ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಸಹಕಾರ ಸಿಗಲಿಲ್ಲ: ಮೇಯರ್ ಅಳಲು

ಸಾಲದಾದ ಅಧಿಕಾರಾವಧಿ *ಕಾಡಿದ ಸ್ವಪಕ್ಷೀಯರು *ಬಗೆಹರಿಯದ ಸಮಸ್ಯೆಗಳು
Last Updated 3 ಸೆಪ್ಟೆಂಬರ್ 2013, 19:43 IST
ಅಕ್ಷರ ಗಾತ್ರ

ಬೆಂಗಳೂರು:  `ನನ್ನ ಅಧಿಕಾರದ ಅವಧಿಯಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಇನ್ನಷ್ಟು ಉತ್ತಮ ಕೆಲಸ ಮಾಡುವ ಮನಸ್ಸಿದ್ದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ನೀಡಿದ ಆದೇಶಗಳು ಜಾರಿಗೆ ಬರಲಿಲ್ಲ. ಕೈಗೊಂಡ ಯೋಜನೆಗಳು ಅರ್ಧಕ್ಕೆ ನಿಂತವು' ಎಂದು ಹೊರಹೋಗುತ್ತಿರುವ ಮೇಯರ್ ಡಿ. ವೆಂಕಟೇಶಮೂರ್ತಿ ಅಸಮಾಧಾನ ಹೊರಹಾಕಿದರು.

ಬುಧವಾರ ಮೇಯರ್ ಹುದ್ದೆಯಿಂದ ನಿರ್ಗಮಿಸಲಿರುವ ಅವರು, ಮಂಗಳವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

`ಸಿಕ್ಕ ಕಾಲಾವಕಾಶದಲ್ಲಿ ತೃಪ್ತಿದಾಯಕ ಕೆಲಸ ಮಾಡಿದ್ದೇನೆ. ಆದರೆ, ಹಾಕಿಕೊಂಡ ಯೋಜನೆ ಪೂರೈಸಲು ಒಂದು ವರ್ಷದ ಅವಧಿ ಏನೂ ಸಾಲದು' ಎಂದು ಹೇಳಿದರು.

`ಮೇಯರ್ ಹುದ್ದೆಯ ಅಧಿಕಾರದ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ಹೆಚ್ಚಿಸಬೇಕು ಮತ್ತು ಆ ಹುದ್ದೆಗೆ ಜನರಿಂದಲೇ ನೇರವಾಗಿ ಆಯ್ಕೆ ಮಾಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಬೇಕು' ಎಂದು ಆಗ್ರಹಿಸಿದರು. `ನವದೆಹಲಿ ಪಾಲಿಕೆಯಂತೆ ನಮ್ಮ ಬಿಬಿಎಂಪಿಯನ್ನೂ ಎರಡು ಇಲ್ಲವೆ ಮೂರು ಭಾಗ ಮಾಡಿದರೆ ಚುರುಕಿನ ಆಡಳಿತ ನಡೆಸಲು ಸಾಧ್ಯ. ಒಬ್ಬ ಮೇಯರ್ ಮತ್ತು ಆಯುಕ್ತರಿಂದ ಇಷ್ಟೊಂದು ದೊಡ್ಡ ಪ್ರದೇಶದಲ್ಲಿ ಆಡಳಿತ ನಡೆಸುವುದು ಸುಲಭವಲ್ಲ' ಎಂದು ತಿಳಿಸಿದರು.

`ರಸ್ತೆ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಪ್ರತಿ ರಸ್ತೆಯಲ್ಲಿ ಗುಂಡಿಗಳು ಕಾಣುತ್ತಿವೆ. ತ್ಯಾಜ್ಯದ ಸಮಸ್ಯೆ ಸಹ ಪೂರ್ಣವಾಗಿ ಬಗೆಹರಿದಿಲ್ಲ' ಎಂದು ಅಭಿಪ್ರಾಯಪಟ್ಟರು. `ನನ್ನ ಅವಧಿಯಲ್ಲಿ ನಾಲ್ಕು ಜನ ಆಯುಕ್ತರು ಬಂದರೂ ತ್ಯಾಜ್ಯದ ಸಮಸ್ಯೆಯೇ ಹೆಚ್ಚಾಗಿದ್ದರಿಂದ ರಸ್ತೆ, ಸಂಚಾರ ವ್ಯವಸ್ಥೆ, ಆರೋಗ್ಯ, ಶಿಕ್ಷಣದಂತಹ ಪ್ರಮುಖ ಸಂಗತಿಗಳ ಕಡೆಗೆ ಗಮನಕೊಡಲು ಆಗಲಿಲ್ಲ' ಎಂದು ಹಿನ್ನೋಟ ಬೀರಿದರು.

`ನನ್ನ ರಾಜಕೀಯ ಬೆಳವಣಿಗೆ ಸಹಿಸದ ಕೆಲವರು ನಾನು ಪಕ್ಷ ತೊರೆದು ಕಾಂಗ್ರೆಸ್‌ಗೆ ಹೋಗಲಿದ್ದೇನೆ ಎಂಬ ವದಂತಿ ಹಬ್ಬಿಸಿದರು. ಕಾಂಗ್ರೆಸ್ ಪಕ್ಷವನ್ನು ತೊರೆದು ನಮ್ಮ ಪಕ್ಷ ಸೇರಿದ ಸದಸ್ಯರೊಬ್ಬರು ಈ ರೀತಿ ಸುಳ್ಳು ಪ್ರಚಾರ ನಡೆಸಿದರು' ಎಂದು ದೂರಿದರು.

`ಆಡಳಿತ ಸುಧಾರಣೆ ವರದಿಯನ್ನು ಮಂಡಿಸಲು ನಾನು 2-3 ಸಲ ಯತ್ನಿಸಿದರೂ ಸಾಧ್ಯವಾಗಲಿಲ್ಲ' ಎಂದು ಉಪಮೇಯರ್ ಎಲ್. ಶ್ರೀನಿವಾಸ್ ಹೇಳಿದರು. `ಸರ್ಕಾರಕ್ಕೂ ಪತ್ರ ಬರೆದಿದ್ದೆ. ಆಯುಕ್ತರಿಂದಲೂ ಮಾಹಿತಿ ಕೇಳಿದ್ದೆ. ಆದರೆ, ಸಹಕಾರ ಸಿಗಲಿಲ್ಲ' ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ನಾಯಕ ಎನ್. ನಾಗರಾಜ್, `ಮನಸ್ಸಿಗೆ ತಕ್ಕಂತೆ ಕೆಲಸಗಳು ಆಗಿಲ್ಲ. ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆವು. ಆದರೆ, ಸರಿಯಾಗಿ ಅನುಷ್ಠಾನಕ್ಕೆ ಬರಲಿಲ್ಲ' ಎಂದು ವಿಷಾದದಿಂದ ಹೇಳಿದರು. `ಒಂದೇ ಕಡೆ ಬೇರೂರಿದ್ದ 400 ತೆರಿಗೆ ಸಂಗ್ರಹಕಾರರನ್ನು ವರ್ಗಾವಣೆ ಮಾಡಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದು, ನಮ್ಮ ಅಧಿಕಾರದ ಅವಧಿಯಲ್ಲಿ ನಡೆದ ದೊಡ್ಡ ಕೆಲಸ' ಎಂದು ಹೆಮ್ಮೆಯಿಂದ ಹೇಳಿಕೊಂಡರು.

`ಮೇಯರ್ ಮತ್ತು ಆಯುಕ್ತರ ನಡುವೆ ಸಮನ್ವಯದ ಕೊರತೆ ಇತ್ತು' ಎಂಬುದನ್ನು ಒಪ್ಪಿಕೊಂಡ ಅವರು, `ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕಿತ್ತು' ಎಂದು ಅಭಿಪ್ರಾಯಪಟ್ಟರು.

ಸಾಧನೆಯ ಖುಷಿ; ಟೀಕೆಯ ನೋವು
ಬಿಬಿಎಂಪಿಯಲ್ಲಿ 1971ರಿಂದಲೂ ಇಲ್ಲದಿದ್ದ ವೃಂದ ಮತ್ತು ನೇಮಕಾತಿ (ಸಿ ಅಂಡ್ ಆರ್) ನಿಯಮಾವಳಿಯನ್ನು ರೂಪಿಸಿದ್ದು ನನ್ನ ಅಧಿಕಾರದ ಅವಧಿಯಲ್ಲಿ ತೃಪ್ತಿಕೊಟ್ಟ ಕೆಲಸ. ಮೂಲದಲ್ಲೇ ಕಸ ಪ್ರತ್ಯೇಕ ಮಾಡಿಕೊಡುವ ನಿಯಮ, ಜಾಹೀರಾತು ಮತ್ತು ಪಾರ್ಕಿಂಗ್ ಮಾರ್ಗಸೂಚಿಯನ್ನೂ ರೂಪಿಸಿದ್ದೇವೆ. ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ದೀರ್ಘಾವಧಿ ಯೋಜನೆ ಸಿದ್ಧಪಡಿಸಿದ್ದೇವೆ. ಇವೆಲ್ಲ ನನಗೆ ಖುಷಿ ನೀಡಿದ ಕೆಲಸಗಳಾಗಿವೆ.

ವಾಸ್ತವಿಕ ಬಜೆಟ್ ಮಂಡಿಸಿದರೂ ಅದರ ವಿರುದ್ಧ ನಮ್ಮ ಪಕ್ಷದ ಸದಸ್ಯ ಎನ್.ಆರ್. ರಮೇಶ್ ಸರ್ಕಾರಕ್ಕೆ ದೂರು ನೀಡಿದ್ದು ಬೇಜಾರು ತಂದ ಕ್ಷಣವಾಗಿದೆ. ಹಿಂದಿನ ಮೇಯರ್ ಅವಧಿಯಲ್ಲಿ ಹತ್ತು ಸಾವಿರ ಕೋಟಿ ಮೊತ್ತದ ಬಜೆಟ್ ಮಂಡಿಸಿದಾಗ ಸುಮ್ಮನಿದ್ದ ರಮೇಶ್, ಈಗ ಟೀಕಿಸುತ್ತಿರುವುದು ನೋವು ತಂದಿದೆ. -ಡಿ.ವೆಂಕಟೇಶಮೂರ್ತಿ

ಮೂವರು ಸಿ.ಎಂ; ನಾಲ್ವರು ಕಮಿಷನರ್!

ಮೇಯರ್ ಡಿ.ವೆಂಕಟೇಶಮೂರ್ತಿ ಅವರ ಒಂದು ವರ್ಷ ನಾಲ್ಕು ತಿಂಗಳ ಆಡಳಿತದ ಅವಧಿಯಲ್ಲಿ ರಾಜ್ಯ ಮೂರು ಮುಖ್ಯಮಂತ್ರಿಗಳನ್ನು ಕಂಡಿತು. ಅವರೆಂದರೆ ಡಿ.ವಿ. ಸದಾನಂದಗೌಡ, ಜಗದೀಶ ಶೆಟ್ಟರ್ ಮತ್ತು ಸಿದ್ದರಾಮಯ್ಯ.

ಈ ಅವಧಿಯಲ್ಲಿ ಬಿಬಿಎಂಪಿ ನಾಲ್ವರು ಕಮಿಷನರ್‌ಗಳ (ಶಂಕರಲಿಂಗೇಗೌಡ, ರಜನೀಶ್ ಗೋಯಲ್, ಸಿದ್ದಯ್ಯ ಮತ್ತು ಎಂ.ಲಕ್ಷ್ಮಿನಾರಾಯಣ) ಆಡಳಿತಕ್ಕೂ ಸಹ ಸಾಕ್ಷಿಯಾಯಿತು.

ನಾಲ್ಕು ತಿಂಗಳ ಬೋನಸ್
ರಾಜ್ಯ ವಿಧಾನಸಭಾ ಚುನಾವಣೆ ಮತ್ತು ಮೀಸಲಾತಿ ವಿವಾದದ ಹಿನ್ನೆಲೆಯಲ್ಲಿ ಮೇಯರ್ ಹುದ್ದೆಗೆ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು. ಹೀಗಾಗಿ ವೆಂಕಟೇಶಮೂರ್ತಿ ಅವರಿಗೆ ನಾಲ್ಕು ತಿಂಗಳ ಹೆಚ್ಚುವರಿ ಅಧಿಕಾರವಾಧಿ ಬೋನಸ್ ರೂಪದಲ್ಲಿ ಸಿಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT