ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರಾಧ ಹಿನ್ನೆಲೆಯ ರೌಡಿಗಳ ಪರೇಡ್

Last Updated 13 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರೌಡಿ ಪಟ್ಟಿಯಲ್ಲಿರುವ ಮತ್ತು ಅಪರಾಧ ಹಿನ್ನೆಲೆಯುಳ್ಳವರ (ಎಂಓಬಿ) ಮೇಲೆ ತೀವ್ರ ನಿಗಾ ಇಡಲು ಕ್ರಮ ಕೈಗೊಂಡಿರುವ ಆಗ್ನೇಯ ವಿಭಾಗದ ಡಿಸಿಪಿ ಡಾ. ಪಿ.ಎಸ್. ಹರ್ಷ ಅವರು ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪಡೆಯ (ಸಿಎಆರ್) ಮೈದಾನದಲ್ಲಿ ಸೋಮವಾರ `ರೌಡಿ~ಗಳ ಪೆರೇಡ್ ನಡೆಸಿದರು.

ಆಗ್ನೇಯ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ರೌಡಿ ಪಟ್ಟಿಯಲ್ಲಿರುವ ಮತ್ತು ಅಪರಾಧ ಹಿನ್ನೆಲೆಯುಳ್ಳ ಸುಮಾರು 200ಕ್ಕೂ ಅಧಿಕ ಮಂದಿ ಈ ಪೆರೇಡ್‌ನಲ್ಲಿ ಪಾಲ್ಗೊಂಡಿದ್ದರು. ಎಲ್ಲ ರೌಡಿಗಳೊಂದಿಗೆ ಹರ್ಷ ಅವರು ವೈಯಕ್ತಿಕವಾಗಿ ಮಾತುಕತೆ ನಡೆಸಿದರು. ಅಪರಾಧ ಚಟುವಟಿಕೆಯನ್ನು ಕೈಬಿಟ್ಟು  ಸಮಾಜದ ಮುಖ್ಯ ವಾಹಿನಿಗೆ ಬರುವುದಾದರೆ ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

`ರೌಡಿ ಪಟ್ಟಿಯಲ್ಲಿರುವ ಹಾಗೂ ಅಪರಾಧ ಹಿನ್ನೆಲೆಯುಳ್ಳವರು ಪ್ರಸ್ತುತ ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಪೆರೇಡ್ ನಡೆಸಲಾಗುತ್ತಿದೆ. ಪ್ರತಿಯೊಬ್ಬರ ಜತೆಯೂ ಮಾತುಕತೆ ನಡೆಸಿ ಸದ್ಯದ ಅವರ ಉದ್ಯೋಗದ ಬಗ್ಗೆ ಮಾಹಿತಿ ಪಡೆಯಲಾಯಿತು. ಅವರ ಈಗಿನ ವಿಳಾಸ, ಸದ್ಯ ಬಳಸುತ್ತಿರುವ ಮೊಬೈಲ್ ಸಂಖ್ಯೆ ಮುಂತಾದ ವಿವರ ಪಡೆದುಕೊಳ್ಳಲಾಯಿತು. ಇತ್ತೀಚಿನ ಭಾವಚಿತ್ರಗಳನ್ನೂ ಸಂಗ್ರಹಿಸಲಾಯಿತು~ ಎಂದು ಹರ್ಷ `ಪ್ರಜಾವಾಣಿ~ಗೆ ತಿಳಿಸಿದರು.

`ಎಲ್ಲರೂ ಈಗ ಮಾಡುತ್ತಿರುವ ಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಯಾವುದೇ ಅಪರಾಧಗಳಲ್ಲಿ ತೊಡಗದೆ ಒಳ್ಳೆಯ ಮಾರ್ಗದಲ್ಲಿ ನಡೆಯುವ ಭರವಸೆಯನ್ನೂ ನೀಡಿದ್ದಾರೆ. ಬದಲಾಗುವ ವ್ಯಕ್ತಿಗಳಿಗೆ ಅಗತ್ಯ ನೆರವು ನೀಡಲಾಗುತ್ತದೆ ಎಂದು ಹೇಳಿದ್ದೇನೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ~ ಎಂದು ಅವರು ಹೇಳಿದರು.

`ನಮ್ಮ ವಿಭಾಗದ ಠಾಣೆಗಳ ರೌಡಿ ಪಟ್ಟಿಯಲ್ಲಿರುವ ಎಲ್ಲರೂ ಪೆರೇಡ್‌ನಲ್ಲಿ ಭಾಗವಹಿಸಿರಲಿಲ್ಲ. ಕೆಲವರು ವೈಯಕ್ತಿಕ ಕೆಲಸಕ್ಕೆ ಹೋಗಿದ್ದರು. ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಹೋಗಿದ್ದವರ ಸಂಖ್ಯೆಯೂ ಹೆಚ್ಚಿತ್ತು. ಮುಂದಿನ ತಿಂಗಳು ನಡೆಯುವ ಪೆರೇಡ್‌ನಲ್ಲಿ ಭಾಗವಹಿಸುವಂತೆ ಎಲ್ಲರಿಗೂ ಸೂಚನೆ ನೀಡಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.

`ಕಣ್ಮರೆಯಾಗಿರುವ ರೌಡಿಗಳ ಬಗ್ಗೆಯೂ ಸಂಪೂರ್ಣ ಮಾಹಿತಿ ಕಲೆ ಹಾಕಲಾಗಿದೆ. ಅವರು ಎಲ್ಲಿದ್ದಾರೆ ಎಂದು ತಿಳಿದುಕೊಳ್ಳುವ ಯತ್ನ ಸಹ ನಡೆದಿದೆ. ಎಲ್ಲ ರೌಡಿಗಳ ಮೇಲೆ ನಿಗಾ ಇಡುವುದು ನಮ್ಮ ಉದ್ದೇಶ~ ಎಂದು ಅವರು ಹೇಳಿದರು.

ರೌಡಿ ಪಟ್ಟಿಯಲ್ಲಿರುವವರ ಪೆರೇಡ್ ನಡೆಸಿ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಎಲ್ಲ ವಿಭಾಗಗಳಲ್ಲೂ ಪೆರೇಡ್ ನಡೆಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT