ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೆಕ್ಸ್ : 100 ಕೋಟಿ ಲಾಭ?

Last Updated 13 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್, 2011- 12ರ ಆರ್ಥಿಕ ವರ್ಷದಲ್ಲಿ  ರೂ 100 ಕೋಟಿ ಲಾಭ ಗಳಿಸಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಆರ್. ಎಂ. ಮಂಜುನಾಥಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಬ್ಯಾಂಕಿನ 86ನೇ ವಾರ್ಷಿಕ ಮಹಾಸಭೆಯ ವಿವರಗಳನ್ನು ನೀಡಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

`96 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬ್ಯಾಂಕ್ ಕಳೆದ ಎರಡು ವರ್ಷಗಳಿಂದ ಲಾಭದ ಹಾದಿಯಲ್ಲಿದೆ. 2009- 10ರ ಸಾಲಿನಲ್ಲಿ ರೂ 9 ಕೋಟಿ, 2010- 11ರ ಸಾಲಿನಲ್ಲಿ ರೂ 46 ಕೋಟಿ ಲಾಭ ಗಳಿಸಿದೆ. ಈ ವರ್ಷ ಲಾಭದ ಪ್ರಮಾಣ ಇಮ್ಮಡಿಯಾಗಲಿದೆ~ ಎಂದರು.

`ಬ್ಯಾಂಕಿನ ಸ್ವಂತ ನಿಧಿಗಳನ್ನು ರೂ 400 ಕೋಟಿಗೆ, ಠೇವಣಿಗಳನ್ನು ರೂ 5,300 ಕೋಟಿಗೆ, ಹೂಡಿಕೆಗಳ ಪ್ರಮಾಣವನ್ನು ರೂ 2,925 ಕೋಟಿಗೆ, ದುಡಿಯುವ ಬಂಡವಾಳವನ್ನು  ರೂ 8,387 ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ~ ಎಂದು ವಿವರಿಸಿದರು.

`ಅನುತ್ಪಾದಕ ಆಸ್ತಿಯ ಪ್ರಮಾಣ ಶೇ 4.61ರಿಂದ ಶೇ 4.31ಕ್ಕೆ ಇಳಿದಿದೆ. ಈ ಪ್ರಮಾಣವನ್ನು ಇನ್ನಷ್ಟು ಕಡಿಮೆ ಮಾಡುವ ಮೂಲಕ ಬ್ಯಾಂಕನ್ನು ದೇಶದ ಸಹಕಾರಿ ಅಪೆಕ್ಸ್ ಬ್ಯಾಂಕ್‌ಗಳ ಪೈಕಿ ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಧ್ಯೇಯ ನಮ್ಮದು~ ಎಂದರು.

`ಸ್ವಸಹಾಯ ಗುಂಪುಗಳ ರಚನೆ ಮತ್ತು ಬ್ಯಾಂಕ್ ಸಾಲ ಜೋಡಣೆ ಕಾರ್ಯಕ್ರಮದ ಅಡಿಯಲ್ಲಿ 20,000 ಸ್ವಸಹಾಯ ಗುಂಪುಗಳನ್ನು ರಚಿಸಲು ಹಾಗೂ ಒಟ್ಟು 40,200 ಸ್ವಸಹಾಯ ಗುಂಪುಗಳಿಗೆ ರೂ 600 ಕೋಟಿ ಸಾಲ ನೀಡಲು ಉದ್ದೇಶಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಶಲ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಈಗಾಗಲೇ 4,000ಕ್ಕೂ ಹೆಚ್ಚು ಜಂಟಿ ಬಾಧ್ಯತಾ ಗುಂಪುಗಳನ್ನು ರಚಿಸಲಾಗಿದೆ~ ಎಂದು  ಹೇಳಿದರು.

`ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಬ್ಯಾಂಕಿನ ಶಾಖೆಗಳನ್ನು ತೆರೆಯುವ ಉದ್ದೇಶವಿದೆ. ಪ್ರಾರಂಭಿಕ ಹಂತದಲ್ಲಿ ರಾಜ್ಯದ ನಾಲ್ಕು ವಿಭಾಗೀಯ ಕೇಂದ್ರಗಳಲ್ಲಿ ಶಾಖೆಗಳನ್ನು ತೆರೆಯಲಾಗುವುದು. ನಗರದಲ್ಲಿರುವ 40 ಶಾಖೆಗಳು ಮತ್ತು ಪ್ರಧಾನ ಕಚೇರಿಯ ವ್ಯವಹಾರವನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ. ಸದ್ಯದಲ್ಲೇ ಕೋರ್ ಬ್ಯಾಂಕಿಂಗ್ ಮತ್ತು ಎಟಿಎಂ ಸೌಲಭ್ಯವನ್ನು ಆರಂಭಿಸಲಾಗುವುದು~ ಎಂದು  ತಿಳಿಸಿದರು.

`ಉತ್ತರ ಪ್ರದೇಶದಲ್ಲಿರುವ ಗ್ರಾಮೀಣಾಭಿವೃದ್ಧಿ ಬ್ಯಾಂಕರುಗಳ ಸಂಸ್ಥೆ ಮಾದರಿಯಲ್ಲಿ ಹೆಸರಘಟ್ಟ ಬಳಿ ಇರುವ ಬ್ಯಾಂಕಿನ 3 ಎಕರೆ ಜಾಗದಲ್ಲಿ ್ಙ 20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರ, ರೈತ ಸಮುದಾಯ ಭವನ ಸೇರಿದಂತೆ ಒಂದು ಸಂಕೀರ್ಣ ನಿರ್ಮಿಸಲಾಗುವುದು~ ಎಂದು  ನುಡಿದರು.

`ಸಿಬ್ಬಂದಿ ವರ್ಗದಲ್ಲಿ ಸಮಯ ಪಾಲನೆ ಮತ್ತು ಶಿಸ್ತನ್ನು ತರುವ ದಿಸೆಯಲ್ಲಿ ಬ್ಯಾಂಕಿನ ಪ್ರಧಾನ ಕಚೇರಿ ಮತ್ತು ಶಾಖೆಗಳಲ್ಲಿ ನೂತನ ಮಾದರಿಯ ಬಯೋ ಮೆಟ್ರಿಕ್ ಹಾಜರಾತಿ ವ್ಯವಸ್ಥೆ ಮತ್ತು ಸಮವಸ್ತ್ರ ಸಂಹಿತೆ ಜಾರಿಗೆ ತರಲಾಗುತ್ತಿದೆ~ ಎಂದು ಅವರು ಹೇಳಿದರು.

ಬ್ಯಾಂಕಿನ ನಿರ್ದೇಶಕ ಬಿ.ತಮ್ಮೇಗೌಡ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಚ್.ಅಶ್ವತ್ಥನಾರಾಯಣಗೌಡ ಮತ್ತಿತರು ಇದ್ದರು.

ರೈತರ ಸಾಲ, ಬಡ್ಡಿ ಮನ್ನಾ ಇಲ್ಲ

ಬೆಂಗಳೂರು: `ಇನ್ನು ಮುಂದೆ ರೈತರ ಸಾಲ ಮತ್ತು ಬಡ್ಡಿ ಮನ್ನಾ ಇಲ್ಲವೇ ಇಲ್ಲ. ಸುಸ್ತಿದಾರರಾದ ರೈತರು ಈ ತಿಂಗಳ 30ರೊಳಗೆ ಸಾಲ ತೀರಿಸಲೇಬೇಕು. ಆಗ ಮಾತ್ರ ಅವರಿಗೆ ಶೇಕಡಾ 1ರ ಬಡ್ಡಿ ದರದಲ್ಲಿ ಹೊಸ ಕೃಷಿ  ಸಾಲ ದೊರೆಯಲಿದೆ~ ಎಂದು ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

`ಸಾಲ ಅಥವಾ ಬಡ್ಡಿ ಮನ್ನಾ ಮಾಡುವುದಿಲ್ಲ ಎಂದು ಬ್ಯಾಂಕಿನ ವತಿಯಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್‌ಗೆ ಬರೆದುಕೊಡಲಾಗಿದೆ. ಪ್ರೊ.ವೈದ್ಯನಾಥನ್ ವರದಿ ಶಿಫಾರಸು ಪ್ರಕಾರವೇ ಈ ನಿರ್ಧಾರಕ್ಕೆ ಬರಲಾಗಿದೆ~ ಎಂದು  ತಿಳಿಸಿದರು.

`ಶೇ 3 ಮತ್ತು 4ರ ಬಡ್ಡಿ ದರದಲ್ಲಿ ರೈತರು ಪಡೆದಿರುವ ಸುಮಾರು ರೂ 500 ಕೋಟಿಯಷ್ಟು ಸಾಲ  ಮರು ಪಾವತಿ ಆಗಿಲ್ಲ. ಸಾಲ ಮರುಪಾವತಿಗೆ ಜೂನ್ 30 ಕಡೆಯ ದಿನವಾಗಿತ್ತು. ಸರ್ಕಾರ ಆ ಕಾಲಾವಧಿಯನ್ನು ವಿಸ್ತರಿಸಿ ಕೊನೆಯ ಅವಕಾಶ ಮಾಡಿಕೊಟ್ಟಿದೆ~ ಎಂದು  ಹೇಳಿದರು.

`ರೈತರು ಸಾಲ ತೀರಿಸಲು ಸಿದ್ಧರಿದ್ದಾರೆ. ಈಗಾಗಲೇ ರೂ 50 ರಿಂದ ರೂ 60 ಕೋಟಿಗಳಷ್ಟು ಹಣ ವಸೂಲಾಗಿದೆ. ಆದರೆ, ಕೆಲವು ಸಂಘ ಸಂಸ್ಥೆಗಳು ಸಾಲ- ಬಡ್ಡಿ ಮನ್ನಾ ಆಗಲಿದೆ ಎಂಬ ತಪ್ಪು ಮಾಹಿತಿ ನೀಡಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ~ ಎಂದು   ದೂರಿದರು.

`ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸುಮಾರು 18 ಲಕ್ಷ ರೈತರಿಗೆ ರೂ 5,700 ಕೋಟಿ ಸಾಲ ನೀಡುವ ಗುರಿ ಇಟ್ಟುಕೊಂಡಿದ್ದೇವೆ. ಆಗಸ್ಟ್ 31ರವರೆಗೆ ಸುಮಾರು 8 ಲಕ್ಷ ರೈತರಿಗೆ ರೂ 2738 ಕೋಟಿ ಸಾಲ ನೀಡಲಾಗಿದೆ. ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಬೆಳೆ ಸಾಲವನ್ನು ಈಗಾಗಲೇ ನೀಡಲಾಗಿದೆ. ಉತ್ತರ ಕರ್ನಾಟಕದ ಜಿಲ್ಲೆಗಳ್ಲ್ಲಲಿ ನವೆಂಬರ್‌ನಿಂದ ಫೆಬ್ರುವರಿವರೆಗೆ ಬೆಳೆ ಸಾಲ ಕೊಡಲಾಗುವುದು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT