ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಂದ ತೊಂದರೆ: ಪಾಕ್‌ ಉದ್ಯಮಿ ಆರೋಪ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ದಾಖಲೆ ಪರಿಶೀಲನೆಯ ಹೆಸರಿನಲ್ಲಿ ನಗರದ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ  (ಎಫ್‌ಆರ್‌ಆರ್‌ಒ) ಅಧಿಕಾರಿಗಳು ವಿನಾಕಾರಣ ತೊಂದರೆ ನೀಡಿದ್ದಾರೆ’ ಎಂದು ಪಾಕಿಸ್ತಾನದ ಉದ್ಯಮಿ ಇಮ್ರಾನ್ ಖುರೇಷಿ ಹೇಳಿದ್ದಾರೆ.

ಸೊಂಟದ ಕೀಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅವರು ಪಾಕಿಸ್ತಾನದಿಂದ ಇತ್ತೀಚೆಗೆ ನಗರದ ಇನ್‌ಸ್ಟಿಟ್ಯೂಟ್ ಆಫ್ ರೀಜನರೇಟಿವ್ ಮೆಡಿಸಿನ್ ಲೈವ್ 100 ಆಸ್ಪತ್ರೆ ಬಂದಿದ್ದರು. ಇತ್ತೀಚೆಗೆ ಅವರ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್‌ ಮಾಹಿತಿ ನೀಡಿದರು.

‘ನಾನು ವೈದ್ಯಕೀಯ ಚಿಕಿತ್ಸೆ ಪಡೆಯಲು ನಗರಕ್ಕೆ ಬಂದು ಹೋಗುುವ ಬಗ್ಗೆ ಸಹೋದರ ಫೈಜಲ್ ಹಲವು ದಾಖಲೆಗಳ ಜತೆಗೆ ಎಫ್‌ಆರ್‌ಆರ್‌ಒ ಕಚೇರಿಗೆ ಹಲವು ಬಾರಿ ಅಲೆದಾಡಿದ್ದಾರೆ. ಆದರೆ, ಅಲ್ಲಿನ ಅಧಿಕಾರಿಗಳು ನಮ್ಮೊಂದಿಗೆ ನಡೆದುಕೊಂಡ ರೀತಿಯಿಂದ ದೈಹಿಕ ನೋವನ್ನು ದುಪ್ಪಟ್ಟು ಮಾಡಿದೆ’ ಎಂದು ಅವರು ಅಳಲು ತೋಡಿಕೊಂಡರು.

‘ವೈಯಕ್ತಿಕ ದಾಖಲೆ ಪರಿಶೀಲನೆಗಾಗಿ ಗಾಲಿ ಕುರ್ಚಿಯಲ್ಲಿದ್ದ ನನ್ನನ್ನು ಅಧಿಕಾರಿಗಳು ಕಚೇರಿಗೆ ಬರುವಂತೆ ತಿಳಿಸಿದ್ದರು. ದಾಖಲೆಗಳ ಪರಿಶೀಲನೆಗಾಗಿ ನನ್ನ ತಮ್ಮ ಕೂಡ ಹಲವು ಬಾರಿ ಕಚೇರಿಗೆ ಭೇಟಿ ನೀಡಿದ್ದ.  ಹಿಂದೆ ಭಾರತದ ನಾನಾ ಭಾಗಗಳಲ್ಲಿ ಸಂಚಾರ ಮಾಡಿದ್ದೇನೆ. ಆದರೆ, ಈ ಕಚೇರಿಯಲ್ಲಿ ಅನುಭವಿಸಿದ ಅವ್ಯವಸ್ಥೆ ಮರೆಯುವಂತಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಪಾಕಿಸ್ತಾನದ ಕರಾಚಿಯಲ್ಲಿ ಸಿದ್ಧ ಉಡುಪುಗಳ ಮಾರಾಟಗಾರರಾಗಿರುವ ಅವರು ಕೆಲ ವರ್ಷ­ಗಳಿಂದೀಚೆಗೆ ತೀವ್ರ ಸೊಂಟ ನೋವಿನಿಂದ ಬಳಲು­ತ್ತಿದ್ದರು. ಚಿಕಿತ್ಸೆ ಪಡೆಯುವ ಸಲುವಾಗಿ ಅವರು ನಗರದ ವಿದೇಶಿಗರ ಪ್ರಾದೇಶಿಕ ನೋಂದಣಿ ಕಚೇರಿ­ಯನ್ನು (ಎಫ್‌ಆರ್‌ಆರ್‌ಒ)  ಸಂಪರ್ಕಿಸಿದಾಗ ಅಧಿ­ಕಾರಿ­ಗಳು ಸಮರ್ಪಕವಾಗಿ  ಸ್ಪಂದಿಸಲಿಲ್ಲ ಎಂಬುದು ಅವರ ದೂರು.

ಸಿಮ್ ಕಾರ್ಡ್ ಪಡೆಯಲು ಹರಸಾಹಸ!
‘ಎಲ್ಲ ದಾಖಲೆಗಳಿದ್ದರೂ ಸಿಮ್ ಕಾರ್ಡ್ ನೀಡಲು    ಮೊಬೈಲ್ ಸೇವಾ ಕಂಪೆನಿಗಳು ನಿರಾಕರಿಸಿದವು.  ಇದ­ರಿಂದ ಪಾಕಿಸ್ತಾನದಲ್ಲಿರುವ ಪತ್ನಿಯನ್ನು ಸಂಪರ್ಕಿ­ಸಲು ಸಾಧ್ಯವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಚಿಕಿತ್ಸೆಗಾಗಿ   ಭಾರತಕ್ಕೆ ಬರುವವರಿಗೆ ನಿಯಮ­ಗಳನ್ನು ಸಡಿಲಗೊಳಿಸಿದರೆ   ರೋಗಿಗಳು ಇನ್ನಷ್ಟು ಉತ್ತಮ ರೀತಿಯಲ್ಲಿ ಚಿಕಿತ್ಸೆ ಪಡೆಯಬಹುದು’ ಎಂದು ತಿಳಿಸಿದರು.

ವೈದ್ಯರು ಹೇಳಿದ್ದೇನು?: ಸಾಮಾನ್ಯವಾಗಿ ಮಧ್ಯ ವಯಸ್ಸು ತಲುಪಿದ ಪುರುಷ ಹಾಗೂ ಮಹಿಳೆ­ಯರಲ್ಲಿ ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಆದರೆ ಈ ಪ್ರಕರಣದಲ್ಲಿ ಮೂಳೆಯ ಮೃತ ಜೀವಕೋಶಗಳಿಂದಾಗಿ  (ಅವಾಸ್ಕುಲರ್ ನೆಕ್ರೊಸಿಸ್) ಈ ನೋವು ಕಾಣಿಸಿಕೊಂಡಿತ್ತು ಎಂದು ಆಸ್ಪತ್ರೆಯ ಅಧ್ಯಕ್ಷ ಎಚ್.ಎನ್.ನಾಗರಾಜ  ತಿಳಿಸಿದರು.

ಮೂಳೆಯ ಜೀವಕೋಶಗಳು ಸಾಯಲು ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಇದರಿಂದ ರಕ್ತ ಪೂರೈಕೆಯಲ್ಲಿ ವ್ಯತ್ಯಾಸವಾಗುವುದಲ್ಲದೇ,ರಕ್ತವಿಲ್ಲದೇ ಮೂಳೆಯು  ಸವೆಯುತ್ತದೆ. ಸಮಸ್ಯೆ ತೀವ್ರಗೊಳ್ಳುವ ಮುನ್ನವೇ ಚಿಕಿತ್ಸೆ ಪಡೆಯುವುದು ಒಳಿತು  ಎಂದು ಅಭಿಪ್ರಾಯ­ಪಟ್ಟರು.

ಚಿಕಿತ್ಸೆ ಹೇಗೆ?: ಇದೊಂದು ನೋವು ರಹಿತ ವಿಧಾನ­ವಾಗಿದ್ದು, ಮೂಳೆಯ ಆಕಾರಕೋಶವನ್ನು ಪ್ರಯೋ­ಗಾ­ಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿಕೊಡಲಾಗು­ತ್ತದೆ. ರಕ್ತಕಣ ಹಾಗೂ ರಕ್ತದ ಪ್ಲಾಸ್ಮಾದಿಂದ ಆಕರಕೋಶವನ್ನು ಪ್ರತ್ಯೇಕ ಮಾಡಲಾಗುತ್ತದೆ. ನಂತರ ಅದನ್ನು ರೋಗಿಯ   ಸೊಂಟದ ಕೀಲಿಗೆ ನೇರವಾಗಿ ತೂರಿಸಲಾಗುತ್ತದೆ. ಹೀಗೆ ತೂರಿಸಿದ ಆಕಾರಕೋಶಗಳು ಹಾನಿಯಾದ ಮೂಳೆಯ ಕೆಲಸವನ್ನು ಮೊದಲಿನಂತೆ ಮಾಡಲು ಸಹಕರಿಸುತ್ತದೆ ಎಂದು ವಿವರಿಸಿದರು.    
        
ಈ ಚಿಕಿತ್ಸೆಯಲ್ಲಿ ಯಾವುದೇ ಬಗೆಯ ಗಾಯ  ಹಾಗೂ ರಕ್ತಸ್ರಾವ ಇರುವುದಿಲ್ಲ.  ಶಸ್ತ್ರಚಿಕಿತ್ಸೆಯು ಇರುವುದಿಲ್ಲ ಎಂದು ತಿಳಿಸಿದರು.
ಆಸ್ಪತ್ರೆಯ ಸಂಪರ್ಕ ಸಂಖ್ಯೆ: 080– 43100100/ 200.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT