ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಹಕ್ಕು, ಭಿಕ್ಷೆಯಲ್ಲ

Last Updated 25 ಜನವರಿ 2012, 5:00 IST
ಅಕ್ಷರ ಗಾತ್ರ

ಮಡಿಕೇರಿ: ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವಾಗ ಅನುದಾನ ನೀಡಿ ಎಂದು ಸರ್ಕಾರವನ್ನು ಕೇಳುತ್ತೇವೆ. ಅದು ನಮ್ಮ ಹಕ್ಕು, ಭಿಕ್ಷೆಯಲ್ಲ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಆರ್.ಕೆ. ನಲ್ಲೂರು ಪ್ರಸಾದ್ ಪ್ರತಿಪಾದಿಸಿದರು.

ನಗರದ ಸುದರ್ಶನ ಅತಿಥಿ ಗೃಹದ ಬಳಿ ಕಸಾಪ ಜಿಲ್ಲಾ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು, ಕನ್ನಡವನ್ನು ಕಟ್ಟುವ ಕೆಲಸಕ್ಕಾಗಿ ಸರ್ಕಾರದಿಂದ ಅನುದಾನ ಬಯಸುವುದರಲ್ಲಿ ತಪ್ಪಿಲ್ಲ ಎಂದರು.

ಸಾಹಿತಿಗಳ ಜೊತೆ ಸಮಾಜದ ವಿವಿಧ ಸ್ತರಗಳಾದ ಕಾರ್ಮಿಕರು, ಮಠಾಧೀಶರು, ರಾಜಕಾರಣಿಗಳು ಹೀಗೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡ ಕಟ್ಟುವ ಕೆಲಸವನ್ನು ಕಸಾಪ ಮಾಡುತ್ತಿದೆ ಎಂದು ಹೇಳಿದರು.
ರಾಜ್ಯದ ಹಾಗೂ ಸಮಾಜದ ಆಗು-ಹೋಗುಗಳ ಬಗ್ಗೆ ಟೀಕಿಸುವಾಗ ಜವಾಬ್ದಾರಿಯುತವಾಗಿರಬೇಕು.

ಸಮಾಜವನ್ನು ತಿದ್ದುವ ರೀತಿಯಲ್ಲಿರಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ ಸಾಹಿತಿಗಳನ್ನು ಮಾತನಾಡಬೇಡಿ ಎಂದು ಹೇಳುವುದು ಅಪಾಯಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮಗಳ ಸಾಂಸ್ಕೃತಿಕ ವಿಚಾರಗಳನ್ನು ಅನಾವರಣಗೊಳಿಸಲು ಗ್ರಾಮ ಸಿರಿಯಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ.

ರಾಜ್ಯ ಸುಮಾರು 200 ಗ್ರಾಮಗಳಲ್ಲಿ ಗ್ರಾಮ ಸಿರಿ ನಡೆದಿದ್ದು ಇದರಿಂದಾಗಿ ಅಲ್ಲಿನ ಸಾಹಿತ್ಯ, ಜನಪದ ಕಥೆಗಳನ್ನು ತಿಳಿಯಲು ಸಾಧ್ಯವಾಗಿದ್ದು ಯುವ ಬರಹಗಾರರಿಗೆ ಉತ್ತೇಜನ ನೀಡಿದಂತಾಗಿದೆ ಎಂದು ಅವರು ಹೇಳಿದರು.

ಪರಿಷತ್ತಿನ ಮೂಲಕ ಹೊಸದಾಗಿ ದ್ರಾವಿಡ ಭಾಷೆ ಜ್ಞಾತಿ ಕೋಶ ನಿಘಂಟನ್ನು ಹೊರತರಲಾಗುತ್ತಿದೆ. ಇದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗಿದ್ದು, ಈಗಾಗಲೇ 200 ಪುಟಗಳ ಕೆಲಸ ಮುಗಿದಿದೆ, ಇನ್ನೂ ಬಹಳಷ್ಟು ಕೆಲಸ ಬಾಕಿ ಇದೆ ಎಂದರು.

ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ಮಾತನಾಡಿ, ಕನ್ನಡ ಭಾಷೆ ಸಾಯುತ್ತದೆ, ನಶಿಸುತ್ತದೆ ಎಂದು ಯಾರು ಭಾವಿಸಬೇಕಿಲ್ಲ. ಕನ್ನಡ ಭಾಷೆ ಎಂದೆಂದಿಗೂ ಜೀವಂತವಾಗಿರುತ್ತದೆ ಎಂದು ಅವರು ಹೇಳಿದರು. 

ಕೊಡಗಿನಲ್ಲಿ ಗೌರಮ್ಮನ ಕಥೆಗಳು ಹಾಗೂ ಭಾರತಿಸುತರ ಕಾದಂಬರಿಗಳು ಕನ್ನಡ ಸಿನಿಮಾವಾಗಿ ರೂಪುಗೊಂಡು ಕನ್ನಡ ಭಾಷಾ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. 

ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಟಿ.ಪಿ.ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಜಿಲ್ ಕೃಷ್ಣ ಮಾತನಾಡಿದರು, ನಗರಸಭೆ ಉಪಾಧ್ಯಕ್ಷರಾದ ವಸಂತ ಕೇಶವ, ಮಡಿಕೇರಿ ತಾಲ್ಲೂಕು ಕಸಾಪ ಅಧ್ಯಕ್ಷ ಕೆ.ಟಿ.ಬೇಬಿಮ್ಯೋಥ್ಯು, ವಿರಾಜಪೇಟೆ ತಾ.ಕಸಾಪ ಅಧ್ಯಕ್ಷ ರಘುನಾಥ್   ನಾಯಕ್, ಹೊಬಳಿ ಘಟಕದ ಅಧ್ಯಕ್ಷರಾದ ಡಾ. ಸುಭಾಷ್ ನಾಣಯ್ಯ, ಕೇಶವ ಕಾಮತ್, ಮೋಹನ್ ಕುಮಾರ್, ಸಾಹಿತಿ  ಮಹಾಬಲೇಶ್ವರ ಭಟ್ ಮತ್ತಿತರರು ಇದ್ದರು. 

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಬಿ.ಎ.ಷಂಶುದ್ದೀನ್ ಅವರು ಸ್ವಾಗತಿಸಿದರು. ಮುನೀರ ಅಹಮ್ಮದ್ ನಿರೂಪಿಸಿದರು. ಜಿಲ್ಲಾ ಗೌರವ ಕಾರ್ಯದರ್ಶಿ ಭಾರತೀ ರಮೇಶ್ ಮತ್ತು ಶ್ವೇತಾ ರವೀಂದ್ರ ಅವರು ನಾಡಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT