ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ತಂಡದ ವಿಸರ್ಜನೆ, ರಾಜಕೀಯ ಪರ್ಯಾಯದೆಡೆಗೆ ಹೆಜ್ಜೆ

Last Updated 6 ಆಗಸ್ಟ್ 2012, 9:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಕೀಯ ಪಕ್ಷ ರಚನೆಗೆ ದಾರಿ ಮಾಡಿಕೊಡುವ ಸಲುವಾಗಿ ಅಣ್ಣಾ ತಂಡವು ಸೋಮವಾರ ತನ್ನನ್ನು ಸ್ವಯಂ ವಿಸರ್ಜನೆ ಮಾಡಿಕೊಂಡಿದೆ. ಮತ್ತು ಇನ್ನುಮುಂದೆ ಲೋಕಪಾಲ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಜೊತೆಗೆ ಯಾವುದೇ ಮಾತುಕತೆ ನಡೆಸದೇ ಇರಲು ತೀರ್ಮಾನಿಸಿದೆ.

 2014ರ ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪರ್ಯಾಯ ರಚನೆಯ ಯೋಜನೆಯೊಂದಿಗೆ ಜಂತರ್ ಮಂತರ್ ನಲ್ಲಿ ತನ್ನ ಅನಿರ್ದಿಷ್ಟ ನಿರಶನವನ್ನು ಕೊನೆಗೊಳಿಸಿದ ಮೂರು ದಿನಗಳ ಬಳಿಕ ಅಣ್ಣಾ ತಂಡದ ವಿಸರ್ಜನೆಯಾಗಿದೆ.

ತಂಡದ ವಿಸರ್ಜನೆ ಕುರಿತು ಅಣ್ಣಾ ಹಜಾರೆ ಅವರು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದಾರೆ. ತತ್ ಕ್ಷಣವೇ ಪಕ್ಷ ರಚನೆ ವಿಚಾರವನ್ನು ಘೋಷಿಸಲಾಗುವುದೇ ಎಂಬುದನ್ನು ಬ್ಲಾಗ್ ನಲ್ಲಿ ಸ್ಪಷ್ಟ ಪಡಿಸದೇ ಇದ್ದರೂ ರಾಜಕೀಯ ಪರ್ಯಾಯ ರಚನೆಯ ವಿಧಿವಿಧಾನಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ.

~ಸರ್ಕಾರವು ಲೋಕಪಾಲ ಮಸೂದೆ ಜಾರಿಗೊಳಿಸಲು ಸಿದ್ಧವಿಲ್ಲ. ಎಷ್ಟು ಕಾಲ ಮತ್ತು ಎಷ್ಟು ಸಲು ನಾವು ನಿರಶನ ಮಾಡಬೇಕು? ಈಗ ಜನ ನಮ್ಮನ್ನು ನಿರಶನ ಬಿಡಿ, ಪರ್ಯಾಯ ನೀಡಿ ಎಂದು ಹೇಳಿದ್ದಾರೆ. ಸರ್ಕಾರವು ಭ್ರಷ್ಟಾಚಾರವನ್ನು ಹತ್ತಿಕ್ಕಲು ಹೋಗುವುದಿಲ್ಲ ಎಂದು ನನಗೂ ಮನವರಿಕೆಯಾಗಿದೆ...~

~ಈಗ ನಾವು ಈದಿನದಿಂದ ಅಣ್ಣಾ ತಂಡ ಅಥವಾ ಅಣ್ಣಾ ಪ್ರಮುಖ ಸಮಿತಿಯ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ.~ ಎಂದು ಹಜಾರೆ ಹೇಳಿದ್ದಾರೆ.

ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಅಣ್ಣಾ ತಂಡ ಬೀದಿಗಿಳಿದಿತ್ತು. ಅಣ್ಣಾ ಹಜಾರೆ ಅವರು ನಾಲ್ಕು ಸಲು ಅನಿರ್ದಿಷ್ಟ ನಿರಶನ ನಡೆಸಿದ್ದರು. ನಾಲ್ಕು ಸಲ ಒಂದು ದಿನದ  ಉಪವಾಸ ಮಾಡಿದ್ದರು. ಲೋಕಪಾಲ ಮಸೂದೆ ರಚನಾ ಸಮಿತಿಯಲ್ಲೂ ತಂಡ ಪಾಲ್ಗೊಂಡಿತ್ತು.

ಚುನಾವಣಾ ರಾಜಕೀಯಕ್ಕೆ ಇಳಿಯುವ ಅಣ್ಣಾ ತಂಡದ ನಿರ್ಧಾರಕ್ಕೆ ಈ ಹಿಂದೆ ಪ್ರಮುಖರ ಸಮಿತಿಯ ಸದಸ್ಯರಾದ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಮೇಧಾ ಪಾಟ್ಕರ್, ಚಂದ್ರ ಮೋಹನ್ ಮತ್ತು ಅಖಿಲ್ ಗೊಗೋಯಿ ಮತ್ತಿತರರಿಂದ ವಿರೋಧ ಎದುರಾಗಿತ್ತು.

~ಉತ್ತಮ ವ್ಯಕ್ತಿಗಳನ್ನು ಸಂಸತ್ತಿಗೆ ಕಳುಹಿಸುವ ಪರ್ಯಾಯವನ್ನು ನಾನು ನೀಡಿದ್ದೇನೆ. ಆದರೆ ನಾನು ಯಾವುದೇ ಪಕ್ಷದ ಭಾಗಿಯಾಗುವುದಿಲ್ಲ. ಅಥವಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಜನಲೋಕಪಾಲ ಮಸೂದೆ ಜಾರಿಯ ಬಳಿಕ ನಾನು ಮಹಾರಾಷ್ಟ್ರಕ್ಕೆ ಹಿಂದಿರುಗಿ ನನ್ನ ಚಟುವಟಿಕೆಗಳಲ್ಲಿ ಮಗ್ನನಾಗುತ್ತೇನೆ~ ಎಂದು ಹಜಾರೆ ಹೇಳಿದ್ದಾರೆ.

~ಪಕ್ಷ ರಚಿಸುವವರಿಗೆ ನಾನು ಇದನ್ನು ಹೇಳಿದ್ದೇನೆ. ಪಕ್ಷ ರಚನೆಯ ಬಳಿಕವೂ ಈ ಚಳವಳಿ ಮುಂದುವರಿಯುತ್ತದೆ. ಈ ಚಳವಳಿಯ ಮೂಲಕ ನಾವು ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿದ್ದೆವು. ಈಗ ಚಳವಳಿಯನ್ನು ಜೀವಂತವಾಗಿ ಇಟ್ಟುಕೊಂಡೇ ಒಳ್ಳೆಯ ವ್ಯಕ್ತಿಗಳನ್ನು ನಾವು ಸಂಸತ್ತಿಗೆ ಕಳುಹಿಸುತ್ತೇವೆ. ಮತ್ತು ಜನರ ನೆರವಿನೊಂದಿಗೆ ಲೋಕಾಯುಕ್ತ ಮಸೂದೆ ಜಾರಿಯ ಖಚಿತತೆ ನೀಡುತ್ತೇವೆ~ ಎಂದು ಹಜಾರೆ ವಿವರಿಸಿದ್ದಾರೆ.

~ಅಧಿಕಾರ ಅಥವಾ ಹಣದ ಅಮಲಿಗೆ ಬಲಿಯಾಗಬಾರದು ಎಂಬುದಾಗಿ ನನ್ನ ಸಹೋದ್ಯೋಗಿಗಳಿಗೆ ನಾನು ಹೇಳಿದ್ದೇನೆ. ಸಂಸತ್ತಿಗೆ ಚುನಾಯಿತರಾಗಿ ಹೋದರೆ ಅದು ಜನರು ಮತ್ತು ರಾಷ್ಟ್ರದ ಸೇವೆಗೆ ಲಭಿಸಿದ ಅವಕಾಶ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡೇ ಕೆಲಸ ಮಾಡಬೇಕು~ ಎಂದು ಅಣ್ಣಾ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT