಳಿಕ ನನ್ನೂರು ಬದಲಾಗಿದೆ. ಪೇಪರ್ ಬರುತ್ತದೆ. ಹೊರ ಪ್ರಪಂಚದ ಸುದ್ದಿ ಇಲ್ಲಿ ಮಾತನಾಡುತ್ತಾರೆ. ಮಕ್ಕಳಿಗೆ ಅಕ್ಷರಾಭ್ಯಾಸ ಬಂದಿದೆ. ಓದುವ ಪರಿಪಾಠವಿದೆ. ನಾಲ್ಕು ಕಡೆಯಿಂದ ಜನ ಇಲ್ಲಿಗೆ ಬರುತ್ತಾರೆ~ ಎಂದು ಅಕ್ಷರ ದಾಸೋಹದಿಂದ ಆದ ಫಲಶ್ರುತಿಯನ್ನು ಹಾಜಬ್ಬ ಹೇಳುತ್ತಲೇ ಹೋಗುತ್ತಾರೆ.

ಈ ಅಕ್ಷರ ಯೋಗಿಯ ಬದುಕಲ್ಲಿ ಬಡತನವಿದೆ. ಆದರೆ ಮನಸ್ಸಿಗೆ ಬಡತನದ ಸೋಂಕಿಲ್ಲ. ತನ್ನೂರಿನ ಮಕ್ಕಳು ಅಕ್ಷರ ಕಲಿಯುವಾಗ ಅದರೊಂದಿಗೆ `ಸ್ವರ್ಗ ಸುಖ~ ಅನುಭವಿಸಿದ್ದಾರೆ.
ಹರೇಕಳ ನ್ಯೂಪಡ್ಪು `ದ.ಕ.ಜಿ.ಪ. ಸರಕಾರಿ ಹಿರಿಯ/ಪ್ರಾಥಮಿಕ/ಪ್ರೌಢ ಶಾಲೆ~ಯ ಗೋಡೆಗಳಲ್ಲಿ ದಾನಿಗಳ ಹೆಸರನ್ನು ಕೆತ್ತಿದ ಹಾಜಬ್ಬರ ಹೆಸರು ಶಾಲೆಯಲ್ಲೆಲ್ಲೂ ಕಾಣಸಿಗುವುದೇ ಇಲ್ಲ! ಹಾಜಬ್ಬರ ಸಂಪರ್ಕ ಸಂಖ್ಯೆ: 99802 68127.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT