ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜ್ಜಂಪುರ: ಶವ ಹೂಳಲು ಸ್ಥಳವಿಲ್ಲದ ರುದ್ರಭೂಮಿ

Last Updated 19 ಡಿಸೆಂಬರ್ 2012, 10:08 IST
ಅಕ್ಷರ ಗಾತ್ರ

ಅಜ್ಜಂಪುರ: ಪಟ್ಟಣದಲ್ಲಿ ನಿವೇಶನದ, ಜಮೀನಿನ, ಹಾಗೂ ಮನೆ ಬಾಡಿಗೆಯು ಗಗನಕ್ಕೇರಿದ್ದು, ಬಡವ ನೆಮ್ಮದಿಯಿಂದ ಬದುಕಲಾರದಂತಾಗಿದೆ. ಸತ್ತ ಮೇಲೂ ಬಡವ ಮಣ್ಣಲ್ಲಿ ಮಣ್ಣಾಗಲು ಬೀರೂರು ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸ್ಥಳಾವಕಾಶವಿಲ್ಲ, ಕೇವಲ 2 ಎಕರೆಯಿರುವ ಹಿಂದೂ ರುದ್ರಭೂಮಿ ಶವ ಸುಡಲು ಮಾತ್ರ ಸೀಮಿತವಾಗಿದೆ.

ಪಟ್ಟಣದ ಜನತೆ ಪುರಾತನ ಕಾಲದಿಂದ ಸಿದ್ರಾಮೇಶ್ವರ ಸರ್ಕಲ್ ಬಳಿ ರುದ್ರಭೂಮಿಯಾಗಿ ಬಳಸುತ್ತಿದ್ದ ಭೂಮಿ ಇಂದು ರೈಲ್ವೆ ಇಲಾಖೆಯ ದ್ವಿಪಥ ಹಾಗೂ ರಸ್ತೆಗೆ ಬಳಕೆಯಾಗಿದ್ದು, ಶವ ಸಂಸ್ಕಾರಕ್ಕೆ ಸ್ಥಳಾವಕಾಶವಿಲ್ಲದಂತಾಗಿದೆ. ಪಟ್ಟಣದ ಜನಸಂಖ್ಯೆಯಲ್ಲಿನ ಶೇ. 90ರಷ್ಟು ಹಿಂದೂಗಳಿದ್ದು, ಹಿಂದೂ ಸಂಪ್ರದಾಯಗಳಲ್ಲಿ ಕೆಲವರು ಶವ ಸುಡುವುದರಿಂದ, ಇನ್ನೂ ಕೆಲವರು ಶವ ಮಣ್ಣು ಮಾಡುವುದರಿಂದ ಮೋಕ್ಷ ದೊರೆಯುತ್ತದೆ ಎಂಬ ಧಾರ್ಮಿಕ ಭಾವನೆಗಳನ್ನು ಹೊಂದಿದ್ದಾರೆ.        
                                      
ರುದ್ರಭೂಮಿಗೆ ಅಂತ್ಯಸಂಸ್ಕಾರಕ್ಕೆ ಶವ ತರುವ ಸಂಪ್ರದಾಯವಾದಿ ಬಂಧುಗಳು ಸ್ಥಳಾವಕಾಶದ ಕೊರತೆಯಿಂದ ಶವ ಹೂಳದೇ, ಒಲ್ಲದ ಮನಸ್ಸಿನಿಂದ ಸುಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸುತ್ತಾರೆ. ಜನರ ಭಾವನೆಗಳಿಗೆ ಸ್ಪಂದಿಸಬೇಕಾದರೆ, ರುದ್ರಭೂಮಿ ಪಕ್ಕದಲ್ಲಿರುವ ಮೆಸ್ಕಾಂಗೆ ಸೇರಿದ ಬಳಕೆಯಾಗದ 2 ಎಕರೆ ಭೂಮಿಯನ್ನು ಕಂದಾಯ ಇಲಾಖೆ ರುದ್ರಭೂಮಿಗೆ ವರ್ಗಾಯಿಸಬೇಕು ಎಂದು ಮೋಕ್ಷಧಾಮ ಸಮಿತಿ ಎಂ.ಜಿ.ಮಂಜುನಾಥ್ `ಪ್ರಜಾವಾಣಿ'ಗೆ ತಿಳಿಸಿದರು.

`1999ರಲ್ಲಿ ಮೋಕ್ಷಧಾಮ ಸಮಿತಿ ರಚಿಸಿಕೊಂಡು ಕುಡಿಯುವ ನೀರಿಗೆ ಕೊಳವೆ ಬಾವಿ, ದರ್ಶನಕ್ಕೆ ಸುಂದರ ಶಿವ ದೇವಾಲಯ, ಶೌಚಾಲಯ, ಸ್ನಾನಗೃಹ ನಿರ್ಮಿಸಿದ್ದೇವೆ. ವಿವಿಧ ಬಗೆಯ ಸುಮಾರು 300ಕ್ಕೂ ಅಧಿಕ ಸಸಿಗಳನ್ನು ಹಾಕಿ, ಸೂಕ್ತ ನಿರ್ವಣೆ ಮಾಡಿ, ಉದ್ಯಾನ ವನದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದ್ದು, ಗಿಡಮರಗಳ ರಕ್ಷಣೆಗೆ ಕಾಂಪೌಂಡ್ ಅವಶ್ಯಕತೆಯಿದೆ. ಜನಪ್ರತಿನಿದಿಗಳು ಸರ್ಕಾರದಿಂದ ಹಣ ಬಿಡುಗಡೆಗೊಳಿಸಿದರೆ ಇನ್ನೂ ಸಾಕಷ್ಟು ಅಭಿವೃದ್ಧಿ ನಡೆಸಲು ಅನುಕೂಲವಾಗುತ್ತದೆ' ಎಂದು ಸಮಿತಿ ಕಾರ್ಯಧ್ಯಕ್ಷ ಎ.ಟಿ.ಶ್ರೀನಿವಾಸ್ ತಿಳಿಸಿದರು.

ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಶವದಹನ ಚೇಂಬರ್ ಅನ್ನು ನೀಡಿದ್ದು, ಕಳೆದ ವರ್ಷ ಅದು ಕಳ್ಳತನವಾದಾಗಲೂ ಮತ್ತೊಂದು ಶವದಹನ ಚೇಂಬರ್ ನೀಡಿ ಅನುಕೂಲ ಮಾಡಿಕೊಟ್ಟಿದ್ದರು. ಈಗ ಕಳ್ಳರು ಪ್ರವೇಶಿಸದಂತೆ ತಡೆಯಲು ಶವದಹನ ಕೊಠಡಿ ನಿರ್ಮಿಲಾಗಿದೆ. ಸರ್ಕಾರದಿಂದ ಈವರೆಗೆ 30 ಸಾವಿರ ರೂ. ಅನುದಾನ ಬಂದಿದ್ದು, 4 ಲಕ್ಷ ರೂ.ಗೂ ಅಧಿಕ ಹಣವನ್ನು ಸಾರ್ವಜನಿಕರು ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿದ್ದಾರೆ ಎಂದು ಟ್ರಸ್ಟ್ ಉಪಾದ್ಯಕ್ಷ ಪ್ರಹ್ಲಾದ್ ಹೇಳಿದರು.

ಶಾಸಕರು, ಉಸ್ತುವಾರಿ ಸಚಿವರು, ಲೋಕಸಭಾ ಸದಸ್ಯರು, ತಹಶೀಲ್ದಾರ್, ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ, ರುದ್ರಭೂಮಿಗೆ ಶವ ಹೂಳಲು ಭೂಮಿ ನೀಡಿ ಎನ್ನುವುದು ನಾಗರೀಕರ ಪ್ರಾರ್ಥನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT