ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ಶಾಲೆ: ಮರಳಿತು ಮಕ್ಕಳ ಕಲರವ..

Last Updated 15 ಜೂನ್ 2011, 11:25 IST
ಅಕ್ಷರ ಗಾತ್ರ

ಸುಳ್ಯ: ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿಯೇ ಪ್ರಥಮ ರ‌್ಯಾಂಕ್ ಪಡೆದ ಅನನ್ಯ ಪ್ರಾಥಮಿಕ ವಿದ್ಯಾಭ್ಯಾಸ ಪಡೆದ ಕೆಮನಬಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತೆ ಬಾಗಿಲು ತೆರೆದಿದೆ. ಮಕ್ಕಳ ಕೊರತೆಯಿಂದ ಕಳೆದ ಒಂದು ವರ್ಷದಿಂದ ಬಾಗಿಲು ಹಾಕಿದ್ದ ಶಾಲೆಯಲ್ಲಿ ಸೋಮವಾರ ಮತ್ತೆ ಮಕ್ಕಳ ಕಲರವ ಆರಂಭವಾಗಿದೆ.

1960ರಲ್ಲಿ ಸ್ಥಾಪನೆಗೊಂಡ  ಜಾಲ್ಸೂರು ಗ್ರಾಮದ ಕೆಮನಬಳ್ಳಿ ಕಿರಿಯ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವ ಆಚರಿಸುವ ಹೊಸ್ತಿಲಲ್ಲೇ ಬಾಗಿಲು ಹಾಕಿತ್ತು. ಮಕ್ಕಳ ಕೊರತೆಯೇ ಇದಕ್ಕೆ ಕಾರಣವಾಗಿತ್ತು.

ಕಳೆದ ವರ್ಷ ಇಲ್ಲಿ ಒಂದನೇ ತರಗತಿಗೆ ಒಬ್ಬ ವಿದಾರ್ಥಿ ಮಾತ್ರ ದಾಖಲಾತಿ ಪಡೆದಿದ್ದ. ಅಲ್ಲದೆ ಇತರ ನಾಲ್ಕು ತರಗತಿಗಳಿಲ್ಲಿ ಇದ್ದ ಮಕ್ಕಳ ಸಂಖ್ಯೆ 8 ಮಾತ್ರ. ಈ ಎಲ್ಲಾ  ಮಕ್ಕಳನ್ನು ಸಮೀಪದ ಕದಿಕಡ್ಕ ಶಾಲೆಗೆ ವರ್ಗಾಯಿಸಲಾಗಿತ್ತು ಹಾಗೂ ಅಧ್ಯಾಪಕರನ್ನು ವರ್ಗಾವಣೆ ಮಾಡಲಾಗಿತ್ತು.

ಈ ಶಾಲೆಯಲ್ಲಿಯೇ ಓದಿದ ಅನನ್ಯ ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕ ಪಡೆದು ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದರು. ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ  ವಿದ್ಯಾರ್ಥಿನಿ ಒಂದರಿಂದ ಐದನೇ ತರಗತಿಯವರೆಗೆ ಓದಿದ ಶಾಲೆ ಮುಚ್ಚಿರುವುದು ಸುದ್ದಿಗೆ ಗ್ರಾಸವಾಗಿತ್ತು.

ಇದೀಗ ಊರ ಜನತೆ ಮತ್ತು ಶಿಕ್ಷಣ ಇಲಾಖೆ ಕೈ ಜೋಡಿಸಿ ಈ ಶಾಲೆಯ ವಠಾರದಲ್ಲಿರುವ ಪಕ್ಕದ ಶಾಲೆಗೆ ಹೋಗುವ ಎಲ್ಲಾ ಮಕ್ಕಳ ಪೋಷಕರ ಮನವೊಲಿಸಿ  ಈ ಶಾಲೆಗೆ ದಾಖಲಾತಿ ಮಾಡಲು ವಿನಂತಿಸಲಾಯಿತು ಹಾಗೂ ಶಾಲೆಗೆ ಇಬ್ಬರು ಅಧ್ಯಾಪಕರನ್ನು ನೇಮಿಸಿ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಯಿತು. 

ಆರಂಭದ ದಿನವಾದ ಸೋಮವಾರ ಎಂಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ಧಾರೆ. ಇನ್ನೂ ನಾಲ್ಕೈದು ವಿದ್ಯಾರ್ಥಿಗಳು ಈ ಶಾಲೆ ಸೇರುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ತಿಂಡಿ ಹಂಚಿ ಸ್ವಾಗತಿಸಲಾಯಿತು. ಪಾಯಸ ಸೇರಿದಂತೆ ಬಿಸಿ ಊಟವನ್ನೂ ಬಡಿಸಲಾಯಿತು.

ಶಾಲೆಗೆ 53 ಸೆಂಟ್ಸ್ ಸ್ಥಳವಿದ್ದು, ಎಲ್ಲಾ ಅಗತ್ಯ ಮೂಲಭೂತ ಸೌಕರ್ಯವನ್ನು ಒಳಗೊಂಡಿದೆ. ಈ ಶಾಲೆಯಲ್ಲಿ ಐದು ಕೊಠಡಿಗಳಿವೆ. ಅನ್ನ ದಾಸೋಹ ಕೊಠಡಿ, ಧ್ವಜ ಸ್ತಂಭ,  ಆಟದ ಮೈದಾನ, ಆವರಣ ಗೋಡೆ ಹೀಗೆ ಎಲ್ಲಾ ಮೂಲಭೂತ ವ್ಯವಸ್ಥೆಗಳು ಇಲ್ಲಿದೆ.

ಶಾಲೆ ಪ್ರಾರಂಭಗೊಂಡ ಬಳಿಕ ಪೋಷಕರ ಸಭೆ ನಡೆಯಿತು. ಶಿಕ್ಷಣ ಇಲಾಖೆ ಪರವಾಗಿ ಸಂಪನ್ಮೂಲ ವ್ಯಕ್ತಿ ಡಾ. ಸುಂದರ್ ಕೇನಾಜೆ ಆಗಮಿಸಿದ್ದರು. ಸ್ಥಳೀಯ ಪ್ರಮುಖರಾದ ರವಿರಾಜ ಗಬ್ಬಲಡ್ಕ, ಗೀತಾಂಜಲಿ ಗಬ್ಬಲಡ್ಕ, ರಘುನಾಥ, ಶೇಖರ್, ಜಾನಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT