ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿ ಹಾನಿ: ಕೇಂದ್ರ ತಂಡ ಅಧ್ಯಯನ

909 ಮನೆ, 72 ಹೆಕ್ಟೇರ್ ಕೃಷಿ, 547 ಕಿ.ಮೀ ರಸ್ತೆಗೆ ಹಾನಿ, 18 ಸಾವು
Last Updated 25 ಸೆಪ್ಟೆಂಬರ್ 2013, 10:35 IST
ಅಕ್ಷರ ಗಾತ್ರ

ಮಂಗಳೂರು:- ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಕೇಂದ್ರ ಪರಿಹಾರ ಸಮೀಕ್ಷಾ ತಂಡದ ಅಧಿಕಾರಿಗಳು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ಅಧಿಕಾರಿಗಳ ಜತೆ ಸಮೀಕ್ಷೆ ನಡೆಸಿದರು. 

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬೆಳಿಗ್ಗೆ ಸಭೆ ನಡೆಸಿದ  ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಕೆ.ಶ್ರೀವಾಸ್ತವ ಅವರು ಅತಿವೃಷ್ಟಿಯಿಂದ ಉಂಟಾದ ಹಾನಿಯ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಂದ  ಮಾಹಿತಿ ಪಡೆದರು.

ದ.ಕ–18 ಸಾವು: ‘ಅತಿವೃಷ್ಟಿಯಿಂದಾಗಿ 18 ಜನರು ಮೃತಪಟ್ಟಿದ್ದಾರೆ. 16 ಜಾನುವಾರುಗಳು ಸತ್ತಿವೆ. ಜಿಲ್ಲೆಯಲ್ಲಿ ಒಟ್ಟು 909 ಮನೆಗಳು ಹಾನಿಗೀಡಾಗಿವೆ. 72 ಹೆಕ್ಟೇರ್ ವ್ಯಾಪ್ತಿಯಲ್ಲಿ ಕೃಷಿಗೆ ಹಾನಿಯಾಗಿದೆ. ಜಿಲ್ಲೆಯ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಒಟ್ಟು 547.35 ಕಿ.ಮೀ ರಸ್ತೆಗಳು ಹಾನಿಗೊಳಗಾಗಿವೆ. ಸೇತುವೆ ಮತ್ತು ಕಿರುಸೇತುವೆ ಸಹಿತ ಒಟ್ಟು 39 ಹಾನಿಯಾಗಿವೆ. 21 ಸಣ್ಣ ನೀರಾವರಿ ಕಾಮಗಾರಿಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ’ ಎಂದು  ಜಿಲ್ಲಾಧಿಕಾರಿ ಎನ್‌.ಪ್ರಕಾಶ್‌  ತಿಳಿಸಿದರು.

ಕೇಂದ್ರ ಪರಿಹಾರ ಸಮೀಕ್ಷಾ ತಂಡದ ಸದಸ್ಯ ಸಾರಿಗೆ ಮತ್ತು ಹೆದ್ದಾರಿ ವಿಭಾಗದ ಪ್ರಾದೇಶಿಕ ಅಧಿಕಾರಿ ಸಂಜಯ್ ಗರ್ಗ್, ಯೋಜನಾ ಆಯೋಗದ ಹಿರಿಯ ಸಂಶೋಧನಾ ಅಧಿಕಾರಿ ಮುರುಳೀಧರನ್, ಚೆನ್ನೈನ ತಂಬಾಕು ಅಭಿವೃದ್ಧಿ ಸಂಸ್ಥೆಯ ಪ್ರಭಾರ ನಿರ್ದೇಶಕ ಡಾ.ಕೆ.ಮನೋಹರನ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಕೆ. ಎ., ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದಿನೇನಿ, ಸಹಾಯಕ ಆಯುಕ್ತ ಡಾ. ಪ್ರಶಾಂತ್, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಗೋಪಾಲ್‌ ನಾಯ್ಕ್‌ ಉಪಸ್ಥಿತರಿದ್ದರು.

ಬಂಟ್ವಾಳ: ಅಡಿಕೆ ತೋಟಕ್ಕೆ ಭೇಟಿ
ಬಂಟ್ವಾಳ: ಮೂರೂವರೆ ತಿಂಗಳು ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಹಾನಿಗೀಡಾಗಿರುವ ರಸ್ತೆ ಮತ್ತು ಅಡಿಕೆ ಕೊಳೆರೋಗಪೀಡಿತ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿ.ಸಿ.ರೋಡ್‌ನ ಮೊಡಂಕಾಪು ಸಮೀಪದ ನಲ್ಕೆಮಾರು- ಕೆಂಪುಗುಡ್ಡೆ ಹೊಂಡಮಯ ರಸ್ತೆ ದುಸ್ಥಿತಿಯನ್ನು ವೀಕ್ಷಿಸಿದ ತಂಡವು ಬಳಿಕ ಇಲ್ಲಿನ ಅಮ್ಟಾಡಿ ನಿವಾಸಿಗಳಾದ ರಿಚಾರ್ಡ್ ಮೊಂತೆರೋ ಮತ್ತು ಆಲ್ವಿನ್ ಡಿಸೋಜ ಅವರ ಅಡಿಕೆ ತೋಟಗಳಿಗೆ ಭೇಟಿ ನೀಡಿತು.

ಕೊಳೆರೋಗದಿಂದಾಗಿ ಮರದ ಬುಡದಲ್ಲಿ ರಾಶಿ ಬಿದ್ದ ಅಡಿಕೆಗಳನ್ನು ವೀಕ್ಷಿಸಿದ ತಂಡವು ಬಳಿಕ ಜೊತೆಗಿದ್ದ ಜಿಲ್ಲಾ ತೋಟಗಾರಿಕಾ ನಿರ್ದೇಶಕ ಎಚ್.ಆರ್.­ಯೋಗೀಶ್ ಮತ್ತು ತಾಲ್ಲೂಕಿನ ಸಹಾಯಕ ನಿರ್ದೇಶಕ ಎ.ಸಂಜೀವ ನಾಯ್ಕ ಅವರಿಂದ ಮಾಹಿತಿ ಪಡೆದರು. ಬಂಟ್ವಾಳ ಪೇಟೆ ಸಂಪರ್ಕಿಸುವ ನೆರೆ ವಿಮೋಚನಾ ರಸ್ತೆ ಮತ್ತು ಮಳೆಗಾಲದಲ್ಲಿ ಕುಸಿದ ಕಿರುಸೇತುವೆಯನ್ನು ವೀಕ್ಷಿಸಿದ ಬಳಿಕ ತಂಡವು ಉಪ್ಪಿನಂಗಡಿಯತ್ತ ತೆರಳಿತು.

ಪುತ್ತೂರು: ಬಂದರು.... ಹೋದರು...!
ಪುತ್ತೂರು:  ಕೇಂದ್ರದ ಅಧ್ಯಯನ ತಂಡ ತಾಲ್ಲೂಕಿನ ಕೆಲವೆಡೆ ಭೇಟಿ ನೀಡಿತು.
ತಂಡದ ಅಧಿಕಾರಿಗಳು ಉಪ್ಪಿನಂಗಡಿ ಪುತ್ತೂರು ರಸ್ತೆಯ ಕೋಡಿಂಬಾಡಿಯಲ್ಲಿ ರಸ್ತೆ ಬದಿಯಲ್ಲಿನ ಅಡಿಕೆ ತೋಟವನ್ನು ವೀಕ್ಷಿಸಿದರು. ಬಳಿಕ ಪುತ್ತೂರಿನ ಪ್ರವಾಸಿ ಮಂದಿರಲ್ಲಿ ಕೆಲ ಕಾಲ ತಂಗಿದ ಅಧಿಕಾರಿಗಳು ಪತ್ರಕರ್ತರಿಗೆ ಮಾಹಿತಿ ನೀಡಲು ನಿರಾಕರಿಸಿದರು. ಅಲ್ಲಿಂದ  ಮಡಿಕೇರಿಗೆ ತೆರಳಿದರು.

ಅಧಿಕಾರಿಗಳು ರಸ್ತೆ ಬದಿಯಲ್ಲಿರುವ ಅಡಿಕೆ ತೋಟ ಹಾಗೂ ಮುಖ್ಯ ರಸ್ತೆಯನ್ನು ಮಾತ್ರ ಪರಿಶೀಲನೆ ನಡೆಸಿದ್ದು, ಹೆಚ್ಚು ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿಲ್ಲ ಎಂಬ ಆರೋಪವೂ ಕೇಳಿಬಂತು.

ಸುದ್ದಿಗಾರರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಎನ್.ಪ್ರಕಾಶ್‌, ‘ಈ ಬಾರಿಯ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಅಡಿಕೆ ಬೆಳೆಯನ್ನು ಬಾಧಿಸಿದ ಕೊಳೆರೋಗದಿಂದಾಗಿ ₨ 232ಕೋಟಿ ನಷ್ಟವಾಗಿದೆ. ರಸ್ತೆ ಹಾನಿಯ ವೆಚ್ಚ ₨ 24 ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರದ ಈ ತಂಡವು ಪರಿಶೀಲನೆ ನಡೆಸಿದ ಬಳಿಕ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕೇಂದ್ರಕ್ಕೆ ವರದಿ ನೀಡಲಿದೆ’ ಎಂದರು.

ಸುಳ್ಯ: ಹಾನಿ ಪರಿಶೀಲಿಸದ ತಂಡ
ಸುಳ್ಯ: ಸುಳ್ಯಕ್ಕೆ ಭೇಟಿ ನೀಡಬೇಕಿದ್ದ ಕೇಂದ್ರದ ತಂಡ ಯಾವ ಮಾಹಿತಿಯನ್ನೂ ನೀಡದೇ ನೇರವಾಗಿ ಮಡಿಕೇರಿಗೆ ಪ್ರಯಾಣ ಬೆಳೆಸಿದ್ದರಿಂದಾಗಿ ಅಹವಾಲು ಸಲ್ಲಿಸಲು ಕಾದಿದ್ದ ರೈತರು ಬಂದ ದಾರಿಗೆ ಸುಂಕ ಇಲ್ಲದೇ ಮರಳಿದರು.

ಕೇಂದ್ರದ ತಂಡವು ಮಧ್ಯಾಹ್ನ 3 ಗಂಟೆ ಬಳಿಕ ಪೆರುವಾಜೆ, ಬೆಳ್ಳಾರೆ, ಐವರ್ನಾಡು, ಸುಳ್ಯ, ಆಲೆಟ್ಟಿ, ಸಂಪಾಜೆ ಗ್ರಾಮಗಳಿಗೆ ತೆರಳಿ ಪರಿಶೀಲಿಸಲಿದೆ ಎಂದು ಪತ್ರಕರ್ತರಿಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಜಾಲ್ಸೂರು-, ಸೋಣಂಗೇರಿ, -ಎಲಿಮಲೆ- ಮರ್ಕಂಜ, -ಅರಂತೋಡು ರಸ್ತೆಯಲ್ಲಿ ಸಾಗಿದ ತಂಡವು ಯಾವುದೇ ತೋಟಗಳಿಗೂ ಭೇಟಿ ನೀಡದೇ ನೇರವಾಗಿ ಮಡಿಕೇರಿಗೆ ಪ್ರಯಾಣಿಸಿದೆ. ಬೆಳ್ಳಾರೆಯಲ್ಲಿ ಕಾದು ಕುಳಿತ ಅಧಿಕಾರಿಗಳು, ಪತ್ರಕರ್ತರು ಮಾಹಿತಿ ಇಲ್ಲದೆ ವಾಪಸಾಗಬೇಕಾಯಿತು.

ಜನಪ್ರತಿನಿಧಿಗಳಿಗೂ ಮಾಹಿತಿ ಇಲ್ಲ: ಅಧ್ಯಯನ ತಂಡದ ಪ್ರವಾಸದ ಬಗ್ಗೆ ಅಧಿಕಾರಿಗಳಿಗಾಗಲೀ, ಜನಪ್ರತಿನಿಧಿಗಳಿಗಾಗಲೀ ಸ್ಪಷ್ಟ ಮಾಹಿತಿ ಇರಲಿಲ್ಲ. ಜನಪ್ರತಿನಿಧಿಗಳು ಪ್ರವಾಸಿ ಮಂದಿರದಲ್ಲಿ ಕಾದು ಕುಳಿತಿದ್ದರು. 

ಜಿಲ್ಲಾಧಿಕಾರಿ ಹೊಣೆ: ‘ಅತಿವೃಷ್ಟಿಯಿಂದ ಅತಿ ಹೆಚ್ಚು ಹಾನಿಯಾಗಿದ್ದು ಸುಳ್ಯ ತಾಲ್ಲೂಕಿನಲ್ಲಿ. ಇಲ್ಲಿಗೆ ಜಿಲ್ಲಾಧಿಕಾರಿಗಳೇ ಬರಲಿಲ್ಲ. ತಂಡವನ್ನು ಕರೆತರಲಿಲ್ಲ’ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ ದೂರಿದ್ದಾರೆ.

‘ಬೆಂಗಾವಲು ವಾಹನದಲ್ಲಿ ವೇಗವಾಗಿ ರಸ್ತೆಯಲ್ಲಿ ಸಾಗಿದರೆ ರೈತರ ಸಂಕಷ್ಟ ಅವರಿಗೆ ಹೇಗೆ ಅರ್ಥವಾಗುತ್ತದೆ. ಅತಿವೃಷ್ಟಿ ಅಧ್ಯಯನಕ್ಕೆ ₨ 7 ಲಕ್ಷ ಬಿಡುಗಡೆ ಆಗಿದೆ. ಅಧಿಕಾರಿಗಳು ರೈತರ ತೋಟ ವೀಕ್ಷಿಸದೇ ಯಾವ ರೀತಿ ವರದಿ ಮಾಡುತ್ತಾರೆ?’ ಎಂದು ಅವರು ಪ್ರಶ್ನಿಸಿದ್ದಾರೆ. 

‘ಅಧಿಕಾರಿಗಳು ಅಧ್ಯಯನಕ್ಕೆ ಬಂದದ್ದಲ್ಲ. ಸರ್ಕಾರಿ ಹಣದಲ್ಲಿ ಮೋಜು ಮಾಡಲು ಬಂದದ್ದು’ ಎಂದು ಸುಳ್ಯ ಎಪಿಎಂಸಿ ಅಧ್ಯಕ್ಷ ಜಯರಾಮ ಹಾಡಿಕಲ್ಲು ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT