ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಡ್ಡಾಳ ಕೆರೆ'ಯಿಂದ ನೂರಾರು ಎಕರೆಗೆ ನೀರು!

Last Updated 17 ಫೆಬ್ರುವರಿ 2013, 5:20 IST
ಅಕ್ಷರ ಗಾತ್ರ

ತಿ.ನರಸೀಪುರ: ಬರಗಾಲದಿಂದಾಗಿ ಎಲ್ಲ ಕೆರೆಗಳು ಬತ್ತಿರುವ ಈ ಸಮಯಲ್ಲಿ ತಾಲ್ಲೂಕಿನ ಅಡ್ಡಾಳದ ಕೆರೆಯಲ್ಲಿ ಸಾಕಷ್ಟು ನೀರಿದೆ. ಇದನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡಲ್ಲಿ ಮೂರ‌್ನಾಲ್ಕು ಗ್ರಾಮಗಳ ನೂರಾರು ಎಕರೆ ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಸಹಾಕಯವಾಗಲಿದೆ.

ತಾಲ್ಲೂಕಿನ ಮೂಗೂರು ಹೋಬಳಿಯ ಕುರುಬೂರು ಅಡ್ಡಾಳದ ಕರೆ ರಾಷ್ಟ್ರೀಯ ಹೆದ್ದಾರಿ 212 ಕ್ಕೆ ಹೊಂದಿಕೊಂಡಂತೆ ಆರಂಭವಾಗಿ ಕೊತ್ತೇಗಾಲ ಬಳಿ ಕಟ್ಟೆ ನಿರ್ಮಿಸಲಾಗಿದೆ. ಕುರುಬೂರು ಸಮೀಪದಲ್ಲಿ ಅಖಿಲ ಕರ್ನಾಟಕ ಪಿಂಜರಾಪೋಲ್ ಸಂಸ್ಥೆಯ ಪಕ್ಕದಲ್ಲಿ ಕೆರೆಯ ಭಾಗ ಪೂರ್ತಿ ಜೊಂಡಿನಿಂದ ಕೂಡಿದೆ. ಅಡ್ಡಾಳ ಮುಂದುವರಿದು ಕೊತ್ತೇಗಾಲ ಬಳಿ ನಿರ್ಮಿಸಿರುವ ಕಟ್ಟೆಯಲ್ಲಿ ನೀರು ಸಂಗ್ರಹಣೆಯಾಗುತ್ತಿದೆ. ಮಳೆ ಹಾಗೂ ನಾಲೆಗಳಿಂದ ಪೂರೈಕೆಯಾಗುವ ನೀರು ಕೆರೆಯಿಂದ ಕೃಷಿ ಭೂಮಿಗಳಿಗೆ ಪೂರೈಕೆಯಾಗುತ್ತಿದೆ.

ಈ ಕಟ್ಟೆಯ ಸುತ್ತಲೂ ವಿಶಾಲವಾದ ಏರಿ ಇದೆ. ಬಹಳ ದೊಡ್ಡದಾಗಿರುವ ಈ ಕಟ್ಟೆಯ ಒಳಗೂ ಜೊಂಡು ಬೆಳೆದಿದೆ. ಕೆರೆಯ ಏರಿ ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿವೆ. ಕಟ್ಟೆಯಿಂದ ನೀರು ಹರಿದು ಹೋಗಲು ದಾರಿ ಮಾಡಲಾಗಿದೆಯಾದರೂ ಅದು ಸಮರ್ಪಕವಾಗಿಲ್ಲ ಎಂಬ ದೂರಿದೆ.

`ಅಡ್ಡಾಳ ಕೆರೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹ ಆಗಿದೆ. ಕೆರೆಯ ಸುತ್ತಲೂ ಸಮರ್ಪಕವಾದ ತೂಬುಗಳನ್ನು ಅಳವಡಿಸಿ ನೀರು ಪೂರೈಕೆ ಮಾಡಿದರೆ ಕುರುಬೂರು, ಕೊತ್ತೇಗಾಲ ಹಾಗೂ ತೊಟ್ಟವಾಡಿ ಗ್ರಾಮಗಳ ನೂರಾರು ಎಕರೆ ಪ್ರದೇಶಗಳಿಗೆ ಪ್ರಯೋಜನವಾಗಲಿದೆ. ಕೆರೆಯ ಏರಿಯಲ್ಲಿ ಕಂಬಿಗಳನ್ನು ಅಳವಡಿಸಿ, ಉದ್ಯಾನ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣವನ್ನಾಗಿ ಮಾಡಬಹುದಾಗಿದೆ. ಕೊಳ್ಳೇಗಾಲ ಮುಖ್ಯ ರಸ್ತೆಯಲ್ಲಿರುವ ಪಿಂಜಾರಾಪೋಲ್ ಬಳಿ ಜೊಂಡು ಬೆಳೆದಿರುವ ಪ್ರದೇಶದ ಹೂಳೆತ್ತಿದರೆ ಜಾನುವಾರುಗಳಿಗೂ ಕೂಡ ನೀರಿನ ಅನುಕೂಲವಾಗುತ್ತದೆ. ಇಲ್ಲಿನ ಶಾಸಕರು ಕೂಡ ರೈತರ ಪಾಲಿಗೆ ವರದಾನವಾಗಲಿರುವ ಇಂತಹ ಕೆರೆಗಳ ಅಭಿವೃದ್ಧಿ ಹಾಗೂ ಕೃಷಿ ಚಟುವಟಿಕೆಗಳ ನೆರವಿಗೆ ಮೊದಲ ಆದ್ಯತೆ ನೀಡಬೇಕು' ಎಂಬ ಒತ್ತಾಯ ಗ್ರಾಮಸ್ಥರದ್ದು.

ಕೆರೆಯ ಅಭಿವೃದ್ಧಿಯ ಕುರಿತು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಶ್ರೀಕಂಠಪ್ರಸಾದ್ ಅವರನ್ನು ಮಾತನಾಡಿಸಿದರೆ `ಕೆರೆಯ ಹೂಳೆತ್ತಿಸಲು ಹಾಗೂ ಕ್ರಿಯಾ ಯೋಜನೆ ರೂಪಿಸಲು ಹೆಚ್ಚಿನ ಅನುದಾನ ಅಗತ್ಯವಿದೆ. ಸರ್ಕಾರದ ಅನುದಾನವಿಲ್ಲದೇ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ. ಅನುದಾನ ದೊರೆತರೆ ಖಂಡಿತವಾಗಲೂ ಕೆರೆಯ ಅಭಿವೃದ್ಧಿಯ ಜತೆಗೆ ಹೂಳೆತ್ತಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು' ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT