ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಾವರದ ಅಪಾರ್ಟ್‌ಮೆಂಟ್‌ನಲ್ಲಿ ತಪಾಸಣೆ

ಮಂಗಳೂರಿನಲ್ಲಿ ಬೀಡುಬಿಟ್ಟ ಎನ್‌ಐಎ ತಂಡ?
Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮಂಗಳೂರು: ಬಂಧಿತ ಉಗ್ರ ಯಾಸಿನ್‌ ಭಟ್ಕಳನ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಪೊಲೀಸರು ಭಯೋತ್ಪಾದನೆ ಚಟುವಟಿಕೆ ಬಗ್ಗೆ ಮಾಹಿತಿ ಕಲೆ ಹಾಕುವ ಸಲುವಾಗಿ ಮಂಗಳೂರಿನಲ್ಲಿ ಬೀಡುಬಿಟ್ಟ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ಲಭ್ಯವಾಗಿದೆ.

ಇಲ್ಲಿನ ಅತ್ತಾವರದಲ್ಲಿ ಮೂರು-ನಾಲ್ಕು ದಿನಗಳ ಕಾಲ ಮಫ್ತಿಯಲ್ಲಿ ಸುತ್ತಾಡುತ್ತಿದ್ದ ಎನ್‌ಐಎ ಅಧಿಕಾರಿಗಳ ತಂಡ  ಅಲ್ಲಿನ ಅಪಾರ್ಟ್‌ಮೆಂಟ್‌ನ ಬಾಡಿಗೆ ಮನೆಯೊಂದರ ಬೀಗ ತೆಗೆಸಿ ತಪಾಸಣೆ ನಡೆಸಿದೆ ಎಂದು ಸ್ಥಳೀಯ ನಿವಾಸಿಗಳು ‘ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಎನ್‌ಐಎ ಅಧಿಕಾರಿಗಳು ಅತ್ತಾವರದ 'ಝೆಫೈರ್‌ ಹೈಟ್ಸ್‌' ಅಪಾರ್ಟ್‌­ಮೆಂಟ್‌ನ ಮೂರನೇ ಮಹಡಿ­ಯಲ್ಲಿ­ರುವ ಬಾಡಿಗೆ ಮನೆಯೊಂದನ್ನು (ಸಂಖ್ಯೆ 301) ಕಳೆದ ಶುಕ್ರವಾರ ತಪಾಸಣೆ ನಡೆಸಿ, ಕೆಲ­ವೊಂದು ಪರಿಕರಗಳನ್ನು ಪೆಟ್ಟಿಗೆಯಲ್ಲಿ ತುಂಬಿಸಿ­ಕೊಂಡು ಹೋಗಿದ್ದಾರೆ. ಆ ಮನೆಯಲ್ಲಿ ವಾಸವಿದ್ದ ಯುವಕರ ಚಲನವಲನದ ಬಗ್ಗೆಯೂ ಸ್ಥಳೀಯರಲ್ಲಿ ವಿಚಾರಣೆ ನಡೆಸಿದ್ದಾರೆ. ಅಪಾರ್ಟ್‌ಮೆಂಟ್‌ನ ತಳ ಮಹಡಿಯಲ್ಲಿರುವ ಸೈಬರ್‌ ಕೆಫೆಯಲ್ಲೂ ಆ ಮನೆಯಲ್ಲಿ ವಾಸವಿದ್ದ ಯುವಕರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

‘ಕಳೆದ ವಾರ ಅಪಾರ್ಟ್‌ಮೆಂಟ್‌ನ ಆಸುಪಾಸಿನಲ್ಲಿ ಕೆಲವು ಮಂದಿ ಸುತ್ತಾಡುತ್ತಿದ್ದರು. ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಪಕ್ಕದ ಬಾಡಿಗೆ ಮನೆಯ ಬಾಗಿಲನ್ನು ಕಟ್ಟಡದ ಮಾಲೀಕರಿಂದ ತೆಗೆಸಿ, ಒಳಗಡೆ ತಾಸುಗಟ್ಟಲೆ ತಪಾಸಣೆ ನಡೆಸಿದರು. ನಮ್ಮ ಬಳಿ ಕುಳಿತುಕೊಳ್ಳಲು ಕುರ್ಚಿ ನೀಡುವಂತೆ ಕೇಳಿದರು. ಅವರು ಕೈಗವಸು ಧರಿಸಿದ್ದರು. ಮನೆಯ ಕೊಠಡಿಗಳ ಫೋಟೊ ತೆಗೆದರು. ನಾವು ವಿಚಾರಿಸಿದಾಗ ಈ ಮನೆಯ­ಲ್ಲಿದ್ದವರು ವಂಚನೆ ನಡೆಸಿದ್ದಾರೆ. ಅದಕ್ಕೆ ತಪಾಸಣೆ ನಡೆಸುತ್ತಿದ್ದೇವೆ ಎಂದಷ್ಟೇ ತಿಳಿಸಿದ್ದರು' ಎಂದು ಅಪಾರ್ಟ್‌ಮೆಂಟಿನ ನಿವಾಸಿಗಳು ತಿಳಿಸಿದರು. 

ಹೆಲ್ಮೆಟ್‌ ಧರಿಸಿ ಸುತ್ತಾಡುತ್ತಿದ್ದರು: ‘ಆ ಮನೆಯಲ್ಲಿದ್ದವರು ಯಾಸಿನ್‌ ಭಟ್ಕಳ ಸಹಚರರೋ ಅಲ್ಲವೋ ಗೊತ್ತಿಲ್ಲ. ಆ ಮನೆಯಲ್ಲಿ ಒಟ್ಟು ಮೂವರು ಯುವಕರು ಇದ್ದರು. ಅವರು ಹೆಲ್ಮೆಟ್‌ ಧರಿಸಿ ಮನೆಯೊಳಗೆ ಬರುತ್ತಿದ್ದುದನ್ನು ಮಾತ್ರ ನಾವು ನೋಡಿದ್ದೆವು. ಅವರ ಮನೆಯಲ್ಲಿ ರಾತ್ರಿ 12 ಗಂಟೆವರೆಗೂ ದೀಪ ಆರುತ್ತಿರಲಿಲ್ಲ. ಅವರ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಆ ಯುವಕರ ಬಗ್ಗೆ ಮಫ್ತಿಯಲ್ಲಿದ್ದ ಪೊಲೀಸರೂ ನಮ್ಮ ಬಳಿಯೂ ವಿಚಾರಣೆ ನಡೆಸಿದ್ದಾರೆ. ಅವರು ಯಾಸಿನ್‌ ಭಟ್ಕಳ ಬಗ್ಗೆ ನಮ್ಮ ಬಳಿ ಕೇಳಲಿಲ್ಲ’ ಎಂದು ತಿಳಿಸಿದರು.

‘ಕಳೆದ ಬುಧವಾರ (ಸೆ.4ರಂದು) ಎನ್‌ಐಎ ಅಧಿಕಾರಿಗಳು ಎಂದು ಪರಿಚಯಿಸಿಕೊಂಡ ಅಧಿಕಾರಿ­ಗಳ ತಂಡ ಮೇಲಿನ ಮನೆಯಲ್ಲಿ ಬಾಡಿಗೆಗಿದ್ದ ಯುವ­ಕರು ಇಂಟರ್ನೆಟ್‌ ಬಳಸಲು ಇಲ್ಲಿಗೆ ಬರುತ್ತಿದ್ದರೇ? ಎಂದು ನನ್ನ ಬಳಿ ವಿಚಾರಿಸಿದ್ದಾರೆ. ಬಾಡಿಗೆ ಮನೆಯಲ್ಲಿದ್ದ ಯುವಕರು ಇಲ್ಲಿಗೆ ಬರುತ್ತಿರಲಿಲ್ಲ. ಅದನ್ನು ಅವರಿಗೂ ತಿಳಿಸಿದ್ದೇವೆ. ಇದಾದ ಎರಡು ದಿನಗಳ ಬಳಿಕ ಅಧಿಕಾರಿಗಳು ಮತ್ತೆ ಬಂದು 301 ಸಂಖ್ಯೆಯ ಬಾಡಿಗೆಮನೆಯ ತಪಾಸಣೆ ನಡೆಸಿದರು’ ಎಂದು ಅಪಾರ್ಟ್‌ಮೆಂಟ್‌ನ ತಳ ಅಂತಸ್ತಿನಲ್ಲಿರುವ ಸೈಬರ್‌ ಕೆಫೆಯ ಉದ್ಯೋಗಿಯೊಬ್ಬರು ತಿಳಿಸಿದರು. 

ಪೆಟ್ಟಿಗೆಯೊಂದಿಗೆ ನಿಗರ್ಮಿಸಿದರು: ‘ಪೊಲೀಸರು ಒಂದು ಸ್ಕಾರ್ಪಿಯೊ ವಾಹನ ಹಾಗೂ ಇನ್ನೋವಾ ವಾಹನದಲ್ಲಿ ಶುಕ್ರವಾರ (ಸೆ 6)ಬೆಳಿಗ್ಗೆ 10 ಗಂಟೆಗೆ ಮತ್ತೆ ಬಂದಿದ್ದರು. ಏಳೆಂಟು ಮಂದಿ ತಂಡದಲ್ಲಿದ್ದರು. ಅವರ ಬಳಿ ಒಬ್ಬ ಯುವಕನೂ ಇದ್ದ, ಆತ ಪೊಲೀಸ್‌ ಅಧಿಕಾರಿಯೋ ಅಥವಾ ಯಾಸಿನ್‌ ಭಟ್ಕಳ ಸಹಚರ­ನೋ ಗೊತ್ತಿಲ್ಲ. ನೋಡಲು ಯಾಸಿನ್‌ ಭಟ್ಕಳ ತರಹ ಇರಲಿಲ್ಲ.

  ಅವರು ಬಾಡಿಗೆ ಮನೆಯಲ್ಲಿ ಸಿಕ್ಕಿದ್ದ ವಸ್ತುಗಳನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿಸಿ ಸಂಜೆ ವೇಳೆ ಕೊಂಡೊಯ್ದಿದ್ದಾರೆ. ಅಂದು ವಾಹನದಲ್ಲಿ ಬಂದ ಪೊಲೀಸರು ಮೂರು ನಾಲ್ಕು ದಿನ ಈ ಪರಿಸರದಲ್ಲಿ ಸುತ್ತಾಡುತ್ತಿದ್ದರು’ ಎಂದು ತಿಳಿಸಿದರು. ಈ ಅಪಾರ್ಟ್‌ಮೆಂಟ್‌ನಲ್ಲಿ ಯಾಸಿನ್‌ ಭಟ್ಕಳ್‌ ಸಹಚರರ ಜತೆ ವಾಸವಾಗಿದ್ದ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ಲ.

‘ವಾಸವಿದ್ದುದು ಮೂರೇ ತಿಂಗಳು?’
‘301 ಸಂಖ್ಯೆಯ ಬಾಡಿಗೆ ಮನೆಯಲ್ಲಿದ್ದ ಯುವಕರ ಹೆಸರು ಮತ್ತಿತರ ವಿವರ ಮಾಲೀಕ­ರಿಗಷ್ಟೇ ಗೊತ್ತು. ಯುವಕರು ಹೆಚ್ಚೆಂದರೆ ಮೂರು ತಿಂಗಳಿಂದ ಅಲ್ಲಿ ವಾಸವಾಗಿದ್ದರು. ಅವರು ಅಕ್ಕಪಕ್ಕದವರ ಜತೆ ಮಾತನಾಡು­ತ್ತಿರಲಿಲ್ಲ’ ಎಂದು ಪಕ್ಕದ ಬಾಡಿಗೆ ಮನೆಯ ನಿವಾಸಿಗಳು ತಿಳಿಸಿದ್ದಾರೆ. ‘ಝೆಫೈರ್‌ ಹೈಟ್ಸ್‌’ ಅಪಾರ್ಟ್‌ಮೆಂಟ್‌ನ ಮಾಲೀಕರ ಮನೆಯೂ ಅದೇ ಕಟ್ಟಡದ ತಳ ಅಂತಸ್ತಿನಲ್ಲಿದೆ. ಆದರೆ ಗುರುವಾರ ಅವರ ಮನೆಗೂ ಬೀಗ ಹಾಕಲಾಗಿತ್ತು. ಮಾಲೀಕರು ದೂರವಾಣಿ ಕರೆಗೂ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT