ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಣ್ಣಾ ವಶ- ಚರ್ಚೆಗೆ ಆಸ್ಪದ ನೀಡದ ಸರ್ಕಾರ....

Last Updated 16 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಅಣ್ಣಾ ಹಜಾರೆ ಮತ್ತು ಬೆಂಬಲಿಗರನ್ನು ಪೊಲೀಸ್ ವಶಕ್ಕೆ ತೆಗೆದುಕೊಂಡ ಘಟನೆ ಸಂಸತ್ತಿನ ಉಭಯ ಸದನಗಳಲ್ಲಿ ಕೋಲಾಹಲ ಎಬ್ಬಿಸಿ ಕಲಾಪವನ್ನು ಭಂಗಗೊಳಿಸಿತು.ಹಜಾರೆ ಮತ್ತು ಅವರ ಬೆಂಬಲಿಗರನ್ನು ವಶಕ್ಕೆ ತೆಗೆದುಕೊಳ್ಳುವ ಜತೆಗೆ ಆ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ ಸರ್ಕಾರ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಸರ್ಕಾರದ ವರ್ತನೆ ತುರ್ತು ಪರಿಸ್ಥಿತಿಯ ಕರಾಳತೆಯನ್ನು ನೆನಪಿಗೆ ತಂದಿದೆ ಎಂದು ಪ್ರತಿಪಕ್ಷಗಳು ದೂರಿದವು.
 
ಭ್ರಷ್ಟಾಚಾರ ಪಿಡುಗಿನ ಹಿನ್ನೆಲೆಯಲ್ಲಿ ಅಣ್ಣಾ ಅವರನ್ನು ವಶಕ್ಕೆ ತೆಗೆದುಕೊಂಡ ಬಗ್ಗೆ ಚರ್ಚೆಗೆ ಆಸ್ಪದ ನೀಡಬೇಕು. ಇದಕ್ಕಾಗಿ ಪ್ರಶ್ನೋತ್ತರ ಅವಧಿಯನ್ನು ರದ್ದುಗೊಳಿಸಿ ಚರ್ಚೆಗೆ ಅನುವು ಮಾಡಿಕೊಡಬೇಕು ಎಂದು ಬಿಜೆಪಿ, ಸಿಪಿಐ ಮತ್ತು ಜೆಡಿಯುಗಳು ಆಗ್ರಹಿಸಿದವು. ಇದಕ್ಕೆ ಒಪ್ಪಿಗೆ ಸಿಗದಿದ್ದಾಗ ಕೋಲಾಹಲ ಎಬ್ಬಿಸಿದವು. ಇದರಿಂದಾಗಿ ಎರಡೂ ಸದನಗಳಲ್ಲಿ ಕಲಾಪ ನಡೆಸುವುದು ಅಸಾಧ್ಯವಾಯಿತು.
 
ಮೊದಲಿಗೆ ರಾಜ್ಯಸಭೆಯಲ್ಲಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು. ನಂತರ ಇಡೀ ದಿನದ ಕಲಾಪ ಬರ್ಖಾಸ್ತುಗೊಳಿಸಿ ಬುಧವಾರಕ್ಕೆ ಮುಂದೂಡಲಾಯಿತು. ಇನ್ನು ಲೋಕಸಭೆಯಲ್ಲಿ ಮೊದಲಿಗೆ ಬೆಳಿಗ್ಗೆ 11.30ರವರೆಗೆ ಸದನ ಮುಂದೂಡಲಾಯಿತು.

ನಂತರ ಮಧ್ಯಾಹ್ನ ಮತ್ತೆ ಕಲಾಪ ನಡೆಸಲು ಯತ್ನಿಸಲಾಯಿತು. ಆಗಲೂ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ದಿನದ ಕಲಾಪವನ್ನು ಸ್ಥಗಿತಗೊಳಿಸಿ ಬುಧವಾರಕ್ಕೆ ಮುಂದೂಡಲಾಯಿತು.

ಬೆಳಿಗ್ಗೆ ಲೋಕಸಭೆ ಆರಂಭವಾಗುತ್ತಿದ್ದಂತೆ, ಪ್ರಶ್ನೋತ್ತರ ರದ್ದುಗೊಳಿಸಲು ಕೋರಿ ಸುಷ್ಮಾ ಸ್ವರಾಜ್, ಸಿಪಿಐನ ಗುರುದಾಸ್ ದಾಸ್‌ಗುಪ್ತ, ಜೆಡಿಯು ಮುಖಂಡ ಶರದ್ ಯಾದವ್ ಮತ್ತಿತರರು ನೋಟಿಸ್ ನೀಡಿರುವುದನ್ನು ಸ್ಪೀಕರ್ ಮೀರಾಕುಮಾರ್ ತಿಳಿಸಿದರು.

ಅಣ್ಣಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಬಗ್ಗೆ ಹಾಗೂ ಭ್ರಷ್ಟಾಚಾರದ ಕುರಿತು ತಕ್ಷಣವೇ ಚರ್ಚೆ ನಡೆಸಲು ಅವರು ಕೋರಿದ್ದಾರೆ ಎಂದರು. ನಂತರ ಮೀರಾಕುಮಾರ್, ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿ ರದ್ದುಗೊಳಿಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪ್ರಕಟಿಸಿದರು.

ಆದರೆ ಚರ್ಚೆ ಬಯಸಿರುವ ಸದಸ್ಯರಿಗೆ, ಮಾತನಾಡಬೇಕೆಂದುಕೊಂಡಿರುವ ವಿಷಯದ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ಅವಕಾಶ ಪ್ರಕಟಿಸಿದರು. ಆಗ ಸುಷ್ಮಾ ಸ್ವರಾಜ್ ಮಾತನಾಡಲು ಏಳುತ್ತಿದ್ದಂತೆ ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ.ಬನ್ಸಲ್ ಮಧ್ಯಪ್ರವೇಶಿಸಿ, `ಸರ್ಕಾರ ಮಧ್ಯಾಹ್ನ 12ಕ್ಕೆ ಈ ವಿಷಯ ಕುರಿತು ಚರ್ಚಿಸಲು ಸಿದ್ಧವಿದೆ.

ಸುಷ್ಮಾ ಅವರಿಗೆ ಮಾತನಾಡಲು ಅವಕಾಶ ನೀಡುವುದೇ ಆದರೆ, ಗೃಹ ಸಚಿವ ಚಿದಂಬರಂ ಅವರಿಗೂ ಹೇಳಿಕೆ ನೀಡಲು ಅವಕಾಶ ನೀಡಬೇಕು~ ಎಂದು ವಾದಿಸಿದರು. ಈ ಮಧ್ಯಪ್ರವೇಶದ ಬಗ್ಗೆ ತಕ್ಷಣವೇ ತೀವ್ರ ಅಸಮಾಧಾನ ವ್ಯಕ್ತಪಡಿಸಿದರ ಬಿಜೆಪಿ, ಜೆಡಿಯು, ಸಿಪಿಎಂ, ಸಿಪಿಐ, ಎಸ್‌ಪಿ ಮತ್ತು ಬಿಎಸ್‌ಪಿ ಸದಸ್ಯರು ಬನ್ಸಲ್ ಹೇಳಿಕೆಯನ್ನು ಒಕ್ಕೊರಲಿನಿಂದ ಖಂಡಿಸಿದರು. ಇದಕ್ಕೆ ಜಗ್ಗದ ಕಾಂಗ್ರೆಸ್ ಸದಸ್ಯರು ಪ್ರಶ್ನೋತ್ತರ ಅವಧಿ ನಡೆಸಲೇಬೇಕು ಎಂದು ಪಟ್ಟು ಹಿಡಿದರು. ಆ ಗದ್ದಲದಿಂದಾಗಿ ಸ್ಪೀಕರ್ ಸದನವನ್ನು 11.30ರ ತನಕ ಮುಂದೂಡಿದರು.
  
ಸದನ ಮತ್ತೆ ಸಭೆ ಸೇರಿದಾಗ ಕೂಡ ಅದೇ ತರಹದ ಸನ್ನಿವೇಶಗಳು ಮುಂದುವರಿದವು. ಆಗ ಸ್ಪೀಕರ್ ಮಧ್ಯಾಹ್ನದವರೆಗೆ ಕಲಾಪ ಮುಂದೂಡಿದರು. ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಪುನಃ ಕೋಲಾಹಲ ಎದ್ದಿತು. ಸರ್ಕಾರ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಎಂದು ದೂಷಿಸಿದ ಬಿಜೆಪಿ ಸದಸ್ಯರು, ಸುಷ್ಮಾ ಸ್ವರಾಜ್‌ಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

`ರಾಷ್ಟ್ರದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ~ ಎಂದು ಖಂಡಿಸಿದ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ, ಸುಷ್ಮಾ ಅವರಿಗೆ ಮಾತನಾಡಲು ಅವಕಾಶ ನೀಡದ ಹೊರತು ಕಲಾಪ ನಡೆಯಲು ಬಿಡುವುದಿಲ್ಲ ಎಂದರು. ಅಣ್ಣಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಕುರಿತು ಪ್ರಶ್ನೋತ್ತರ ಅವಧಿಯಲ್ಲಿಯೇ ಚರ್ಚಿಸಲು ಮೀರಾಕುಮಾರ್ ಸೂಚಿಸಿದರು.ಅದಕ್ಕೊಪ್ಪದ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದಾಗ ದಿನದ ಕಲಾಪ ರದ್ದುಗೊಳಿಸಲಾಯಿತು.

 ಸ್ಪೀಕರ್ ಅವರ ಕಾರ್ಯಕ್ಕೆ ಸಚಿವ ಬನ್ಸಲ್ ಅಡ್ಡಿಪಡಿಸುತ್ತಿದ್ದಾರೆ ಎಂದು ಟೀಕಿಸಿದ ಸುಷ್ಮಾ, ಸರ್ಕಾರ ಹೊರಗೆ ಹೇಗೆ ಸಂವಿಧಾನಬಾಹಿರವಾಗಿ ವರ್ತಿಸುತ್ತಿದೆಯೋ ಸದನದ ಒಳಗೆ ಕೂಡ ಅದೇ ರೀತಿ ವರ್ತಿಸುತ್ತಿದೆ ಎಂದರು.
 
ರಾಜ್ಯಸಭೆಯಲ್ಲಿ ಅಧ್ಯಕ್ಷ ಹಮೀದ್ ಅನ್ಸಾರಿ ಅವರು ಮೊದಲ ಪ್ರಶ್ನೆ ಕೈಗೆತ್ತಿಕೊಳ್ಳುತ್ತಿದ್ದಂತೆಯೇ ಪ್ರತಿಪಕ್ಷ ನಾಯಕ ಬಿಜೆಪಿಯ ಅರುಣ್ ಜೇಟ್ಲಿ ವಿಷಯ ಪ್ರಸ್ತಾಪಿಸಲು ಎದ್ದುನಿಂತರು. ಆಡಳಿತಾರೂಢ ಕಾಂಗ್ರೆಸ್ ಸದಸ್ಯರು ಇದಕ್ಕೆ ಅವಕಾಶವನ್ನೇ ನೀಡಲಿಲ್ಲ. ಜೇಟ್ಲಿ ಅವರು ಏನು ಹೇಳುತ್ತಾರೆಂಬುದನ್ನು ಆಲಿಸೋಣ ಎಂದು ಪದೇಪದೇ ಅನ್ಸಾರಿ ಸೂಚಿಸಿದರು. ಆದರೆ ಕಾಂಗ್ರೆಸ್ ಸದಸ್ಯರು, ಪ್ರಶ್ನೋತ್ತರ ಅವಧಿಯನ್ನು ಮೊದಲೇ ನಡೆಸಲೇಬೇಕು ಎಂದರು.
 
ಇದನ್ನು ಒಪ್ಪದ ಪ್ರತಿಪಕ್ಷಗಳ ಸದಸ್ಯರು ಘೋಷಣೆಗಳನ್ನು ಮೊಳಗಿಸಿದಾಗ, ಸದನ ಕೋಲಾಹಲದಲ್ಲಿ ಮುಳುಗಿ ತೀವ್ರ ಗೊಂದಲದ ಸನ್ನಿವೇಶ ಏರ್ಪಟ್ಟಿತು. ಇದರ ಮಧ್ಯೆಯೇ ಜೇಟ್ಲಿ ಎದ್ದುನಿಂತು, ಹಜಾರೆ ಅವರ ಬಂಧನ ರಾಷ್ಟ್ರದ ಪ್ರಜಾಪ್ರಭುತ್ವದ ಮೇಲೆ ನಡೆದ ಘೋರ ಆಕ್ರಮಣ ಎಂದರು.

ಆದರೆ ಆಡಳಿತಾರೂಢ ಸದಸ್ಯರು ಜೇಟ್ಲಿ ಮಾತು ಮುಂದುವರಿಸಲು ಅವಕಾಶ ನೀಡದೆ ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷರು ಕಲಾಪ   ಮುಂದೂಡಿದರು.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT