ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೇ ರಾಗ ಹಾಡಿದ ಜಿದ್ದಿ'

Last Updated 31 ಜನವರಿ 2013, 19:59 IST
ಅಕ್ಷರ ಗಾತ್ರ

ಐವತ್ತರ ದಶಕದಲ್ಲಿ ಹಿಂದಿಯ `ನಯಾ ದೌರ್' ಚಿತ್ರದ ಹಾಡೊಂದನ್ನು ಸಂಗೀತ ನಿರ್ದೇಶಕ ಗಿರಿಧರ್ ದಿವಾನ್ `ಜಿದ್ದಿ' ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ. ಮಹಮದ್ ರಫಿ ಹಾಗೂ ಆಶಾ ಭೋಂಸ್ಲೆ ಕಂಠ ಸಿರಿಯಲ್ಲಿ ಆ ಹಾಡು ಮೂಡಿಬಂದಿತ್ತು. ಪ್ರಜ್ವಲ್ ದೇವರಾಜ್ ಹಾಗೂ ಐಶ್ವರ್ಯ ನಾಗ್ ಅಭಿನಯದ `ಜಿದ್ದಿ'ಯ ಈ ಗೀತೆಯನ್ನು ಹಾಡಿದವರು ರಾಜೇಶ್ ಕೃಷ್ಣನ್. ಸಾಹಿತ್ಯ ಒದಗಿಸಿರುವುದು ಗೀತರಚನೆಕಾರ ಗೌಸ್‌ಪೀರ್.

ಈ ರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ನಂತರದ ಪ್ರಶ್ನೆ. ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭದಲ್ಲಿ ದಿವಾನ್ ಮಾತ್ರ ನಂದೇನೂ ತಪ್ಪಿಲ್ಲ ಎಂದು ವಾದಿಸಿದ್ದಾರೆ. ನಿರ್ಮಾಪಕರ ಅಣತಿಯ ಮೇರೆಗೆ ಹಾಡನ್ನು ಬಳಸಿಕೊಂಡೆ ಎನ್ನುತ್ತಿದ್ದಾರೆ. ಈ ಹಾಡಿನ ಕಾರಣಕ್ಕಾಗಿಯೇ ಐಶ್ವರ್ಯ ನಾಗ್ ಚಿತ್ರವನ್ನು ಒಪ್ಪಿಕೊಂಡರಂತೆ.

ಆನಂದ್ ಆಡಿಯೋ ಧ್ವನಿಮುದ್ರಿಕೆಯನ್ನು ಹೊರತಂದಿದ್ದು, ನಾಯಕನಟರಾದ ಅಜಯ್‌ರಾವ್ ಹಾಗೂ ಶ್ರೀನಗರ ಕಿಟ್ಟಿ ಸೀಡಿ ಬಿಡುಗಡೆ ಮಾಡಿದರು. ಹಾಡಿನಂತೆಯೇ ಕತೆ ಕೂಡ ಎರವಲು ಪಡೆದದ್ದೇ. ಇದು ಮಲಯಾಳಂನ `ಪುದಿಯ ಮುಖಂ' ಚಿತ್ರದ ರೀಮೇಕ್. ನಿರ್ದೇಶಕರು ಅನಂತರಾಜು. ನಿರ್ಮಾಪಕರು ಅಮರ್‌ಚಂದ್ ಜೈನ್ ಹಾಗೂ ವಿಜಯ್ ಸುರಾನಾ. ಮಲಯಾಳಂ ಚಿತ್ರದ ಮಾಸ್ ಗುಣಗಳನ್ನು ಇಷ್ಟಪಟ್ಟ ಅವರು ಅದರ ರೀಮೇಕ್ ಹಕ್ಕುಗಳನ್ನು ಪಡೆದಿದ್ದರು. ಜಿದ್ದಿಯ ಕೆಲಸ ಕಾರ್ಯಗಳೆಲ್ಲಾ ಪೂರ್ಣಗೊಂಡಿದ್ದು ಇನ್ನೇನು ಬಿಡುಗಡೆಗೆ ಸಿದ್ಧವಾಗಲಿದೆ. ಪ್ರಜ್ವಲ್ ಅವರ ಬಹುತೇಕ ಸಿನಿಮಾಗಳಲ್ಲಿ ಖಳರಾಗಿರುವ ತಿಲಕ್ ಇಲ್ಲಿಯೂ ಋಣಾತ್ಮಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಶ್ರೀನಗರ ಕಿಟ್ಟಿ ನಿರಂತರವಾಗಿ ರೀಮೇಕ್ ಚಿತ್ರಗಳನ್ನು ತಯಾರಿಸುವ ಬದಲು  ಸ್ವಮೇಕ್ ಪ್ರಯೋಗ ಮಾಡುವಂತೆ ನಿರ್ದೇಶಕರಿಗೆ ಸಲಹೆ ನೀಡಿದರು.  ಲಲನೆಯರಲ್ಲಿ ಪ್ರಜ್ವಲ್ ಪ್ರಭಾವ ಎಷ್ಟಿದೆ ಎಂಬುದನ್ನು ಹೇಳುವುದರತ್ತಲೇ ಅಜಯ್‌ರಾವ್ ಚಿತ್ತ ಹರಿಸಿದ್ದರು. ಅವರು ಬೀದರ್‌ನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ ಸಂದರ್ಭ.

ಹುಡುಗಿಯರ ಹಿಂಡೊಂದು ಅಜಯ್‌ರ ಬಳಿಗೆ ಬಂದಿತು. ಇದನ್ನು ಕಂಡು ಇವರಿಗೆ ಖುಷಿಯೋ ಖುಷಿ. ತಾನೊಬ್ಬ ಜನಪ್ರಿಯ ನಟನಾಗಿದ್ದೇನೆ ಎಂಬ ಹೆಮ್ಮೆ. ಆದರೆ ಹಾಗೆ ಬಂದ ಯುವತಿಯರು ತಕ್ಷಣ ಪ್ರಜ್ವಲ್‌ರ ಫೋನ್ ನಂಬರ್ ಕೇಳಿದರಂತೆ. ಕನ್ನಡ ಚಿತ್ರರಂಗದ ಮೋಹಕ ನಟ ಪ್ರಜ್ವಲ್ ಎನ್ನುವುದು ಅಜಯ್ ನೀಡಿರುವ ಸರ್ಟಿಫಿಕೇಟು.ಸಮಾರಂಭದಲ್ಲಿ ಹಾಜರಿದ್ದ ಐಂದ್ರಿತಾ ರೇ ತರಾತುರಿಯಲ್ಲಿ ಹೊರಟರು. ಆ ಕಾರಣಕ್ಕಾಗಿ ಮೊದಲೇ ಅವರಿಗೆ ಮೈಕ್ ಹಸ್ತಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT