ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗೋ... ಕನ್ನಡ ಲೋಗೋ

Last Updated 5 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಅದೇತಾನೆ ಕಲಿಯತೊಡಗಿದ ಕಂದಮ್ಮ ಕೂಡ ಕಂಪ್ಯೂಟರ್ ಮುಂದೆ ಪ್ರತಿಷ್ಠಾಪಿಸುವ ಕಾಲವಿದು. ಅಂಬೆಗಾಲಿಕ್ಕಿದ ಫೋಟೋ ತಾಜಾ ಆಗಿರುವಾಗಲೇ ಮಗುವಿನ ಪುಟ್ಟ ಅಂಗೈ ಕಂಪ್ಯೂಟರ್ ಮೌಸಿಗೆ ಶರಣಾಗುತ್ತದೆ. ಕಾನ್ವೆಂಟ್ ಶಾಲೆಯಲ್ಲೂ ಬಲುಬೇಗ ಕಂಪ್ಯೂಟರನ್ನು ಕಲಿಸುವುದೂ ಈಗ ಪ್ರತಿಷ್ಠೆಯ ವಿಷಯವೇ. ಮನೆಯಲ್ಲಿ ಕಂಪ್ಯೂಟರ್ ಇದೆ ಎಂದು ಭಾವಿಸಿಕೊಂಡೇ ಸಿಲಬಸ್‌ಗಳು ಸಿದ್ಧಗೊಳ್ಳುತ್ತವೆ. ಆದರೆ, ಕನ್ನಡದ ಕಂದ ಮೊದಲಾದರೂ ಕನ್ನಡದಲ್ಲೇ ಕಂಪ್ಯೂಟರ್ ಕಲಿತರೆ ಚೆಂದವಲ್ಲವೇ ಎಂದು ಪೇಚಾಡಿಕೊಳ್ಳುವವರೂ ಉಂಟು. ಅಂಥ ಪೇಚಾಟಕ್ಕೆ ಎಂಟು ವರ್ಷದ ಹಿಂದೆಯೇ ಸಿಕ್ಕಿದ್ದ ಸಣ್ಣದಾದರೂ ಮುಖ್ಯವಾದ ಉತ್ತರದ ಬಗ್ಗೆ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.ಕಂಪ್ಯೂಟರ್‌ನಲ್ಲಿ ‘ಲೋಗೋ’ (ಲ್ಯಾಂಗ್ವೇಜ್ ಓರಿಯೆಂಟೆಡ್ ಗ್ರಾಫಿಕ್ ಓರಿಯೆಂಟೆಡ್) ಎಂಬ ಭಾಷೆಯಿದೆ.ಇದನ್ನು 2003ರಲ್ಲೇ ಕನ್ನಡದಲ್ಲಿ ಕೊಟ್ಟವರು ಡಾ.ಯು.ಬಿ.ಪವನಜ.

ಚಿಕ್ಕಪ್ರಾಯದ ಮಕ್ಕಳು ವೃತ್ತ, ಚೌಕ ಮೊದಲಾದ ಆಕೃತಿಗಳನ್ನು ಮೂಡಿಸಲು ‘ಲೋಗೋ’ ಭಾಷೆಯನ್ನು ಬಳಸಬಹುದು. ಒಂದೇ ಒಂದು ಸಂದೇಶ ಕೊಟ್ಟರೆ ಈ ಕಾರ್ಯಕ್ರಮವು ಅಗತ್ಯವನ್ನು ಪೂರೈಸುತ್ತದೆ. ಗಣಕ ಕ್ರಮವಿಧಿ ರಚನೆಗಾಗಿ ಸಿದ್ಧಗೊಂಡ ‘ಭಾಷೆ’ ಇದಾಗಿದ್ದು,  ಶುದ್ಧವೂ ಸರಳವೂ ಆಗಿದೆ. ಕಂಪ್ಯೂಟರ್ ಮಟ್ಟಿಗೆ ಸಂಕಲಿತ ಹಾಗೂ ನಿರೂಪಿತ ಎಂಬ ಎರಡು ಭಾಷೆಗಳಿವೆ. ಪರಿಣತರು ಬರೆದ ಕ್ರಮವಿಧಿಯನ್ನು ಸಂಕಲಕಕ್ಕೆ ಊಡಿಸಿದಾಗ, ಅದು ಎಲ್ಲಾ ಸಂಕೇತಗಳನ್ನು ಓದಿ ಕಾರ್ಯವನ್ನು ಅನುಷ್ಠಾನಕ್ಕೆ ತರುವುದು ಸಂಕಲಿತ ಭಾಷೆಯ ಸ್ವರೂಪ.

ನಿರೂಪಿತ ಭಾಷೆಯು ಸಂಕಲಿತವಾಗುವುದಿಲ್ಲ. ನಿರೂಪಕವು ಕ್ರಮವಿಧಿಯ ಪ್ರತಿ ಸಾಲನ್ನು ಒಂದೊಂದಾಗಿ ಓದಿ, ಅದನ್ನು ಅನುಷ್ಠಾನಕ್ಕೆ ತರುವುದನ್ನು ಈ ಭಾಷೆಯಲ್ಲಿ ಕಾಣುತ್ತೇವೆ. ಇದು  ನಿಧಾನಗತಿಯ ವಿಧಾನವಾಗಿದ್ದರೂ ಮಕ್ಕಳಿಗೆ ಕಲಿಕೆಯ ಸಂದರ್ಭದಲ್ಲಿ ಸೂಕ್ತವೆನ್ನಿಸಿದೆ. ‘ಕನ್ನಡ ಲೋಗೋ’ ಒಂದು ನಿರೂಪಿತ ಭಾಷೆ.

ಇಂಗ್ಲಿಷ್‌ನಲ್ಲಿ ನಾವು ‘ಕರ್ಸರ್’ ಎನ್ನುತ್ತೇವಲ್ಲ; ಅದರ ಕಾರ್ಯವೈಖರಿಯನ್ನು ಕನ್ನಡ ಲೋಗೋದಲ್ಲಿ ‘ಆಮೆ ಚಿತ್ರಲೇಖಿ’ ಎಂದು ಕರೆಯಲಾಗಿದ್ದು, ಬೇರೆ ಭಾಷೆಗಳಲ್ಲಿ ಈ ವೈಶಿಷ್ಟ್ಯ ಇಲ್ಲ.

ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಕಂಪ್ಯೂಟರೀಕರಣಕ್ಕೆ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆಯಷ್ಟೆ. ಆದರೆ, ಹಾದಿ ಸುಲಭವಾಗಿಯೇನೂ ಇಲ್ಲ. ಶಿಕ್ಷಣ ಕ್ಷೇತ್ರವೂ ಇದಕ್ಕೆ ಹೊರತಲ್ಲ. ‘ಕನ್ನಡ ಲೋಗೋ’ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ವ್ಯವಸ್ಥೆಯ ಭಾಗವೂ ಆಗಬಹುದು. ಅದರಲ್ಲು ವಿಶೇಷವಾಗಿ ಕನ್ನಡ ಮಾಧ್ಯಮದ ಶಾಲಾ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಂಪ್ಯೂಟರ್‌ನ ಅರಿವು ಮೂಡಲು ಇದು ಸಾಧ್ಯ.

ಕಲಿಯಲು ಮತ್ತು ಉಪಯೋಗಿಸಲು ಬಹು ಸುಲಭವಾದ ‘ಕನ್ನಡ ಲೋಗೋ’ದಲ್ಲಿ ಚಿತ್ರಗಳನ್ನು ಮಾಡುವ ಆದೇಶ ಕೊಡುವುದು ಕೂಡ ಸುಲಭ. ಚಿಕ್ಕಪುಟ್ಟ ಸಂದೇಶಗಳ ಮೂಲಕ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶವೂ ಉಂಟು. ಐದರಿಂದ ಎಂಟನೇ ತರಗತಿಯ ಮಕ್ಕಳಿಗೆ ಇದು ಉಪಯುಕ್ತ.

‘ಕನ್ನಡ ಲೋಗೋ’ ಬಳಸಿ ವೃತ್ತ, ಚೌಕ, ತ್ರಿಕೋನ, ಆಯತ ಅಷ್ಟೇ ಅಲ್ಲದೆ ಬಹುಮುಖಿ ಆಕೃತಿಗಳನ್ನು ಕೂಡ ರಚಿಸಬಹುದು. ರೇಖಾಗಣಿತದ ಭಾಗವಾಗಿ ಇದರ ಯಶಸ್ವಿ ಉಪಯೋಗ ಸಾಧ್ಯ. ಇಡೀ ದೇಶದಲ್ಲಿ ‘ಲೋಗೋ’ವನ್ನು ಒಳಗೊಂಡ ಮೊದಲ ಪ್ರಾದೇಶಿಕ ಭಾಷೆ ಕನ್ನಡ ಎಂಬುದೂ ಅಗ್ಗಳಿಕೆ. ‘ಡಿಜಿಟಲ್ ಎಂಪವರ್‌ಮೆಂಟ್ ಫೌಂಡೇಷನ್’ ಈ ಕಾರ್ಯಕ್ರಮವನ್ನು ಶ್ಲಾಘಿಸಿ 2006ರಲ್ಲಿ ‘ಮಂಥನ್’ ಪ್ರಶಸ್ತಿಯನ್ನೂ ನೀಡಿತು.

ಕನ್ನಡದ ಕಂದಮ್ಮಗಳು ‘ಕನ್ನಡ ಲೋಗೋ’ ಡೌನ್‌ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ: http://www.vishvakannada.com/KannadaLogo ಉಳಿದ ಸಂಗತಿಗಳು ಆ ಕಾರ್ಯಕ್ರಮದಲ್ಲೇ ತಿಳಿಯುತ್ತವೆ.ಆಡುತ್ತಾಡುತ್ತಾ ಕಲಿಯುವುದು ಎಂದರೆ ಇದೇನಾ ಎಂಬ ಪ್ರಶ್ನೆಯನ್ನು ಈ ಕಾರ್ಯಕ್ರಮ ನಿಮ್ಮಲ್ಲೂ ಹುಟ್ಟುಹಾಕದಿದ್ದರೆ ಹೇಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT