ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡಿಕೆ ಬೆಳೆ ನಿಷೇಧ; ಬಹುರಾಷ್ಟ್ರೀಯ ಕಂಪೆನಿಗಳ ಲಾಬಿ

‘ದಾವಣಗೆರೆ ಬಂದ್‌’ಗೆ ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಬೆಂಬಲ
Last Updated 23 ಡಿಸೆಂಬರ್ 2013, 5:09 IST
ಅಕ್ಷರ ಗಾತ್ರ

ದಾವಣಗೆರೆ: ‘ಅಡಿಕೆಯಲ್ಲಿ ಹಾನಿಕಾರಕ ಅಂಶವಿದೆ’ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಆರೋಗ್ಯ ಇಲಾಖೆ ಪ್ರಮಾಣಪತ್ರ ಸಲ್ಲಿಸಿದೆ. ಆದರೂ, ಅಡಿಕೆ ಬೆಳೆ ನಿಷೇಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಮೊದಲಾದವರು ಹಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಸಂಸತ್‌ ಸದಸ್ಯ ಜಿ.ಎಂ.ಸಿದ್ದೇಶ್ವರ ಆರೋಪಿಸಿದರು.

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಹೋರಾತ್ರಿ ಸತ್ಯಾಗ್ರಹದ 7ನೇ ದಿನವಾದ ಭಾನುವಾರ ಹೋರಾಟಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ಬಹುರಾಷ್ಟ್ರೀಯ ಕಂಪೆನಿಗಳ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಅಡಿಕೆ ಬೆಳೆ ನಿಷೇಧಿಸಲು ಮುಂದಾಗಿದೆ. ಹಿಂದೊಮ್ಮೆ ಮೈಸೂರಿನ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆ ಅಡಿಕೆಯಲ್ಲಿ ವಿಷಕಾರಕ ಅಂಶವಿಲ್ಲ ಎಂದು ಹೇಳಿದೆ. ಆದರೂ, ಸರ್ಕಾರ ಅಡಿಕೆ ಮೇಲೆ ಕೆಂಗಣ್ಣು ಬೀರುತ್ತಿದೆ. ತಂಬಾಕಿನಲ್ಲಿ ವಿಷಕಾರಕ ಅಂಶವಿದೆ. ಆದರೆ, ಅದನ್ನೇಕೆ ನಿಷೇಧಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದರು.

ಹೋರಾಟಕ್ಕೆ ಸ್ಪಂದಿಸುವ, ಆಶ್ವಾಸನೆ ನೀಡುವ ಸೌಜನ್ಯವನ್ನೂ ಸರ್ಕಾರ ತೋರುತ್ತಿಲ್ಲ. ಕಣ್ಣು, ಕಿವಿ ಇದ್ದರೂ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಈ ಸರ್ಕಾರಕ್ಕೆ ಬಾಯಿ ಮಾತ್ರ ಇದೆ ಎಂದು ಟೀಕಿಸಿದರು.

ಅಡುಗೆ ಅನಿಲ ಸಿಲಿಂಡರ್‌ ಪಡೆಯಲು ‘ಆಧಾರ್‌’ ಕಾರ್ಡ್‌ ಕಡ್ಡಾಯ ಮಾಡಿರುವುದು ಹಾಗೂ ನಗದು ನೇರ ವರ್ಗಾವಣೆ ಯೋಜನೆಯನ್ನು ಕೂಡಲೇ ಕೈಬಿಡಬೇಕು. ಇದರಿಂದ ಜನರಿಗೆ ಬಹಳ ತೊಂದರೆಯಾಗಿದೆ ಎಂದರು.

ಬೆಳೆಗಳಿಗೆ ಸರ್ಕಾರ ಯೋಗ್ಯ ಬೆಲೆ ಕೊಡಬೇಕು. ಆವರ್ತ ನಿಧಿಯಲ್ಲಿ ₨ ಒಂದು ಸಾವಿರ ಕೋಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರೈತರ ಪರವಾಗಿ ಡಿ.23ರಂದು ಹಮ್ಮಿಕೊಂಡಿರುವ ದಾವಣಗೆರೆ ಬಂದ್‌ಗೆ ತಾವೂ ಸಹ ಬೆಂಬಲ ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಪಕ್ಷಾತೀತ ಹೋರಾಟವನ್ನು ಸಂಸತ್‌ ಸದಸ್ಯ ಸಿದ್ದೇಶ್ವರ ಬೆಂಬಲಿಸಿದ್ದಾರೆ. ಈ ಹೋರಾಟದ ಕಿಚ್ಚು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಟ್ಟಲಿದೆ ಎಂದರು.

ಅಡಿಕೆ ಬೆಳೆ ನಿಷೇಧ ಪ್ರಸ್ತಾಪವಿಲ್ಲ ಎಂದು ಹೇಳುವ ಮೂಲಕ ಹೋರಾಟ ಹತ್ತಿಕ್ಕುವುದಕ್ಕೆ ಕಾಂಗ್ರೆಸ್‌ ಮುಂದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಶಿವಶಂಕರಪ್ಪ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.

‘ದೂಡಾ’ ಮಾಜಿ ಅಧ್ಯಕ್ಷ ಯಶವಂತರಾವ್‌ ಜಾದವ್‌, ಬಿಜೆಪಿ ಜಿಲ್ಲಾ ಘಟಕದ ವಕ್ತಾರ ಕೊಂಡಜ್ಜಿ ಜಯಪ್ರಕಾಶ್‌, ಮುಖಂಡರಾದ ಬಿ.ಎಸ್‌.ಜಗದೀಶ್‌, ಹೇಮಂತ್‌ ಕುಮಾರ್‌, ಬಿ.ಎಂ.ಸತೀಶ್‌, ವೀರಭದ್ರಸ್ವಾಮಿ, ಮಹೇಶ್‌, ಕಲ್ಲಿಂಗಪ್ಪ, ಬಸವರಾಜ್‌ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT