ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ: ಪತ್ರಿಕೆಗಳಿಗೆ ಸವದಿ ಬೆಂಬಲಿಗರ ತಡೆ

Last Updated 8 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಳಗಾವಿ:  ಸಚಿವ ಲಕ್ಷ್ಮಣ ಸವದಿ ಅವರು ಸದನದಲ್ಲಿ `ಸೆಕ್ಸ್ ಫಿಲಂ~ ನೋಡಿದ ವರದಿ ಪ್ರಕಟಗೊಂಡಿದ್ದ `ಪ್ರಜಾವಾಣಿ~ ಹಾಗೂ `ಡೆಕ್ಕನ್ ಹೆರಾಲ್ಡ್~ ಸೇರಿದಂತೆ ಯಾವುದೇ ಪತ್ರಿಕೆಗಳು ಅಥಣಿ ತಾಲ್ಲೂಕು ತಲುಪದಂತೆ ಸವದಿ ಬೆಂಬಲಿಗರು ಜಿಲ್ಲೆಯ ಗೋಕಾಕಿನಲ್ಲಿಯೇ ತಡೆದು, ಬಲವಂತವಾಗಿ  ವಶಕ್ಕೆ ತೆಗೆದುಕೊಂಡ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.

ಅಥಣಿ ತಾಲ್ಲೂಕಿನಲ್ಲಿ ಎಲ್ಲೂ ಪತ್ರಿಕೆಗಳು ಜನರನ್ನು ತಲುಪದಂತೆ ಮಾಡಲು ಕ್ಷೇತ್ರದ ಶಾಸಕರೂ ಆದ ಸವದಿ,  ತಮ್ಮ ಬೆಂಬಲಿಗರ ಮೂಲಕ ಎಲ್ಲ ಪತ್ರಿಕೆಗಳ ಬಂಡಲುಗಳನ್ನು ಗೋಕಾಕ್‌ನಲ್ಲಿಯೇ ಬಲವಂತವಾಗಿ ಇಳಿಸಿಕೊಂಡರು. ವಿಷಯ ತಿಳಿದ ಕೂಡಲೇ `ಪ್ರಜಾವಾಣಿ~ ಪ್ರಸರಣ ವಿಭಾಗದ ಸಿಬ್ಬಂದಿ ಬೆಳಗಾವಿಯಿಂದ ಅಥಣಿಗೆ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಿದರು. ಬೆಳಿಗ್ಗೆ 11ರ ಸುಮಾರಿಗೆ ಪತ್ರಿಕೆಗಳು ಅಲ್ಲಿಗೆ ತಲುಪಿದಾಗ, ಕ್ಷಣಾರ್ಧದಲ್ಲೇ ಪತ್ರಿಕೆಗಳು ಮಾರಾಟವಾದವು. 
 

ಲಕ್ಷ್ಮಣ ಸವದಿಯವರ ಬೆಂಬಲಿಗರು ಮಂಗಳವಾರ ರಾತ್ರಿಯೇ ಅಥಣಿಯಲ್ಲಿ ಪೇಪರ್ ಏಜೆಂಟ್‌ರನ್ನು ಸಂಪರ್ಕಿಸಿ ಎಲ್ಲೂ ಪತ್ರಿಕೆಗಳನ್ನು ಹಂಚಬಾರದು ಎಂದು ಒತ್ತಡ ಹೇರಿದ್ದರು. ಅದಕ್ಕೆ ಏಜೆಂಟರು ಒಪ್ಪದಿದ್ದಾಗ ಪತ್ರಿಕೆ ಹೊತ್ತು ಸಾಗುವ ವಾಹನಗಳನ್ನೇ ಬುಧವಾರ ಬೆಳಗಿನ ಜಾವ ಗೋಕಾಕಿನ ಹೊರವಲಯದಲ್ಲಿ ತಡೆಯಲು ಸಂಚು ರೂಪಿಸಿ, ಪತ್ರಿಕೆಗಳನ್ನು ವಶಕ್ಕೆ ತೆಗೆದುಕೊಂಡರು.

ಗೋಕಾಕಿನ ನಾಕಾ ಬಳಿ ಪತ್ರಿಕೆ ಸಾಗಿಸುತ್ತಿದ್ದ ವಾಹನವನ್ನು ತಡೆದ 10ಕ್ಕೂ ಹೆಚ್ಚು ಜನರಿದ್ದ ಗುಂಪು, ಅಥಣಿ ತಾಲ್ಲೂಕಿಗೆ ಹೋಗುವ ಪೇಪರ್ ಬಂಡಲ್‌ಗಳನ್ನು ಕೆಳಗೆ ಹಾಕುವಂತೆ ಸೂಚಿಸಿತು. ಇದಕ್ಕೆ ಒಪ್ಪದಿದ್ದಾಗ ವಾಹನವನ್ನು ಮುಂದೆ ಹೋಗಲು ಬಿಡುವುದಿಲ್ಲ ಎಂದರು. ಇದನ್ನು ಲೆಕ್ಕಿಸದಿದ್ದಾಗ ಬಿಜೆಪಿ ಮುಖಂಡರೊಬ್ಬರ  ಹೆಸರು ಹೇಳಿ ಬೆದರಿಸಿದರು ಎಂದು `ಪ್ರಜಾವಾಣಿ~ ಪತ್ರಿಕೆ ಸಾಗಿಸುತ್ತಿದ್ದ ಗುತ್ತಿಗೆ ವಾಹನ ಚಾಲಕ ಶಂಕರಯ್ಯ ಹಿರೇಮಠ ತಿಳಿಸಿದ್ದಾರೆ.

ಅಥಣಿ ತಾಲ್ಲೂಕಿಗೆ ವಿತರಣೆಯಾಗುವ ಪತ್ರಿಕೆಗಳನ್ನು ಇಲ್ಲಿಯೇ ಇಳಿಸಿರಿ. ಅದರ ಹಣವನ್ನು ಪಾವತಿಸಲಾಗುವುದು ಎಂದು ಗುಂಪು ಹೇಳಿದೆ. ಗಲಾಟೆಯಿಂದ ಗಾಬರಿಗೊಂಡಿದ್ದ ವಾಹನ ಚಾಲಕ, ವಾಹನದಿಂದ ಪತ್ರಿಕೆಗಳ ಬಂಡಲ್‌ಗಳನ್ನು ಇಳಿಸಿದರು. ಆದರೆ ನಂತರ ಹಣವನ್ನು ಕೊಡಲಿಲ್ಲ. ಬದಲಿಗೆ ಮುಂದೆ ಸಾಗುವಂತೆ ಗುಂಪು ಸೂಚಿಸಿತು. ಇದೇ ರೀತಿ ಉಳಿದ ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳ ಬಂಡಲ್‌ಗಳನ್ನೂ ಇಳಿಸಿಕೊಳ್ಳಲಾಯಿತು. ಮಿರಜ್‌ನಿಂದ ಅಥಣಿಗೆ ಬರುತ್ತಿದ್ದ ಮರಾಠಿ ಪತ್ರಿಕೆಗಳನ್ನು ಹೊರವಲಯದಲ್ಲಿ ತಡೆಹಿಡಿದರು.

ವಿದ್ಯುತ್, ಕೇಬಲ್ ಕಡಿತ: ಸದನದಲ್ಲಿ ಲಕ್ಷ್ಮಣ ಸವದಿ `ಸೆಕ್ಸ್ ಫಿಲಂ~ ನೋಡುತ್ತಿದ್ದ ಸುದ್ದಿ ಸಂಜೆ 7 ಗಂಟೆ ಸುಮಾರಿಗೆ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಸವದಿ ಬೆಂಬಲಿಗರು, ಅಥಣಿ ತಾಲ್ಲೂಕಿನಾದ್ಯಂತ ವಿದ್ಯುತ್ ಸರಬರಾಜು ಕಡಿತವಾಗುವಂತೆ ನೋಡಿಕೊಂಡರು.

ಸುದ್ದಿ ವಾಹಿನಿಗಳಲ್ಲಿ `ಸೆಕ್ಸ್ ಫಿಲಂ~ ಹಗರಣ ಪ್ರಸಾರವಾಗುತ್ತಿರುವ ಕುರಿತು ಮೊಬೈಲ್‌ಗಳ ಮೂಲಕ ಸ್ನೇಹಿತರು ವಿಚಾರಿಸತೊಡಗಿದರು. ಇದೇ ಕಾರಣಕ್ಕೆ ವಿದ್ಯುತ್ ಸರಬರಾಜು ಕಡಿತಗೊಳಿಸಲಾಗಿದೆ ಎಂಬುದನ್ನು ಅರಿತ ಕಾಂಗ್ರೆಸ್ ಕಾರ್ಯಕರ್ತರು, 8.45ರ ಹೊತ್ತಿಗೆ ಹೆಸ್ಕಾಂ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ ಬಳಿಕ ವಿದ್ಯುತ್ ಪೂರೈಕೆ ಆರಂಭಿಸಲಾಯಿತು.

ಈ ನಡುವೆಯೇ ಸವದಿ ಬೆಂಬಲಿಗರು ಕೇಬಲ್ ಆಪ್‌ರೇಟರ್‌ಗಳ ಮೇಲೆ ಒತ್ತಡ ಹಾಕಿ ತಾಲ್ಲೂಕಿನಲ್ಲಿ ಕೇಬಲ್ ಪ್ರಸಾರವನ್ನು  ಸ್ಥಗಿತಗೊಳಿಸಿ, ಸುದ್ದಿ ಸಾರ್ವಜನಿಕರನ್ನು ತಲುಪದಂತೆ  ನೋಡಿಕೊಂಡರು. ಅಥಣಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಮತ್ತೆ ಕೇಬಲ್ ಆಪರೇಟರ್‌ಗಳು ಪ್ರಸಾರ ಆರಂಭಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT