ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡ್ವಾಣಿ ‘ಒಬ್ಬಂಟಿ’ ಮೋದಿಗೆ ಮುಂಬಡ್ತಿ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರ ವಿರೋಧ ಬದಿಗೊತ್ತಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಶುಕ್ರವಾರ ‘ಪ್ರಧಾನಿ ಅಭ್ಯರ್ಥಿ’ ಎಂದು ಅಧಿಕೃತ­ವಾಗಿ ಘೋಷಿಸಿತು. ಇದರಿಂದಾಗಿ ಕಡು ಹಿಂದುತ್ವವಾದಿ ಮೋದಿ ರಾಜಕೀಯ ಭವಿಷ್ಯದ ಕುರಿತು ಕೆಲವು ತಿಂಗಳಿಂದ ತಲೆದೋರಿದ್ದ ಅನಿಶ್ಚಯತೆ ಕೊನೆ­ಗೊಂಡಿತು.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೇರಿದ್ದ ಸಂಸದೀಯ ಮಂಡಳಿ ಸಭೆ ಬಳಿಕ ಪಕ್ಷದ ಅಧ್ಯಕ್ಷ ರಾಜನಾಥ್‌ಸಿಂಗ್ ಪತ್ರಿಕಾ­ಗೋಷ್ಠಿ­ಯಲ್ಲಿ ಮಹತ್ವದ ಘೋಷಣೆ ಮಾಡಿದರು. ನಿರೀಕ್ಷೆಯಂತೆ ಅಡ್ವಾಣಿ ಸಭೆಗೆ ಗೈರು ಹಾಜರಾದರು. ಸುಷ್ಮಾ ಸ್ವರಾಜ್ ಮತ್ತು ಮುರಳಿ ಮನೋಹರ ಜೋಷಿ. ಸೇರಿದಂತೆ ಉಳಿದೆಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಇಡೀ ದಿನ ನಡೆದ ನಾಟಕೀಯ ಬೆಳವಣಿಗೆಗಳು, ಸತತ ಸಭೆಗಳ ಬಳಿಕ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಪ್ರಕಟಿಸಲಾಯಿತು. ತೀವ್ರ ಮನವೊಲಿಕೆ ಪ್ರಯತ್ನದ ನಂತರವೂ ಅಡ್ವಾಣಿ ತಮ್ಮ ನಿಲುವಿಗೇ ಗಟ್ಟಿಯಾಗಿ ಅಂಟಿಕೊಂಡಿದ್ದರಿಂದ ಅವರ ಗೈರು ಹಾಜರಿಯಲ್ಲೇ ಮೋದಿ ಹೆಸರನ್ನು ಘೋಷಿಸಲಾಯಿತು.

ಗೋವಾದಲ್ಲಿ ಕಳೆದ ಜೂನ್‌ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯ­ಕಾರಿಣಿಗೂ ಅಡ್ವಾಣಿ ಗೈರು ಹಾಜರಾ­ಗಿದ್ದರು. ಗುಜರಾತ್‌್ ಮುಖ್ಯಮಂತ್ರಿಗೆ ಪಕ್ಷದ ನಾಯಕತ್ವ ವಹಿಸಬಾರದು ಎಂದು ಅಡ್ವಾಣಿ ಆಗಲೂ ಹಟ ಹಿಡಿದಿದ್ದರು. ಪ್ರಚಾರ ಸಮಿತಿ ನೇತೃತ್ವ ನೀಡಿದ್ದನ್ನು ಪ್ರತಿಭಟಿಸಿ ಪಕ್ಷದ ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಮೋಹನ್ ಭಾಗ­ವತ್ ಸಂಧಾನದ ಬಳಿಕ ರಾಜೀ­ನಾಮೆ ಹಿಂದಕ್ಕೆ ಪಡೆದಿದ್ದರೂ ಪಕ್ಷದೊಳಗಿನ ವಾತಾವರಣ ತಿಳಿಯಾಗಿರಲಿಲ್ಲ.

ಪಕ್ಷದ ಹೊಸ ಪ್ರಧಾನಿ ಅಭ್ಯರ್ಥಿ   ಘೋಷಿಸಿದ ರಾಜನಾಥ್‌ಸಿಂಗ್, ಪಕ್ಷದ ಸಂಪ್ರದಾಯದಂತೆ ಈ ತೀರ್ಮಾನ ಮಾಡಲಾಗಿದೆ. 1996ರ ಲೋಕಸಭೆ ಚುನಾವಣೆಯಿಂದ 2009ರ ಚುನಾ­ವಣೆ­ವರೆಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ­ಗಳನ್ನು ಪ್ರಕಟಿಸಿಕೊಂಡು ಬಂದಿದೆ. ಅದ­ರಂತೆ 2014ರ ಲೋಕಸಭೆ ಚುನಾ­ವಣೆಗೆ ನರೇಂದ್ರ ಮೋದಿ ನಾಯಕತ್ವ ವಹಿಸಲಿದ್ದಾರೆ. ಇದಕ್ಕೆ  ಎನ್‌ಡಿಎ ಮಿತ್ರಪಕ್ಷಗಳ ಸಹಮತವಿದೆ ಎಂದರು. ದೇಶದ ಜನತೆ ಮತ್ತು ಪಕ್ಷದ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಆಗಿ ನೇಮಕ ಮಾಡಲಾಗಿದೆ.

ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ರಾಜನಾಥ್‌ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು. ಅನಂತರ ಮಾತನಾಡಿದ ಮೋದಿ, ಹೊಸ ಆಶಯ ಮತ್ತು ಭರವಸೆಯೊಂದಿಗೆ ಪಕ್ಷದ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.

‘ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ನನಗೆ ದೊಡ್ಡ ಜವಾ­ಬ್ದಾರಿ ಕೊಡಲಾಗಿದೆ. 2014ರ ಲೋಕ­ಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ನಿಷ್ಠೆಯಿಂದ ದುಡಿಯುತ್ತೇನೆ. ನಿಶ್ಚಿತ­ವಾಗಿ ಬಿಜೆಪಿ ಗೆಲುವು ಪಡೆಯ­ಲಿದೆ. ನಮಗೆ ದೇಶದ ಜನ ಆಶೀರ್ವಾದ ಮಾಡಬೇಕು’ ಎಂದು  ಮಾಧ್ಯಮಗಳ ಮೂಲಕ ಮನವಿ ಮಾಡಿದರು.

ದೇಶ ಸಂಕಷ್ಟದಲ್ಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತ ಸಂಕಷ್ಟ­ದಿಂದ ಪಾರಾಗುವ ವಿಶ್ವಾಸವಿದೆ ಎಂದು ಮೋದಿ ನುಡಿದರು. ಭ್ರಷ್ಟಾಚಾರ ಹಾಗೂ ಬೆಲೆ ಏರಿಕೆಗೆ ಅಂತ್ಯ ಹಾಡಿ ಅಭಿವೃದ್ಧಿ ಪಥದಲ್ಲಿ ರಾಷ್ಟ್ರವನ್ನು ಮುನ್ನಡೆ­ಸುವುದಾಗಿ ಗುಜರಾತ್ ಮುಖ್ಯಮಂತ್ರಿ ವಚನ ಕೊಟ್ಟರು. ಪಕ್ಷದ ಹಿರಿಯ ಮುಖಂಡರಿಂದ  ಅಭಿನಂದನೆ ಸ್ವೀಕರಿಸಿದ ಅವರು, ದೊಡ್ಡವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದಾಗಿ ಹೇಳಿದರು. ಮಾತಿನ ನಡುವೆ ವಾಜಪೇಯಿ ಹಾಗೂ ಅಡ್ವಾಣಿ ಹೆಸರನ್ನು ಪ್ರಸ್ತಾಪಿಸಿದರು.

ಕಾರ್ಯವೈಖರಿ: ರಾಜ್ ನಾಥ್‌ ಸಿಂಗ್‌ಗೆ ಅಡ್ವಾಣಿ ಪತ್ರ
ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಪ್ರಕಟಿಸಿದ ಬೆನ್ನಲ್ಲೇ ಅಡ್ವಾಣಿ ಪಕ್ಷದ ಅಧ್ಯಕ್ಷರಿಗೆ ಪತ್ರ­ವೊಂದನ್ನು ರವಾನಿಸಿದರು. ರಾಜ್ ನಾಥ್‌ ಸಿಂಗ್ ಕಾರ್ಯ­ವೈಖರಿ ಕುರಿತು ಪತ್ರದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಂಸದೀಯ ಮಂಡಳಿ ಸಭೆ ಕರೆದಿರುವ ಬಗ್ಗೆ ಮಾಹಿತಿ ಕೊಡಲು ಮಧ್ಯಾಹ್ನ ನೀವು ನನ್ನ ಮನೆಗೆ ಬಂದಿದ್ದೀರಿ. ಆ ವೇಳೆಯಲ್ಲಿ ನಾನು ಸಿಟ್ಟು ವ್ಯಕ್ತ ಮಾಡಿದೆ. ನಿಮ್ಮ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದೆ’ ಎಂದಿದ್ದಾರೆ.

‘ನಾನು ಸಂಸದೀಯ ಮಂಡಳಿ ಸದಸ್ಯರ ಜತೆ ನನ್ನ ಚಿಂತನೆಗಳನ್ನು ಹಂಚಿಕೊಳ್ಳಬೇಕೇ ಅಥವಾ ಬೇಡವೇ ಎನ್ನುವ ಬಗ್ಗೆ ಚಿಂತಿಸುತ್ತಿದ್ದೇನೆ ಎಂದು ನಿಮಗೆ ತಿಳಿಸಿದ್ದೆ. ಆದರೆ, ಅನಂತರ ಸಭೆಯಲ್ಲಿ ಪಾಲ್ಗೊಳ್ಳದಿರು­ವುದೇ ಒಳ್ಳೆಯದು ಎಂಬ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಅಡ್ವಾಣಿ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT