ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳಿಗೆ ಅನ್ಯ ಕಾರ್ಯದ ಭಾರ !

ಮರಳು ಅಕ್ರಮ ಸಾಗಣೆಗೆ ತಡೆ: ನಡೆಯದ ತಿಂಗಳ ಸಭೆ
Last Updated 18 ಜುಲೈ 2013, 10:15 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ತಡೆಯಲೆಂದೇ ರಚಿಸಲಾಗಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿಯಲ್ಲಿರುವ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಪುರುಸೊತ್ತೇ ಇಲ್ಲ. ಅವರಿಗೆ ಅನ್ಯಕಾರ್ಯದ ಭಾರವೇ ಹೆಚ್ಚು. ಹೀಗಾಗಿ ಪ್ರತಿ ತಿಂಗಳೂ ನಡೆಯಬೇಕಾದ ಸಮಿತಿಯ ಸಭೆ ನಡೆಯುತ್ತಿಲ್ಲ. ಮರಳು ಗಣಿಗಾರಿಕೆ ಮತ್ತು ಸಾಗಣೆ ನಡೆಯುವ ಕೆಲಸವೂ ಸಮರ್ಪಕವಾಗಿಲ್ಲ.

- ಈ ಅಂಶಗಳು ಬೆಳಕಿಗೆ ಬಂದಿದ್ದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ. ಜು 29ರಂದು ಲೋಕಾಯುಕ್ತ ನ್ಯಾಯಾಧೀಶ ಸುದೀಂದ್ರರಾವ್ ಅವರು ಜಿಲ್ಲೆಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವರದಿ ಸಲ್ಲಿಸಲು ಪೂರ್ವಸಿದ್ಧತೆ ಸಲುವಾಗಿ ನಡೆದ ಸಭೆಯಲ್ಲಿ.

ಮರಳು ಸಾಗಣೆ ತಡೆಯವ ಸಲುವಾಗಿ ಜಿಲ್ಲಾಧಿಕಾರಿ ನೇತೃತ್ವದ ಪೊಲೀಸ್, ಲೋಕೋಪಯೋಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಆಯಾ ತಹಶೀಲ್ದಾರರಿರುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ಕಳೆದ ಅಕ್ಟೋಬರ್‌ನಿಂದ ಇದುವರೆಗೂ ಸರಿಯಾಗಿ ನಡೆದಿಲ್ಲ ಎಂಬುದನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂಪತ್‌ಕೃಷ್ಣ ಸಭೆಯ ಗಮನಕ್ಕೆ ತಂದು ಅಚ್ಚರಿ ಮೂಡಿಸಿದರು.

ಸಮಿತಿಯಲ್ಲಿರುವ ಇಲಾಖೆಗಳ ಅಧಿಕಾರಿಗಳಿಗೆ ಬೇರೆ ಕೆಲಸಕಾರ್ಯಗಳಿರುವುದರಿಂಧ ಸಭೆಯನ್ನು ನಿಗದಿಯಾದಂತೆ ಪ್ರತಿ ತಿಂಗಳೂ ನಡೆಸಲು ಸಾಧ್ಯವಾಗುತ್ತಿಲ್ಲ. ಸಭೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಯಾರೊಬ್ಬರೂ ಗಂಭೀರ ಆಸಕ್ತಿ ತೋರುತ್ತಿಲ್ಲ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಣೆ ತಡೆಯಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಾದ ಬಳಿಕ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಸಭೆ ನಡೆಸಿ, ಪ್ರತಿ ತಿಂಗಳೂ ಸಭೆ ನಡೆಸುವಂತೆ ಸೂಚಿಸಿದ್ದರು. ಆ ನಂತರ ಎಷ್ಟು ಬಾರಿ ಸಭೆಗಳು ನಡೆದಿವೆ ಎಂದು ಸಭೆಯ ಅಧ್ಯಕ್ಷೆ ವಹಿಸಿದ್ದ ಪ್ರಭಾರಿ ಜಿಲ್ಲಾಧಿಕಾರಿ ಡಾ.ವಿ.ವೆಂಕಟೇಶಮೂರ್ತಿ ಅವರು ಕೇಳಿದ ಪ್ರಶ್ನೆಯು, ಸಮಿತಿಯ ಕಾರ್ಯವೈಖರಿ ಕಡೆಗೆ ಗಮನ ಸೆಳೆಯಿತು. ಇದೇ ಸಂದರ್ಭದಲ್ಲಿ ಸಂಪತ್ ಕೃಷ್ಣ ಮತ್ತು ಲೋಕೋಪಯೋಗಿ ಇಲಾಖೆಯ ಮುಳಬಾಗಲು ವ್ಯಾಪ್ತಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಶ್ ಅವರ ನಡುವೆ ವಾಗ್ವಾದವೂ ನಡೆಯಿತು.

ಅಸಮಾಧಾನ: ಮರಳು ಗಣಿಗಾರಿಕೆಯ ಬಗ್ಗೆ ಸಮರ್ಪಕ ರೀತಿಯಲ್ಲಿ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಶ್ರೀನಿವಾಸಪುರ ತಾಲ್ಲೂಕು ತಹಶೀಲ್ದಾರ್ ಜಯಾ ದೂರಿದರು.

ತಾವು ಕಾರ್ಯನಿರ್ವಹಿಸುವ ತಾಲ್ಲೂಕಿನ ಗಡಿಪ್ರದೇಶದಲ್ಲಿ ಇಲಾಖೆಯು ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದರೂ, ಇದುವರೆಗೆ ಯಾರೊಬ್ಬರನ್ನೂ ಕರ್ತವ್ಯಕ್ಕೆ ನಿಯೋಜಿಸಿಲ್ಲ. ಇಲಾಖೆಯು ತನ್ನ ಜವಾಬ್ದಾರಿ ನಿರ್ವಹಣೆಯ ಬಗ್ಗೆ ಲಘುವಾದ ಭಾವನೆ ಹೊಂದಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ಅವರು ಹೇಳಿದರು.

ಒಂದ ವರ್ಷಕ್ಕೂ ಹೆಚ್ಚು ಅವಧಿಯಿಂದ ಜಿಲ್ಲೆಯಲ್ಲಿ ಯಾರೊಬ್ಬರೂ ಅಧಿಕೃತ ಪರವಾನಗಿಯೊಂದಿಗೆ ಮರಳು ಸಾಗಿಸುತ್ತಿರುವ ಒಂದೇ ಒಂದು ದೃಶ್ಯವೂ ಕಂಡುಬಂದಿಲ್ಲ. ಎಲ್ಲರೂ ಅನಧಿಕೃತವಾಗಿಯೇ ಮರಳು ಸಾಗಿಸುತ್ತಿದ್ದಾರೆ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ.ರೋಹಿಣಿ ಕಟೋಚ್ ಅಸಮಾಧಾನ ವ್ಯಕ್ತಪಡಿಸಿದರು.

ಪೊಲೀಸರು ಸಿದ್ಧ: ಅಕ್ರಮವಾಗಿ ಮರಳು ಸಾಗಿಸುವವರನ್ನು ರೈತರು, ನಾಗರಿಕರೇ ಹಿಡಿದು ಲಾರಿಗಳನ್ನು ಪೊಲೀಸ್ ಠಾಣೆ ಮುಂದೆ ತಂದು ನಿಲ್ಲಿಸುವ ಘಟನೆಗಳು ಹೆಚ್ಚು ನಡೆಯುತ್ತಿವೆ. ಆದರೆ ಈ ಸಂಬಂಧ ಸ್ವತಂತ್ರ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಅಧಿಕಾರವಿಲ್ಲ. ಇಂಥ ಸಂದರ್ಭಗಳಲ್ಲಿ ಅಧಿಕಾರಿಗಳು ತಡಮಾಡುವುದು ಸರಿಯಲ್ಲ. ಕೂಡಲೇ ಸ್ಥಳಕ್ಕೆ ಬಂದು ದೂರು ದಾಖಲಿಸಬೇಕು ಎಂದು ಕೋಲಾರ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್ ಹೇಳಿದರು.

ವಾಗ್ವಾದ: ಮುಳಬಾಗಲು ತಾಲ್ಲೂಕಿನಲ್ಲಿ ಮರಳು ಖಾಲಿಯಾಗಿದೆ. ಸಹಜ ಮರಳು ದೊರಕುತ್ತಿಲ್ಲ. ಈಗ ಅಲ್ಲಿ ಮರಳು ಗಣಿಗಾರಿಕೆಗೆ ಅನು ಮತಿಯನ್ನು ನೀಡುತ್ತಿಲ್ಲ ಎಂದು ಹೇಳಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾಜೇಶ್ ಅವರ ಮಾತನ್ನು ಒಪ್ಪದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಂಪತ್ ಕೃಷ್ಣ, ಇನ್ನೂ 13 ಬ್ಲಾಕ್‌ಗಳಲ್ಲಿ ಮರಳು ಲಭ್ಯವಿದೆ. ಹೀಗಾಗಿಯೇ ನಿರಂತರ ಸಾಗಣೆ ನಡೆಯುತ್ತಿದೆ. ಆದರೆ ಕೋಲಾರ ಜಿಲ್ಲೆಗೆ ಬೇಕಾಗಿರುವಷ್ಟು ಮರಳು ಎಲ್ಲಿಯೂ ದೊರಕದ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ದಂಡ ಸಲೀಸು:  ಒಂದು ಲಾರಿಗೆ ವಿಧಿಸುವ ದಂಡ ಶುಲ್ಕ 25 ಸಾವಿರ ರೂಪಾಯಿಯನ್ನು ಅಕ್ರಮವಾಗಿ ಮರಳು ಸಾಗಿಸುವವವರು ಸಲೀಸಾಗಿ ಪಾವತಿಸಿ ಹೋಗುತ್ತಿದ್ದಾರೆ. ಮರಳು ಬೆಲೆ ಅತ್ಯಧಿಕವಾಗಿ ಏರಿಕೆಯಾಗಿರುವುದರಿಂದ ಅದು ಕನಿಷ್ಠ ಮೊತ್ತವಾಗಿದೆ. ಹೀಗಾಗಿ ದಂಡಶುಲ್ಕದ ಮೊತ್ತವನ್ನು ಹೆಚ್ಚಿಸುವುದು ಮತ್ತು ಕಠಿಣ ಕ್ರಮ ಕೈಗೊಳ್ಳುವುದೂ ಸೇರಿದಂತೆ ಗಂಭೀರ ಪ್ರಯತ್ನಗಳಾಗಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT