ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ಬೇಕು, ಜವಾಬ್ದಾರಿ ಬೇಡವೇ?

Last Updated 14 ಜೂನ್ 2011, 8:45 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಸಭೆಯ ಚುನಾಯಿತ ಸದಸ್ಯರಿಗೆ ಅಧಿಕಾರದ ಖದರ್ ಬೇಕು. ಅದೇ ರೀತಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವ ಮನೋಭಾವ ಇರಬೇಡವೇ? ಎಂದು ಶಾಸಕ ವಿ.ಶ್ರೀನಿವಾಸಪ್ರಸಾದ್ ಸೋಮವಾರ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ನಾಗಮ್ಮ ಶಾಲೆ ಆವರಣದಲ್ಲಿ ಅಂದಾಜು ರೂ. 1.42 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ 15 ಲಕ್ಷ ಲೀಟರ್ ಸಾಮರ್ಥ್ಯದ ಕುಡಿಯುವ ನೀರು ಸರಬರಾಜಿನ ಮೇಲ್ಮಟ್ಟದ ಟ್ಯಾಂಕ್ ಉದ್ಘಾಟಿಸಿ ಮಾತನಾಡಿದ ಅವರು, ಜನತೆಗೆ ಕಪಿಲಾ ನದಿಯ ನೀರನ್ನು ಶುದ್ಧೀಕರಿಸದೇ ಕಚ್ಚಾ ನೀರನ್ನು ಕುಡಿಸಲಾಗುತ್ತಿದೆ. ಅಲ್ಲದೆ ನದಿ ನೀರಿಗಿಂತ ಹೆಚ್ಚಾಗಿ ಪ್ಲೋರೈಡ್‌ಯುಕ್ತ ಕೊಳವೆ ಬಾವಿ ನೀರು ಪೂರೈಕೆ ಯಾಗುತ್ತಿದೆ ಎಂಬ ವಿಚಾರ ತಿಳಿದು ಮೇಲಿನಂತೆ ಖಾರವಾಗಿ ಪ್ರಶ್ನಿಸಿದರು.

ಕಪಿಲಾ ನೀರು ದೂರದ ಗುಂಡ್ಲುಪೇಟೆ, ಚಾಮರಾಜನಗರಕ್ಕೆ ಪೂರೈಕೆಯಾಗುತ್ತಿದೆ. ಸಮೀಪದ ಆಲಂಬೂರು ನದಿ ತೀರದಿಂದ ಮೂರು ತಾಲ್ಲೂಕಿನ ಹತ್ತಾರು ಕೆರೆಗಳಿಗೆ ನೀರು ತುಂಬಿಸಲು ರೂ. 200 ಕೋಟಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
 
ಆದರೆ,  ನದಿ ಪಕ್ಕದ ಈ ಊರಿನ ಜನರಿಗೆ ಶುದ್ಧೀಕರಿಸಿದ ಸಮೃದ್ಧಿಯಾದ ನೀರು ಒದಗಿಸಲು ಪುರಸಭೆ ಆಡಳಿತ ವಿಫಲವಾಗಿರುವುದಕ್ಕೆ ಚುನಾಯಿತ ಸದಸ್ಯರಲ್ಲದೆ ಮತ್ತಾರು ಕಾರಣ. ಅಧಿಕಾರಿಗಳು ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲ. ಪಟ್ಟಣದ ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಿ, ಪರಿಹರಿಸುವ ಪ್ರಯತ್ನ ನಡೆಸುತ್ತಿಲ್ಲ. ಈ ಅಧ್ವಾನಗಳಿಗೆ ಬೇರೆಯವರನ್ನು ಹೊಣೆ ಮಾಡಲು ಹೊರಟರೆ ಪುರಸಭೆಯನ್ನು `ಸೂಪರ್‌ಸೀಡ್~ ಮಾಡುವುದೊಂದೇ ಮಾರ್ಗೋಪಾಯ ಎಂದು ಪ್ರಸಾದ್ ಜಾಡಿಸಿದರು.

ನಾಲ್ಕು ವರ್ಷದಿಂದ ಕುಂಟುತ್ತಾ ಸಾಗಿರುವ ಒಳಚರಂಡಿ ಕಾಮಗಾರಿಗೆ ಅಂತ್ಯ ಹಾಡಬೇಕಾದರೆ ಶುದ್ಧೀಕರಣ ಘಟಕದ ಸ್ಥಾಪನೆ ತುರ್ತಾಗಿ ಆಗಬೇಕು. ಹೊರವಲಯದ ಚಾಮರಾಜನಗರ ರಸ್ತೆಯಲ್ಲಿ ಇದಕ್ಕಾಗಿ ಸರ್ಕಾರ 14 ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ಕೈಗೊಂಡಿದೆ.

ಎಲ್ಲ 27 ಸದಸ್ಯರು ಜಾಗದ ಮಾಲೀಕರ ಮನವೊಲಿಸಿ, ಅವರು ಕೋರ್ಟಿಗೆ ಹೋಗದಂತೆ ಕಾಳಜಿ ವಹಿಸಬೇಕು. ದೇವಿರಮ್ಮನಹಳ್ಳಿ ಗುಡ್ಡದ ನೀರು ಶುದ್ಧೀಕರಣ ಘಟಕದ ಸಾಮರ್ಥ್ಯವನ್ನು ಹೆಚ್ಚಿಸಿ, ಶುದ್ಧ ನೀರು ಜನರಿಗೆ ದೊರಕಲು ಅಧಿಕಾರಿಗಲ ಜತೆ ಚರ್ಚಿಸಿ ಯೋಜನೆ ತಯಾರಿಸಲಾಗಿದೆ.

ಹೈಟೆಕ್ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಮಿನಿ ವಿಧಾನಸೌಧ, ಪದವಿ ಕಾಲೇಜು, ಅತ್ಯಾಕರ್ಷಕ ಉದ್ಯಾನವನ ನಿರ್ಮಾಣ ಯೋಜನೆಗಳು ಅನುಷ್ಠಾನ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದೇನೆ. ಇದಕ್ಕೆ ಪುರಸಭೆ ಸದಸ್ಯರು  ಸಾಥ್ ನೀಡಬೇಕು ಎಂದರು.

ರಾಜ್ಯ ನೀರು ಸರಬರಾಜು ಮಂಡಳಿಯ ಮೈಸೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಚ್.ಹೊನ್ನೇಗೌಡ ಮಾತನಾಡಿ, ಹೊಸ  ಟ್ಯಾಂಕ್‌ನಿಂದ ಹಳೆ ಪಟ್ಟಣ ವ್ಯಾಪ್ತಿಯ 1 ರಿಂದ 9ನೇ ವಾಡ್ ಮತ್ತು 10ನೇ ವಾರ್ಡಿಗೆ ನೀರು ಸಿಗಲಿದೆ.  ಪಟ್ಟಣಕ್ಕೆ ಇನ್ನೂ 2- 3 ಟ್ಯಾಂಕ್ ನಿರ್ಮಾಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
 
ಪುರಸಭೆ ಉಪಾಧ್ಯಕ್ಷೆ ಎಂ.ಗಾಯತ್ರಿ, ಸದಸ್ಯೆ ಪಿ.ಸರಸ್ವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಚೆಲುವರಾಜು ಮಾತ ನಾಡಿದರು. ಪುರಸಭೆ ಅಧ್ಯಕ್ಷ ಜಿ.ಮುಹೀರ್‌ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT