ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ ಅಕ್ಷರ ದಾಸೋಹ ತಾಣ ಕಾನಾಮಡುಗು

Last Updated 11 ಡಿಸೆಂಬರ್ 2013, 6:49 IST
ಅಕ್ಷರ ಗಾತ್ರ

ನ್ನ ಅಕ್ಷರ ದಾಸೋಹಕ್ಕೆ ಹೆಸರಾಗಿರುವ ಪುಣ್ಯಕ್ಷೇತ್ರ ಕಾನಾಮಡಗು. ಕೂಡ್ಲಿಗಿ ತಾಲ್ಲೂಕಿನ ಗಡಿಗ್ರಾಮವಾಗಿದ್ದು ಭಕ್ತರು, ವಿದ್ಯಾರ್ಥಿ ವೃಂದವನ್ನು ಕೈ ಬೀಸಿ ಕರೆಯುತ್ತಿರುವ ಶಿಕ್ಷಣ ಕಾಶಿಯಾಗಿದೆ. ಇಂದಿಗೂ ಈ ಭಾಗದ ರೈತರು ತಮ್ಮ ಜಮೀನುಗಳಲ್ಲಿ ಹಾಗು ಹಿತ್ತಲಿನಲ್ಲಿ ಬೆಳೆದ ದವಸ–ಧಾನ್ಯ , ತರಕಾರಿಯ ಮೊದಲ ಬೀಡನ್ನು ಮಠಕ್ಕೆ ತಂದು ಒಪ್ಪಿಸುತ್ತಾರೆ. ಇದರಿಂದ ಮಳೆ, ಬೆಳೆ ಚೆನ್ನಾಗಿ ಬರುತ್ತದೆ ಎಂಬುದು ರೈತರ ನಂಬಿಕೆಯಾಗಿದೆ.

ಮಠದ ಉಸ್ತುವಾರಿ ನೋಡಿಕೊಳ್ಳವ ಶರಣಾರ್ಯರ ವಂಶಜರು ಸಹ ರೈತಾಪಿ ವರ್ಗ ನೀಡಿದ ದವಸ–ಧಾನ್ಯಗಳನ್ನು ‘ಕೆರೆಯ ನೀರನ್ನು ಕೆರೆಗೆ ಚಲ್ಲಿ’ ಎಂಬಂತೆ ದಿನನಿತ್ಯ ಮಠಕ್ಕೆ ಬರುವ ಭಕ್ತರಿಗೆ, ವಿದ್ಯಾರ್ಥಿಗಳಿಗೆ  ದಾಸೋಹ ರೂಪದಲ್ಲಿ ನೂರಾರು ವರ್ಷಗಳಿಂದ ಉಣಬಡಿಸುತ್ತಿದ್ದಾರೆ.

6 ದಶಕಗಳ ಹಿಂದೆ ಅಂದಿನ ಐವಡಿ ಶರಣಾರ್ಯರ ದೂರ ದೃಷ್ಠಿಯ ಫಲವಾಗಿ ಸ್ಧಾಪಿಸಿದ ಶರಣಬಸವೇಶ್ವರ ಶಿಕ್ಷಕರ ತರಬೇತಿ ಸಂಸ್ಧೆಯಿಂದ ಇಂದು ರಾಜ್ಯದಾದ್ಯಂತ ಸಾವಿರಾರು ಶಿಕ್ಷಕ ವೃತ್ತಿಯಲ್ಲಿರುವವರ ಜೀವನಕ್ಕೆ ದಾರಿ ತೋರಿಸಿದ ಕೀರ್ತಿ ಶರಣಾರ್ಯರಿಗೆ  ಸಲ್ಲುತ್ತದೆ.

ಪ್ರಾಥಮಿಕ ಶಾಲೆಯಿಂದ ಪದವಿವರೆಗೂ ಕಾನಾಮಡಗು ಗ್ರಾಮದಲ್ಲಿ ವಿದ್ಯಾ ಸಂಸ್ದೆಗಳಿದ್ದು , ನಗರ ಪ್ರದೇಶದ ವಿದ್ಯಾರ್ಥಿಗಳು ಸಹ ಇಲ್ಲಿ ಬಂದು ವಿದ್ಯಾಭ್ಯಾಸ ಮಾಡುವುದರಿಂದ ಈ ಪುಟ್ಟ ಗ್ರಾಮ ವಿಶ್ವವಿದ್ಯಾಲಯದಂತೆ ಕಂಗೊಳಿಸುತ್ತಿದೆ. 1903ರಲ್ಲಯೇ ಅಂದಿನ ಮದ್ರಾಸ್‌ ಸರ್ಕಾರ ಶರಣಪ್ಪನ ಮಠದ ಜನಪರ ಸೇವೆ ಗಮನಿಸಿ ಪ್ರಶಸ್ತಿ ನೀಡಿದೆ. ಅಲ್ಲದೇ ಇಂಗ್ಲೆಂಡ್‌ ದೊರೆ ಐದನೇ ಎಡ್ವರ್ಡ್‌ ಕಾನಾಮಡಗು ಮಠವನ್ನು ವೀಕ್ಷಿಸಿ ಇಲ್ಲಿಯ ಅಕ್ಷರ ದಾಸೋಹ, ಅನ್ನ ದಾಸೋಹ ಕಂಡು ಬೆರಗಾಗಿ ಮಠಕ್ಕೆ ಪ್ರಶಂಸೆ ಪತ್ರ  ನೀಡುವುದರ ಮೂಲಕ ಈ ಮಠದ ಹಿರಿಮೆಯನ್ನು ಬಣ್ಣಿಸಿದ್ದಾರೆ.

ಇದೇ ಭಾಗದವರಾಗಿದ್ದ ಹಾಗೂ ಮಠದ ಆಶ್ರಯದಲ್ಲಿ ವಿದ್ಯಾಭ್ಯಾಸ  ಮಾಡಿ ಇಂದು ನಾಡಿಗೆ ಹೆಸರಾಗಿರುವ ಖ್ಯಾತ ಸಾಹಿತಿಗಳಾದ  ಹಿ.ಮ.ನಾಗಯ್ಯ, ಎಸ್‌.ಎಂ. ವೃಷಬೇಂದ್ರಸ್ವಾಮಿ, ಕೋ.ಚನ್ನಬಸಪ್ಪ, ಎಚ್‌.ಎಂ. ಮರುಳಸಿದ್ದಯ್ಯ ಮುಂತಾದ ಗಣ್ಯರು ಈ ಮಠದಲ್ಲಿಯೇ ಓದಿರುವುದು ಈ ಮಠಕ್ಕೆ ಹಿರಿಮೆ ಹೆಚ್ಚಿಸಿದೆ.

ಗಾರೆಗಳಿಂದ ನಿರ್ಮಿಸಿರುವ ಇಲ್ಲಿನ ಆರಾಧ್ಯ ದೈವ ಶರಣಬಸವೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಟ್ಟಿಗೆ ಗಾರೆಗಳಲ್ಲಿಯ ಕುಶಲಕಲೆ  ನೋಡುಗರ ಮನತಣಿಸುತ್ತದೆ. ಕಾನಾಮಡಗು ಕಾಡಿನಂತಿದ್ದು, ಇಲ್ಲಿಯ ಮಡಗು ಎಂದರೆ ಕೊಳದ ರೂಪದ ತಗ್ಗು ಇತ್ತು. ಹೀಗಾಗಿ ಕಾನಾಮಡಗು ಎಂದು ಕರೆಯುತ್ತಾರೆ ಎಂದು ಕೆಲವರು ಹೇಳುತ್ತಾರೆ. ಕಾನಾ ಎಂದರೆ ‘ಅನ್ನ’ , ಮಡಗು ಎಂದರೆ ‘ಇಡು’ ಅನ್ನ ನೀಡುತ್ತಿರುವ ತಾಣವಾಗಿರುವುದರಿಂದ ಕಾನಾಮಡಗು ಎಂಬ ಹೆಸರು ಬಂದಿದೆ ಎಂದು ಸ್ಧಳೀಯರು ಹೇಳುತ್ತಾರೆ.

ಮಠದ ವಂಶಸ್ಧರಾದ ಈಗಿನ ಐವಡಿ ಶರಣರು ಸಹ ಮಠದಲ್ಲಿ ಅನೇಕ ಜನಪರ, ಸಾಹಿತ್ಯ, ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಗ್ರಾಮಸ್ಧರ ಹಾಗೂ ಭಕ್ತರ ಸಹಕಾರದಿಂದ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಇಂದು ಕಾರ್ತಿಕ ಮಾಸದಲ್ಲಿ ಕಾರ್ತಿಕೋತ್ಸವ, ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
–ಗುರುಪ್ರಸಾದ್‌ ಎಸ್‌. ಎಂ . ಕೊಟ್ಟೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT